
ಬೆಂಗಳೂರು(ಮೇ.30) ಐಪಿಎಲ್ 2025ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ 8 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ನೇರವಾಗಿ ಫೈನಲ್ ಪ್ರವೇಶಿಸಿದೆ. ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ನಡೆಯುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಆರ್‌ಸಿಬಿ ಗೆಲುವಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ನಡುವೆ ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ಭರ್ಜರಿ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಎಕ್ಸ್ ಮೂಲಕ ವಿಜಯ್ ಮಲ್ಯ ಆರ್‌ಸಿಬಿ ತಂಡಕ್ಕ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಅಭಿಮಾನಿಗಳು ವಿಜಯ್ ಮಲ್ಯಗೆ ವಿಶೇಷ ಮನವಿ ಮಾಡಿದ್ದಾರೆ.
ಪ್ರಶಸ್ತಿಯತ್ತ ಆರ್‌ಸಿಬಿ
ಪಂಜಾಬ್ ಕಿಂಗ್ಸ್ ವಿರುದ್ದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅರ್ಹ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದ ಆರ್‌ಸಿಬಿಗೆ ಅಭಿನಂದನೆಗಳು. ತೀವ್ರ ಒತ್ತಡದ ಪಂದ್ಯದಲ್ಲಿ ಆರ್‌ಸಿಬಿ ಅತ್ಯುತ್ತಮ ಹಾಗೂ ಅತೀ ಶ್ರೇಷ್ಠ ಆಲ್ ರೌಂಡ್ ಪ್ರದರ್ಶನ ನೀಡಿದೆ. ಪ್ರಶಸ್ತಿಯತ್ತ ದಾಪುಗಾಲಿಟ್ಟಿದೆ ಆರ್‌ಸಿಬಿ, ಪ್ಲೇ ಬೋಲ್ಡ್ ಎಂದು ವಿಜಯ್ ಮಲ್ಯ ಎಕ್ಸ್ ಮೂಲಕ ಹೇಳಿದ್ದಾರೆ.
ಅಹಮ್ಮದಾಬಾದ್ ಫೈನಲ್ ಪಂದ್ಯಕ್ಕೆ ಮಲ್ಯ ಆಹ್ವಾನಿಸಿದ ಫ್ಯಾನ್ಸ್
ವಿಜಯ್ ಮಲ್ಯ ಎಕ್ಸ್ ಮೂಲಕ ಆರ್‌ಸಿಬಿಗೆ ಅಬಿನಂದನೆ ಸಲ್ಲಿಸಿದ ಬೆನ್ನಲ್ಲೇ ಅಭಿಮಾನಿಗಳು ವಿಜಯ್ ಮಲ್ಯರನ್ನು ಐಪಿಎಲ್ ಫೈನಲ್ ಪಂದ್ಯಕ್ಕೆ ಆಹ್ವಾನಿಸಿದ್ದಾರೆ. ಆರ್‌ಸಿಬಿ ಫ್ರಾಂಚೈಸಿಯನ್ನು ಆರಂಭಿಕ ಹಂತದಲ್ಲಿ ಕಟ್ಟಿ ಬೆಳೆಸಿದ ವಿಜಯ್ ಮಲ್ಯ ಇದೀಗ ಟ್ರೋಫಿ ಗೆಲುವು ನೋಡಬೇಕು. ಹೀಗಾಗಿ ಅಹಮ್ಮದಾಬಾದ್‌ನಲ್ಲಿ ಜೂನ್ 3ರಂದು ನಡೆಯಲಿರುವ ಫೈನಲ್ ಪಂದ್ಯ ವೀಕ್ಷಿಸಲು ವಿಜಯ್ ಮಲ್ಯಗೆ ಅಭಿಮಾನಿಗಳು ಆಹ್ವಾನ ನೀಡಿದ್ದಾರೆ. ಇದೇ ವೇಳೆ ಹಲವರು ಮಲ್ಯ ವಿರುದ್ದ ಟ್ವೀಟ್ ಮಾಡಿದ್ದಾರೆ. ಐಪಿಎಲ್ ಫೈನಲ್ ಪಂದ್ಯಕ್ಕೆ ಬನ್ನಿ, ಹೇಗೋ ಆರ್‌ಸಿಬಿ ಫೈನಲ್ ಗೆಲ್ಲುತ್ತೆ. ಅಲ್ಲೇ ಎಲ್ಲಾ ಸಾಲ ತೀರಿಸಿಬಿಡಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
4ನೇ ಬಾರಿ ಫೈನಲ್ ಪ್ರವೇಶಿಸಿದ ಆರ್‌ಸಿಬಿ
ಐಪಿಎಲ್ 2025 ಆವೃತ್ತಿಯಲ್ಲಿ ಆರ್‌ಸಿಬಿ ಫೈನಲ್ ಪ್ರವೇಶಿಸಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಆರ್‌ಸಿಬಿ 8 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂಲಕ 4ನೇ ಬಾರಿಗೆ ಆರ್‌ಸಿಬಿ ಫೈನಲ್ ಪ್ರವೇಶಿಸಿದೆ. 4ನೇ ಪ್ರಯತ್ನದಲ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸದಲ್ಲಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಕ್ವಾಲಿಫೈಯರ್ ಪಂದ್ಯದಲ್ಲಿ ಅತ್ಯುತ್ತಮ ದಾಳಿ ಸಂಘಟಿಸಿದ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು ಕೇವಲ 101 ರನ್‌ಗೆ ಆಲೌಟ್ ಮಾಡಿತ್ತು. ಈ ಸುಲಭ ಟಾರ್ಗೆಟನ್ನು ಆರ್‌ಸಿಬಿ ಕೇವಲ 2 ವಿಕೆಟ್ ಕಳೆದುಕೊಂಡು ಗೆದ್ದುಕೊಂಡಿತ್ತು. ಫಿಲ್ ಸಾಲ್ಟ್ 27 ಎಸೆತದಲ್ಲಿ ಅಜೇಯ 56 ರನ್ ಸಿಡಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.