ಭಾರತದ ಮೇಲೆ ವಾಗ್ದಾಳಿ ನಡೆಸಿದ ಪಾಕ್ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್
ಏಷ್ಯಾಕಪ್ ಟೂರ್ನಿಯನ್ನಾಡಲು ಪಾಕ್ ಪ್ರವಾಸ ಮಾಡಲು ನಿರಾಕರಿಸಿದ ಭಾರತ
ಇದೀಗ ಪಾಕಿಸ್ತಾನ ತಂಡದ ಪರ ಮತ್ತೊಮ್ಮೆ ಬ್ಯಾಟ್ ಬೀಸಿದ ಜಾವೇದ್ ಮಿಯಾಂದಾದ್
ಕರಾಚಿ(ಜೂ.19): ಮುಂಬರುವ ಏಷ್ಯಾಕಪ್ ಟೂರ್ನಿಯನ್ನಾಡಲು ಪಾಕಿಸ್ತಾನ ಪ್ರವಾಸಕ್ಕೆ ಹಿಂದೇಟು ಹಾಕಿರುವ ಬಿಸಿಸಿಐ ಹಾಗೂ ಭಾರತ ಕ್ರಿಕೆಟ್ ತಂಡದ ವಿರುದ್ದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಜಾವೇದ್ ಮಿಯಾಂದಾದ್ ಹೊಸದಾಗಿ ಮತ್ತೊಮ್ಮೆ ಟೀಕಾಪ್ರಹಾರ ನಡೆಸಿದ್ದಾರೆ. ಭಾರತ ತಂಡವು ಪಾಕ್ ಪ್ರವಾಸ ಮಾಡದೇ ಇರುವ ಕುರಿತಂತೆ ಈ ಹಿಂದೆಯೂ ಮಿಯಾಂದಾದ್ ಕಟು ಟೀಕೆ ಮಾಡುತ್ತಲೇ ಬಂದಿದ್ದಾರೆ. ಇದೀಗ ಹೊಸದಾಗಿ ಮಿಯಾಂದಾದ್, ಭಾರತದ ಮೇಲೆ ವಾಗ್ದಾಳಿ ನಡೆಸಿದ್ದು, ಪಾಕಿಸ್ತಾನ ಕ್ರಿಕೆಟ್ ತಂಡವು ಅತ್ಯುತ್ಕೃಷ್ಟವಾಗಿದೆ, ಭಾರತ ತಂಡವು ಪಾಕಿಸ್ತಾನಕ್ಕೆ ಬರದೇ ಹೋದರೆ, ನರಕಕ್ಕೆ ಹೋಗಲಿ ಎಂದು ಕಿಡಿಕಾರಿದ್ದಾರೆ.
ಹಲವು ಗೊಂದಲಗಳಿಗೆ ಕಾರಣವಾಗಿದ್ದ 16ನೇ ಆವೃತ್ತಿಯ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 31ರಿಂದ ಸೆಪ್ಟೆಂಬರ್ 17ರ ವರೆಗೆ ನಡೆಯಲಿದ್ದು, ಪಾಕಿಸ್ತಾನ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ವಹಿಸಲಿವೆ. ಟೂರ್ನಿಯ ಹಕ್ಕು ಪಾಕಿಸ್ತಾನ ಬಳಿ ಇದ್ದರೂ ಭಾರತ ತಂಡ ಪಾಕಿಸ್ತಾನಕ್ಕೆ ತೆರಳಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಟೂರ್ನಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ಏಷ್ಯಾ ಕ್ರಿಕೆಟ್ ಸಮಿತಿ(ಎಸಿಸಿ) ನಿರ್ಧರಿಸಿದೆ.
ಈಗಾಗಲೇ ಈ ಕುರಿತಂತೆ ಎಸಿಸಿ ಅಧಿಕೃತ ಪ್ರಕಟಣೆ ನೀಡಿದ್ದು, ಏಕದಿನ ಮಾದರಿಯಲ್ಲಿ ನಡೆಯಲಿರುವ ಟೂರ್ನಿಯ 4 ಪಂದ್ಯಗಳಿಗೆ ಪಾಕಿಸ್ತಾನದ ಲಾಹೋರ್, ಉಳಿದ 9 ಪಂದ್ಯಗಳಿಗೆ ಲಂಕಾದ ಪಲ್ಲೆಕೆಲ್ಲೆ ಹಾಗೂ ಕ್ಯಾಂಡಿ ನಗರಗಳು ಆತಿಥ್ಯ ವಹಿಸಲಿವೆ. ಪಂದ್ಯಗಳು ನಡೆಯುವ ದಿನಾಂಕಗಳನ್ನು ಎಸಿಸಿ ಇನ್ನಷ್ಟೇ ಪ್ರಕಟಿಸಬೇಕಿದೆ.
ಸರ್ಕಾರ ಒಪ್ಪಿದರಷ್ಟೇ ಏಕದಿನ ವಿಶ್ವಕಪ್ ಆಡಲು ಪಾಕ್ ತಂಡ ಭಾರತಕ್ಕೆ: ಪಿಸಿಬಿ ಹೊಸ ತಗಾದೆ
"ಪಾಕಿಸ್ತಾನ ತಂಡವು 2012ರಲ್ಲಿ ಕ್ರಿಕೆಟ್ ಸರಣಿಯನ್ನಾಡಲು ಭಾರತ ಪ್ರವಾಸ ಮಾಡಿತ್ತು. ಇನ್ನು 2016ರಲ್ಲೂ ಭಾರತಕ್ಕೆ ಪ್ರವಾಸ ಮಾಡಿತ್ತು. ಇದೀಗ ಭಾರತದ ಸರದಿ. ಒಂದು ವೇಳೆ ನಾನೇ ತೀರ್ಮಾನ ಮಾಡುವುದೇ ಆಗಿದ್ದರೇ, ಯಾವುದೇ ಮಾದರಿಯ ಕ್ರಿಕೆಟ್ ಅಡಲು ನಾವು ಭಾರತಕ್ಕೆ ಹೋಗುತ್ತಿರಲಿಲ್ಲ. ಅದು ವಿಶ್ವಕಪ್ ಆಗಿದ್ದರೂ ಸರಿಯೇ. ನಾವು ಯಾವಾಗಲೂ ಭಾರತ ವಿರುದ್ದ ಆಡಲು ಸಿದ್ದರಿರುತ್ತೇವೆ. ಆದರೆ ಅವರು ಅದೇ ರೀತಿ ಆಡಲು ಸಿದ್ದರಿಲ್ಲ. ಪಾಕಿಸ್ತಾನ ಕ್ರಿಕೆಟ್ ಈಗ ದೊಡ್ಡದಾಗಿ ಬೆಳೆದಿದೆ. ನಾವು ಈಗಲೂ ಕೂಡಾ ಗುಣಮಟ್ಟದ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸುತ್ತಿದ್ದೇವೆ. ಭಾರತ ಬೇಕಿದ್ದರೇ ನರಕಕ್ಕೆ ಹೋಗಲಿ. ನನ್ನ ಪ್ರಕಾರ ನಾವು ಒಂದು ವೇಳೆ ಭಾರತಕ್ಕೆ ವಿಶ್ವಕಪ್ ಆಡಲು ಹೋಗದಿದ್ದರೂ, ನಮ್ಮ ತಂಡದ ಮೇಲೆ ದೊಡ್ಡ ಪರಿಣಾಮ ಬೀರಲಿದೆ ಎಂದೇನು ಅನಿಸುತ್ತಿಲ್ಲ" ಎಂದು ಹೇಳಿದ್ದಾರೆ.
ಈಗ ಭಾರತ ಹಾಗೂ ಪಾಕಿಸ್ತಾನ ನಡುವಿನ ಡ್ರಾಮ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಏಷ್ಯಾಕಪ್ ಟೂರ್ನಿಯು ಹೈಬ್ರೀಡ್ ಮಾದರಿಯಲ್ಲಿ ಆಯೋಜಿಸುವುದು ನಿರ್ಧಾರವಾಗಿದೆ. ಹೀಗಿದ್ದೂ, ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಈಗಾಗಲೇ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ 15ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಡಲಿವೆ. ಆದರೆ ಅಹಮದಾಬಾದ್‌ನಲ್ಲಿ ಪಾಕಿಸ್ತಾನ ತಂಡವು ಕಣಕ್ಕಿಳಿಯಲು ನಿರಾಕರಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಪಾಕ್ ತಂಡವು ಭಾರತದ ಪ್ರವಾಸದ ಕುರಿತಂತೆ ಅನುಮಾನದ ತೂಗುಗತ್ತಿ ನೇತಾಡಲಾರಂಭಿಸಿದೆ.
2008ರಲ್ಲಿ ಭಾರತದ ಮೇಲೆ ನಡೆದ ಪಾಕಿಸ್ತಾನ ಪ್ರೇರಿತ ಬಯೋತ್ಪಾದಕ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಬಾಂಧವ್ಯ ಹದಗೆಟ್ಟಿದೆ. ಇದು ಕ್ರಿಕೆಟ್ ಮೇಲೂ ಪರಿಣಾಮ ಬೀರಿದೆ. 2012-13ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಕೊನೆಯ ಬಾರಿಗೆ ದ್ವಿಪಕ್ಷೀಯ ಸರಣಿ ನಡೆದಿತ್ತು. ಆಗ ಪಾಕಿಸ್ತಾನ ತಂಡವು ಭಾರತ ಪ್ರವಾಸ ನಡೆಸಿತ್ತು. ಇದಾದ ಬಳಿಕ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಕೇವಲ ಐಸಿಸಿ ಹಾಗೂ ಏಷ್ಯಾಕಪ್ ಟೂರ್ನಿಗಳಲ್ಲಿ ಮಾತ್ರ ಉಭಯ ತಂಡಗಳು ಮುಖಾಮುಖಿಯಾಗುತ್ತಾ ಬಂದಿವೆ.