
ದುಬೈ: ಪಾಕ್ ಸೂಪರ್ ಲೀಗ್(ಪಿಎಸ್‌ಎಲ್)ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ತೆರಳಿ, ಸದ್ಯ ಟೂರ್ನಿ ಮುಂದೂಡಿಕೆಯಾಗಿದ್ದರಿಂದ ದುಬೈಗೆ ಸ್ಥಳಾಂತರಗೊಂಡಿರುವ ಹಲವು ಆಟಗಾರರು ಇನ್ನೆಂದೂ ಪಾಕಿಸ್ತಾನಕ್ಕೆ ಹೋಗಲ್ಲ ಎಂದಿದ್ದಾರೆ. ಇದನ್ನು ಬಾಂಗ್ಲಾದೇಶ ಸ್ಪಿನ್ನರ್, ಲಾಹೋರ್ ತಂಡದ ರಿಶಾದ್ ಹೊಸೈನ್ ಬಹಿರಂಗಪಡಿಸಿದ್ದಾರೆ.
‘ದುಬೈಗೆ ಮರಳಿದ ಬಳಿಕ ಡ್ಯಾರಿಲ್ ಮಿಚೆಲ್, ಇನ್ನೆಂದೂ ಪಾಕಿಸ್ತಾನಕ್ಕೆ ಹೋಗಲ್ಲ ಎನ್ನುತ್ತಿದ್ದರು. ಬಿಲ್ಲಿಂಗ್ಸ್, ಡೇವಿಡ್ ವೀಸಾ, ಕುಸಾಲ್ ಪೆರೆರಾ, ಟಾಮ್ ಕರ್ರನ್ ಭಯಭೀತರಾಗಿದ್ದರು’ ಎಂದಿದ್ದಾರೆ. ಇನ್ನು, ಪಾಕ್‌ನ ವಿಮಾನ ನಿಲ್ದಾಣ ಸ್ಥಗಿತಗೊಂಡಿದ್ದಕ್ಕೆ ಭಯಭೀತರಾದ ಟಾಮ್ ಕರ್ರನ್, ಮಗುವಿನಂತೆ ಬಿಕ್ಕಿ ಬಿತ್ತಿ ಅತ್ತಿದ್ದಾರೆ. ಅವರನ್ನು ಸಂತೈಸಲು 2-3 ಆಟಗಾರರು ಬೇಕಾಯಿತು ಎಂದು ರಿಶಾದ್ ಹೇಳಿದ್ದಾರೆ.
ತವರಿಗೆ ವಾಪಾಸ್ಸಾಗುವ ಉದ್ದೇಶದಿಂದ ಇಂಗ್ಲೆಂಡ್ ಮೂಲದ ಆಲ್ರೌಂಡರ್ ಟಾಮ್ ಕರ್ರನ್ ಏರ್‌ಪೋರ್ಟ್‌ಗೆ ತೆರಳಿದ್ದರು. ಆದರೆ ಯುದ್ದ ಭೀತಿಯಿಂದಾಗಿ ಏರ್‌ಪೋರ್ಟ್ ಬಂದ್ ಮಾಡಲಾಗಿತ್ತು. ಅದನ್ನು ನೋಡಿದ ಟಾಮ್ ಕರ್ರನ್ ಮಗುವಿನಂತೆ ಅಳಲಾರಂಭಿಸಿದರು ಎಂದು ಆ ಘಟನೆಯನ್ನು ಬಾಂಗ್ಲಾದೇಶ ಸ್ಪಿನ್ನರ್ ರಿಶಾದ್ ಹೊಸೈನ್ ಎಳೆಎಳೆಯಾಗಿ ವಿವರಿಸಿದ್ದಾರೆ.
ನಾವು ದುಬೈಗೆ ಬಂದಿಳಿದ ಬಳಿಕ ನಾವು ಸುರಕ್ಷಿತವಾಗಿದ್ದೇವೆ ಎನ್ನುವ ಭಾವನೆ ಮೂಡಿತು. ಆದರೆ ನಾವು ಅಲ್ಲಿಂದ ಹೊರಟ ಕೇವಲ 20 ನಿಮಿಷದಲ್ಲಿ ನಾವಿದ್ದ ಪಾಕಿಸ್ತಾನ ಏರ್‌ಪೋರ್ಟ್ ಬಳಿಯೇ ಕ್ಷಿಪಣಿ ದಾಳಿ ನಡೆಯಿತು ಎನ್ನುವುದನ್ನು ತಿಳಿದು ಒಂದು ಕ್ಷಣ ತಬ್ಬಿಬ್ಬಾಗಿ ಹೋದೆವು ಎಂದು ರಿಶಾದ್ ಹೇಳಿದ್ದಾರೆ.
6 ತಂಡಗಳ ನಡುವಿನ ಟಿ20 ಲೀಗ್ ಏ.11ಕ್ಕೆ ಆರಂಭಗೊಂಡಿದ್ದು, ಮೇ 18ಕ್ಕೆ ಕೊನೆಗೊಳ್ಳಲಿದೆ. ಈ ನಡುವೆ ರಾವಲ್ಪಿಂಡಿ ಮೈದಾನದ ಮೇಲೆ ನಡೆದ ಡ್ರೋನ್ ದಾಳಿಯಿಂದಾಗಿ ಬುಧವಾರ ನಡೆಯಬೇಕಿದ್ದ ಪೇಶಾವರ ಝಲ್ಮಿ ಮತ್ತು ಕರಾಚಿ ಕಿಂಗ್ಸ್ ಪಂದ್ಯ ಮುಂದೂಡಿಕೆಯಾಗಿತ್ತು.
ಪಾಕ್ ಲೀಗ್ ಆತಿಥ್ಯಕ್ಕೆ ಯುಎಇ ನಕಾರ ಹಿಂದೆ ಜಯ್ ಶಾ ಪಾತ್ರ!
ದುಬೈ: ಯುದ್ಧ ಪರಿಸ್ಥಿತಿ ಕಾರಣಕ್ಕೆ ಶುಕ್ರವಾರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಪಾಕ್ ಸೂಪರ್ ಲೀಗ್(ಪಿಎಸ್‌ಎಲ್) ಯುಎಇ ದೇಶಕ್ಕೆ ಸ್ಥಳಾಂತರಿಸಲು ನಿರ್ಧರಿಸಿತ್ತು. ಆದರೆ ಆತಿಥ್ಯಕ್ಕೆ ಯುಎಇ ನಿರಾಕರಿಸಿದ್ದರಿಂದ ಟೂರ್ನಿಯನ್ನೇ ಮುಂದೂಡಲಾಗಿತ್ತು. ಇದರ ಹಿಂದೆ ಬಿಸಿಸಿಐ ಮಾಜಿ ಕಾರ್ಯದರ್ಶಿ, ಸದ್ಯ ಐಸಿಸಿ ಮುಖ್ಯಸ್ಥರಾಗಿರುವ ಜಯ್ ಶಾ ಪಾತ್ರವಿದೆ. ಇದನ್ನು ಸ್ವತಃ ಎಮಿರೇಟ್ಸ್ ಕ್ರಿಕೆಟ್ ಮಂಡಳಿ(ಇಸಿಬಿ) ಅಧಿಕಾರಿಗಳೇ ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ.
ಇಸಿಬಿ ಹಾಗೂ ಬಿಸಿಸಿಐ ನಡುವೆ ಉತ್ತಮ ಬಾಂಧವ್ಯವಿದೆ. ಹೀಗಾಗಿ ಪಾಕ್ ಲೀಗ್‌ಗೆ ಆತಿಥ್ಯ ವಹಿಸಬಾರದು ಎಂದು ಜಯ್ ಶಾ ಇಸಿಬಿಗೆ ಮನವಿ ಮಾಡಿದ್ದಾರೆ. ಅದರಂತೆ ಇಸಿಬಿ, ಪಿಎಸ್‌ಎಲ್ ಪಂದ್ಯಗಳನ್ನು ಆಯೋಜಿಸುವ ನಿರ್ಧಾರ ಕೈಬಿಟ್ಟಿದೆ ಎಂದು ತಿಳಿದುಬಂದಿದೆ.
ದಿಲ್ಲಿ ಜೇಟ್ಲಿ ಸ್ಟೇಡಿಯಂಗೆ ಹುಸಿ ಬಾಂಬ್ ಬೆದರಿಕೆ
ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣಕ್ಕೆ ಶುಕ್ರವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು, ತಪಾಸಣೆಯ ಬಳಿಕ ಇದೊಂದು ಹುಸಿ ಬಾಂಬ್ ಬೆದರಿಕೆ ಕರೆ ಎನ್ನುವುದು ಬಯಲಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಬಾಂಬ್ ಸ್ಫೋಟಿಸುವುದಾಗಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಗೆ ಸಂದೇಶ ಬಂದಿದೆ. ಈ ಬಗ್ಗೆ ಡಿಡಿಸಿಎ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ದೆಹಲಿ ಪೊಲೀಸ್ ಮತ್ತು ಬಾಂಬ್ ನಿಷ್ಟ್ರೀಯ ದಳ ಸ್ಥಳಕ್ಕೆ ಬಂದು ತಪಾಸಣೆ ನಡೆಸಿದೆ. ಈ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದರೆ ಮುನ್ನೆಚ್ಚರಿಕೆಯಾಗಿ ಕ್ರೀಡಾಂಗಣದ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.