
ನವದೆಹಲಿ(ಜೂ.19): ಮುಂದಿನ ಆವೃತ್ತಿಯ ರಣಜಿ ಟ್ರೋಫಿ 2024ರ ಜನವರಿ 5ರಿಂದ ಆರಂಭಗೊಳ್ಳಲಿದ್ದು, 8 ಬಾರಿ ಚಾಂಪಿಯನ್ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾನುವಾರ ಬಿಸಿಸಿಐ ರಣಜಿ ಟ್ರೋಫಿಯ ವೇಳಾಪಟ್ಟಿ ಪ್ರಕಟಿಸಿತು. ಗುಂಪು ಹಂತದ ಪಂದ್ಯಗಳು ಫೆಬ್ರವರಿ 19ರ ವರೆಗೆ ನಡೆಯಲಿದ್ದು, ಬಳಿಕ ನಾಕೌಟ್ ಪಂದ್ಯಗಳು ಫೆಬ್ರವರಿ 23ರಿಂದ ಮಾರ್ಚ್ 14ರ ವರೆಗೆ ನಡೆಯಲಿದೆ ಎಂದು ತಿಳಿಸಿದೆ.
ಕರ್ನಾಟಕ ತಂಡ ಎಲೈಟ್ ‘ಸಿ’ ಗುಂಪಿನಲ್ಲಿದ್ದು, ಪಂಜಾಬ್, ತಮಿಳುನಾಡು, ರೈಲ್ವೇಸ್, ಗೋವಾ, ಗುಜರಾತ್, ತ್ರಿಪುರಾ ಹಾಗೂ ಚಂಡೀಗಢ ತಂಡಗಳೂ ಇದೇ ಗುಂಪಿನಲ್ಲಿವೆ. ಟೂರ್ನಿಯನ್ನು ತಲಾ 8 ತಂಡಗಳ 4 ಎಲೈಟ್ ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು, ಅಗ್ರ 2 ತಂಡಗಳು ನಾಕೌಟ್ ಪ್ರವೇಶಿಸಲಿವೆ. ಕರ್ನಾಟಕ 2014-15ರಲ್ಲಿ ಕೊನೆ ಬಾರಿ ಪ್ರಶಸ್ತಿ ಗೆದ್ದಿದ್ದು, ಕಳೆದ ವರ್ಷ ಸೌರಾಷ್ಟ್ರ ಚಾಂಪಿಯನ್ ಆಗಿತ್ತು.
ಕಳೆದ ಆವೃತ್ತಿಯ ರಣಜಿ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ತಂಡವು ಸೆಮೀಸ್ ಪ್ರವೇಶಿಸಿತ್ತಾದರೂ, ಫೈನಲ್‌ಗೇರಲು ವಿಫಲವಾಗಿತ್ತು. ಇನ್ನು ಕಳೆದ ಆವೃತ್ತಿಯಲ್ಲಿ ತಂಡಗಳು ತೋರಿದ ಪ್ರದರ್ಶನದ ಆಧಾರದಲ್ಲಿ ತಲಾ 8 ತಂಡಗಳ 4 ಎಲೈಟ್ ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಇನ್ನು ಹಾಲಿ ಚಾಂಪಿಯನ್ ಸೌರಾಷ್ಟ್ರ ಹಾಗೂ ಮಹಾರಾಷ್ಟ್ರ ತಂಡಗಳು ಈ ಬಾರಿ ಮತ್ತೊಮ್ಮೆ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಐರ್ಲೆಂಡ್ ಟಿ20 ಸರಣಿ: ಭಾರತ ತಂಡಕ್ಕೆ ಜಸ್ಪ್ರೀತ್ ಬುಮ್ರಾ?
ರಣಜಿ ಟ್ರೋಫಿ ವೇಳಾಪಟ್ಟಿ:
ಎಲೈಟ್ ಲೀಗ್ ಹಂತ: ಜನವರಿ 05ರಿಂದ ಫೆಬ್ರವರಿ 19, 2024
ಪ್ಲೇಟ್ ಲೀಗ್ ಸ್ಟೇಜ್: ಜನವರಿ 05ರಿಂದ ಫೆಬ್ರವರಿ 05, 2024
ಎಲೈಟ್ ನಾಕೌಟ್ ಹಂತ: ಫೆಬ್ರವರಿ 23ರಿಂದ ಮಾರ್ಚ್ 14, 2024
ಗುಂಪುಗಳ ವಿವರ
ಎಲೈಟ್ ಗ್ರೂಪ್ 'ಎ': ಸೌರಾಷ್ಟ್ರ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ವಿದರ್ಭ, ಹರ್ಯಾಣ, ಸರ್ವೀಸಸ್, ಮಣಿಪುರ
ಎಲೈಟ್ ಗ್ರೂಪ್ 'ಬಿ': ಬೆಂಗಾಲ್, ಆಂಧ್ರ, ಮುಂಬೈ, ಕೇರಳ, ಚತ್ತೀಸ್‌ಘಡ, ಉತ್ತರಪ್ರದೇಶ, ಅಸ್ಸಾಂ, ಬಿಹಾರ.
ಎಲೈಟ್ ಗ್ರೂಪ್ 'ಸಿ': ಕರ್ನಾಟಕ, ಪಂಜಾಬ್, ರೈಲ್ವೇಸ್, ತಮಿಳುನಾಡು, ಗೋವಾ, ಗುಜರಾತ್, ತ್ರಿಪುರ, ಚಂಢೀಗಢ
ಎಲೈಟ್ ಗ್ರೂಪ್ 'ಡಿ': ಮಧ್ಯಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಬರೋಡ, ಡೆಲ್ಲಿ, ಒಡಿಶಾ, ಪಾಂಡಿಚೆರಿ, ಜಮ್ಮು ಮತ್ತು ಕಾಶ್ಮೀರ.
ಪ್ಲೇಟ್ ಗ್ರೂಪ್: ನಾಗಾಲ್ಯಾಂಡ್, ಹೈದರಾಬಾದ್, ಮೇಘಾಲಯ, ಸಿಕ್ಕಿಂ, ಮಿಝೋರಾಂ, ಅರುಣಾಚಲ ಪ್ರದೇಶ.
ಇನ್ನು ಇದೇ ವೇಳೆ ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಹಾಗೂ ವಿಜಯ್ ಹಜಾರೆ ಏಕದಿನ ಟೂರ್ನಿಗೂ ವೇಳಾಪಟ್ಟಿ ಪ್ರಕಟವಾಗಿದೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಲೀಗ್ ಹಂತದ ಪಂದ್ಯಗಳು ಅಕ್ಟೋಬರ್ 16ರಿಂದ 27ರ ವರೆಗೆ ನಡೆಯಲಿದೆ. ಈ ಪಂದ್ಯಾವಳಿಯ ಲೀಗ್ ಹಂತದ ಪಂದ್ಯಗಳು ಮೊಹಾಲಿ, ಮುಂಬೈ, ರಾಂಚಿ, ಜೈಪುರ ಹಾಗೂ ಡೆಹ್ರಾಡೂನ್‌ನಲ್ಲಿ ನಡೆಯಲಿವೆ. ಇನ್ನು ನಾಕೌಟ್ ಪಂದ್ಯಗಳಿಗೆ ಮೊಹಾಲಿ ಆತಿಥ್ಯ ವಹಿಸಲಿದ್ದು, ಅಕ್ಟೋಬರ್ 31ರಿಂದ ಆರಂಭವಾಗಲಿರುವ ನಾಕೌಟ್ ಪಂದ್ಯಗಳು ನವೆಂಬರ್ 06ರಂದು ಫೈನಲ್ ಪಂದ್ಯ ಜರುಗಲಿದೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕ ತಂಡವು 'ಇ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಡೆಲ್ಲಿ, ತಮಿಳುನಾಡು, ಉತ್ತರಪ್ರದೇಶ, ಮಧ್ಯಪ್ರದೇಶ, ತ್ರಿಪುರ ಹಾಗೂ ನಾಗಾಲ್ಯಾಂಡ್ ತಂಡಗಳು ಸ್ಥಾನ ಪಡೆದಿವೆ.
ಇನ್ನು ವಿಜಯ್ ಹಜಾರೆ ಏಕದಿನ ಸರಣಿಯ ಲೀಗ್ ಹಂತದ ಪಂದ್ಯಗಳು ನವೆಂಬರ್ 23ರಿಂದ ಡಿಸೆಂಬರ್ 05ರ ವರೆಗೆ ನಡೆಯಲಿದ್ದು, ಲೀಗ್ ಹಂತದ ಪಂದ್ಯಗಳು ತಿರುವನಂತಪುರಂ, ಬೆಂಗಳೂರು, ಜೈಪುರ, ಚಂಢೀಗಢ ಹಾಗೂ ಅಹಮದಾಬಾದ್‌ನಲ್ಲಿ ನಡೆಯಲಿವೆ. ಇನ್ನು ನಾಕೌಟ್ ಪಂದ್ಯಗಳು ಡಿಸೆಂಬರ್ 09ರಿಂದ 16ರವರೆಗೆ ರಾಜ್‌ಕೋಟ್‌ನಲ್ಲಿ ನಡೆಯಲಿವೆ. ಇನ್ನು ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ತಂಡವು 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಇದೇ ಗುಂಪಿನಲ್ಲಿ ಜಮ್ಮು ಮತ್ತು ಕಾಶ್ಮೀರ, ಚಂಢೀಗಢ, ಹರ್ಯಾಣ, ಡೆಲ್ಲಿ, ಉತ್ತರಖಂಡ, ಬಿಹಾರ, ಮಿಝೋರಾಂ ತಂಡಗಳು ಸ್ಥಾನ ಪಡೆದಿವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.