ಕಾಲು ಬೆರಳು ಮುರಿದಿದ್ದರೂ ತಂಡಕ್ಕಾಗಿ ಮತ್ತೆ ಮೈದಾನಕ್ಕಿಳಿದ ರಿಷಭ್ ಪಂತ್! ಚಪ್ಪಾಳೆ ತಟ್ಟಿ ಸ್ವಾಗತಿಸಿದ ಫ್ಯಾನ್ಸ್

Published : Jul 24, 2025, 05:53 PM IST
Rishabh Pant

ಸಾರಾಂಶ

ಕಾಲ್ಬೆರಳಿನ ಗಾಯದ ನಡುವೆಯೂ ರಿಷಭ್ ಪಂತ್ ಬ್ಯಾಟಿಂಗ್‌ಗೆ ಮೈದಾನಕ್ಕಿಳಿದು ಅಭಿಮಾನಿಗಳ ಮನ ಗೆದ್ದಿದ್ದಾರೆ. ನೋವಿನ ನಡುವೆಯೂ ದೇಶಕ್ಕಾಗಿ ಆಡುವ ಪಂತ್‌ರ ಕ್ರಿಕೆಟ್‌ ಕಮಿಟ್‌ಮೆಂಟ್‌ಗೆ ಕ್ರಿಕೆಟ್ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. 

ಮ್ಯಾಂಚೆಸ್ಟರ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರ ತಂಡದ ಕುರಿತಾದ ಕಮಿಟ್‌ಮೆಂಟ್ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನ ಮೊದಲ ದಿನದಾಟದಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಮಾಡುವ ವೇಳೆ ಕಾಲ್ಬೆರಳಿನ ಗಾಯಕ್ಕೆ ತುತ್ತಾಗಿ ರಿಟೈರ್‌ ಹರ್ಟ್ ಆಗಿ ಮೈದಾನ ತೊರೆದಿದ್ದರು. ಆದರೆ ಎರಡನೇ ದಿನದಾಟದಲ್ಲಿ ಕಾಲ್ಬೆರಳಿನ ನೋವಿದ್ದರೂ ಕುಂಟುತ್ತಲೇ ಮೈದಾನಕ್ಕಿಳಿಯುವ ಮೂಲಕ ಗಮನ ಸೆಳೆದಿದ್ದಾರೆ. ದೇಶವನ್ನು ಪ್ರತಿನಿಧಿಸುವ ಪಂತ್ ಅವರ ಕಮಿಟ್‌ಮೆಂಟ್ ಕ್ರಿಕೆಟ್ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು ಎದ್ದುನಿಂತು ಜೋರಾಗಿ ಕರತಾಡನ ಮಾಡುವ ಮೂಲಕ ಹುರಿದುಂಬಿಸಿದ್ದಾರೆ.

ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ರಿಷಭ್ ಪಂತ್, ಮೊದಲ ದಿನದಾಟದಲ್ಲಿ 37 ರನ್ ಬಾರಿಸಿ ಅರ್ಧಶತಕದತ್ತ ದಾಪುಗಾಲಿಡುತ್ತಿದ್ದರು. ಈ ವೇಳೆ ಕ್ರೀಸ್ ವೋಕ್ಸ್ ಬೌಲಿಂಗ್‌ನಲ್ಲಿ ರಿವರ್ಸ್‌ ಸ್ವೀಪ್ ಮಾಡುವ ಯತ್ನದಲ್ಲಿ ಚೆಂಡು ಪಂತ್ ಅವರ ಬಲಗಾಲಿನ ಬೂಟ್‌ಗೆ ನೇರವಾಗಿ ಅಪ್ಪಳಿಸಿತ್ತು. ಚೆಂಡು ಕಾಲಿನ ಬೆರಳಿಗೆ ಅಪ್ಪಳಿಸಿದ ವೇಗಕ್ಕೆ ಪಂತ್ ಕಾಲಿನಿಂದ ರಕ್ತ ಜಿನುಗಲಾರಂಭಿಸಿತು. ಸರಿಯಾಗಿ ನಿಲ್ಲಲು ಆಗದ ಪಂತ್ ಅವರನ್ನು ಸ್ಟೇಡಿಯಂನಿಂದಲೇ ಕಾರ್ಟ್‌ನಲ್ಲಿ ಕೂರಿಸಿಕೊಂಡು ಪೆವಿಲಿಯನ್‌ಗೆ ಕರೆದೊಯ್ಯಲಾಯಿತು.

ಇನ್ನು ಇದಾದ ಬಳಿಕ ಬಿಸಿಸಿಐ ಪಂತ್ ಗಾಯದ ಕುರಿತಂತೆ ಮೊದಲ ಅಪ್‌ಡೇಟ್ ನೀಡಿತ್ತು. ಅದರಲ್ಲಿ ಪಂತ್ ಅವರನ್ನು ಸ್ಕ್ಯಾನ್‌ಗೆ ಕರೆದೊಯ್ಯಲಾಗಿದೆ. ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯು ಅವರ ಆರೋಗ್ಯದ ಮೇಲೆ ನಿಗಾಯಿಟ್ಟಿದ್ದಾರೆ ಎಂದು ತಿಳಿಸಿತ್ತು. ಇದಾದ ಬಳಿಕ ಇಂದು ಹಲವು ಮಾಧ್ಯಮಗಳು ರಿಷಭ್ ಪಂತ್ ಕಾಲ್ಬೆರಳಿಗೆ ಗಂಭೀರವಾದ ಗಾಯವಾಗಿದ್ದು, ಮುಂದಿನ ಆರು ವಾರಗಳ ಕಾಲ ಕ್ರಿಕೆಟ್‌ನಿಂದ ಪಂತ್ ಹೊರಗುಳಿಯಲಿದ್ದಾರೆ ಎಂದು ವರದಿಗಳಾಗಿದ್ದವು. ಇದು ಟೀಂ ಇಂಡಿಯಾ ಪಾಲಿಗೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಎಂದೇ ಬಿಂಬಿಸಲಾಗಿತ್ತು.

 

ಇನ್ನು ಇದೆಲ್ಲದರ ನಡುವೆ ಬಿಸಿಸಿಐ ಮತ್ತೊಂದು ಅಪ್‌ಡೇಟ್‌ನಲ್ಲಿ, ರಿಷಭ್ ಪಂತ್ ಈ ಪಂದ್ಯದಲ್ಲಿ ವಿಕೆಟ್‌ ಕೀಪಿಂಗ್ ಮಾಡುವುದಿಲ್ಲ, ಆದರೆ ತಂಡಕ್ಕೆ ಅಗತ್ಯವಿದ್ದರೇ ಬ್ಯಾಟಿಂಗ್ ಮಾಡಲು ಲಭ್ಯವಿರಲಿದ್ದಾರೆ ಎಂದು ತಿಳಿಸಿತ್ತು. ಇದರ ಜತೆಗೆ ರಿಷಭ್ ಪಂತ್ ಬದಲಿಗೆ ಧೃವ್ ಜುರೆಲ್ ವಿಕೆಟ್ ಕೀಪಿಂಗ್ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ತಿಳಿಸಿತ್ತು.

 

ಇನ್ನು ಎರಡನೇ ದಿನದಾಟದಲ್ಲಿ ರವೀಂದ್ರ ಜಡೇಜಾ ಬಳಿಕ ಶಾರ್ದೂಲ್ ಠಾಕೂರ್ ಕೂಡಾ ವಿಕೆಟ್ ಒಪ್ಪಿಸಿದರು. ಆಗ ಭಾರತ ತಂಡ 314 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತ್ತು. ಈ ವೇಳೆ ರಿಷಭ್ ಪಂತ್ ಕುಂಟುತ್ತಲೇ ಬ್ಯಾಟಿಂಗ್ ಮಾಡಲು ಮೈದಾನಕ್ಕಿಳಿದರು. ಸದ್ಯ ವಾಷಿಂಗ್ಟನ್ ಸುಂದರ್ ಹಾಗೂ ರಿಷಭ್ ಪಂತ್ ಏಳನೇ ವಿಕೆಟ್‌ಗೆ 7 ರನ್‌ಗಳ ಜತೆಯಾಟವಾಡಿದೆ. ಈ ಸಂದರ್ಭದಲ್ಲಿ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದರಿಂದ ಮುಂಚಿತವಾಗಿಯೇ ಎರಡನೇ ದಿನದ ಲಂಚ್ ಬ್ರೇಕ್ ತೆಗೆದುಕೊಳ್ಳಲಾಗಿದೆ.

ಇನ್ನು ರಿಷಭ್ ಪಂತ್ ಅವರ ಈ ದಿಟ್ಟ ತೀರ್ಮಾನದ ಬಗ್ಗೆ ಕ್ರಿಕೆಟ್ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕ್ರಿಕೆಟ್ ವಿಶ್ಲೇಷಕ ಹರ್ಷಾ ಬೋಗ್ಲೆ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್ ಸಾಮಾಜಿಕ ಜಾಲತಾಣಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

ಇನ್ನು ಮ್ಯಾಂಚೆಸ್ಟರ್ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೇ ಟಾಸ್ ಸೋತು ಮೊದಲು ಬ್ಯಾಟ್ ಮಾಡಲಿಳಿದ ಟೀಂ ಇಂಡಿಯಾ, ಮೊದಲ ದಿನದಾಟದಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 264 ರನ್ ಬಾರಿಸಿತ್ತು. ಮೊದಲ ದಿನದಾಟದಲ್ಲಿ ಯಶಸ್ವಿ ಜೈಸ್ವಾಲ್ ಹಾಗೂ ಸಾಯಿ ಸುದರ್ಶನ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದರು. ಮೊದಲ ದಿನದಾಟದಲ್ಲಿ 19 ರನ್ ಗಳಿಸಿ ಅಜೇಯರಾಗುಳಿದಿದ್ದ ಶಾರ್ದೂಲ್ ಠಾಕೂರ್ 41 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಮುನ್ನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಎರಡನೇ ದಿನದಾಟದ ಲಂಚ್‌ ಬ್ರೇಕ್ ವೇಳೆಗೆ ಭಾರತ 6 ವಿಕೆಟ್ ಕಳೆದುಕೊಂಡು 321 ರನ್ ಬಾರಿಸಿದೆ. ರಿಷಭ್ ಪಂತ್ 39 ಹಾಗೂ ವಾಷಿಂಗ್ಟನ್ ಸುಂದರ್ 20 ರನ್ ಬಾರಿಸಿ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ