'ನಾವು ಸೋತಿದ್ದು ಅಂಪೈರ್‌ನಿಂದ, ನಮಗೆ ಬೇರೆ ಪಿಚ್ ಬೇಕು': ಶಾಕ್‌ನಲ್ಲಿ ಏನೇನೋ ಮಾತಾನಾಡಿದ ಪಾಕ್ ಕ್ಯಾಪ್ಟನ್

Published : Sep 22, 2025, 12:03 PM IST
Suryakumar Yadav and Salman Ali Agha

ಸಾರಾಂಶ

2025ರ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಮಣಿಸಿದೆ. ಈ ಸೋಲಿಗೆ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಅಘಾ, ಪಿಚ್ ಸರಿಯಿರಲಿಲ್ಲ ಮತ್ತು ಅಂಪೈರ್ ತೀರ್ಪು ತಪ್ಪಾಗಿತ್ತು ಎಂದು ಹೊಸ ಕಾರಣಗಳನ್ನು ನೀಡಿದ್ದಾರೆ. 

ದುಬೈ: 2025ರ ಏಷ್ಯಾಕಪ್ ಟೂರ್ನಿಯ ಸೂಪರ್ 4 ಪಂದ್ಯದಲ್ಲಿ ಪಾಕಿಸ್ತಾನ ಎದುರು ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, 6 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿದೆ. ಪಂದ್ಯದುದ್ದಕ್ಕೂ ಬದ್ದ ಎದುರಾಳಿ ಪಾಕಿಸ್ತಾನ ಎದುರು ಪ್ರಾಬಲ್ಯ ಸಾಧಿಸಿದ ಟೀಂ ಇಂಡಿಯಾ, ಇನ್ನೂ ಏಳು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಗಿದೆ. ಇದೀಗ ಕಳ್ಳನಿಗೆ ಒಂದು ಪಿಳ್ಳೆ ನೆವ ಎನ್ನುವಂತೆ, ಭಾರತ ಎದುರಿನ ಸೋಲಿಗೆ ಪಾಕಿಸ್ತಾನ ನಾಯಕ ಸಲ್ಮಾನ್ ಅಘಾ ಹೊಸದೊಂದು ನೆಪ ಹೇಳಿದ್ದಾರೆ. ಸೋಲಿನ ಶಾಕ್‌ನಲ್ಲಿರುವ ಪಾಕ್ ನಾಯಕ ಏನೇನೋ ಮಾತನಾಡಲಾರಂಭಿಸಿದ್ದಾರೆ.

ಪಿಚ್‌ ಸರಿಯಿಲ್ಲವೆಂದ ಪಾಕ್ ಕ್ಯಾಪ್ಟನ್

ಪಂದ್ಯ ಮುಕ್ತಾಯದ ಬಳಿಕ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿ ಮಾತನಾಡಿದ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ, 'ಪಿಚ್‌ ನಮಗೆ ಸಹಕಾರಿಯಾಗಿರಲಿಲ್ಲ. ಹೀಗಾಗಿ ನಮಗೆ ಸಮಸ್ಯೆಯಾಯಿತು. ನೀವು ಹೇಳುತ್ತಿರುವ ಸರಣಿಯಲ್ಲಿ, ಪಾರ್ ಸ್ಕೋರ್ 200 ಆಗಿತ್ತು. ಅಂದಿನಿಂದ ನಾವು ಬಾಂಗ್ಲಾದೇಶ, ಅಮೆರಿಕ, ಶಾರ್ಜಾ ಮತ್ತು ಈಗ ದುಬೈನಲ್ಲಿ ಆಡಿದ್ದೇವೆ. ಈ ಪರಿಸ್ಥಿತಿಗಳು 200 ರನ್‌ ಗಳಿಸಲು ಸಾಧ್ಯವಾಗಲಿಲ್ಲ. ಇದನ್ನು ನಾವು ಅರ್ಥಮಾಡಿಕೊಳ್ಳಬೇಕು' ಎಂದು ಹೇಳಿದ್ದಾರೆ.

ಒಂದು ವೇಳೆ ನಮಗೆ ಒಳ್ಳೆಯ ಪಿಚ್‌ ನೀಡಿದ್ದರೇ, ನಮ್ಮ ಬ್ಯಾಟಿಂಗ್ ಹೇಗಿರುತ್ತಿತ್ತು ಎನ್ನುವುದನ್ನು ನೀವು ನೋಡುತ್ತಿದ್ರಿ. ಅದನ್ನು ನಾವು ಬಾಂಗ್ಲಾದೇಶ ಎದುರು ಮಾಡಿ ತೋರಿಸಿದ್ದೇವೆ. ಪಿಚ್ ಕಂಡೀಷನ್ ತುಂಬಾ ಮುಖ್ಯವಾಗುತ್ತದೆ. ಈ ಪಿಚ್‌ನಲ್ಲಿ ಹೊಸ ಬ್ಯಾಟರ್‌ಗಳು ಬ್ಯಾಟ್ ಮಾಡುವುದು ಸುಲಭವಾಗಿರಲಿಲ್ಲ. ಇಲ್ಲಿ ಸೆಟ್ ಆಗಬೇಕು ಎಂದರೇ ಕೊನೆಯ ತನಕ ಬ್ಯಾಟ್ ಮಾಡಬೇಕು. ನಮಗೆ ಮಾತ್ರವಲ್ಲ ಭಾರತೀಯ ಬ್ಯಾಟರ್‌ಗಳು ಇಲ್ಲಿ ರನ್ ಗಳಿಸಲು ಸಾಕಷ್ಟು ಕಷ್ಟಗಳು ಎದುರಾದವು. ನಾವು ಎರಡು ಬ್ಯಾಟರ್‌ಗಳನ್ನು ಬೇಗನೇ ಕಳೆದುಕೊಂಡೆವು. ಹೀಗಾಗಿ ನಮ್ಮ ದೊಡ್ಡ ಮೊತ್ತ ಗಳಿಸುವ ಪ್ರಯತ್ನಕ್ಕೆ ಹಿನ್ನಡೆಯುಂಟಾಯಿತು ಎಂದು ಅಘಾ ಹೇಳಿದ್ದಾರೆ.

ಅಂಪೈರ್‌ ಮೇಲೆ ಬೊಟ್ಟು ಮಾಡಿದ ಪಾಕ್ ನಾಯಕ

ಇನ್ನು ಇಷ್ಟಕ್ಕೆ ಸುಮ್ಮನಾಗದ ಪಾಕ್ ಕ್ಯಾಪ್ಟನ್ ಅಘಾ, ಫಖರ್ ಜಮಾನ್ ಬ್ಯಾಟ್ ಅಂಚು ಸವರಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಕೈ ಸೇರಿದ ಚೆಂಡಿನ ಬಗ್ಗೆ ಅಂಪೈರ್ ನೀಡಿದ ಔಟ್ ತೀರ್ಪಿನ ಬಗ್ಗೆಯೂ ಅಸಮಾಧಾನ ಹೊರಹಾಕಿದ್ದಾರೆ. 'ಅಂಪೈರ್‌ಗಳು ಒಮ್ಮೊಮ್ಮೆ ತಪ್ಪುಗಳನ್ನು ಮಾಡುತ್ತಾರೆ. ಚೆಂಡು ಸಂಜು ಕೈ ಸೇರುವ ಮೊದಲು ನೆಲಕ್ಕೆ ತಗುಲಿ ಬೌನ್ಸ್ ಆಗಿತ್ತು ಎಂದು ನನಗನಿಸುತ್ತಿದೆ. ಅಂಪೈರ್‌ದೂ ಮಿಸ್ಟೇಕ್ ಆಗಿರಬಹುದು ಹಾಗೂ ನನ್ನ ಅನಿಸಿಕೆಯೂ ತಪ್ಪಾಗಿರಬಹುದು ಎಂದು ಹೇಳಿದ್ದಾರೆ.

ಭಾರತದ ಪಾಲಿಗೆ ಅಭಿಷೇಕ್ ಶರ್ಮಾ ಹೀರೋ

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 171 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಇನ್ನು ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಅಭಿಷೇಕ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಸ್ಪೋಟಕ ಆರಂಭ ಒದಗಿಸಿಕೊಟ್ಟರು. ಅಭಿಷೇಕ್ ಶರ್ಮಾ, ತಾವೆದುರಿಸಿದ ಮೊದಲ ಎಸೆತದಲ್ಲೇ ಚೆಂಡನ್ನು ಸಿಕ್ಸರ್‌ಗಟ್ಟಿದರು. ಮೊದಲ ವಿಕೆಟ್‌ಗೆ ಈ ಜೋಡಿ 105 ರನ್‌ಗಳ ಜತೆಯಾಟವಾಡಿದರು.

ಅಭಿಷೇಕ್ ಶರ್ಮಾ ಕೇವಲ 39 ಎಸೆತಗಳಲ್ಲಿ ಸ್ಪೋಟಕ 74 ರನ್‌ಗಳನ್ನು ಸಿಡಿಸಿದರೆ, ಶುಭ್‌ಮನ್ ಗಿಲ್ 47 ಹಾಗೂ ಕೊನೆಯಲ್ಲಿ ತಿಲಕ್ ವರ್ಮಾ ಅಜೇಯ 30 ರನ್ ಬಾರಿಸುವ ಮೂಲಕ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!