
ನವದೆಹಲಿ: ಪಹಲ್ಗಾಮ್‌ನಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೈನ್ಯ ಬುಧವಾರ ಮಧ್ಯರಾತ್ರಿ ಪಾಕಿಸ್ತಾನ ಭಯೋತ್ಪಾದನಾ ನೆಲೆಗಳ ಮೇಲೆ ನಡೆಸಿದ ದಾಳಿಗೆ ತಾರಾ ಕ್ರೀಡಾಪಟುಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಉಗ್ರವಾದಕ್ಕೆ ವಿಶ್ವದಲ್ಲಿ ಜಾಗವಿಲ್ಲ ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಇನ್ನು ಇವೆಲ್ಲದರ ನಡುವೆ ನೆರೆಯ ಪಾಕಿಸ್ತಾನಕ್ಕೆ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್, ಮುಟ್ಟಿನೋಡಿಕೊಳ್ಳುವಂತ ಉತ್ತರ ನೀಡಿದ್ದಾರೆ.
ಧವನ್ ತಮ್ಮ X ಪೋಸ್ಟ್‌ನಲ್ಲಿ ಕಾರ್ಯಾಚರಣೆಯ ಯಶಸ್ಸನ್ನು ಎತ್ತಿ ತೋರಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು "ಹೇಳಿದ್ದನ್ನ ಮಾಡಿ ತೋರಿಸಿದೆವು. ನ್ಯಾಯ ಸಿಕ್ಕಿದೆ. ಭಾರತ ಮಾತಾ ಕಿ ಜೈ!" ಎಂದು ಬರೆದಿದ್ದಾರೆ. ಧವನ್ ಅವರ ಪೋಸ್ಟ್ ಹಲವರ ಮನಸ್ಸನ್ನು ಮುಟ್ಟಿದೆ, ಇದು ರಾಷ್ಟ್ರದ ಹೆಮ್ಮೆ ಮತ್ತು ಐಕ್ಯತೆಯ ಭಾವನೆಯನ್ನು ಪ್ರತಿಬಿಂಬಿಸುತ್ತದೆ.
ಶಿಖರ್ ಧವನ್ ಅವರ ಇನ್ನೊಂದು ಪೋಸ್ಟ್‌ನಲ್ಲಿ ಪಾಕಿಸ್ತಾನಿಯರನ್ನು ಇನ್ನಿಲ್ಲದಂತೆ ಕಾಲೆಳೆದಿರುವ ಅವರು, ಪಕ್ಕದ ಮೆನೆಯವರೇ ಚಾಯ್ ಹೇಗಿತ್ತು? ಎಂದು ಅಣಕಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪಾಕಿಸ್ತಾನಿಯರು ಈ ಮೊದಲು ವಿಂಗ್ ಕಮಾಂಡರ್ ಅಭಿನಂದನ್‌ಗೆ ಚಾಯ್ ಕೊಟ್ಟು ಕಳಿಸಿಕೊಟ್ಟಿದ್ದೆವು. ಆದರೆ ಈ ಸಲ ಹಾಗೆ ಮಾಡುವುದಿಲ್ಲ, ಸರಿಯಾದ ಉತ್ತರ ಕೊಡುತ್ತೇವೆ ಅಂದಿದ್ದರು. ಅದಕ್ಕೆ ಧವನ್ ಈ ರೀತಿ ಉತ್ತರ ಕೊಟ್ಟಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್, 'ಏಕತೆಯಲ್ಲಿ ನಿರ್ಭೀತ. ಶಕ್ತಿಯಲ್ಲಿ ಅಪರಿಮಿತ. ಇಲ್ಲಿನ ಜನರೇ ಭಾರತದ ಶಕ್ತಿ. ವಿಶ್ವದಲ್ಲಿ ಉಗ್ರವಾದಕ್ಕೆ ಜಾಗವಿಲ್ಲ. ನಾವು ಒಗ್ಗಟ್ಟಾಗಿದ್ದೇವೆ. ಜೈ ಎಂದು ಬರೆದುಕೊಂಡಿದ್ದಾರೆ.
ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಆಪರೇಷನ್ ಸಿಂಧೂರ್‌ಗಾಗಿ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ. "ಜೈ ಹಿಂದ್. ಪಹಲ್ಗಾಮ್‌ನಲ್ಲಿ ನಮ್ಮ ಅಮಾಯಕ ಸಹೋದರರ ಕ್ರೂರ ಹತ್ಯೆಗೆ ಭಾರತದ ಪ್ರತಿಕ್ರಿಯೆ #ಆಪರೇಷನ್ ಸಿಂಧೂರ್," ಎಂದು ಹರ್ಭಜನ್ ಸಿಂಗ್ X ನಲ್ಲಿ ಬರೆದಿದ್ದಾರೆ.
'ಯಾರಾದರೂ ನಿಮ್ಮತ್ತ ಕಲ್ಲು ಎಸೆದರೆ ನೀವು ಹೂವು ನೀಡಿ ಪ್ರತಿಕ್ರಿಯಿಸಿ. ಆದರೆ ಜೊತೆಗೆ ಕುಂಡಗಳನ್ನೂ ಎಸೆಯಬೇಕು' ಎಂದು ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹೇಳಿದ್ದಾರೆ. ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ, ಇರ್ಫಾನ್ ಪಠಾಣ್, ತಾರಾ ವೇಗದ ಬೌಲ ಮೊಹಮ್ಮದ್ ಶಮಿ, ರಿಂಕು ಸಿಂಗ್, ಒಲಿಂಪಿಕ್ಸ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್, ಬಾಕ್ಸರ್ ವಿಜೇಂದರ್ ಸಿಂಗ್, ನಿಖಾತ್ ಜರೀನ್, ಭಾರತ ಒಲಿಂಪಿಕ್ ಸಂಸ್ಥೆ ಮುಖ್ಯಸ್ಥೆ ಪಿ.ಟಿ.ಉಷಾ, ಮಾಜಿ ಕುಸ್ತಿಪಟು, ಶಾಸಕಿ ವಿನೇಶ್ ಫೋಗಟ್ ಕೂಡಾ ಪಾಕ್ ವಿರುದ್ಧದ ದಾಳಿಗೆ ಭಾರತೀಯ ಸೈನ್ಯವನ್ನು ಕೊಂಡಾಡಿದ್ದಾರೆ.
ವಿಶೇಷ ನಿಖರ ಮದ್ದುಗುಂಡುಗಳನ್ನು ಬಳಸಿದ ಆಪರೇಷನ್ ಸಿಂಧೂರ್, ಸಂಘಟಿತ ದಾಳಿಯಲ್ಲಿ ಒಂಬತ್ತು ಭಯೋತ್ಪಾದಕ ಗುರಿಗಳನ್ನು ನಾಶಪಡಿಸಿತು. ಭಾರತೀಯ ಪಡೆಗಳು ಪಾಕಿಸ್ತಾನದ ನಾಲ್ಕು ಸ್ಥಳಗಳನ್ನು ಗುರಿಯಾಗಿಸಿಕೊಂಡವು, ಬಹಾವಾಲ್ಪುರ್, ಮುರಿದ್ಕೆ ಮತ್ತು ಸಿಯಾಲ್ಕೋಟ್ ಸೇರಿದಂತೆ, ಪಾಕ್ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಗುರಿಗಳನ್ನು ಯಶಸ್ವಿಯಾಗಿ ಹೊಡೆದವು. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದವು. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಪ್ರಾಯೋಜಿಸುವಲ್ಲಿ ಭಾಗಿಯಾಗಿರುವ ಜೈಷ್-ಎ-ಮೊಹಮ್ಮದ್ (JeM) ಮತ್ತು ಲಷ್ಕರ್-ಎ-ತೊಯ್ಬಾ (LeT) ನಾಯಕರನ್ನು ಗುರಿಯಾಗಿಸಲು ಭಾರತೀಯ ಪಡೆಗಳು ಸ್ಥಳಗಳನ್ನು ಆಯ್ಕೆ ಮಾಡಿಕೊಂಡವು.
1971 ರಿಂದ ಪಾಕಿಸ್ತಾನದ ನಿರ್ವಿವಾದ ಪ್ರದೇಶದೊಳಗೆ ಭಾರತದ ಅತ್ಯಂತ ಆಳವಾದ ದಾಳಿ ಇದಾಗಿದೆ. ಐವತ್ತು ವರ್ಷಗಳಲ್ಲಿ ಪಾಕಿಸ್ತಾನದ ಒಳಗೆ ನಡೆದ ಭಾರತದ ಅತಿ ದೊಡ್ಡ ಮಿಲಿಟರಿ ಕಾರ್ಯಾಚರಣೆ ಇದಾಗಿದೆ.
ಐಪಿಎಲ್‌ಗೆ ಬಾಂಬ್ ಬೆದರಿಕೆ
ಅಹಮದಾಬಾದ್: ಐಪಿಎಲ್ ನಡುವೆಯೇ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಹಾಗೂ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣಕ್ಕೆ ಬಾಂಬ್ ಬೆದರಿಕೆ ಬಂದಿದೆ.
‘ನಿಮ್ಮ ಕ್ರೀಡಾಂಗಣವನ್ನು ಸ್ಫೋಟಿಸುತ್ತೇವೆ’ ಎಂದು ಪಾಕಿಸ್ತಾನ್ ಜೆಕೆ ಹೆಸರಲ್ಲಿ ಮಂಗಳವಾರ ಗುಜರಾತ್ ಕ್ರಿಕೆಟ್ ಸಂಸ್ಥೆಗೆ ಇ-ಮೇಲ್ ಸಂದೇಶ ರವಾನಿಸಲಾಗಿದೆ. ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕ್ರೀಡಾಂಗಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಕ್ರೀಡಾಂಗಣದಲ್ಲಿ ಮೇ 14 ಹಾಗೂ 18ರಂದು 2 ಪಂದ್ಯಗಳು ನಡೆಯಬೇಕಿದೆ. ಇನ್ನು, ಬುಧವಾರದ ಕೋಲ್ಕತಾ-ಚೆನ್ನೈ ಪಂದ್ಯದ ವೇಳೆ ಈಡನ್ ಗಾರ್ಡನ್ಸ್ ಮೈದಾನಕ್ಕೂ ಅಪರಿಚಿತ ಹೆಸರಿನಿಂದ ಬೆದರಿಕೆ ಬಂದಿದ್ದಾಗಿ ವರದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.