
ಹುಬ್ಬಳ್ಳಿ[ಡಿ.17]: ಕರ್ನಾಟಕ-ಉತ್ತರ ಪ್ರದೇಶ ನಡುವಿನ ರಣಜಿ ಪಂದ್ಯದಲ್ಲಿ ಟಾಸ್ ಗೆದ್ದ ಉತ್ತರ ಪ್ರದೇಶ ಬ್ಯಾಟಿಂಗ್ ಆಯ್ದುಕೊಂಡಿದೆ. ಕರುಣ್ ನಾಯರ್ ಕರ್ನಾಟಕ ತಂಡವನ್ನು ಮುನ್ನಡೆಸುತಿದ್ದಾರೆ.
ತಮಿಳುನಾಡು ವಿರುದ್ಧ ಕೊನೆ ಓವರ್ ಥ್ರಿಲ್ಲರ್ ಗೆದ್ದು 2019-20ರ ರಣಜಿ ಟ್ರೋಫಿಯಲ್ಲಿ ಗೆಲುವಿನ ಆರಂಭ ಪಡೆದುಕೊಂಡಿರುವ ಕರ್ನಾಟಕ ತಂಡ, ಹುಬ್ಬಳ್ಳಿಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆರಂಭಗೊಂಡ 2ನೇ ಸುತ್ತಿನ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು ಎದುರಿಸುತ್ತಿದೆ. ಈ ಋುತುವಿನಲ್ಲಿ 2 ಟ್ರೋಫಿಗಳನ್ನು ಗೆದ್ದಿರುವ ರಾಜ್ಯ ತಂಡ, ಯಶಸ್ಸಿನ ಓಟವನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.
ರಣಜಿ ಟ್ರೋಫಿ: ತಮಿಳುನಾಡು ಮಣಿಸಿ ಶುಭಾರಂಭ ಮಾಡಿದ ಕರ್ನಾಟಕ!
ಕರ್ನಾಟಕಕ್ಕೆ ಈ ಪಂದ್ಯದಲ್ಲಿ ಹಿರಿಯ ಹಾಗೂ ಪ್ರಮುಖ ಆಟಗಾರರ ಅನುಪಸ್ಥಿತಿ ಎದುರಾಗಲಿದೆ. ಮಯಾಂಕ್ ಅಗರ್‌ವಾಲ್, ಕೆ.ಎಲ್.ರಾಹುಲ್ ಹಾಗೂ ಮನೀಶ್ ಪಾಂಡೆ, ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಆಡಲು ಭಾರತ ತಂಡದೊಂದಿಗಿದ್ದಾರೆ. ಕಳೆದ ಪಂದ್ಯದ ಹೀರೋ ಕೆ.ಗೌತಮ್ ಹಾಗೂ ಪವನ್ ದೇಶಪಾಂಡೆ ಗಾಯಗೊಂಡಿದ್ದು ಪಂದ್ಯದಿಂದ ಹೊರಬಿದ್ದಿದ್ದಾರೆ. ಪ್ರಮುಖ ವೇಗಿ ಪ್ರಸಿದ್ಧ್ ಕೃಷ್ಣ ಇನ್ನೂ ಗುಣಮುಖರಾಗಿಲ್ಲ. ಹೀಗಾಗಿ ಯುವ ತಂಡದೊಂದಿಗೆ ಕರ್ನಾಟಕ ಕಣಕ್ಕಿಳಿಯಲಿದೆ.
ಸೋತ ಬಳಿಕ ಖ್ಯಾತೆ, ಕರ್ನಾಟಕ ವಿರುದ್ಧ ಜಗಳಕ್ಕೆ ನಿಂತ ತಮಿಳುನಾಡುಗೆ ತಕ್ಕ ಪಾಠ!
ಯುವ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಋುತುವಿನಲ್ಲಿ ಪ್ರಚಂಡ ಆಟವಾಡುತ್ತಿರುವ 19 ವರ್ಷದ ಆಟಗಾರ, ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರು. ಡಿ.ನಿಶ್ಚಲ್, ಆರ್.ಸಮರ್ಥ್, ಅಭಿಷೇಕ್ ರೆಡ್ಡಿಯಂತಹ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ಗಳು ಅಗ್ರ ಕ್ರಮಾಂಕದಲ್ಲಿ ಆಡಲಿದ್ದಾರೆ. ನಾಯಕ ಕರುಣ್ ನಾಯರ್‌ಗೆ ಲಯ ಕಂಡುಕೊಳ್ಳಲು ಇದು ಅತ್ಯುತ್ತಮ ಅವಕಾಶವಾಗಿದೆ. ಕರುಣ್ ಕೊಡುಗೆ ತಂಡಕ್ಕೆ ಅತ್ಯವಶ್ಯಕ ಎನಿಸಿದೆ.
ಸ್ಪಿನ್ನರ್‌ಗಳಾದ ಶ್ರೇಯಸ್ ಗೋಪಾಲ್, ಜೆ.ಸುಚಿತ್ ಬ್ಯಾಟಿಂಗ್‌ನಲ್ಲೂ ಕೊಡುಗೆ ನೀಡಬಲ್ಲರು. ಹಿರಿಯ ವೇಗಿ ಅಭಿಮನ್ಯು ಮಿಥುನ್ ತಂಡಕ್ಕೆ ಮರಳಿದ್ದು, ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ರೋನಿತ್ ಮೋರೆ, ಡೇವಿಡ್ ಮಥಾಯಿಸ್ ಮಿಂಚಿನ ಪ್ರದರ್ಶನ ತೋರುವ ನಿರೀಕ್ಷೆಯಲ್ಲಿದ್ದಾರೆ
ಉ.ಪ್ರದೇಶಕ್ಕೂ ಅನುಭವಿಗಳ ಕೊರತೆ: ವೇಗಿ ಅಂಕಿತ್ ರಜಪೂತ್ ನೇತೃತ್ವದ ಉತ್ತರ ಪ್ರದೇಶ ಸಹ ಅನುಭವಿ ಆಟಗಾರರ ಕೊರತೆ ಎದುರಿಸುತ್ತಿದೆ. ತಂಡ ಬ್ಯಾಟಿಂಗ್‌ನಲ್ಲಿ ತನ್ನ ಆರಂಭಿಕ ಅಲ್ಮಸ್ ಶೌಕತ್, ಅಕ್ಷದೀಪ್ ನಾಥ್, ರಿಂಕು ಸಿಂಗ್‌ರನ್ನು ನೆಚ್ಚಿಕೊಂಡಿದೆ. ಯುವ ವೇಗಿಗಳಾದ ಶಿವಂ ಮಾವಿ ಹಾಗೂ ಯಶ್ ದಯಾಳ್ ಕರ್ನಾಟಕ ಬ್ಯಾಟ್ಸ್‌ಮನ್‌ಗಳನ್ನು ಕಾಡಬಲ್ಲರು. ಮೊದಲ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಡ್ರಾಗೆ ತೃಪ್ತಿಪಟ್ಟಿದ್ದ ಉತ್ತರ ಪ್ರದೇಶ, ಮೊದಲ ಗೆಲುವಿಗಾಗಿ ಕಾತರಿಸುತ್ತಿದೆ.
ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 2
200ನೇ ಗೆಲುವಿನ ಹೊಸ್ತಿಲಲ್ಲಿ ಕರ್ನಾಟಕ
ಕರ್ನಾಟಕ ತಂಡ ಇದುವರೆಗೂ 440 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು 199ರಲ್ಲಿ ಗೆಲುವು ಸಾಧಿಸಿದೆ. 175 ಪಂದ್ಯಗಳು ಡ್ರಾಗೊಂಡಿದ್ದು 66 ಪಂದ್ಯಗಳಲ್ಲಿ ಸೋಲುಂಡಿದೆ. ಇನ್ನೆರಡು ಪಂದ್ಯಗಳಲ್ಲಿ ಫಲಿತಾಂಶ ಹೊರಬಿದ್ದಲ್ಲ. ತಂಡ 200ನೇ ಗೆಲುವಿಗಾಗಿ ಕಾಯುತ್ತಿದೆ. ಮುಂಬೈ(241) ಬಳಿಕ 200 ಗೆಲುವುಗಳ ಮೈಲಿಗಲ್ಲು ತಲುಪಿದ 2ನೇ ತಂಡ ಎನ್ನುವ ಹಿರಿಮೆಗೆ ಪಾತ್ರವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.