
ಬೆಂಗಳೂರು: ಕೆಲವು ದಿನಗಳ ಬ್ರೇಕ್ ನಂತರ, ವಿರಾಟ್ ಕೊಹ್ಲಿ ಇವತ್ತು ಮತ್ತೆ ಕ್ರೀಸ್‌ಗೆ ಇಳಿಯುತ್ತಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲ ಪಂದ್ಯದಲ್ಲಿ ಸೋಲಿಸಿದ ನಂತರ, ಬೆಂಗಳೂರು ಆಡುತ್ತಿರುವ ಎರಡನೇ ಪಂದ್ಯವಿದು. ಈ ಮ್ಯಾಚ್‌ನಲ್ಲಿ ಕೊಹ್ಲಿ ಕೇವಲ 14 ರನ್ ಗಳಿಸಿದರೆ, ಐಪಿಎಲ್‌ನಲ್ಲಿ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ತಮ್ಮದೇ ದಾಖಲೆಯನ್ನು ಮುರಿಯಲಿದ್ದಾರೆ.
ಸದ್ಯ ಪಂಜಾಬ್ ಕಿಂಗ್ಸ್ ವಿರುದ್ಧ 1159 ರನ್ ಗಳಿಸಿರುವ ಕೊಹ್ಲಿ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 1,146 ರನ್ ಬಾರಿಸಿದ್ದಾರೆ. ಇದೀಗ ಕೊಹ್ಲಿ ಇನ್ನು ಕೇವಲ 14 ರನ್ ಸಿಡಿಸಿದರೇ, ಒಂದೇ ಐಪಿಎಲ್ ತಂಡದ ಎದುರು ಅತಿಹೆಚ್ಚು ರನ್ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಪಾಲಾಗಲಿದೆ. ಐಪಿಎಲ್‌ನಲ್ಲಿ ಕೊಹ್ಲಿ 8 ಶತಕಗಳನ್ನು ಸಿಡಿಸಿದ್ದರೂ, ಚೆನ್ನೈ ವಿರುದ್ಧ ಇನ್ನೂ ಒಂದೂ ಸೆಂಚುರಿ ಬಾರಿಸಲು ಅವರಿಗೆ ಸಾಧ್ಯವಾಗಿಲ್ಲ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ ಕೊಹ್ಲಿ 38 ಎಸೆತಗಳಲ್ಲಿ 69 ರನ್ ಗಳಿಸಿ ಭರ್ಜರಿ ಫಾರ್ಮ್‌ನಲ್ಲಿದ್ದರು.
ಇತ್ತ, ಚೆನ್ನೈ ಸೂಪರ್ ಕಿಂಗ್ಸ್ ತಂಡ ದೊಡ್ಡ ಸಂಕಷ್ಟದಲ್ಲಿದೆ. ಗಾಯದ ಕಾರಣ ಮಾಜಿ ನಾಯಕ ಎಂ.ಎಸ್. ಧೋನಿ ಇವತ್ತಿನ ಪಂದ್ಯದಲ್ಲಿ ಆಡುವುದಿಲ್ಲ. ಧೋನಿ ಅನುಪಸ್ಥಿತಿಯಲ್ಲಿ, ಸಂಜು ಸ್ಯಾಮ್ಸನ್ ಚೆನ್ನೈ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಧೋನಿ ವಾಪಸ್ ಬಂದರೂ ಸಂಜು ಸ್ಯಾಮ್ಸನ್ ಅವರೇ ಕೀಪರ್ ಆಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಸೀಸನ್‌ನಲ್ಲಿ ಒಂದೂ ಗೆಲುವು ಕಾಣದ ಚೆನ್ನೈ, ಪಾಯಿಂಟ್ಸ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸದ್ಯ ನಾಲ್ಕನೇ ಸ್ಥಾನದಲ್ಲಿರುವ ಆರ್‌ಸಿಬಿ, ಇವತ್ತು ದೊಡ್ಡ ಅಂತರದಲ್ಲಿ ಗೆದ್ದರೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುವ ಅವಕಾಶವಿದೆ.
ಚೆನ್ನೈ ವಿರುದ್ಧ ಕೊಹ್ಲಿಯ ಸರಾಸರಿ 38.00 ಆಗಿದೆ. ಕಳೆದ ಸೀಸನ್‌ನಲ್ಲಿ ಕೊಹ್ಲಿ ಚೆನ್ನೈ ವಿರುದ್ಧ ಎರಡು ಪಂದ್ಯಗಳಿಂದ 93 ರನ್ ಗಳಿಸಿದ್ದರು. ಆರ್‌ಸಿಬಿ ಪ್ರಶಸ್ತಿ ಗೆದ್ದಿದ್ದಾಗ, ಸಿಎಸ್‌ಕೆ ಲೀಗ್ ಹಂತದಲ್ಲೇ ಹೊರಬಿದ್ದಿತ್ತು. ಒಂದು ಇಂಟರೆಸ್ಟಿಂಗ್ ವಿಚಾರವೆಂದರೆ, ಕೊಹ್ಲಿ ಚೆನ್ನೈ ವಿರುದ್ಧ ಒಂದು ವಿಕೆಟ್ ಕೂಡ ಪಡೆದಿದ್ದಾರೆ. ಹಾಲಿ ಚಾಂಪಿಯನ್ ಆರ್‌ಸಿಬಿ ಮತ್ತು ಲಯ ಕಂಡುಕೊಳ್ಳಲು ಹೆಣಗಾಡುತ್ತಿರುವ ಸಿಎಸ್‌ಕೆ ಮುಖಾಮುಖಿಯಾಗುತ್ತಿರುವುದರಿಂದ, ಚಿನ್ನಸ್ವಾಮಿಯಲ್ಲಿ ಇಂದು ರನ್ ಮಳೆ ಸುರಿಯುವುದು ಖಚಿತ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.