
ಕೊಲಂಬೊ: ಮಹಿಳೆಯರ ಏಕದಿನ ತ್ರಿಕೋನ ಸರಣಿಯಲ್ಲಿ ಭಾರತ ತಂಡ 3ನೇ ಗೆಲುವಿನೊಂದಿಗೆ ಫೈನಲ್‌ಗೆ ಲಗ್ಗೆ ಇಟ್ಟಿದೆ. ಬುಧವಾರ ಲೀಗ್ ಹಂತದ ಕೊನೆ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಂಡಕ್ಕೆ 23 ರನ್ ಗೆಲುವು ಲಭಿಸಿತು. ಮೊದಲು ಬ್ಯಾಟ್ ಮಾಡಿದ ಭಾರತ 9 ವಿಕೆಟ್ ಗೆ 337 ರನ್ ಕಲೆಹಾಕಿತು. ಜೆಮಿಮಾ ರೋಡ್ರಿಗ್ಸ್ ಜೀವನ ಶ್ರೇಷ್ಠ123 (101 ಎಸೆತ) ರನ್ ಸಿಡಿಸಿದರೆ, ದೀಪ್ತಿ ಶರ್ಮಾ (93) ಶತಕದ ಅಂಚಿನಲ್ಲಿ ಎಡವಿದರು. ಸ್ಮೃತಿ ಮಂಧನಾ 51 ರನ್ ಕೊಡುಗೆ ನೀಡಿದರು.
ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ 7 ವಿಕೆಟ್‌ಗೆ 314 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಅನ್ನೇರಿ ಡೆರ್ಕ್ಸನ್ 81, ನಾಯಕಿ ಟ್ರಯೋನ್ 67 ರನ್ ಸಿಡಿಸಿದರೂ ತಂಡಕ್ಕೆ ಗೆಲುವು ಸಿಗಲಿಲ್ಲ. ಅಮನ್‌ಜೋತ್ 3 ವಿಕೆಟ್ ಪಡೆದರು. ಆರಂಭಿಕ 2 ಪಂದ್ಯಗಳಲ್ಲಿ ಕ್ರಮವಾಗಿ ಲಂಕಾ, ದ.ಆಫ್ರಿಕಾ ವಿರುದ್ಧ ಗೆದ್ದಿದ್ದ ಭಾರತ, 3ನೇ ಪಂದ್ಯದಲ್ಲಿ ಲಂಕಾ ವಿರುದ್ಧ ಸೋತಿತ್ತು. ಅತ್ತ ಲಂಕಾ ದ.ಆಫ್ರಿಕಾ ವಿರುದ್ಧ ಮೊದಲ ಪಂದ್ಯ ಗೆದ್ದಿದ್ದರಿಂದ ಒಟ್ಟು 2 ಗೆಲುವಿನೊಂದಿಗೆ ಫೈನಲ್ ಗೇರಿದೆ. ಭಾರತ-ಲಂಕಾ ನಡುವಿನ ಫೈನಲ್ ಪಂದ್ಯ ಮೇ 11ರಂದು ನಡೆಯಲಿದೆ.
ವರ್ಷದಲ್ಲಿ ಎರಡನೇ ಶತಕ ಸಿಡಿಸಿದ ಜೆಮಿಮಾ ರೋಡ್ರಿಗಸ್
ಕೊಲಂಬೊ: ಮಹಿಳಾ ತ್ರಿಕೋನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಸಿಡಿಸಿದ ನಂತರ ಭಾರತದ ಜೆಮಿಮಾ ರೋಡ್ರಿಗ್ಸ್ ಗಣ್ಯರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 101 ಎಸೆತಗಳಲ್ಲಿ 123 ರನ್ ಗಳಿಸಿದ ಜೆಮಿಮಾ ಒಂದು ಸಿಕ್ಸರ್ ಮತ್ತು 15 ಬೌಂಡರಿಗಳನ್ನು ಬಾರಿಸಿದರು. 89 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು. ಜೆಮಿಮಾ, ದೀಪ್ತಿ ಶರ್ಮ (93), ಸ್ಮೃತಿ ಮಂದಾನ (51) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ 50 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತು.
ಈ ವರ್ಷ ಜೆಮಿಮಾ ಅವರ ಎರಡನೇ ಏಕದಿನ ಶತಕ ಇದಾಗಿದೆ. ಪ್ರತಿಕಾ ರಾವಲ್ (1), ಹರ್ಲೀನ್ ಡಿಯೋಲ್ (4), ನಾಯಕಿ ಹರ್ಮನ್‌ಪ್ರೀತ್ (28) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಎರಡಕ್ಕೆ 18 ರನ್‌ಗಳಿಂದ ಮೂರಕ್ಕೆ 50 ರನ್‌ಗಳಿಗೆ ಭಾರತ ಕುಸಿದಿತ್ತು. ಜೆಮಿಮಾ ಮತ್ತು ಸ್ಮೃತಿ ಮಂಧನಾ 88 ರನ್‌ಗಳ ಜೊತೆಯಾಟದೊಂದಿಗೆ ಭಾರತದ ಪುನರಾಗಮನಕ್ಕೆ ನೆರವಾದರು. 63 ಎಸೆತಗಳಲ್ಲಿ 51 ರನ್ ಗಳಿಸಿದ ಸ್ಮೃತಿ ಔಟಾದರು.
ಆದರೂ, ಸ್ಕೋರ್‌ಬೋರ್ಡ್ ವೇಗವಾಗಿ ಚಲಿಸುವಂತೆ ಮಾಡಲು ಜೆಮಿಮಾಗೆ ಸಾಧ್ಯವಾಯಿತು. ದೀಪ್ತಿ ಶರ್ಮಾ ಜೊತೆ 122 ರನ್‌ಗಳ ಜೊತೆಯಾಟ ನೀಡಿದರು. ಜೆಮಿಮಾ ಅವರನ್ನು 43ನೇ ಓವರ್‌ನಲ್ಲಿ ಮಸಬಾತಾ ಕ್ಲಾಸ್ ಔಟ್ ಮಾಡಿದರು. ದೀಪ್ತಿ ಮತ್ತು ರಿಚಾ ಘೋಷ್ (12 ಎಸೆತಗಳಲ್ಲಿ 20) ಭಾರತವನ್ನು 50 ಓವರ್‌ಗಳಲ್ಲಿ 337 ರನ್‌ಗಳಿಗೆ ತಲುಪಿಸಿದರು. ಈ ಮೂಲಕ ಮಹಿಳಾ ಏಕದಿನ ಪಂದ್ಯಗಳಲ್ಲಿ ವರ್ಷವೊಂದರಲ್ಲಿ ಭಾರತ ಪರವಾಗಿ ಒಂದಕ್ಕಿಂತ ಹೆಚ್ಚು ಶತಕ ಗಳಿಸಿದ ಏಳನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಜೆಮಿಮಾ ಪಾತ್ರರಾದರು. ಆಟಗಾರ್ತಿಯರ ಪಟ್ಟಿ ಇಂತಿದೆ.
ಸ್ಮೃತಿ ಮಂದಾನ - 10
ಮಿಥಾಲಿ ರಾಜ್ - 7
ಹರ್ಮನ್‌ಪ್ರೀತ್ ಕೌರ್ - 6
ಪೂನಮ್ ರಾವತ್ - 3
ಜಯಾ ಶರ್ಮಾ - 2
ಜೆಮಿಮಾ ರೋಡ್ರಿಗ್ಸ್ - 2
ತಿರುಷಾ ಕಾಮಿನಿ - 2
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.