* ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ
* ಆಸ್ಪತ್ರೆಯಲ್ಲಿ ದಾದಾಗೆ ‘ಮೊನೊಕ್ಲೊನಲ್ ಆ್ಯಂಟಿಬಾಡಿ ಕಾಕ್‌ಟೇಲ್ ಥೆರಪಿ’ ಚಿಕಿತ್ಸೆ
* ಸೌರವ್ ಗಂಗೂಲಿಗೆ ಆರೋಗ್ಯ ಸ್ಥಿರವಾಗಿದ್ದು, ಉಸಿರಾಟದ ಸಮಸ್ಯೆ ಇಲ್ಲ
ಕೋಲ್ಕತಾ(ಡಿ.30): ಕೊರೋನಾ ಸೋಂಕಿಗೆ (Coronavirus) ತುತ್ತಾಗಿ ಆಸ್ಪತ್ರೆಗೆ ದಾಖಲಾಗಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ (Sourav Ganguly) ಮುನ್ನೆಚ್ಚರಿಕೆ ಕ್ರಮವಾಗಿ ‘ಮೊನೊಕ್ಲೊನಲ್ ಆ್ಯಂಟಿಬಾಡಿ ಕಾಕ್‌ಟೇಲ್ ಥೆರಪಿ’ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಉಸಿರಾಟದ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯದಲ್ಲೇ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಬಿಸಿಸಿಐ(BCCI) ಅಧ್ಯಕ್ಷ ಸೌರವ್ ಗಂಗೂಲಿ, ಎರಡೂ ಡೋಸ್ ಕೋವಿಡ್ ಲಸಿಕೆ (Corona Vaccine) ಪಡೆದುಕೊಂಡಿದ್ದರು. ಹೀಗಿದ್ದರೂ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಬಿಸಿಸಿಐ ಅಧ್ಯಕ್ಷರಾಗಿರುವುದರಿಂದ ದೇಶದ ಹಲವು ರಾಜ್ಯಗಳಿಗೆ ಹಾಗೂ ವಿದೇಶಗಳಿಗೆ ಭೇಟಿ ನೀಡಿದ್ದರು. ಈ ವೇಳೆಯಲ್ಲಿ ಅವರಿಗೆ ಸೋಂಕು ತಗುಲಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಈ ವರ್ಷಾರಂಭದಲ್ಲೇ ಗಂಗೂಲಿಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ದಾಖಲಾಗಿದ್ದ ದಾದಾಗೆ ಎರಡು ಸ್ಟಂಟ್ಸ್‌ಗಳನ್ನು ಅಳವಡಿಸಲಾಗಿತ್ತು.
ಏನಿದು ಕಾಕ್‌ಟೇಲ್ ಚಿಕಿತ್ಸೆ?: ಕೋವಿಡ್ ಸೋಂಕಿತರಿಗೆ ತಲಾ 10 ಎಂಎಲ್ ಕ್ಯಾಸಿರಿವಿಮ್ಯಾಬ್ ಮತ್ತು ಇಮ್ಡಿವಿಮ್ಯಾಬ್ ಎನ್ನುವ ಔಷಧಗಳ ಮಿಶ್ರಣವನ್ನು ದ್ರವ ರೂಪದಲ್ಲಿ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ. ಈ ಔಷಧವು ವೈರಸ್ ಶ್ವಾಸಕೋಶಕ್ಕೆ ತಲುಪುವುದನ್ನು ನಿಯಂತ್ರಿಸುತ್ತದೆ. ರೂಪಾಂತರಿ ವೈರಸ್ ವಿರುದ್ಧವೂ ಇದು ಪರಿಣಾಮಕಾರಿ ಎನ್ನಲಾಗಿದೆ. ಈ ಕಾಕ್‌ಟೇಲ್ ಔಷಧಕ್ಕೆ ಪ್ರತಿ ಡೋಸ್‌ಗೆ ಅಂದಾಜು 60,000 ರುಪಾಯಿ ಆಗಲಿದೆ.
ಬಯೋಬಬಲ್‌ನಲ್ಲಿ ಕೋವಿಡ್ ಕೇಸ್: ಐ-ಲೀಗ್ ಫುಟ್ಬಾಲ್ ಸ್ಥಗಿತ
ಕೋಲ್ಕತಾ: ಬಯೋಬಬಲ್(Bio-Bubble) ವ್ಯವಸ್ಥೆ ಇದ್ದರೂ 8 ಆಟಗಾರರು, ಮೂವರು ಅಧಿಕಾರಿಗಳಿಗೆ ಕೊರೋನಾ ಸೋಂಕು ತಗುಲಿರುವ ಕಾರಣ ಭಾರತದ ಪ್ರತಿಷ್ಠಿತ ಫುಟ್ಬಾಲ್ ಲೀಗ್‌ಗಳಲ್ಲಿ ಒಂದಾದ ಐ-ಲೀಗ್ (I-League) ಟೂರ್ನಿಯನ್ನು ಕನಿಷ್ಠ ಒಂದು ವಾರಕ್ಕೆ ಅಮಾನತುಗೊಳಿಸಲಾಗಿದೆ. ರಿಯಲ್ ಕಾಶ್ಮೀರ್ ಎಫ್‌ಸಿ ತಂಡದ 5 ಆಟಗಾರರು, 3 ಅಧಿಕಾರಿಗಳು, ಮೊಹಮೆಡನ್ ಸ್ಪೋರ್ಟಿಂಗ್, ಡೆಕ್ಕನ್ ಎಫ್‌ಸಿ, ಐಜ್ವಾಲ್ ಎಫ್‌ಸಿ ತಂಡಗಳ ತಲಾ ಒಬ್ಬ ಆಟಗಾರನಲ್ಲಿ ಬುಧವಾರ ಕೊರೋನಾ ಸೋಂಕು ಪತ್ತೆಯಾಗಿದೆ. ಜ.4ರ ಬಳಿಕ ಟೂರ್ನಿ ಪುನಾರಂಭಿಸುವ ಬಗ್ಗೆ ಪರಿಶೀಲನೆ ನಡೆಸುವುದಾಗಿ ಆಯೋಜಕರು ತಿಳಿಸಿದ್ದಾರೆ.
ಆಸ್ಪ್ರೇಲಿಯನ್ ಓಪನ್‌ಗೆ ಜೋಕೋವಿಚ್ ಅನುಮಾನ
ಸಿಡ್ನಿ: 2022ರ ಮೊದಲ ಗ್ರ್ಯಾನ್ ಸ್ಲಾಂ ಆಸ್ಪ್ರೇಲಿಯನ್ ಓಪನ್‌ನಲ್ಲಿ (Australian Opne) ವಿಶ್ವ ನಂ.1 ಟೆನಿಸಿಗ, ಸರ್ಬಿಯಾದ ನೋವಾಕ್ ಜೋಕೋವಿಚ್ (Novak Djokovic) ಆಡುವುದು ಅನುಮಾನವೆನಿಸಿದೆ. ಗ್ರ್ಯಾನ್ ಸ್ಲಾಂಗೂ ಮುನ್ನ ಸಿಡ್ನಿಯಲ್ಲಿ ನಡೆಯಲಿರುವ ಎಟಿಪಿ ಕಪ್‌ನಿಂದ ಜೋಕೋವಿಚ್ ಹಿಂದೆ ಸರಿದಿದ್ದು, ತಾವು ಅಲಭ್ಯರಾಗುತ್ತಿರುವುದಕ್ಕೆ ಕಾರಣ ತಿಳಿಸಿಲ್ಲ.
Rafael Nadal: ಟೆನಿಸ್ ದಿಗ್ಗಜನಿಗೆ ಕೊರೋನಾ ಸೋಂಕು ದೃಢ..!
ಕೋವಿಡ್ ಲಸಿಕೆ ಪಡೆದ ಮಾಹಿತಿ ನೀಡುವ ಬಗ್ಗೆ ಜೋಕೋವಿಚ್ ಹಾಗೂ ಆಸ್ಪ್ರೇಲಿಯನ್ ಓಪನ್ ಆಯೋಜಕರ ನಡುವೆ ತಿಕ್ಕಾಟ ಏರ್ಪಟ್ಟಿದ್ದು, ಎರಡೂ ಡೋಸ್ ಕೋವಿಡ್ ಲಸಿಕೆ ಪಡೆದಿದ್ದರಷ್ಟೇ ಟೂರ್ನಿಗೆ ಪ್ರವೇಶ ನೀಡಲಿದ್ದೇವೆ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಆದರೆ ಲಸಿಕೆ ಪಡೆಯುವುದು ಖಾಸಗಿ ವಿಚಾರ, ಆ ಬಗ್ಗೆ ಮಾಹಿತಿ ನೀಡುವುದಿಲ್ಲ ಎಂದು ಜೋಕೋವಿಚ್ ಇತ್ತೀಚೆಗೆ ಮತ್ತೊಮ್ಮೆ ಹೇಳಿದ್ದರು.
ಐಎಸ್‌ಎಲ್: ಗೆಲ್ಲಲೇಬೇಕಾದ ಒತ್ತಡದಲ್ಲಿ ಬೆಂಗಳೂರು ಎಫ್‌ಸಿ
ವಾಸ್ಕೋ: ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) (Indian Super League) 8ನೇ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಬೆಂಗಳೂರು ಎಫ್‌ಸಿ(Bengaluru FC), ಗುರುವಾರ ಚೆನ್ನೈಯಿನ್ ಎಫ್‌ಸಿ ವಿರುದ್ಧ ಸೆಣಸಲಿದೆ. ಆಡಿರುವ 8 ಪಂದ್ಯಗಳಲ್ಲಿ ಕೇವಲ 1ರಲ್ಲಿ ಗೆದ್ದಿರುವ ಬಿಎಫ್‌ಸಿ, ಪ್ಲೇ-ಆಫ್‌ಗೇರುವ ಆಸೆ ಜೀವಂತವಾಗಿರಿಸಿಕೊಳ್ಳಬೇಕಿದ್ದರೆ ಗೆಲುವಿನ ಹಳಿಗೆ ಮರಳಬೇಕಿದೆ. ಕಳೆದ 7 ಪಂದ್ಯಗಳಲ್ಲಿ ಗೆಲುವನ್ನೇ ಕಾಣದ ಸುನಿಲ್ ಚೆಟ್ರಿ ಪಡೆ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.