ವಿದೇಶಿ ಪ್ರವಾಸಗಳಲ್ಲಿ ಆಟಗಾರರ ಕುಟುಂಬದ ಮೇಲಿನ ಬಿಸಿಸಿಐ ನಿರ್ಬಂಧದ ಬಗ್ಗೆ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ. ಕಷ್ಟದ ಸಮಯದಲ್ಲಿ ಕುಟುಂಬದ ಬೆಂಬಲದ ಮಹತ್ವವನ್ನು ಅವರು ಒತ್ತಿ ಹೇಳಿದ್ದಾರೆ.
ಬೆಂಗಳೂರು: ಭಾರತ ಕ್ರಿಕೆಟ್ ತಂಡವು ವಿದೇಶಿ ಪ್ರವಾಸದ ವೇಳೆಯಲ್ಲಿ ಆಟಗಾರರ ಕುಟುಂಬಸ್ಥರ ಜತೆಗಿರುವಿಕೆಯ ಬಗ್ಗೆ ಬಿಸಿಸಿಐ ಹೇರಿರುವ ನಿರ್ಬಂಧಗಳ ಬಗ್ಗೆ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮೊದಲು ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಕಷ್ಟದ ಸಮಯದಲ್ಲಿ ಅವರು ಜೊತೆಗಿದ್ದರೆ ಸಮತೋಲನ ಕಾಪಾಡಿಕೊಳ್ಳಬಹುದು ಎಂದು ಹೇಳಿದ್ದಾರೆ.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI), ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 3-1 ಸೋಲಿನ ನಂತರ ಪ್ರವಾಸಗಳಲ್ಲಿ ಆಟಗಾರರ ಕುಟುಂಬದ ಸಮಯವನ್ನು ನಿರ್ಬಂಧಿಸುವ ನಿರ್ದೇಶನಗಳನ್ನು ಪರಿಚಯಿಸಿತು. 45 ದಿನಗಳ ಪ್ರವಾಸದಲ್ಲಿ ಆಟಗಾರರ ಕುಟುಂಬ, ಸಂಗಾತಿ ಮತ್ತು ಮಕ್ಕಳು ಮೊದಲ ಎರಡು ವಾರಗಳ ನಂತರ 14 ದಿನಗಳವರೆಗೆ ಮಾತ್ರ ಇರಲು ಅವಕಾಶ ನೀಡಲಾಗಿದೆ. ಕಡಿಮೆ ಪ್ರವಾಸಗಳಲ್ಲಿ, ಆಟಗಾರರು ಒಂದು ವಾರದವರೆಗೆ ತಮ್ಮ ಕುಟುಂಬದೊಂದಿಗೆ ಇರಬಹುದು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಇನ್ನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಸಮ್ಮಿಟ್‌ನಲ್ಲಿ ಮಾತನಾಡಿದ ವಿರಾಟ್, "ಹೊರಗಡೆ ತೀವ್ರವಾದ ಒತ್ತಡ ಇದ್ದಾಗ ಕುಟುಂಬದ ಬಳಿ ಬರುವುದು ಎಷ್ಟು ಮುಖ್ಯ ಎಂದು ಜನರಿಗೆ ವಿವರಿಸಲು ಸಾಧ್ಯವಿಲ್ಲ" ಎಂದಿದ್ದಾರೆ.
ಇದನ್ನೂ ಓದಿ: ಐಪಿಎಲ್ 2025 ಆರ್‌ಸಿಬಿ ನಿಜವಾದ ಮಾಲೀಕರು ಯಾರು? ಫ್ರಾಂಚೈಸಿಗಳ ಕಂಪ್ಲೀಟ್ ಮಾಹಿತಿ
"ಇದರ ಮಹತ್ವದ ಬಗ್ಗೆ ಜನರಿಗೆ ಅರಿವಿಲ್ಲ ಎಂದು ನಾನು ಭಾವಿಸುತ್ತೇನೆ. ಪ್ರವಾಸದಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ಯಾವುದೇ ಆಟಗಾರನು "ಒಂಟಿಯಾಗಿ ಕೂರಲು ಇಷ್ಟಪಡುವುದಿಲ್ಲ" ಎಂದು ವಿರಾಟ್ ಹೇಳಿದರು.
"ನಾನು ಸಹಜವಾಗಿರಲು ಬಯಸುತ್ತೇನೆ. ಆವಾಗ ಆಟವನ್ನು ಜವಾಬ್ದಾರಿಯಿಂದ ಆಡಬಹುದು. ಜವಾಬ್ದಾರಿ ಮುಗಿದ ನಂತರ ಜೀವನಕ್ಕೆ ಹಿಂತಿರುಗಬಹುದು," ಎಂದು ಅವರು ಹೇಳಿದರು.
"ನಿಮ್ಮ ಜೀವನದಲ್ಲಿ ಬೇರೆ ಬೇರೆ ರೀತಿಯ ಸನ್ನಿವೇಶಗಳು ನಡೆಯುತ್ತಿರಬಹುದು. ಅದು ನಿಮ್ಮನ್ನು ಸಹಜವಾಗಿರಲು ಅನುವು ಮಾಡಿಕೊಡುತ್ತದೆ. ನಿಮ್ಮ ಜವಾಬ್ದಾರಿ ಮುಗಿದ ನಂತರ ಮನೆಗೆ ಬಂದು ಕುಟುಂಬದೊಂದಿಗೆ ಸಮಯ ಕಳೆಯಬಹುದು. ನನ್ನ ಪಾಲಿಗೆ ಅದು ಸಂತೋಷದ ದಿನ. ಕುಟುಂಬದೊಂದಿಗೆ ಸಮಯ ಕಳೆಯಲು ನಾನು ಯಾವುದೇ ಅವಕಾಶವನ್ನು ಕಳೆದುಕೊಳ್ಳಲು ಬಯಸುವುದಿಲ್ಲ," ಎಂದು ಅವರು ಹೇಳಿದರು.
ಇದನ್ನೂ ಓದಿ: ಇಂಗ್ಲೆಂಡ್ ಟೆಸ್ಟ್‌ಗೂ ರೋಹಿತ್ ಶರ್ಮಾ ಟೀಂ ಇಂಡಿಯಾ ನಾಯಕ?
ವಿರಾಟ್ ಕೊಹ್ಲಿ ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಐದು ಪಂದ್ಯಗಳಲ್ಲಿ 54.50 ಸರಾಸರಿಯಲ್ಲಿ 218 ರನ್ ಗಳಿಸಿ ತಂಡದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎನಿಸಿಕೊಂಡರು. ಪಾಕಿಸ್ತಾನ ವಿರುದ್ಧ 242 ರನ್ ಚೇಸ್ ಮಾಡುವಾಗ 100* ರನ್ ಮತ್ತು ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 265 ರನ್ ಚೇಸ್ ಮಾಡುವಾಗ 98 ಎಸೆತಗಳಲ್ಲಿ 84 ರನ್ ಗಳಿಸಿದ್ದು ಅವರ ಪ್ರಮುಖ ಇನ್ನಿಂಗ್ಸ್‌ಗಳಾಗಿವೆ.
ಮಾರ್ಚ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ವಿರುದ್ಧ ಪ್ರಾರಂಭವಾಗುವ RCB ಯ IPL 2025 ಸೀಸನ್‌ನಲ್ಲಿ ಅವರು ಭಾಗವಹಿಸಲಿದ್ದಾರೆ. ಅವರು ಮೊದಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವ ಗುರಿಯನ್ನು ಹೊಂದಿದ್ದಾರೆ. ಅಲ್ಲದೆ ಸಾಕಷ್ಟು ಬ್ಯಾಟಿಂಗ್ ದಾಖಲೆಗಳನ್ನು ಬರೆಯುವ ನಿರೀಕ್ಷೆಯಿದೆ. ಅವರು 252 ಪಂದ್ಯಗಳಲ್ಲಿ 38.66 ಸರಾಸರಿ ಮತ್ತು 131.97 ಸ್ಟ್ರೈಕ್ ರೇಟ್‌ನಲ್ಲಿ 8,004 ರನ್ ಗಳಿಸಿ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಇದರಲ್ಲಿ ಎಂಟು ಶತಕ ಮತ್ತು 55 ಅರ್ಧ ಶತಕಗಳು ಸೇರಿವೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಸೋತಾಗ ಬೆದರಿಕೆ ಕರೆಗಳು ಬರುತ್ತಿತ್ತು; ಅಚ್ಚರಿ ಮಾಹಿತಿ ಬಿಚ್ಚಿಟ್ಟ ಭಾರತದ ಸ್ಟಾರ್ ಕ್ರಿಕೆಟಿಗ!
ಕಳೆದ ವರ್ಷ, ಅವರು 61.75 ಸರಾಸರಿಯಲ್ಲಿ 741 ರನ್ ಗಳಿಸಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡರು. 154.69 ಸ್ಟ್ರೈಕ್ ರೇಟ್ ಹೊಂದಿದ್ದರು. ಒಂದು ಶತಕ ಮತ್ತು ಐದು ಅರ್ಧ ಶತಕಗಳನ್ನು ಗಳಿಸಿದರು ಮತ್ತು 38 ಸಿಕ್ಸರ್‌ಗಳನ್ನು ಬಾರಿಸಿದರು. ಅವರ ತಂಡವು ಮೊದಲಾರ್ಧದಲ್ಲಿ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದ ನಂತರವೂ, ಆ ಬಳಿಕ ಅಮೋಘ ಪ್ರದರ್ಶನ ತೋರಿ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು ಮುಗ್ಗರಿಸುವ ಮೂಲಕ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.