ಜಗತ್ತಿನ ಶ್ರೇಷ್ಠ ಕ್ರಿಕೆಟ್ ತಂಡ ಆಯ್ಕೆ ಮಾಡಿದ ಎಬಿ ಡಿವಿಲಿಯರ್ಸ್‌! ರೋಹಿತ್ ಶರ್ಮಾ, ಬುಮ್ರಾ, ಸಚಿನ್‌ಗಿಲ್ಲ ಸ್ಥಾನ!

Published : Jul 24, 2025, 04:48 PM IST
AB de Villiers

ಸಾರಾಂಶ

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ 2025ರ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಟೂರ್ನಿಗೆ ತಮ್ಮ ಕನಸಿನ ತಂಡವನ್ನು ಪ್ರಕಟಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಎಂ.ಎಸ್. ಧೋನಿ ತಂಡದಲ್ಲಿದ್ದರೆ, ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದಿಲ್ಲ.

ಬೆಂಗಳೂರು: ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎಂದೇ ಗುರುತಿಸಿಕೊಂಡ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್‌ ಹರಿಣಗಳ ಪಡೆ ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಕ್ರಿಕೆಟಿಗರಲ್ಲಿಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ. ಎಬಿ ಡಿವಿಲಿಯರ್ಸ್‌ ದಕ್ಷಿಣ ಆಫ್ರಿಕಾ ಮಾತ್ರವಲ್ಲದೇ ಭಾರತ ಸೇರಿದಂತೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಸ್ಟೈಲೀಷ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ ದಕ್ಷಿಣ ಆಫ್ರಿಕಾ ಪರ 114 ಟೆಸ್ಟ್ ಪಂದ್ಯಗಳನ್ನಾಡಿ 8765, 228 ಏಕದಿನ ಪಂದ್ಯಗಳನ್ನಾಡಿ 9577 ಹಾಗೂ 78 ಟಿ20 ಪಂದ್ಯಗಳನ್ನಾಡಿ 1672 ರನ್ ಸಿಡಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಇದೀಗ ಮತ್ತೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದು, 2025ರ ವರ್ಲ್ಡ್ ಚಾಂಪಿಯನ್ಸ್ ಆಫ್‌ ಲೆಜೆಂಡ್ಸ್‌ ಟೂರ್ನಿಯಲ್ಲಿ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡದ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆರು ತಂಡಗಳು ಪಾಲ್ಗೊಂಡಿರುವ ಟೂರ್ನಿಯಲ್ಲಿ, ಡಿವಿಲಿಯರ್ಸ್‌ ತಮ್ಮ ನೆಚ್ಚಿನ ಜಗತ್ತಿನ ಬಲಿಷ್ಠ ಕ್ರಿಕೆಟ್ ಆಟಗಾರರನ್ನೊಳಗೊಂಡ ತಂಡವನ್ನು ಅಯ್ಕೆ ಮಾಡಿದ್ದಾರೆ. ಎಬಿ ಡಿವಿಲಿಯರ್ಸ್‌ ಆಯ್ಕೆ ಮಾಡಿದ ತಂಡದಲ್ಲಿ ಕೇವಲ ಇಬ್ಬರು ಭಾರತೀಯ ಆಟಗಾರರಿಗೆ ಮಾತ್ರ ಸ್ಥಾನ ನೀಡಿದ್ದು, ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮಾ ಹಾಗೂ ಜಸ್ಪ್ರೀತ್ ಬುಮ್ರಾ ಅವರನ್ನು ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

ಎಬಿ ಡಿವಿಲಿಯರ್ಸ್ ಆಯ್ಕೆ ಮಾಡಿದ ಬಲಿಷ್ಠ ತಂಡದ ಆರಂಭಿಕರನ್ನಾಗಿ ಮಾಜಿ ಕ್ಯಾಪ್ಟನ್ ಗ್ರೇಮ್ ಸ್ಮಿತ್ ಹಾಗೂ ಆಸೀಸ್ ದಿಗ್ಗಜ ಆರಂಭಿಕ ಮ್ಯಾಥ್ಯೂ ಹೇಡನ್‌ಗೆ ಸ್ಥಾನ ನೀಡಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಆಸೀಸ್ ದಿಗ್ಗಜ ನಾಯಕ ರಿಕಿ ಪಾಂಟಿಂಗ್‌ಗೆ ಮಣೆ ಹಾಕಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಾಗಿ ತಮ್ಮ ಆತ್ಮೀಯ ಗೆಳೆಯ, ಭಾರತದ ರನ್ ಮಷೀನ್ ವಿರಾಟ್ ಕೊಹ್ಲಿ, ಆಸೀಸ್‌ನ ಸ್ಟೀವ್ ಸ್ಮಿತ್ ಹಾಗೂ ಕಿವೀಸ್ ಮಾಜಿ ಕ್ಯಾಪ್ಟನ್‌ ಕೇನ್ ವಿಲಿಯಮ್ಸನ್ ಅವರನ್ನು ಆಯ್ಕೆ ಮಾಡಿದ್ದಾರೆ.

ಇನ್ನು 41 ವರ್ಷದ ಎಬಿ ಡಿವಿಲಿಯರ್ಸ್ ಏಳನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್‌ ಆಗಿ ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿಗೆ ಸ್ಥಾನ ನೀಡಿದ್ದಾರೆ. ಇನ್ನು ತಂಡದ ವೇಗದ ಬೌಲರ್‌ ರೂಪದಲ್ಲಿ ಮಿಚೆಲ್ ಜಾನ್ಸನ್ ಹಾಗೂ ಪಾಕಿಸ್ತಾನದ ಮೊಹಮ್ಮದ್ ಆಸಿಫ್‌ಗೆ ಸ್ಥಾನ ನೀಡಿದ್ದಾರೆ. ಇನ್ನು ವಿಶ್ವ ಶ್ರೇಷ್ಠ ದಿಗ್ಗಜ ಸ್ಪಿನ್ನರ್‌ಗಳಾದ ಶೇನ್ ವಾರ್ನ್ ಹಾಗೂ ಮುತ್ತಯ್ಯ ಮುರುಳೀಧರನ್, ಎಬಿಡಿ ಆಯ್ಕೆ ಮಾಡಿದ ಬಲಿಷ್ಠ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇನ್ನು ತುಂಬಾ ಇಂಟ್ರೆಸ್ಟಿಂಗ್ ಸಂಗತಿಯೆಂದರೆ, ಎಬಿ ಡಿವಿಲಿಯರ್ಸ್‌ ತಮ್ಮ ಕನಸಿನ ಬಲಿಷ್ಠ ತಂಡದಲ್ಲಿ ಯಾವುದೇ ಆಲ್ರೌಂಡರ್‌ಗೆ ಸ್ಥಾನ ನೀಡಿಲ್ಲ. ಇನ್ನು ಭಾರತದ ಸೂಪರ್ ಸ್ಟಾರ್ ಆಟಗಾರರಾಗಿರುವ ಸಚಿನ್ ತೆಂಡುಲ್ಕರ್, ರೋಹಿತ್ ಶರ್ಮಾ, ರಾಹುಲ್ ದ್ರಾವಿಡ್ ಹಾಗೂ ಜಸ್ಪ್ರೀತ್ ಬುಮ್ರಾ ಅವರಂತಹ ಆಟಗಾರರಿಗೆ ಸ್ಥಾನ ನೀಡದೇ ಇರುವುದು ಕುತೂಹಲ ಮೂಡಿಸಿದೆ. ಅದೇ ರೀತಿ ಎಬಿಡಿ ತಮ್ಮ ಕನಸಿನ ತಂಡದಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್‌ನ ಯಾವೊಬ್ಬ ಆಟಗಾರರನಿಗೂ ಸ್ಥಾನ ನೀಡಿಲ್ಲ ಎನ್ನುವುದು ಅಚ್ಚರಿಯೆನಿಸಿದ್ರೂ ಸತ್ಯ.

ಎಬಿ ಡಿವಿಲಿಯರ್ಸ್ ಆಯ್ಕೆ ಮಾಡಿದ ವಿಶ್ವದ ಬಲಿಷ್ಠ ತಂಡ ಹೀಗಿದೆ ನೋಡಿ:

ಗ್ರೇಮ್ ಸ್ಮಿತ್, ಮ್ಯಾಥ್ಯೂ ಹೇಡನ್, ರಿಕಿ ಪಾಂಟಿಂಗ್, ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್, ಎಂ ಎಸ್ ಧೋನಿ, ಮಿಚೆಲ್ ಜಾನ್ಸನ್, ಮೊಹಮ್ಮದ್ ಆಸಿಫ್, ಮುತ್ತಯ್ಯ ಮುರುಳೀಧರನ್, ಶೇನ್ ವಾರ್ನ್.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ