Ranji Trophy ಕರ್ನಾಟಕ vs ತಮಿಳುನಾಡು ಪಂದ್ಯ ರೋಚಕ ಡ್ರಾ!

By Kannadaprabha NewsFirst Published Feb 13, 2024, 10:57 AM IST
Highlights

ಕರ್ನಾಟಕ ಹಾಗೂ ತಮಿಳುನಾಡು ನಡುವಿನ ರಣಜಿ ಪಂದ್ಯ 38ನೇ ಬಾರಿ ಡ್ರಾಗೊಂಡಿತು. ಇತ್ತಂಡಗಳೂ ಈ ವರೆಗೆ ಒಟ್ಟು 74 ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ 18ರಲ್ಲಿ ಜಯಗಳಿಸಿವೆ.

ಚೆನ್ನೈ(ಫೆ.13): ಭಾರಿ ಪೈಪೋಟಿ, ರೋಚಕತೆ ಸೃಷ್ಟಿಸಿದ್ದ ಬದ್ಧವೈರಿಗಳಾದ ಕರ್ನಾಟಕ ಹಾಗೂ ತಮಿಳುನಾಡು ನಡುವಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ. ಕೊನೆ ಎಸೆತದವರೆಗೂ ಉಭಯ ತಂಡಗಳು ಭಾರಿ ಹೋರಾಟ ನಡೆಸಿದರೂ, ಯಾರಿಗೂ ಗೆಲುವು ಒಲಿಯಲಿಲ್ಲ. ಗೆದ್ದೇ ತೀರುತ್ತೇವೆ ಎಂಬಂತೆ ತಮಿಳುನಾಡು ಬ್ಯಾಟರ್‌ಗಳ ಸಾಹಸ, ಗೆಲ್ಲಲು ಬಿಡಲ್ಲ ಎಂಬಂತಿದ್ದ ರಾಜ್ಯದ ಬೌಲರ್‌ಗಳ ಸಂಘಟಿತ ದಾಳಿಯ ನಡುವೆಯೂ ಪಂದ್ಯ ಡ್ರಾಗೊಂಡಿತು.

ಇದರಿಂದಾಗಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದ ಮೇಲೆ ಕರ್ನಾಟಕಕ್ಕೆ 3 ಅಂಕ ಲಭಿಸಿದ್ದು, ಎಲೈಟ್‌ ‘ಸಿ’ ಗುಂಪಿನಲ್ಲಿ ಒಟ್ಟು 24 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದೆ. 1 ಅಂಕ ಪಡೆದ ತಮಿಳುನಾಡು 22 ಅಂಕದೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ. ಇತ್ತಂಡಕ್ಕೂ ತಲಾ ಒಂದು ಪಂದ್ಯ ಬಾಕಿ ಇದ್ದು, ಕ್ವಾರ್ಟರ್‌ ಫೈನಲ್‌ಗೇರುವ ನಿರೀಕ್ಷೆಯಲ್ಲಿದೆ.

ರೋಹಿತ್ ಶರ್ಮಾ ನೋಡಿದ ಕೊನೆಯ ಸಿನಿಮಾ ಯಾವುದು? ಸ್ವತಃ ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಹಿಟ್‌ಮ್ಯಾನ್

2ನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗೆ 355 ರನ್‌ ಗುರಿ ಪಡೆದಿದ್ದ ತಮಿಳುನಾಡಿಗೆ ಕೊನೆ ದಿನವಾ ಸೋಮವಾರ 319 ರನ್‌ ಗಳಿಸಬೇಕಿತ್ತು. ಕರ್ನಾಟಕಕ್ಕೆ 9 ವಿಕೆಟ್‌ ಅಗತ್ಯವಿತ್ತು. 2ನೇ ವಿಕೆಟ್‌ಗೆ ರಂಜನ್‌ ಹಾಗೂ ವಿಮಲ್‌(31) 61 ರನ್‌ ಜೊತೆಯಾಟವಾಡಿ ತಂಡಕ್ಕೆ ಭದ್ರಬುನಾದಿ ಹಾಕಿಕೊಟ್ಟರು. ಬಳಿಕ 3ನೇ ವಿಕೆಟ್‌ಗೆ ರಂಜನ್‌-ಬಾಬಾ ಇಂದ್ರಜಿತ್‌ ಜೊತೆಯಾಟದಲ್ಲಿ ತಂಡದ ಖಾತೆಗೆ 67 ರನ್‌ ಸೇರ್ಪಡೆಗೊಂಡಿತು. ರಂಜನ್‌ 74ಕ್ಕೆ ವಿಕೆಟ್‌ ಒಪ್ಪಿಸಿದ ಬಳಿಕ ಭೂಪತಿ ವೈಷ್ಣ 19, ಮೊಹಮ್ಮದ್‌ 15 ರನ್‌ಗೆ ನಿರ್ಗಮಿಸಿದರು.

199ಕ್ಕೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಮಿಳುನಾಡಿಗೆ ಇಂದ್ರಜಿತ್‌-ವಿಜಯ್‌ ಶಂಕರ್‌ ಆಸರೆಯಾದರು. ಈ ಜೋಡಿ 7ನೇ ವಿಕೆಟ್‌ಗೆ 125 ರನ್‌ ಜೊತೆಯಾಟವಾಡಿ ತಂಡದ ಗೆಲುವಿನ ಆಸೆಯನ್ನು ಚಿಗುರಿಸಿತು. 98 ರನ್‌ ಗಳಿಸಿದ್ದ ಇಂದ್ರಜಿತ್ ಕೊನೆ ಕ್ಷಣದಲ್ಲಿ ರನ್‌ಔಟ್‌ ಆದರೆ, 60 ರನ್‌ ಸಿಡಿಸಿದ್ದ ಶಂಕರ್‌ರನ್ನು ವೈಶಾಕ್‌ ಪೆವಿಲಿಯನ್‌ಗೆ ಅಟ್ಟಿದರು. 6 ರನ್‌ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡಾಗ ರಾಜ್ಯದ ಆಟಗಾರರಲ್ಲಿ ಗೆಲುವಿನ ಭರವಸೆ ಮೂಡಿತ್ತು. ಆದರೆ ನಾಯಕ ಸಾಯಿ ಕಿಶೋರ್‌ ಹಾಗೂ ಅಜಿತ್‌ ರಾಮ್‌ ತಮಿಳುನಾಡನ್ನು ಸೋಲಿನಿಂದ ಪಾರು ಮಾಡಿದರು. ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಕಬಳಿಸಿದ್ದ ವೈಶಾಕ್‌ ಈ ಬಾರಿ 3 ವಿಕೆಟ್‌ ಉರುಳಿಸಿದರು. ಹಾರ್ದಿಕ್‌ ರಾಜ್‌ 2 ವಿಕೆಟ್‌ ಕಿತ್ತರು.

ಮನೆಯೊಡೆದ ಸೊಸೆ; ಮಾವನ ಆರೋಪಕ್ಕೆ ಖಡಕ್ ತಿರುಗೇಟು ಕೊಟ್ಟ ಜಡೇಜಾ ಪತ್ನಿ ರಿವಾಬ

ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 366 ರನ್‌ ಗಳಿಸಿ, ತಮಿಳುನಾಡನ್ನು 151ಕ್ಕೆ ನಿಯಂತ್ರಿಸಿತ್ತು. 215 ರನ್‌ ಮುನ್ನಡೆ ಪಡೆದ ಹೊರತಾಗಿಯೂ ಫಾಲ್‌-ಆನ್‌ ಹೇರದೆ 2ನೇ ಇನ್ನಿಂಗ್ಸ್‌ನಲ್ಲಿ 139 ರನ್‌ಗೆ ಆಲೌಟಾಗಿತ್ತು.

ಸ್ಕೋರ್‌: ಕರ್ನಾಟಕ 366/10 ಮತ್ತು 139/10
ತಮಿಳುನಾಡು 151/10 ಮತ್ತು 338/8 (ಇಂದ್ರಜಿತ್‌ 98, ರಂಜನ್‌ 74, ಶಂಕರ್‌ 60, ವೈಶಾಕ್‌ 3-71)

38ನೇ ಬಾರಿ ಡ್ರಾ

ಕರ್ನಾಟಕ ಹಾಗೂ ತಮಿಳುನಾಡು ನಡುವಿನ ರಣಜಿ ಪಂದ್ಯ 38ನೇ ಬಾರಿ ಡ್ರಾಗೊಂಡಿತು. ಇತ್ತಂಡಗಳೂ ಈ ವರೆಗೆ ಒಟ್ಟು 74 ಬಾರಿ ಮುಖಾಮುಖಿಯಾಗಿದ್ದು, ಎರಡೂ ತಂಡಗಳು ತಲಾ 18ರಲ್ಲಿ ಜಯಗಳಿಸಿವೆ.

ಫೆ.16ರಿಂದ ರಾಜ್ಯಕ್ಕೆ ಚಂಡೀಗಢ ಸವಾಲು

ಕರ್ನಾಟಕ 6 ಪಂದ್ಯಗಳನ್ನಾಡಿದ್ದು, ಗುಂಪು ಹಂತದಲ್ಲಿ ಉಳಿದಿರುವ ಏಕೈಕ ಪಂದ್ಯದಲ್ಲಿ ಫೆ.16ರಿಂದ ಚಂಡೀಗಢ ವಿರುದ್ಧ ಸೆಣಸಾಡಲಿದೆ. ಕ್ವಾರ್ಟರ್‌ ಫೈನಲ್‌ಗೇರಬೇಕಿದ್ದರೆ ರಾಜ್ಯಕ್ಕೆ ಗೆಲುವು ಅಗತ್ಯ. ಅಥವಾ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದು ಡ್ರಾ ಸಾಧಿಸಿದರೂ ತಂಡ ಕ್ವಾರ್ಟರ್‌ಗೇರಲಿದೆ. ಒಂದು ವೇಳೆ ಸೋತರೆ ಇತರ ತಂಡಗಳ ಫಲಿತಾಂಶದ ಮೇಲೆ ತಂಡದ ನಾಕೌಟ್‌ ಭವಿಷ್ಯ ನಿರ್ಧಾರವಾಗಲಿದೆ.
 

click me!