ಟೀಂ ಇಂಡಿಯಾ ಅಲ್ಲವೇ ಅಲ್ಲ..! ಈ ಬಾರಿ ವಿಶ್ವಕಪ್‌ ಗೆಲ್ಲುವ ನೆಚ್ಚಿನ ತಂಡದ ಬಗ್ಗೆ ಭವಿಷ್ಯ ನುಡಿದ ಆರ್ ಅಶ್ವಿನ್‌..!

By Naveen Kodase  |  First Published Aug 10, 2023, 1:49 PM IST

2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯು ಅಕ್ಟೋಬರ್ 05ರಿಂದ ಆರಂಭ
ಈ ಬಾರಿ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡವನ್ನು ಹೆಸರಿಸಿದ ರವಿಚಂದ್ರನ್ ಅಶ್ವಿನ್
ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಿರುವ ಭಾರತ


ನವದೆಹಲಿ(ಆ.10): ಮುಂಬರುವ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಅಲ್ಲ ಎಂದು ಭಾರತದ ಹಿರಿಯ ಸ್ಪಿನ್ನರ್‌ ಆರ್‌.ಅಶ್ವಿನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಕೇವಲ ಎರಡು ತಿಂಗಳು ಬಾಕಿ ಇರುವಾಗಲೇ ಈ ಬಾರಿ ಏಕದಿನ ವಿಶ್ವಕಪ್ ಗೆಲ್ಲಬಲ್ಲ ನೆಚ್ಚಿನ ತಂಡ ಯಾವುದು ಎನ್ನುವುದರ ಕುರಿತಂತೆ ರವಿಚಂದ್ರನ್ ಅಶ್ವಿನ್ ಭವಿಷ್ಯ ನುಡಿದಿದ್ದಾರೆ.

ಈ ಬಗ್ಗೆ ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅವರು, "ಈ ಬಾರಿ ವಿಶ್ವಕಪ್ ಗೆಲ್ಲುವ ಪ್ರಮುಖ ತಂಡಗಳಲ್ಲಿ ಆಸ್ಟ್ರೇಲಿಯಾ ಕೂಡ ಒಂದಾಗಿದೆ. ವಿಶ್ವ ಕ್ರಿಕೆಟ್‌ನ ಎಲ್ಲಾ ಅಭಿಮಾನಿಗಳು ಕೂಡ ಭಾರತವನ್ನು ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳುತ್ತಲೇ ಇರುತ್ತಾರೆ. ಆದರೆ ಇದು ಟೀಂ ಇಂಡಿಯಾವನ್ನು ಒತ್ತಡಕ್ಕೆ ಸಿಲುಕಿಸಿ ಕುಗ್ಗಿಸುವ ತಂತ್ರ ಎಂದಿದ್ದಾರೆ. ಪ್ರತಿ ಐಸಿಸಿ ಟೂರ್ನಿ ಬಂದಾಗಲೂ ಭಾರತ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡ ಎಂದು ಹೇಳುತ್ತಾರೆ. ಟೀಂ ಇಂಡಿಯಾ ಮೇಲೆ ಹೆಚ್ಚುವರಿ ಒತ್ತಡವನ್ನು ಹಾಕಲು ಈ ತಂತ್ರವನ್ನು ಬಳಸುತ್ತಾರೆ. ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಭಾರತ ಕೂಡ ಒಂದು. ಆದರೆ ನಾನು ಆಸ್ಟ್ರೇಲಿಯಾವನ್ನು ನೆಚ್ಚಿನ ತಂಡ ಎಂದು ಹೆಸರಿಸಿದ್ದೇನೆ’ ಎಂದು ಅಶ್ವಿನ್ ಹೇಳಿದ್ದಾರೆ.

Latest Videos

undefined

ಯುವ ಕ್ರಿಕೆಟಿಗ ತಿಲಕ್‌ ವರ್ಮಾ ಫಿಫ್ಟಿ ತಪ್ಪಿಸಿದ ಸ್ವಾರ್ಥಿ ಪಾಂಡ್ಯ..! ಧೋನಿ ನೋಡಿ ಕಲಿಯಿರಿ ಎಂದ ಫ್ಯಾನ್ಸ್

ಏಕದಿನ ವಿಶ್ವಕಪ್‌ ಟೂರ್ನಿಯ ಆರಂಭದಲ್ಲಿ ವೆಸ್ಟ್‌ ಇಂಡೀಸ್ ತಂಡವು ಕ್ರಿಕೆಟ್‌ ಜಗತ್ತಿನ ಪವರ್‌ ಹೌಸ್ ಆಗಿತ್ತು. 1983ರ ಏಕದಿನ ವಿಶ್ವಕಪ್ ಗೆದ್ದ ಬಳಿಕ ನಾವು 1987ರ ಏಕದಿನ ವಿಶ್ವಕಪ್‌ನಲ್ಲೂ ಕಪ್ ಗೆಲ್ಲುವ ಸನೀಹಕ್ಕೆ ಬಂದಿದ್ದೆವು. ಇನ್ನು 1987ರ ಏಕದಿನ ವಿಶ್ವಕಪ್ ಬಳಿಕ ಆಸ್ಟ್ರೇಲಿಯಾವು ಕ್ರಿಕೆಟ್ ಜಗತ್ತಿನ ಪವರ್ ಹೌಸ್ ಆಗಿ ಬದಲಾಗಿದೆ. ಈಗಲೂ ಆಸ್ಟ್ರೇಲಿಯಾ ತಂಡವು ಏಕದಿನ ಕ್ರಿಕೆಟ್ ವಿಶ್ವಕಪ್ ವಿಚಾರದಲ್ಲಿ ಪವರ್‌ ಹೌಸ್ ಆಗಿಯೇ ಇದೆ ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.  

ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್‌ ಅಕ್ಟೋಬರ್ 5ರಿಂದ ಆರಂಭಗೊಳ್ಳಲಿದ್ದು, ಭಾರತ ತನ್ನ ಮೊದಲ ಪಂದ್ಯವನ್ನು ಅಕ್ಟೋಬರ್ 8ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಆಡಲಿದೆ. ಫೈನಲ್‌ ಪಂದ್ಯವು ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ.

ODI World Cup ಇಂಡೋ-ಪಾಕ್‌ ಮೆಗಾ ಫೈಟ್‌ ಅಕ್ಟೋಬರ್ 14ಕ್ಕೆ..! ವಿಶ್ವಕಪ್ ಟಿಕೆಟ್ ಖರೀದಿಗೂ ಡೇಟ್ ಫಿಕ್ಸ್‌

ಭಾರತ ಕ್ರಿಕೆಟ್‌ ತಂಡವು ಕಳೆದೊಂದು ದಶಕದಿಂದಲೂ ಐಸಿಸಿ ಟ್ರೋಫಿಯ ಬರ ಎದುರಿಸುತ್ತಾ ಬಂದಿದೆ. 2013ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಜಯಿಸಿತ್ತು. ಇದಾದ ಬಳಿಕ ಟೀಂ ಇಂಡಿಯಾ ಹಲವು ಬಾರಿ ಐಸಿಸಿ ಟೂರ್ನಿಯಲ್ಲಿ ನಾಕೌಟ್‌ ಹಂತದಲ್ಲೇ ಹೊರಬೀಳುವ ಮೂಲಕ ನಿರಾಸೆ ಅನುಭವಿಸುತ್ತಲೇ ಬಂದಿದೆ. ಇನ್ನು ಧೋನಿ ನೇತೃತ್ವದಲ್ಲೇ ಟೀಂ ಇಂಡಿಯಾ 2011ರಲ್ಲಿ ಕೊನೆಯ ಬಾರಿಗೆ ಐಸಿಸಿ ಏಕದಿನ ವಿಶ್ವಕಪ್ ಜಯಿಸಿತ್ತು.ಇದಾದ ಬಳಿಕ ಭಾರತ ವಿಶ್ವಕಪ್ ಜಯಿಸಿಲ್ಲ. ಇದೀಗ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತವೇ ಆತಿಥ್ಯ ವಹಿಸುತ್ತಿದ್ದು, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. 

46 ದಿನ, 48 ಪಂದ್ಯ: 46 ದಿನಗಳ ಕಾಲ ನಡೆಯಲಿರುವ ಟೂರ್ನಿಯಲ್ಲಿ 10 ತಂಡಗಳು ಪಾಲ್ಗೊಳ್ಳುತ್ತಿದ್ದು, ಫೈನಲ್‌ ಸೇರಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್‌, ಬಾಂಗ್ಲಾದೇಶ, ನ್ಯೂಜಿಲೆಂಡ್‌, ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ. ಈ 8 ತಂಡಗಳು ನೇರ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇನ್ನೆರಡು ತಂಡಗಳಾದ ಶ್ರೀಲಂಕಾ ಹಾಗೂ ನೆದರ್‌ಲೆಂಡ್ಸ್ ತಂಡಗಳು ಅರ್ಹತಾ ಸುತ್ತಿನ ಮೂಲಕ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟಿವೆ.  

click me!