Ranji Trophy: ಸೆಮೀಸ್‌ನಲ್ಲಿ ಕರ್ನಾಟಕ-ಸೌರಾಷ್ಟ್ರ ಫೈಟ್

By Kannadaprabha News  |  First Published Feb 5, 2023, 8:40 AM IST

ರಣಜಿ ಟ್ರೋಫಿ ಸೆಮಿಫೈನಲ್‌ನ 4 ತಂಡಗಳು ಅಂತಿಮ
ಎರಡನೇ ಸೆಮೀಸ್‌ನಲ್ಲಿ ಕರ್ನಾಟಕ-ಸೌರಾಷ್ಟ್ರ ಮುಖಾಮುಖಿ
ಬೆಂಗಳೂರಿನಲ್ಲೇ ನಡೆಯಲಿರುವ ಎರಡನೇ ಸೆಮೀಸ್ ಪಂದ್ಯ


ಬೆಂಗಳೂರು: 2022-23ರ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ 4 ಸೆಮಿಫೈನಲ್‌ ತಂಡಗಳು ಅಂತಿಮಗೊಂಡಿದ್ದು, 8 ಬಾರಿ ಚಾಂಪಿಯನ್‌ ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಸವಾಲು ಎದುರಾಗಲಿದೆ. ಮತ್ತೊಂದು ಸೆಮೀಸ್‌ನಲ್ಲಿ ಹಾಲಿ ಚಾಂಪಿಯನ್‌ ಮಧ್ಯಪ್ರದೇಶ ಹಾಗೂ 2 ಬಾರಿ ಚಾಂಪಿಯನ್‌ ಬಂಗಾಳ ತಂಡಗಳು ಸೆಣಸಾಡಲಿವೆ. ಕಳೆದ ವರ್ಷ ಕ್ವಾರ್ಟರ್‌ನಲ್ಲೇ ಸೋತು ಹೊರಬಿದ್ದಿದ್ದ ಕರ್ನಾಟಕ ಈ ಬಾರಿ ಪ್ರಶಸ್ತಿ ಎತ್ತಿಹಿಡಿಯುವ ನಿರೀಕ್ಷೆಯಲ್ಲಿದ್ದು, ಫೆ.8ರಿಂದ ಆರಂಭವಾಗಲಿರುವ ಪಂದ್ಯದಲ್ಲಿ 2019-20ರ ಚಾಂಪಿಯನ್‌ ಸೌರಾಷ್ಟ್ರ ವಿರುದ್ಧ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.

ಶನಿವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಸೌರಾಷ್ಟ್ರ ತಂಡ ಪಂಜಾಬ್‌ ವಿರುದ್ಧ 71 ರನ್‌ ಗೆಲುವು ದಾಖಲಿಸಿತು. ಗೆಲುವಿಗೆ 252 ರನ್‌ ಗುರಿ ಪಡೆದಿದ್ದ ಪಂಜಾಬ್‌ 4ನೇ ದಿನ 2 ವಿಕೆಟ್‌ಗೆ 52 ರನ್‌ ಗಳಿಸಿತ್ತು. ಕೊನೆ ದಿನ 200 ರನ್‌ ಗಳಿಸಬೇಕಿತ್ತು. ಆದರೆ ನಾಯಕ ಮಂದೀಪ್‌ ಸಿಂಗ್‌(45), ಪುಖ್‌ರಾಜ್‌ ಮಾನ್‌(42) ಹೋರಾಟದ ಹೊರತಾಗಿಯೂ 180 ರನ್‌ಗೆ ಆಲೌಟಾಯಿತು. 1992-93ರ ಚಾಂಪಿಯನ್‌ ಪಂಜಾಬ್‌ ಸತತ 2ನೇ ಬಾರಿಯೂ ಅಂತಿಮ 8ರ ಘಟ್ಟದಲ್ಲೇ ಸೋತು ಹೊರಬಿತ್ತು.

Tap to resize

Latest Videos

Ranji Trophy: ಉತ್ತರಾಖಂಡ ಬಗ್ಗುಬಡಿದು ಸೆಮೀಸ್‌ಗೆ ಕರ್ನಾಟಕ ಲಗ್ಗೆ..!

ಕಳೆದ ಬಾರಿ ಗುಂಪು ಹಂತದಲ್ಲೇ ಸೋತಿದ್ದ ಸೌರಾಷ್ಟ್ರ ಈ ಬಾರಿ ಉಪಾಂತ್ಯಕ್ಕೆ ಲಗ್ಗೆ ಇಟ್ಟಿತು. ಅತ್ತ ಕರ್ನಾಟಕ ತಂಡ ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರವೇ ಉತ್ತರಾಖಂಡ ವಿರುದ್ಧ ಗೆದ್ದು ಸೆಮೀಸ್‌ಗೆ ತಲುಪಿತ್ತು. ಗುಂಪು ಹಂತದಲ್ಲಿ ಎಲೈಟ್‌ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿದ್ದ ರಾಜ್ಯ ತಂಡ ಕ್ವಾರ್ಟರ್‌ನಲ್ಲಿ ಉತ್ತರಾಖಂಡವನ್ನು ಇನ್ನಿಂಗ್‌್ಸ ಹಾಗೂ 281 ರನ್‌ಗಳಿಂದ ಮಣಿಸಿತ್ತು.

ಸೆಮೀಸ್‌ಗೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ

ಕರ್ನಾಟಕ ಹಾಗೂ ಸೌರಾಷ್ಟ್ರ ನಡುವಿನ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಗುಂಪು ಹಂತದಲ್ಲಿ ರಾಜ್ಯ ತಂಡ ಇದೇ ಕ್ರೀಡಾಂಗಣದಲ್ಲಿ 3 ಪಂದ್ಯಗಳನ್ನಾಡಿದ್ದು, ಉತ್ತರಾಖಂಡ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯಕ್ಕೂ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಮಧ್ಯಪ್ರದೇಶ ಹಾಗೂ ಬಂಗಾಳ ನಡುವಿನ ಮತ್ತೊಂದು ಸೆಮೀಸ್‌ ಪಂದ್ಯ ಇಂದೋರ್‌ನ ಹೋಲ್ಕರ್‌ ಕ್ರೀಡಾಂಗಣದಲ್ಲಿ ನಡೆಯಲಿದೆ.

ಸೆಮಿಫೈನಲ್‌ ವೇಳಾಪಟ್ಟಿ

ದಿನಾಂಕ ಪಂದ್ಯ ಸ್ಥಳ

ಫೆ.8-12 ಮಧ್ಯಪ್ರದೇಶ-ಬಂಗಾಳ ಇಂದೋರ್‌

ಫೆ.8-12 ಕರ್ನಾಟಕ-ಸೌರಾಷ್ಟ್ರ ಬೆಂಗಳೂರು

ಏಕದಿನ: ಇಂದು ಸೆಮೀಸಲ್ಲಿ ಕರ್ನಾಟಕ-ರಾಜಸ್ತಾನ ಫೈಟ್‌

ರಾಂಚಿ: ಕಳೆದ ಬಾರಿ ರನ್ನರ್‌-ಅಪ್‌ ಕರ್ನಾಟಕ ರಾಷ್ಟ್ರೀಯ ಮಹಿಳಾ ಏಕದಿನ ಟೂರ್ನಿಯಲ್ಲಿ ಭಾನುವಾರ ರಾಜಸ್ತಾನ ವಿರುದ್ಧ ಸೆಣಸಾಡಲಿದೆ. ಗುಂಪು ಹಂತದಲ್ಲಿ 2ನೇ ಸ್ಥಾನಿಯಾಗಿ ರಾಜ್ಯ ತಂಡ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಮಧ್ಯಪ್ರದೇಶ ವಿರುದ್ಧ ಗೆಲುವು ಸಾಧಿಸಿತ್ತು. ಶುಕ್ರವಾರ ನಡೆದ ಕ್ವಾರ್ಟರ್‌ನಲ್ಲಿ ಡೆಲ್ಲಿಗೆ ಸೋಲುಣಿಸಿ ಅಂತಿಮ 4 ಘಟ್ಟಪ್ರವೇಶಿಸಿದೆ. ಅತ್ತ ರಾಜಸ್ಥಾನ ಪ್ರಿ ಕ್ವಾರ್ಟರ್‌ನಲ್ಲಿ ವಿದರ್ಭ, ಕ್ವಾರ್ಟರ್‌ನಲ್ಲಿ ಪಂಜಾಬ್‌ ವಿರುದ್ಧ ಗೆಲುವು ಸಾಧಿಸಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಉತ್ತರಾಖಂಡ ಹಾಗೂ ರೈಲ್ವೇಶ್‌ ಮುಖಾಮುಖಿಯಾಗಲಿದ್ದು, ಫೆ.7ಕ್ಕೆ ಫೈನಲ್‌ ಪಂದ್ಯ ನಿಗದಿಯಾಗಿದೆ.

click me!