ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಪಾಕಿಸ್ತಾನ ಹೀನಾಯ ಸೋಲು ಕಂಡಿದೆ. ಕೇವಲ 91 ರನ್‌ಗಳಿಗೆ ಸರ್ವಪತನ ಕಂಡ ಪಾಕಿಸ್ತಾನ ತಂಡವು 9 ವಿಕೆಟ್‌ಗಳಿಂದ ಸೋಲೊಪ್ಪಿಕೊಂಡಿದೆ.
ಕ್ರೈಸ್ಟ್‌ಚರ್ಚ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಒಂದೇ ಒಂದು ಗೆಲುವು ಕಾಣದೇ ಗ್ರೂಪ್ ಹಂತದಲ್ಲಿ ಹೊರಬಿದ್ದಿದ್ದ ಪಾಕಿಸ್ತಾನ ತಂಡಕ್ಕೆ ಇದೀಗ ಮತ್ತೊಮ್ಮೆ ಮುಖಭಂಗ ಎದುರಾಗಿದೆ. ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಪಾಕಿಸ್ತಾನ ತಂಡವು, ಕಿವೀಸ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ ಕೇವಲ 91 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ 9 ವಿಕೆಟ್ ಅಂತರದ ಹೀನಾಯ ಸೋಲು ಅನುಭವಿಸಿದೆ.
ಪಾಕಿಸ್ತಾನ ತಂಡವು 5 ಪಂದ್ಯಗಳ ಟಿ20 ಸರಣಿಯನ್ನಾಡಲು ನ್ಯೂಜಿಲೆಂಡ್ ಪ್ರವಾಸ ಮಾಡಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಪಾಕಿಸ್ತಾನ ತಂಡವು ಕೇವಲ 11 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದ್ದರು. ಕೈಲ್ ಜೇಮಿಸನ್ ಮಾರಕ ದಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡವು ರನ್ ಗಳಿಸಲು ಪರದಾಡಿತು. ಆರಂಭಿಕರಾದ ಮೊಹಮ್ಮದ್ ಹ್ಯಾರಿಸ್ ಹಾಗೂ ಹಸನ್ ನವಾಜ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಇರ್ಫಾನ್ ಖಾನ್ ಒಂದು ಹಾಗೂ ಶದಾಬ್ ಖಾನ್ 3 ರನ್ ಗಳಿಸಿ ಪೆವಿಲಿಯನ್ ಪರೇಡ್ ನಡೆಸಿದರು.
ಇದನ್ನೂ ಓದಿ: ಟಿ20 ವಿಶ್ವಕಪ್ ಸೋತಾಗ ಬೆದರಿಕೆ ಕರೆಗಳು ಬರುತ್ತಿತ್ತು; ಅಚ್ಚರಿ ಮಾಹಿತಿ ಬಿಚ್ಚಿಟ್ಟ ಭಾರತದ ಸ್ಟಾರ್ ಕ್ರಿಕೆಟಿಗ!
ಇನ್ನುಳಿದಂತೆ ನಾಯಕ ಸಲ್ಮಾನ್ ಅಘಾ(18), ಖುಷ್‌ದಿಲ್ ಶಾ(32) ಹಾಗೂ ಜಹಾನಬಾದ್(17) ಕೊಂಚ ಪ್ರತಿರೋಧ ತೋರಿದ್ದು ಬಿಟ್ಟರೇ, ಪಾಕಿಸ್ತಾನದ ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಯಶಸ್ವಿಯಾಗಲಿಲ್ಲ. 91 ರನ್‌ಗಳಿಗೆ ಆಲೌಟ್ ಆಗಿದ್ದು ಕಿವೀಸ್ ನೆಲದಲ್ಲಿ ಪಾಕಿಸ್ತಾನ ಗಳಿಸಿದ ಅತ್ಯಂತ ಕಳಪೆ ಸ್ಕೋರ್ ಎನಿಸಿಕೊಂಡಿತು. ಈ ಮೊದಲು ಪಾಕಿಸ್ತಾನ ತಂಡವು ನ್ಯೂಜಿಲೆಂಡ್‌ನ ವೆಲ್ಲಿಂಗ್ಟನ್‌ನಲ್ಲಿ 101 ರನ್ ಗಳಿಸಿದ್ದು ಇಲ್ಲಿಯವರೆಗಿನ ಕನಿಷ್ಠ ಸ್ಕೋರ್ ಎನಿಸಿಕೊಂಡಿತ್ತು.
ಕಿವೀಸ್ ಪರ ನೀಳಕಾಯದ ವೇಗಿ ಕೈಲ್ ಜೇಮಿಸನ್ 8 ರನ್‌ಗೆ 3 ಬಲಿ ಪಡೆದರೆ, ಜೇಕೊಬ್ ಡಪ್ಪಿ 14 ರನ್ ನೀಡಿ 4 ವಿಕೆಟ್ ಕಬಳಿಸಿದರು. ಇನ್ನು ಇಶ್ ಸೋಧಿ 3 ಹಾಗೂ ಝಕಾರಿ ಫೋಕ್ಸ್ ಒಂದು ವಿಕೆಟ್ ತಮ್ಮ ಖಾತೆಗೆ ಹಾಕಿಕೊಂಡರು.
ಇದನ್ನೂ ಓದಿ: WPL 2025 ಮುಂಬೈ ಇಂಡಿಯನ್ಸ್ ಚಾಂಪಿಯನ್; ಡೆಲ್ಲಿಗೆ ಫೈನಲ್‌ನಲ್ಲಿ ಹ್ಯಾಟ್ರಿಕ್ ಸೋಲು
ಇನ್ನು ಸಾಧಾರಣ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡವು ಸ್ಪೋಟಕ ಆರಂಭ ಪಡೆಯಿತು. ಟಿಫ್ ಸೈಫರ್ಟ್ ಹಾಗೂ ಫಿನ್ ಅಲೆನ್ ಮೊದಲ ವಿಕೆಟ್‌ಗೆ 5.5 ಓವರ್‌ಗಳಲ್ಲಿ 53 ರನ್‌ಗಳ ಜತೆಯಾಟವಾಡಿತು. ಸೈಫರ್ಟ್ 44 ರನ್ ಗಳಿಸಿ ಅಬ್ರಾರ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಇದಾದ ಬಳಿಕ ಟಿಮ್ ರಾಬಿನ್‌ಸನ್(18) ಹಾಗೂ ಫಿನ್ ಅಲೆನ್ ಎರಡನೇ ವಿಕೆಟ್‌ಗೆ ಮುರಿಯದ 42 ರನ್‌ಗಳ ಜತೆಯಾಟವಾಡುವ ಮೂಲಕ ಇನ್ನೂ 59 ಎಸೆತ ಬಾಕಿ ಇರುವಂತೆಯೇ ತಂಡವನ್ನು ಗೆಲುವಿನ ದಡ ಸೇರಿಸಿದರು.