Ranji Trophy Squad: ಮುಂಬೈ ತಂಡಕ್ಕೆ ಪೃಥ್ವಿ ನಾಯಕ, ಅರ್ಜುನ್ ತೆಂಡುಲ್ಕರ್‌ಗೆ ಸ್ಥಾನ..!

Suvarna News   | Asianet News
Published : Dec 30, 2021, 01:42 PM IST
Ranji Trophy Squad: ಮುಂಬೈ ತಂಡಕ್ಕೆ ಪೃಥ್ವಿ ನಾಯಕ, ಅರ್ಜುನ್ ತೆಂಡುಲ್ಕರ್‌ಗೆ ಸ್ಥಾನ..!

ಸಾರಾಂಶ

* ರಣಜಿ ಕ್ರಿಕೆಟ್ ಟೂರ್ನಿಗೆ 20 ಆಟಗಾರರನ್ನೊಳಗೊಂಡ ಮುಂಬೈ ತಂಡ ಪ್ರಕಟ  * ಮುಂಬೈ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ ಪೃಥ್ವಿ ಶಾ * ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯು ಜನವರಿ 13ರಿಂದ ಆರಂಭ

ಮುಂಬೈ(ಡಿ.30): ಬರೋಬ್ಬರಿ 41 ಬಾರಿ ರಣಜಿ ಟ್ರೋಫಿ ಚಾಂಪಿಯನ್ ಆಗಿರುವ ಮುಂಬೈ ತಂಡವು ಇದೀಗ 2021-22ನೇ ಸಾಲಿನ ರಣಜಿ ಟ್ರೋಫಿ (Ranji Trophy) ಟೂರ್ನಿಗೆ ಸಜ್ಜಾಗಿದ್ದು, 20 ಆಟಗಾರರನ್ನೊಳಗೊಂಡ ಬಲಿಷ್ಠ ತಂಡ ಪ್ರಕಟವಾಗಿದೆ. ಪ್ರತಿಭಾನ್ವಿತ ಕ್ರಿಕೆಟಿಗ ಪೃಥ್ವಿ ಶಾ(Prithvi Shaw), ಮುಂಬೈ ತಂಡವನ್ನು ಮುನ್ನಡೆಸಲಿದ್ದು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ (Sachin Tendulkar) ಪುತ್ರ ಅರ್ಜುನ್ ತೆಂಡುಲ್ಕರ್(Arjun Tendulkar) ಮುಂಬೈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮುಂಬೈ ತಂಡವು ಎಲೈಟ್ 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಬಲಿಷ್ಠ ಕರ್ನಾಟಕ, ಮಹಾರಾಷ್ಟ್ರ, ಡೆಲ್ಲಿ, ಹೈದರಾಬಾದ್ ಹಾಗೂ ಉತ್ತರಖಂಡ ತಂಡಗಳು ಸಹ ಸ್ಥಾನ ಪಡೆದಿವೆ. ಮುಂಬೈ ತಂಡವು ಜನವರಿ 13ರಂದು ನಡೆಯಲಿರುವ ರಣಜಿ ಟೂರ್ನಿಯ ಮೊದಲ ಪಂದ್ಯದಲ್ಲಿ ಮಹಾರಾಷ್ಟ್ರ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇದಾದ ಬಳಿಕ ಮುಂಬೈ ತಂಡವು ಕೋಲ್ಕತಾದಲ್ಲಿ ಜನವರಿ 20ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ಡೆಲ್ಲಿ ತಂಡವನ್ನು ಎದುರಿಸಲಿದೆ.

ಪೃಥ್ವಿ ಶಾ ಓರ್ವ ಅದ್ಭುತ ನಾಯಕ ಹಾಗೂ ಸ್ಪೋಟಕ ಆರಂಭಿಕ ಬ್ಯಾಟರ್. ನಾಯಕರನ್ನಾಗಿ ಆಯ್ಕೆ ಮಾಡಲು ಇದಕ್ಕಿಂತ ಇನ್ನೇನು ಬೇಕು ಹೇಳಿ ಎಂದು ಮುಂಬೈ ಕ್ರಿಕೆಟ್ ಸಂಸ್ಥೆಯ ಆಯ್ಕೆ ಸಮಿತಿ ಮುಖ್ಯಸ್ಥ ಸಲೀಲ್ ಅಂಕೋಲಾ ತಿಳಿಸಿದ್ದಾರೆ.

ಕಳೆದ ಮಾರ್ಚ್‌ನಲ್ಲಿ ನಡೆದ 2020-21ನೇ ಸಾಲಿನ ವಿಜಯ್ ಹಜಾರೆ ಟೂರ್ನಿಯಲ್ಲಿ (Vijay Hazare Trophy) ಪೃಥ್ವಿ ಶಾ ನೇತೃತ್ವದ ಮುಂಬೈ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಪೃಥ್ವಿ ಶಾ 8 ಪಂದ್ಯಗಳನ್ನಾಡಿ 4 ಶತಕ ಸಹಿತ 165.50 ಬ್ಯಾಟಿಂಗ್ ಸರಾಸರಿಯಲ್ಲಿ 827 ರನ್ ಬಾರಿಸಿದ್ದರು. ಇನ್ನುಳಿದಂತೆ ಯುವ ಆರಂಭಿಕ ಬ್ಯಾಟರ್‌ ಯಶಸ್ವಿ ಜೈಸ್ವಾಲ್(Yashasvi Jaiswal), ಮಧ್ಯಮ ಕ್ರಮಾಂಕದ ಬ್ಯಾಟರ್ ಸರ್ಫರಾಜ್ ಖಾನ್, ವಿಕೆಟ್ ಕೀಪರ್‌ ಆದಿತ್ಯ ತಾರೆ 20 ಆಟಗಾರರನ್ನೊಳಗೊಂಡ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

Round Up 2021 ಆಸೀಸ್ ಟೆಸ್ಟ್ ಸರಣಿ ಗೆಲುವಿನಿಂದ ಒಲಿಂಪಿಕ್ಸ್‌ ಗೋಲ್ಡ್‌ವರೆಗೆ; ದೇಶ ಹೆಮ್ಮೆ ಪಡುವಂತೆ ಮಾಡಿದ 5 ಕ್ಷಣಗಳು

2021-22ನೇ ಸಾಲಿನ ಸೀಮಿತ ಓವರ್‌ಗಳ ದೇಶಿ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ತಂಡವು ನಿರಾಶದಾಯಕ ಪ್ರದರ್ಶನ ತೋರಿತ್ತು. ಇತ್ತೀಚೆಗಷ್ಟೇ ನಡೆದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಹಾಗೂ ವಿಜಯ್ ಹಜಾರೆ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ತಂಡವು ನಾಕೌಟ್ ಹಂತಕ್ಕೇರುವಲ್ಲಿ ವಿಫಲವಾಗಿತ್ತು.

ಇನ್ನು ಅನುಭವಿ ವೇಗಿ ಧವಳ್ ಕುಲಕರ್ಣಿ, ಮುಂಬೈ ವೇಗದ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ. ಇದರ ಜತೆ ಆಲ್ರೌಂಡರ್ ಅರ್ಜುನ್ ತೆಂಡುಲ್ಕರ್‌, ಮಧ್ಯಮ ವೇಗಿ ಮೋಹಿತ್ ಆವಸ್ತಿ, ಎಡಗೈ ಸ್ಪಿನ್ನರ್ ಶಂಸ್ ಮುಲಾನ್ ಕೂಡಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅರ್ಜುನ್ ತೆಂಡುಲ್ಕರ್ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ತಂಡ ಕೂಡಿಕೊಂಡಿದ್ದರಾದರೂ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ರಣಜಿ ಟೂರ್ನಿಯಲ್ಲಿ ಮಿಂಚಲು ಕ್ರಿಕೆಟ್ ದಿಗ್ಗಜನ ಪುತ್ರ ರೆಡಿಯಾಗಿದ್ದಾರೆ. 

ಮುಂಬರುವ ರಣಜಿ ಟ್ರೋಫಿ ಟೂರ್ನಿಗೆ ಮುಂಬೈ ಕ್ರಿಕೆಟ್ ತಂಡ ಹೀಗಿದೆ ನೋಡಿ

ಪೃಥ್ವಿ ಶಾ(ನಾಯಕ), ಯಶಸ್ವಿ ಜೈಸ್ವಾಲ್, ಆಕರ್ಷಿತ್ ಗೋಮೆಲ್, ಅರ್ಮಾನ್ ಜಾಫರ್, ಸರ್ಫರಾಜ್ ಖಾನ್, ಸಚಿನ್ ಯಾದವ್, ಆದಿತ್ಯ ತಾರೆ(ವಿಕೆಟ್ ಕೀಪರ್), ಹಾರ್ದಿಕ್ ತಾಮೊರೆ(ವಿಕೆಟ್ ಕೀಪರ್), ಶಿವಂ ದುಬೆ, ಅಮಾನ್ ಖಾನ್, ಶಂಸ್ ಮುಲಾನ್, ತನುಷ್ ಕೊಟ್ಯಾನ್,  ಪ್ರಶಾಂತ್ ಸೋಲಂಕಿ, ಶಶಾಂಕ್ ಅತ್ತಾರ್ಡೆ, ಧವಳ್ ಕುಲಕರ್ಣಿ, ಮೋಹಿತ್ ಅವಸ್ಥಿ, ಪ್ರಿನ್ಸ್ ಬದೈನಿ, ಸಿದ್ದಾರ್ಥ್ ರಾವತ್, ರೊಸ್ತಾನ್ ಡಯಾಸ್ ಮತ್ತು ಅರ್ಜುನ್ ತೆಂಡುಲ್ಕರ್.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಸಿಸಿಗೆ ಬಿಗ್ ಶಾಕ್ ಕೊಟ್ಟ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್!
ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!