
ವೆಲ್ಲಿಂಗ್ಟನ್(ಡಿ.30): ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಅನುಭವಿ ಬ್ಯಾಟರ್ ರಾಸ್ ಟೇಲರ್ (Ross Taylor) ಇಂದು(ಡಿ.30) ವೃತ್ತಿ ಜೀವನದ ಕುರಿತಂತೆ ಮಹತ್ವದ ಘೋಷಣೆ ಮಾಡಿದ್ದು, ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಕಳೆದೊಂದು ದಶಕಗಳ ಕಾಲ ನ್ಯೂಜಿಲೆಂಡ್ ಕ್ರಿಕೆಟ್ ತಂಡದ(New Zealand Cricket Team) ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದ 37 ವರ್ಷದ ರಾಸ್ ಟೇಲರ್, 17 ವರ್ಷಗಳ ಸುದೀರ್ಘ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ಬಲಗೈ ಬ್ಯಾಟರ್, ರಾಸ್ ಟೇಲರ್ ತವರಿನಲ್ಲಿ ನಡೆಯಲಿರುವ ಮುಂಬರುವ ಕೆಲವು ಸರಣಿಗಳಲ್ಲಿ ಪಾಲ್ಗೊಳ್ಳಿದ್ದಾರೆ. ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship) ಭಾಗವಾಗಿ ತವರಿನಲ್ಲಿ ಬಾಂಗ್ಲಾದೇಶ ವಿರುದ್ದದ ಎರಡು ಪಂದ್ಯಗಳ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ತವರಿನಲ್ಲೇ ಆಸ್ಟ್ರೇಲಿಯಾ ಹಾಗೂ ನೆದರ್‌ಲ್ಯಾಂಡ್ ವಿರುದ್ದದ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನೆದರ್‌ಲ್ಯಾಂಡ್ ವಿರುದ್ದದ ಏಕದಿನ ಸರಣಿಯು ರಾಸ್ ಟೇಲರ್ ಪಾಲಿಗೆ ಕಟ್ಟಕಡೆಯ ಅಂತಾರಾಷ್ಟ್ರೀಯ ಸರಣಿಯಾಗಲಿದೆ.
ನಾನಿಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ತೀರ್ಮಾನ ತೆಗೆದುಕೊಂಡಿದ್ದು, ತವರಿನಲ್ಲಿ ನಡೆಯಲಿರುವ ಕೆಲವು ಸರಣಿಗಳನ್ನು ಆಡಲಿದ್ದೇನೆ. ಬಾಂಗ್ಲಾದೇಶ ವಿರುದ್ದದ ಎರಡು ಟೆಸ್ಟ್ ಹಾಗೂ ಆಸ್ಟ್ರೇಲಿಯಾ ಮತ್ತು ನೆದರ್‌ಲ್ಯಾಂಡ್ ವಿರುದ್ದ ಸೇರಿ ಒಟ್ಟು 6 ಏಕದಿನ ಪಂದ್ಯಗಳನ್ನಾಡಲಿದ್ದೇನೆ. 17 ವರ್ಷಗಳ ಕಾಲ ನಿರಂತರವಾಗಿ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿಂದು ನನ್ನ ಪಾಲಿನ ಅತಿದೊಡ್ಡ ಗೌರವ ಎಂದು ರಾಸ್ ಟೇಲರ್ ಟ್ವೀಟ್ ಮಾಡಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಇದೊಂದು ರೀತಿಯ ಅದ್ಭುತ ಪ್ರಯಾಣ. ಇಷ್ಟೊಂದು ದೀರ್ಘ ವರ್ಷಗಳ ಕಾಲ ನನ್ನ ದೇಶವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿದ್ದು, ನನ್ನ ಪಾಲಿನ ಸೌಭಾಗ್ಯ. ಕ್ರಿಕೆಟ್‌ನ ಕೆಲವು ದಿಗ್ಗಜ ಕ್ರಿಕೆಟಿಗರ ಜತೆ ಹಾಗೂ ಅವರ ವಿರುದ್ದವಾಗಿ ಆಡಲು ಅವಕಾಶ ಸಿಕ್ಕಿದ್ದು, ನನ್ನ ಅದೃಷ್ಟ. ಈ ಸುದೀರ್ಘ ಪಯಣದಲ್ಲಿ ಸಾಕಷ್ಟು ಒಳ್ಳೆಯ ನೆನಪುಗಳು ಜತೆಗಿವೆ ಎಂದು ರಾಸ್ ಟೇಲರ್ ಹೇಳಿದ್ದಾರೆ.
Kohli Century Wait Continued : ಶತಕವಿಲ್ಲದೆ ಸತತ 2ನೇ ವರ್ಷ ಮುಗಿಸಿದ ವಿರಾಟ್ ಕೊಹ್ಲಿ!
ಆದರೆ ಎಲ್ಲಾ ಒಳ್ಳೆಯ ಕ್ಷಣಗಳು ಕೊನೆಯಾಗಲೇಬೇಕು. ಈ ಹಂತದವರೆಗೆ ತಲುಪಲು ಸದಾ ಬೆಂಬಲ ನೀಡಿದ ನನ್ನ ಕುಟುಂಬಕ್ಕೆ, ಸ್ನೇಹಿತರಿಗೆ ಹಾಗೂ ಹಿತೈಷಿಗಳಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇನ್ನು ಹಲವರಿಗೆ ಧನ್ಯವಾದಗಳನ್ನು ಅರ್ಪಿಸಲು ಸಾಕಷ್ಟು ಸಮಯಾವಕಾಶವಿದೆ. ಆದರೆ ಸದ್ಯ ನಾನು ತವರಿನಲ್ಲಿ ನಡೆಯುವ ಸರಣಿಯತ್ತ ನಾನು ಹೆಚ್ಚು ಗಮನ ಹರಿಸುತ್ತಿದ್ದೇನೆ ಎಂದು ರಾಸ್ ಟೇಲರ್ ಹೇಳಿದ್ದಾರೆ.
ರಾಸ್ ಟೇಲರ್ 2006ರ ಮಾರ್ಚ್ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ವಿರುದ್ದ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ ಎಲ್ಲಾ ಮಾದರಿಯ ಕ್ರಿಕೆಟ್‌ಗೂ ಪಾದಾರ್ಪಣೆ ಮಾಡುವ ಮೂಲಕ ತಂಡದ ಪ್ರಮುಖ ಆಟಗಾರನಾಗಿ ಬೆಳೆದು ನಿಂತರು. ರಾಸ್ ಟೇಲರ್ ಹಲವಾರು ಸ್ಮರಣೀಯ ಇನಿಂಗ್ಸ್‌ಗಳನ್ನಾಡುವ ಮೂಲಕ ಹಲವಾರು ಬಾರಿ ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ.
ರಾಸ್ ಟೇಲರ್ ಓರ್ವ ವಿಶ್ವದರ್ಜೆಯ ಆಟಗಾರನೆಂದು ಬಣ್ಣಿಸಿದ ಕೇನ್ ವಿಲಿಯಮ್ಸನ್:
ರಾಸ್ ಟೇಲರ್ ಹಾಗೂ ಕೇನ್ ವಿಲಿಯಮ್ಸನ್ (Kane Williamson) ಕಳೆದ ಕೆಲವು ವರ್ಷಗಳಿಂದಲೂ ನ್ಯೂಜಿಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬೆನ್ನೆಲುಬಾಗಿ ಗುರುತಿಸಿಕೊಂಡಿದ್ದಾರೆ. ರಾಸ್ ಟೇಲರ್ ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರಂತಹ ಆಟಗಾರ ದೇಶವನ್ನು ಪ್ರತಿನಿಧಿಸಿದ್ದು ಗೌರವದ ವಿಚಾರ. ರಾಸ್ ಟೇಲರ್ ಓರ್ವ ವಿಶ್ವದರ್ಜೆಯ ಆಟಗಾರ. ವಿವಿಧ ಮಾದರಿಯ ಕ್ರಿಕೆಟ್‌ನಲ್ಲಿ ಅವರ ಜತೆ ಹಲವು ಜತೆಯಾಟ ನಿಭಾಯಿಸಿದ್ದು, ವೈಯುಕ್ತಿಕವಾಗಿ ನನಗೆ ಹೆಚ್ಚು ಖುಷಿ ಕೊಟ್ಟಿದೆ ಎಂದು ಕಿವೀಸ್ ನಾಯಕ ಕೇನ್ ವಿಲಿಯನ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.