
ದೆಹಲಿ: ಗಾಯದಿಂದ ಚೇತರಿಸಿಕೊಂಡಿರುವ ರಿಷಭ್ ಪಂತ್ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ದೇಶೀಯ ಪಂದ್ಯಗಳ ಮೂಲಕ ಪಂತ್ ಕ್ರಿಕೆಟ್‌ಗೆ ವಾಪಸಾಗಲಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮ್ಯಾಂಚೆಸ್ಟರ್ ಟೆಸ್ಟ್‌ನ ಮೊದಲ ದಿನ ರಿಷಭ್ ಪಂತ್ ಅವರ ಕಾಲಿಗೆ ಗಾಯವಾಗಿತ್ತು. ಕ್ರಿಸ್ ವೋಕ್ಸ್ ಅವರ ಚೆಂಡು ಕಾಲಿಗೆ ಬಡಿದು ಬೆರಳಿಗೆ ಮುರಿತ ಉಂಟಾಗಿತ್ತು. ಗಾಯಗೊಂಡ ಕಾಲಿನೊಂದಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಕ್ರೀಸ್‌ಗೆ ಬಂದ ಪಂತ್ ಹೋರಾಟದ ಮನೋಭಾವ ತೋರಿದ್ದರು.
ಆರು ವಾರಗಳ ವಿಶ್ರಾಂತಿಗೆ ಸೂಚಿಸಲಾಗಿದ್ದರೂ, ಪಂತ್ 75 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಮೂರು ಬೌಂಡರಿ ಸೇರಿದಂತೆ 53 ರನ್ ಗಳಿಸಿದ್ದರು. ಇದರ ನಂತರ ಶಸ್ತ್ರಚಿಕಿತ್ಸೆಗೆ ಒಳಗಾದ ಪಂತ್, ಬೆಂಗಳೂರಿನ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಮಿಸ್ ಮಾಡಿಕೊಂಡಿದ್ದು ಪಂತ್, ರಣಜಿ ಟ್ರೋಫಿ ಮೂಲಕ ಕ್ರಿಕೆಟ್‌ಗೆ ಮರಳಲಿದ್ದಾರೆ. ಈ ತಿಂಗಳ 25 ರಿಂದ ಆರಂಭವಾಗುವ ರಣಜಿ ಟ್ರೋಫಿ ಪಂದ್ಯದಲ್ಲಿ ಆಡಲು ಸಿದ್ಧ ಎಂದು ಪಂತ್ ದೆಹಲಿ ಕ್ರಿಕೆಟ್ ಸಂಸ್ಥೆಗೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಪಂತ್‌ಗೆ ಬಿಸಿಸಿಐನ ವೈದ್ಯಕೀಯ ತಂಡವು ಪಂದ್ಯಗಳಲ್ಲಿ ಆಡಲು ಅನುಮತಿ ನೀಡುವ ನಿರೀಕ್ಷೆಯಿದೆ. ರಣಜಿ ಟ್ರೋಫಿಯಲ್ಲಿ ಆಡಿ ಫಿಟ್ನೆಸ್ ಸಾಬೀತುಪಡಿಸಿದರೆ, ಪಂತ್ ನವೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ತಂಡಕ್ಕೆ ಮರಳಬಹುದು. ಇಪ್ಪತ್ತೆಂಟು ವರ್ಷದ ಪಂತ್ 47 ಟೆಸ್ಟ್‌ಗಳಲ್ಲಿ ಎಂಟು ಶತಕಗಳೊಂದಿಗೆ 3,427 ರನ್ ಗಳಿಸಿದ್ದಾರೆ. ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ ರಿಷಭ್ ಪಂತ್ 68.42 ಸರಾಸರಿಯಲ್ಲಿ ಎರಡು ಶತಕ ಮತ್ತು ಎರಡು ಅರ್ಧಶತಕ ಸೇರಿದಂತೆ 479 ರನ್ ಗಳಿಸಿದ್ದರು.
ರಿಷಭ್ ಪಂತ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮರಳುವ ನಿರೀಕ್ಷೆಯಿದೆ ಎಂದು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಹೇಳಿದ್ದರು. ಪಂತ್ ಅನುಪಸ್ಥಿತಿಯಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಆಡುತ್ತಿರುವ ಧ್ರುವ್ ಜುರೆಲ್ ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಮಿಂಚಿದ್ದರು. ಭಾರತೀಯ ಟೆಸ್ಟ್ ತಂಡದ ಉಪನಾಯಕರಾಗಿದ್ದ ರಿಷಭ್ ಪಂತ್ ಅನುಪಸ್ಥಿತಿಯಲ್ಲಿ, ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ರವೀಂದ್ರ ಜಡೇಜಾ ಅವರನ್ನು ಭಾರತದ ಉಪನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.
ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಭಾರತ ಟೆಸ್ಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. ರಿಷಭ್ ಪಂತ್ ತವರಿನ ಟೆಸ್ಟ್‌ಗಳಿಗಿಂತ ತವರಿನಾಚೆಯ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಮಾಡುವ ಮೂಲಕ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದಾರೆ. ಇದೀಗ ಧ್ರುವ್ ಜುರೆಲ್ ಕೂಡಾ ಪಂತ್ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಲ್ಲಿ ಬಾಚಿಕೊಳ್ಳುವ ಮೂಲಕ ವಿಂಡೀಸ್ ಎದುರು ಚೊಚ್ಚಲ ಟೆಸ್ಟ್ ಶತಕ ಸಿಡಿಸಿದ್ದಾರೆ. ಇದೆಲ್ಲದರ ನಡುವೆ ರಿಷಭ್ ಪಂತ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ರೆಡಿಯಾಗಿದ್ದು, ರಣಜಿ ಟ್ರೋಫಿ ಟೂರ್ನಿಯಲ್ಲಿ ಮಿಂಚಿ, ರಾಷ್ಟ್ರೀಯ ತಂಡ ಕೂಡಿಕೊಳ್ಳಲು ಎದುರು ನೋಡುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.