
ಕೋಲ್ಕತಾ(ಫೆ.16): 33 ವರ್ಷಗಳಲ್ಲಿ ಚೊಚ್ಚಲ ರಣಜಿ ಟ್ರೋಫಿ ಗೆಲ್ಲುವ ಕನಸು ಕಾಣುತ್ತಿರುವ ಬಂಗಾಳ ತಂಡವು ರಣಜಿ ಟ್ರೋಫಿ ಫೈನಲ್‌ನಲ್ಲಿ ಆರಂಭಿಕ ಆಘಾತ ಅನುಭವಿಸಿದೆ. ಮೊದಲ ಎರಡು ಓವರ್‌ನಲ್ಲಿ ಕೇವಲ 2 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಹೌದು, ಇಲ್ಲಿನ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಆರಂಭಗೊಂಡ 2022-23ರ ಋುತುವಿನ ಫೈನಲ್‌ನಲ್ಲಿ ಸೌರಾಷ್ಟ್ರ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಬಂಗಾಳ ತಂಡಕ್ಕೆ ಸೌರಾಷ್ಟ್ರ ನಾಯಕ ಜಯದೇವ್ ಉನಾದ್ಕತ್ ಹಾಗೂ ಚೇತನ್ ಸಕಾರಿಯಾ ಆರಂಭಿಕ ಆಘಾತ ನೀಡಿದ್ದಾರೆ. ಮೊದಲ ಓವರ್‌ನಲ್ಲೇ ಜಯದೇವ್ ಉನಾದ್ಕತ್, ಅಭಿಮನ್ಯು ಈಶ್ವರನ್ ಅವರನ್ನು ಪೆವಿಲಿಯನ್ನಿಗಟ್ಟುವ ಮೂಲಕ ಆರಂಭಿಕ ಯಶಸ್ಸು ತಂದುಕೊಟ್ಟರು. ಇನ್ನು ಎರಡನೇ ಓವರ್‌ನಲ್ಲಿ ಚೇತನ್ ಸಕಾರಿಯಾ, ಮತ್ತೋರ್ವ ಆರಂಭಿಕ ಬ್ಯಾಟರ್ ಸುಮಂತ್ ಗುಪ್ತಾ ಹಾಗೂ ಸುದಿಪ್ ಕುಮಾರ್ ಘರಾಮಿ ಅವರನ್ನು ಪೆವಿಲಿಯನ್ನಿಗಟ್ಟುವ ಮೂಲಕ ಬಂಗಾಳ ತಂಡಕ್ಕೆ ಡಬಲ್ ಶಾಕ್ ನೀಡಿದ್ದಾರೆ.
ಬಂಗಾಳಕ್ಕೆ ಪ್ರಶಸ್ತಿ ಗೆಲುವಿನ ಹಸಿವಿನ ಜೊತೆ, 2019-20ರ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದೊಂದಿಗೆ ಕಣಕ್ಕಿಳಿದಿತ್ತು. ಈ ಮೊದಲು ರಾಜ್‌ಕೋಟ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಸೌರಾಷ್ಟ್ರ ಮೊದಲ ಇನ್ನಿಂಗ್‌್ಸ ಮುನ್ನಡೆ ಆಧಾರದಲ್ಲಿ ಪ್ರಶಸ್ತಿ ಜಯಿಸಿತ್ತು.
Women's T20 World cup ಹರ್ಮನ್‌ಪ್ರೀತ್ - ರಿಚಾ ಜೊತೆಯಾಟ, ಗೆಲುವಿನ ಸಿಹಿ ಕಂಡ ಭಾರತ
ಎರಡೂ ತಂಡಗಳು ಉತ್ತಮ ಲಯದಲ್ಲಿದ್ದು, ಸೆಮಿಫೈನಲ್‌ನಲ್ಲಿ ಬಲಿಷ್ಠ ತಂಡಗಳನ್ನು ಸೋಲಿಸಿ ಫೈನ್‌ಗೇರಿವೆ. ಕರ್ನಾಟಕ ವಿರುದ್ಧ ಸೌರಾಷ್ಟ್ರ ಗೆದ್ದರೆ, ಹಾಲಿ ಚಾಂಪಿಯನ್ ಮಧ್ಯಪ್ರದೇಶಕ್ಕೆ ಬಂಗಾಳ ಸೋಲುಣಿಸಿತ್ತು. ಬಂಗಾಳಕ್ಕೆ ಮನೋಜ್ ತಿವಾರಿ, ಅನುಸ್ತೂಪ್ ಮಜುಂದಾರ್‌ರಂತಹ ಅನುಭವಿ ಬ್ಯಾಟರ್‌ಗಳ ಬಲವಿದೆ. ಆಕಾಶ್‌ದೀಪ್, ಇಶಾನ್ ಪೊರೆಲ್, ಮುಕೇಶ್ ಕುಮಾರ್ ತಂಡದ ಬೌಲಿಂಗ್ ಅಸ್ತ್ರಗಳು. ಬಂಗಾಳ ಈ ಋುತುವಿನಲ್ಲಿ ಕೇವಲ ಒಮ್ಮೆ 300ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿರುವುದು ತಂಡ ಬೌಲಿಂಗ್ ಗುಣಮಟ್ಟ ಎಂತದ್ದು ಎನ್ನುವುದಕ್ಕೆ ಉದಾಹರಣೆ.
ಮತ್ತೊಂದೆಡೆ ನಾಯಕ ಜಯ್‌ದೇವ್ ಉನಾದ್ಕತ್ ತಂಡಕ್ಕೆ ವಾಪಸಾಗಿರುವುದು ಸೌರಾಷ್ಟ್ರದ ಬಲ ಹೆಚ್ಚಿಸಲಿದೆ. ಶೆಲ್ಡನ್ ಜ್ಯಾಕ್ಸನ್ ಹಾಗೂ ಅರ್ಪಿತ್ ವಸವಾಡ ಪ್ರಚಂಡ ಲಯದಲ್ಲಿದ್ದಾರೆ. ಚಿರಾಗ್ ಜಾನಿ, ಪ್ರೇರಕ್ ಮಂಕಡ್‌ರಂತಹ ಗುಣಮಟ್ಟದ ಆಲ್ರೌಂಡರ್‌ಗಳಿದ್ದಾರೆ. ಬೌಲರ್‌ಗಳಾದ ಚೇತನ್ ಸಕಾರಿಯಾ, ಧರ್ಮೇಂದ್ರ ಜಡೇಜಾ ಸಹ ಉತ್ತಮ ಲಯದಲ್ಲಿದ್ದು, ಬಂಗಾಳಕ್ಕೆ ಕಠಿಣ ಪೈಪೋಟಿ ನೀಡಲು ಸಜ್ಜಾಗಿದ್ದಾರೆ. ಬಂಗಾಳ 3ನೇ ಬಾರಿ ಟ್ರೋಫಿ ಗೆಲ್ಲಲು ಎದುರು ನೋಡುತ್ತಿದ್ದರೆ, ಸೌರಾಷ್ಟ್ರ 4ನೇ ಬಾರಿಗೆ ಚಾಂಪಿಯನ್ ಪಟ್ಟಅಲಂಕರಿಸಲು ಕಾಯುತ್ತಿದೆ.
ಪಂದ್ಯ ಆರಂಭ: ಬೆಳಗ್ಗೆ 9ಕ್ಕೆ,
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.