
ಮೊಹಾಲಿಯಲ್ಲಿ ನಡೆದ ಐಪಿಎಲ್ 2025 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ XI ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 8 ವಿಕೆಟ್ ಗಳ ಅಂತರದ ಭರ್ಜರಿ ಜಯ ಗಳಿಸಿದ್ದು, ಫೈನಲ್ಸ್ ಪ್ರವೇಶಿಸಿರುವುದು ಎಲ್ಲರಿಗೂ ತಿಳಿದದ್ದೇ. 9 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ತಂಡ ಫೈನಲ್ ಪ್ರವೇಶಿಸಿರೋ ಈ ಹೊತ್ತಿನಲ್ಲಿ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲ. ಈ ಸಲ ಕಪ್ಪು ನಮ್ದೇ, ಕಪ್ಪು ನಮ್ದೇ ಎನ್ನುತ್ತಲೇ ಕಳೆದ 8 ವರ್ಷಗಳಿಂದ ಹೇಳುತ್ತಿದ್ದ ಅಭಿಮಾನಿಗಳ ಕನಸು ಅಂತೂ ಈಡೇರಿಸಿದೆ. ಅದಕ್ಕಾಗಿಯೇ ಎಲ್ಲೆಲ್ಲೂ ಹಬ್ಬದ ವಾತಾವರಣ, ಫೈನಲ್ ಪಂದ್ಯ ಗೆಲ್ಲೋದು ಗ್ಯಾರೆಂಟಿ ಎನ್ನುವುದು ಕೂಡ ಅಭಿಮಾನಿಗಳಿಂದ ನಿರ್ಧರಿತವಾಗಿಬಿಟ್ಟಿದೆ.
'ಕಪ್ಪು ನಮ್ಮದೇ' ಆಗೋದು ಗ್ಯಾರೆಂಟಿ ಆಗುತ್ತಿದ್ದಂತೆಯೇ, RCB ಅಭಿಮಾನಿಗಳು ಇದೀಗ ಹೊಸದೊಂದು ಪಟ್ಟು ಶುರು ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆರ್ಸಿಬಿ ಅಭಿಮಾನಿಗಳಿಂದ ಭಾರಿ ಬೇಡಿಕೆ ಶುರುವಾಗಿದೆ. ಅದೇನೆಂದರೆ, ರಾಷ್ಟ್ರದ ರಾಜಧಾನಿಯನ್ನು ಬೆಂಗಳೂರು ಮಾಡಬೇಕು ಎನ್ನುವ ಆಸೆ ಅದು! ಆರ್ಸಿಬಿ ಕಪ್ ಗೆಲ್ಲೋದಕ್ಕೂ, ಬೆಂಗಳೂರು ರಾಜಧಾನಿ ಆಗೋದಕ್ಕೂ ಏನಪ್ಪಾ ಸಂಬಂಧ ಅಂತೆಲ್ಲಾ ಜಾಸ್ತಿ ತಲೆಕೆಡಿಸಿಕೊಳ್ಳೋದು ಬೇಡ. ಏಕೆಂದ್ರೆ ಆರ್ಸಿಬಿ ಫ್ಯಾನ್ಸ್ ಬಳಿ ಅದಕ್ಕೂ ಉತ್ತರ ಇದೆ. ಇದಾಗಲೇ ಜಗಜ್ಜಾಹೀರ ಆಗಿರುವಂತೆ ರಾಜಧಾನಿ ದೆಹಲಿ ಮಾಲಿನ್ಯದ ತವರು ಎನ್ನೋ ಕೆಟ್ಟ ಹಣೆಪಟ್ಟಿ ಹೊತ್ತುಕೊಂಡಿದೆ. ಅದಕ್ಕಾಗಿಯೇ ದೆಹಲಿಗೆ ಹೋಲಿಸಿದರೆ ಎಲ್ಲಾ ರೀತಿಯಲ್ಲಿಯೂ ಬೆಂಗಳೂರು ನಂಬರ್ 1 ಆಗಿದೆ. ಇಲ್ಲಿಯ ಹವಾಮಾನ ಚೆನ್ನಾಗಿದೆ. ಐಟಿ ಹಬ್ ಎನ್ನುವ ಖ್ಯಾತಿಯೂ ಇದೆ. ಸ್ಟಾರ್ಟ್ಅಪ್ನಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ದೆಹಲಿಗೆ ಹೋಲಿಸಿದರೆ ಮಾಲಿನ್ಯವೂ ಕಡಿಮೆ ಇದೆ. ಅಷ್ಟೇ ಏಕೆ, ವಿದೇಶಗಳ ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡಬೇಕು ಎಂದು ಮನಸ್ಸು ಮಾಡಿದಾಗ ಮೊದಲು ಅವರ ಕಣ್ಣಮುಂದೆ ಬರುವುದೂ ಬೆಂಗಳೂರೇ. ಅದೆಲ್ಲಕ್ಕೂ ಕಿರೀಟ ಇಟ್ಟಂತೆ ಈಗ ಮತ್ತೊಂದು ಗರಿಯೂ ಬೆಂಗಳೂರಿಗೆ ಬಂದಿದೆ, ಅದೇ 'ಆರ್ಸಿಬಿ ಕಪ್' ಅದಕ್ಕಾಗಿಯೇ ಬೆಂಗಳೂರು ರಾಜಧಾನಿಯಾಗಲಿ ಎನ್ನೋ ಪಟ್ಟು ಹಿಡಿದಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಇದು ಸಕತ್ ಸೌಂಡ್ ಮಾಡುತ್ತಿದ್ದು, ಆರ್ಸಿಬಿ ಅಭಿಮಾನಿಗಳು ಮಾತ್ರವಲ್ಲದೇ ಹಲವು ಕ್ಷೇತ್ರಗಳ ಮಂದಿಯೂ ಇದಕ್ಕೆ ಸಾಥ್ ಕೊಡುತ್ತಿದ್ದಾರೆ. ಕಪ್ ನಮ್ದೇ ಆದ್ಮೇಲೆ, ಈಗ ರಾಜಧಾನಿಯೂ ನಮ್ದೇ ಎನ್ನುವ ಬರಹ ವೈರಲ್ ಆಗ್ತಿದೆ.
ಅದೇ ಇನ್ನೊಂದೆಡೆ ಅಂತಿಮ ಆಟದ ದಿನ "RCB ಫ್ಯಾನ್ಸ್ ಹಬ್ಬ" ಎಂದು ಮಾಡಿ, ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಿ ಎಂದೆಲ್ಲಾ ಅಭಿಮಾನಿಗಳು ಬೇಡಿಕೆಯನ್ನು ಇಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ಶಿವಾನಂದ ಮಲ್ಲನ್ನವರ್ ಎಂಬುವವರು ಇದಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ಲಿಖಿತ ರೂಪದಲ್ಲಿ ಮನವಿಯನ್ನೂ ಸಲ್ಲಿಸಿದ್ದಾರೆ! ಕಪ್ ಗೆದ್ದ ಬಳಿಕ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿರುತ್ತೆ. ಪ್ರತೀ ಮನೆ ಮನೆಯಲ್ಲೂ ಹಬ್ಬದ ವಾತಾವರಣ ಇರುತ್ತದೆ. ಆದ್ದರಿಂದ ಜೂನ್ 3ರಂದು ಕರ್ನಾಟಕ ರಾಜ್ಯ "RCB ಫ್ಯಾನ್ಸ್ ಹಬ್ಬ" ಎಂದು ಘೋಷಿಸಿ ಪ್ರತಿ ವರ್ಷ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡುವಂತೆ ಇದರಲ್ಲಿ ಮನವಿ ಮಾಡಲಾಗಿದೆ.
ಇನ್ನು ನಿನ್ನೆ ನಡೆದ ರೋಚಕ ಪಂದ್ಯದ ಕುರಿತು ಹೇಳುವುದಾದರೆ, ಆರ್ಸಿಬಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಪರಿಣಾಮ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 14.1 ಓವರ್‌ಗಳಲ್ಲಿ ಕೇವಲ 101 ರನ್‌ಗಳಿಗೆ ಸರ್ವಪತನ ಕಂಡಿತು. ರನ್ ಚೇಸಿಂಗ್ ನಲ್ಲಿ ಆರ್ ಸಿಬಿ ಕೇವಲ 10 ಓವರ್ ಗಳಿಗೆ 2 ವಿಕೆಟ್ ನಷ್ಟಕ್ಕೆ 106 ರನ್ ಗಳಿಸಿ ಗೆಲುವನ್ನು ತನ್ನದಾಗಿಸಿಕೊಂಡಿತು. ಮಾರ್ಕಸ್ ಸ್ಟೊಯಿನಿಸ್ 26 ರನ್‌ಗಳೊಂದಿಗೆ ತಂಡದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರಾರಾದರು. ಆರ್‌ಸಿಬಿ ಪರ ಸುಯಶ್ ಶರ್ಮಾ (3/17) ವೇಗಿಗಳಾದ ಜೋಶ್ ಹ್ಯಾಜಲ್‌ವುಡ್ (3/21), ಯಶ್ ದಯಾಳ್ (2/26) ಮತ್ತು ಭುವನೇಶ್ವರ್ ಕುಮಾರ್ (1/17) ಅತ್ಯುತ್ತಮ ಬೌಲರ್ ಗಳೆನಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.