ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಬ್ಬರಕ್ಕೆ ಚೆನ್ನೈ ಅಪ್ಪಚ್ಚಿ! ಈ ಸೀಸನ್ ಐಪಿಎಲ್‌ನಲ್ಲಿ ಸಿಎಸ್‌ಕೆಗೆ ಹ್ಯಾಟ್ರಿಕ್ ಸೋಲು!

Published : Apr 05, 2026, 11:21 PM IST
Tim David

ಸಾರಾಂಶ

ಟಿಮ್ ಡೇವಿಡ್, ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟೀದಾರ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 250 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ಚೆನ್ನೈ ಸೂಪರ್ ಕಿಂಗ್ಸ್ 207 ರನ್‌ಗಳಿಗೆ ಸರ್ವಪತನ ಕಂಡು 43 ರನ್‌ಗಳ ಸೋಲನುಭವಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಸತತ ಮೂರನೇ ಸೋಲು ಕಂಡ ಸಿಎಸ್‌ಕೆ ಕೊನೆಯ ಸ್ಥಾನಕ್ಕೆ ಕುಸಿಯಿತು.

ಬೆಂಗಳೂರು: ಟಿಮ್ ಡೇವಿಡ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ ವಿಸ್ಪೋಟಕ ಬ್ಯಾಟಿಂಗ್, ಆರ್‌ಸಿಬಿ ಬೌಲರ್‌ಗಳ ಸಂಘಟಿತ ಪ್ರದರ್ಶನದ ಎದುರು ಚೆನ್ನೈ ಸೂಪರ್ ಕಿಂಗ್ಸ್‌ ಮತ್ತೊಮ್ಮೆ ಮಂಡಿಯೂರಿದೆ. ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಕಂಡ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದರೆ, ಹ್ಯಾಟ್ರಿಕ್ ಸೋಲು ಕಂಡ ಚೆನ್ನೈ ಸೂಪರ್ ಕಿಂಗ್ಸ್ ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಜಾರಿದೆ. ಗೆಲ್ಲಲು 251 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಸಿಎಸ್‌ಕೆ 207 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ಆರ್‌ಸಿಬಿ 43 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಭಿಮಾನಿಗಳ ಭರಪೂರ ಬೆಂಬಲಕ್ಕೆ ತಕ್ಕಂತೆ ಆಟವಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬದ್ದ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಅಧಿಕಾರಯುತ ಗೆಲುವು ಸಾಧಿಸಿತು. 10 ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡಿದ್ದ ಸಿಎಸ್‌ಕೆ 30 ರನ್ ಗಳಿಸುವಷ್ಟರಲ್ಲಿ ಸಂಜು ಸ್ಯಾಮ್ಸನ್ ಕೂಡಾ ಪೆವಿಲಿಯನ್‌ಗೆ ವಾಪಾಸ್ಸಾಗಿದ್ದರು.

ಇದಾದ ಬಳಿಕ ಸ್ಪೋಟಕ ಬ್ಯಾಟಿಂಗ್ ನಡೆಸಿದ ಸರ್ಫರಾಜ್ ಖಾನ್ ಕೇವಲ 24 ಎಸೆತಗಳಲ್ಲಿ ಮತ್ತೊಂದು ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಚೆನ್ನೈ ಪಾಳಯದಲ್ಲಿ ಕೊಂಚ ಗೆಲುವಿನ ಅಸೆ ಮೂಡಿಸಿದರು. ಆದರೆ ಕೃನಾಲ್ ಪಾಂಡ್ಯ ಒಂದೇ ಓವರ್‌ನಲ್ಲಿ ಸರ್ಫರಾಜ್ ಖಾನ್ ಹಾಗೂ ಕಾರ್ತಿಕ್ ಶರ್ಮಾ ವಿಕೆಟ್ ಕಬಳಿಸುವ ಮೂಲಕ ಸಿಎಸ್‌ಕೆ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು.

ಇದಾದ ಬಳಿಕ ಸಿಎಸ್‌ಕೆ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಶಿವಂ ದುಬೆ 18, ಯುವ ಕ್ರಿಕೆಟಿಗ ಪ್ರಶಾಂತ್ ವೀರ್ 43 ಹಾಗೂ ಜೇಮಿ ಓವರ್‌ಟನ್ 37 ರನ್ ಸಿಡಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

ಐಪಿಎಲ್‌ನಲ್ಲಿ 200 ವಿಕೆಟ್ ಪಡೆದ ಮೊದಲ ವೇಗಿ ಭುವನೇಶ್ವರ್ ಕುಮಾರ್:

ಆರ್‌ಸಿಬಿ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಯುವ ಕ್ರಿಕೆಟಿಗ ಆಯುಷ್ ಮಾಥ್ರೆ ಅವರನ್ನು ಕೇವಲ ಒಂದು ರನ್‌ಗೆ ಔಟ್ ಮಾಡುವ ಮೂಲಕ ಐಪಿಎಲ್‌ನಲ್ಲಿ 200ನೇ ಬಲಿ ಪಡೆಯುವಲ್ಲಿ ಯಶಸ್ವಿಯಾದರು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ 200 ವಿಕೆಟ್ ಕಬಳಿಸಿದ ಮೊದಲ ವೇಗಿ ಎನ್ನುವ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಆರ್‌ಸಿಬಿ ತಂಡವು ಮೊದಲ ಮೂರು ಓವರ್‌ಗಳಲ್ಲಿ ಎಚ್ಚರಿಕೆಯ ಆರಂಭ ಪಡೆಯಿತು. ಹೀಗಾಗಿ ಮೊದಲ ಮೂರು ಓವರ್‌ನಲ್ಲಿ ಆರ್‌ಸಿಬಿ ಯಾವುದೇ ಬೌಂಡರಿ ಗಳಿಸಲಿಲ್ಲ. ಕೊಹ್ಲಿ 18 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 28 ರನ್ ಗಳಿಸಿ ಅನ್ಸೂಲ್ ಕಂಬೋಜ್‌ಗೆ ವಿಕೆಟ್‌ ಒಪ್ಪಿಸಿದರು. ಇದಾದ ಬಳಿಕ ದೇವದತ್ ಪಡಿಕ್ಕಲ್ ಹಾಗೂ ಫಿಲ್ ಸಾಲ್ಟ್ ಜೋಡಿ ಎರಡನೇ ವಿಕೆಟ್‌ಗೆ ಕೇವಲ 37 ಎಸೆತಗಳಲ್ಲಿ 56 ರನ್ ಸಿಡಿಸಿದರು. ಚುರುಕಿನ ಬ್ಯಾಟಿಂಗ್ ನಡೆಸಿದ ಫಿಲ್ ಸಾಲ್ಟ್ 30 ಎಸೆತಗಳಲ್ಲಿ 46 ರನ್ ಸಿಡಿಸಿ ಶಿವಂ ದುಬೆಗೆ ವಿಕೆಟ್ ಒಪ್ಪಿಸಿದರು.

ಸತತ ಎರಡನೇ ಅರ್ಧಶತಕ ಸಿಡಿಸಿದ ಪಡಿಕ್ಕಲ್:

ಕೊಹ್ಲಿ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ದೇವದತ್ ಪಡಿಕ್ಕಲ್ ಆರಂಭದಲ್ಲಿ ಚುರುಕಾಗಿ ರನ್ ಗಳಿಸಲು ಕೊಂಚ ತಡಬಡಾಯಿಸಿದರು. ಆದರೆ ಪಿಚ್‌ಗೆ ಹೊಂದಿಕೊಳ್ಳುತ್ತಿದ್ದಂತೆಯೇ ಮೈಚಳಿ ಬಿಟ್ಟು ಬ್ಯಾಟ್ ಬೀಸಿದರು. ಸನ್‌ರೈಸರ್ಸ್ ಎದುರು ಕೇವಲ 26 ಎಸೆತಗಳಲ್ಲಿ 61 ರನ್ ಸಿಡಿಸಿದ್ದ ಪಡಿಕ್ಕಲ್ ಇದೀಗ ಸಿಎಸ್‌ಕೆ ಎದುರು 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 50 ರನ್ ಚಚ್ಚಿದರು. ಈ ಮೂಲಕ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಬಾರಿಸಿ ಜೇಮಿ ಓವರ್‌ಟನ್‌ಗೆ ವಿಕೆಟ್ ಒಪ್ಪಿಸಿದರು

ಗುಡುಗಿದ ಪಾಟೀದಾರ್-ಟಿಮ್ ಡೇವಿಡ್:

ದೇವದತ್ ಪಡಿಕ್ಕಲ್ ವಿಕೆಟ್ ಪತನದ ಬಳಿಕ ಜತೆಯಾದ ಟಿಮ್ ಡೇವಿಡ್ ಹಾಗೂ ರಜತ್ ಪಾಟೀದಾರ್ ಸಿಎಸ್‌ಕೆ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 35 ಎಸೆತಗಳಲ್ಲಿ ಈ ಜೋಡಿ ಮುರಿಯದ 99 ರನ್‌ಗಳ ಜತೆಯಾಟವಾಡಿತು. ನಾಯಕ ರಜತ್ ಪಾಟೀದಾರ್ 19 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 48 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಟಿಮ್ ಡೇವಿಡ್ ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಹಾಗೂ 8 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ ಅಜೇಯ 70 ರನ್ ಸಿಡಿಸಿ ತಂಡದ ಮೊತ್ತವನ್ನು 250ರ ಗಡಿ ಮುಟ್ಟಿಸುವಲ್ಲಿ ಯಶಸ್ವಿಯದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಸ್‌ಕೆ ಬೌಲರ್‌ಗಳನ್ನು ಅಟ್ಟಾಡಿಸಿ ಹೊಡೆದ ಆರ್‌ಸಿಬಿ! ಈ ಸೀಸನ್‌ನಲ್ಲಿ ಹೊಸ ದಾಖಲೆ ನಿರ್ಮಾಣ
ಆರ್‌ಸಿಬಿ ಅಬ್ಬರಕ್ಕೆ ಕುಣಿದು ಕುಪ್ಪಳಿಸಿದ ಫ್ಯಾನ್ಸ್, ಸಿಎಸ್‌ಕ್‌ಗೆ 251 ರನ್ ಟಾರ್ಗೆಟ್ ನೀಡಿ ದಾಖಲೆ