
ಸ್ಪಂದನ್ ಕಣಿಯಾರ್, ಕನ್ನಡಪ್ರಭ
ವಿಶ್ವದ ಶ್ರೀಮಂತ ಕ್ರಿಕೆಟ್ ಬೋರ್ಡ್ ಎನಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಷ್ಟು ದಿನ ಪ್ರತಿಕ್ರಿಯಾತ್ಮಕ ನಡೆಯನ್ನು ಅನುಸರಿಸಿದ್ದು ಸಾಕು. ಇನ್ನೇನಿದ್ದರೂ ಮುನ್ನುಗ್ಗಿ ಫ್ರಂಟ್‌ಫುಟ್‌ನಲ್ಲಿ ಬ್ಯಾಟ್ ಬೀಸಬೇಕಿದೆ. ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿಚಾರದಲ್ಲಿ ಮೂಗು ತೂರಿಸಿಕೊಂಡು ಬಂದು ಈಗ ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಇದು ಸರಿಯಾದ ಸಮಯ. ಪಾಕಿಸ್ತಾನವನ್ನು ಕ್ರಿಕೆಟ್‌ನಿಂದಲೇ ಹೊರಹಾಕುವ ಸಮಯ ಬಂದಿದೆ ಎಂದರೂ ತಪ್ಪಾಗುವುದಿಲ್ಲ.
ಭಾರತದಲ್ಲಿ ಭದ್ರತೆ ಸಮಸ್ಯೆಯಿದೆ ಎನ್ನುವ ಸುಳ್ಳು ಹೇಳಿ ಬಾಂಗ್ಲಾದೇಶ ತಂಡ ಟಿ20 ವಿಶ್ವಕಪ್‌ನ ತನ್ನ ಪಂದ್ಯಗಳನ್ನು ಭಾರತದಲ್ಲಿ ಆಡುವುದಿಲ್ಲ ಎಂದು ತಕರಾರು ತೆಗೆಯಿತು. ಇದಕ್ಕೂ ಪಾಕಿಸ್ತಾನಕ್ಕೂ ಸಂಬಂಧವೇ ಇಲ್ಲ. ಆದರೂ, ಬಾಂಗ್ಲಾದ ಬೇಡಿಕೆ ಈಡೇರದಿದ್ದರೆ ತಾನೂ ವಿಶ್ವಕಪ್‌ನಲ್ಲಿ ಆಡುವುದಿಲ್ಲ ಎಂದು ಪಾಕಿಸ್ತಾನ ಬೊಬ್ಬೆ ಹೊಡೆಯಲು ಶುರು ಮಾಡಿತು. ಇದೀಗ ವಿಶ್ವಕಪ್‌ನಲ್ಲಿ ಆಡ್ತೀವಿ, ಭಾರತ ವಿರುದ್ಧ ಆಡುವುದಿಲ್ಲ ಎಂದು ಪಾಕಿಸ್ತಾನ ಸರ್ಕಾರ ಘೋಷಿಸಿದೆ. ಆ ಮೂಲಕ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)ಯ ಮೂಲ ನಿಯಮವನ್ನೇ ಪಾಕಿಸ್ತಾನ ಉಲ್ಲಂಘನೆ ಮಾಡಿದೆ. ಇದನ್ನೇ ಕಾರಣವಾಗಿಟ್ಟುಕೊಂಡು, ಕ್ರಿಕೆಟ್‌ನಿಂದಲೇ ಪಾಕಿಸ್ತಾನವನ್ನು ಹೊರಹಾಕಲು ಐಸಿಸಿಗೆ ಬಲವಾದ ಕಾರಣ ಸಿಕ್ಕಂತಾಗಿದೆ.
ಐಸಿಸಿಯ ಪ್ರತಿ ಸದಸ್ಯ ರಾಷ್ಟ್ರವು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ದೇಶದ ಕ್ರಿಕೆಟ್ ಮಂಡಳಿಯ ಪರವಾಗಿ ಆ ದೇಶದ ಸರ್ಕಾರ ಅಥವಾ ಸಾರ್ವಜನಿಕ ಇಲಾಖೆ ನಿರ್ಧಾರ ಕೈಗೊಳ್ಳುವಂತಿಲ್ಲ. ಒಂದೊಮ್ಮೆ ಕ್ರಿಕೆಟ್ ಮಂಡಳಿಯ ಕಾರ್ಯಚಟುವಟಿಕೆಗಳಲ್ಲಿ ಸರ್ಕಾರ ತಲೆಹಾಕಿದರೆ, ಆ ದೇಶವನ್ನು ಅಮಾನತುಗೊಳಿಸಲು ಐಸಿಸಿಗೆ ಹಕ್ಕಿದೆ.
ಐಸಿಸಿ ಈಗ ಆ ಹಕ್ಕನ್ನು ಚಲಾಯಿಸಬೇಕಿದೆ. ಈ ಹಿಂದೆ 2019ರಲ್ಲಿ ಜಿಂಬಾಬ್ವೆ, 2023ರಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡಗಳ ಕಾರ್ಯಚಟುವಟಿಕೆಗಳಲ್ಲಿ ಅಲ್ಲಿನ ಸರ್ಕಾರ ತಲೆಹಾಕಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಐಸಿಸಿ, ಆ ದೇಶಗಳನ್ನು ಅಮಾನತುಗೊಳಿಸಿತ್ತು. ಬಳಿಕ ತಮ್ಮ ನಡೆಗೆ ಕ್ಷಮೆಯಾಚಿಸಿ, ಸರ್ಕಾರಗಳು ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಎಂದು ಆ ಕ್ರಿಕೆಟ್ ಬೋರ್ಡ್‌ಗಳು ಭರವಸೆ ನೀಡಿದ ಬಳಿಕ ಅಮಾನತು ತೆರವುಗೊಳಿಸಲಾಗಿತ್ತು. ಆದರೆ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಕಳೆದ ಒಂದು ತಿಂಗಳ ಕಾರ್ಯವೈಖರಿಯನ್ನು ನೋಡಿದಾಗ, ಅದರ ಮೇಲೆ ಆ ದೇಶದ ಸರ್ಕಾರ ಎಷ್ಟರ ಮಟ್ಟಿಗೆ ನಿಯಂತ್ರಣ ಹೊಂದಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಎಷ್ಟೇ ಆದರೂ, ಪಾಕಿಸ್ತಾನದ ಗೃಹ ಸಚಿವರೇ ಪಿಸಿಬಿಯ ಅಧ್ಯಕ್ಷ ಹುದ್ದೆಯಲ್ಲಿ ಇರುವಾಗ ಸಹಜವಾಗಿಯೇ ನಿರ್ಧಾರಗಳೆಲ್ಲವೂ ಸರ್ಕಾರದ್ದೇ ಆಗಿರುತ್ತದೆ.
ಐಸಿಸಿಯ ಒಟ್ಟು ಆದಾಯದಲ್ಲಿ ಶೇ.75-80ರಷ್ಟು ಹಣ ಭಾರತದಿಂದಲೇ ಹರಿಯಲಿದೆ ಎನ್ನುವುದು ಕ್ರಿಕೆಟ್ ಜಗತ್ತಿಗೇ ಗೊತ್ತಿರುವ ಸತ್ಯ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಪಾಕಿಸ್ತಾನ ಕ್ರಿಕೆಟ್ ಕೂಡ ಭಾರತದ ಹಣದಿಂದಲೇ ನಡೆಯುತ್ತಿದೆ. ಹೀಗಾಗಿ, ಪಾಕಿಸ್ತಾನದ ಮೇಲೆ ಬಿಸಿಸಿಐ ಬ್ರಹ್ಮಾಸ್ತ್ರ ಪ್ರಯೋಗಿಸಿ, ಹೊಸಕಿಹಾಕಲು ಇದಕ್ಕಿಂತ ಉತ್ತಮ ಅವಕಾಶ ಸಿಗದು.
1. ಐಸಿಸಿಯಲ್ಲಿ ಪಾಕಿಸ್ತಾನದ ಸದಸ್ಯತ್ವವನ್ನೇ ಅಮಾನತುಗೊಳಿಸಲು ಬಿಸಿಸಿಐ ಆಗ್ರಹಿಸಬಹುದು. ಸದಸ್ಯತ್ವ ಕಳಚಿದರೆ, ಐಸಿಸಿಯಿಂದ ಅನುದಾನವೂ ಖೋತಾ ಆಗಲಿದೆ. ಪ್ರತಿ ವರ್ಷ ಐಸಿಸಿಯಿಂದ ಪಾಕಿಸ್ತಾನಕ್ಕೆ ಅಂದಾಜು 315 ಕೋಟಿ ರು. ಅನುದಾನ ಸಿಗುತ್ತಿದೆ.
2. ಯಾವುದೇ ತಂಡ ತಾನೇ ಪಂದ್ಯಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿಲ್ಲ. ಈಗ ಭಾರತ ವಿರುದ್ಧ ಆಡಲ್ಲ ಎನ್ನುವ ಪಾಕಿಸ್ತಾನ ಮುಂದೆ ಮತ್ತೊಂದು ತಂಡದ ವಿರುದ್ಧ ಆಡಲ್ಲ ಎಂದು ತಕರಾರು ತೆಗೆಯಬಹುದು.
3. ಐಸಿಸಿಯ ನಿಯಮ ಉಲ್ಲಂಘಿಸುವ ಸದಸ್ಯ ರಾಷ್ಟ್ರಕ್ಕೆ ಮತ ಹಾಕಲು ಅವಕಾಶ ನೀಡಬಾರದು ಎಂದು ಒತ್ತಾಯಿಸಬಹುದು.
4. ಪಾಕಿಸ್ತಾನದ ಬಹಿಷ್ಕಾರ ನಿರ್ಧಾರ ವಿರುದ್ಧ ಐಸಿಸಿ ಅಂತಾರಾಷ್ಟ್ರೀಯ ಕ್ರೀಡಾ ನ್ಯಾಯಾಲಯದಲ್ಲಿ ದಾವೆ ಹೂಡುವಂತೆ ಬಿಸಿಸಿಐ ಒತ್ತಾಯ ಮಾಡಬಹುದು. ಆ ಮೂಲಕ ಐಸಿಸಿಗೆ ಆಗುವ ನಷ್ಟವನ್ನು ಪಾಕಿಸ್ತಾನವೇ ತುಂಬಿಕೊಡಬೇಕು ಎಂದು ಕ್ರೀಡಾ ನ್ಯಾಯಾಲಯದಲ್ಲಿ ವಾದಿಸಿ, ಪಾಕಿಸ್ತಾನವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಪ್ರಯತ್ನಿಸಬಹುದು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.