ಟೆಸ್ಟ್‌, ಏಕದಿನದಲ್ಲಿ ರೋಹಿತ್‌ ಶರ್ಮಾ ನಾಯಕತ್ವ ಅಬಾಧಿತ..!

By Kannadaprabha News  |  First Published Jan 2, 2023, 10:00 AM IST

ಟೆಸ್ಟ್ ಹಾಗೂ ಏಕದಿನ ತಂಡದ ನಾಯಕರಾಗಿ ಮುಂದುವರೆಯಲಿದ್ದಾರೆ ರೋಹಿತ್ ಶರ್ಮಾ
ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಬಿಸಿಸಿಐಗೆ ಯಾವುದೇ ಅಸಮಾಧಾನವಿಲ್ಲ
ಟಿ20 ಮಾದರಿಗೆ ಹಾರ್ದಿಕ್ ಪಾಂಡ್ಯ ನಾಯಕರಾಗುವುದು ಬಹುತೇಕ ಖಚಿತ


ನವದೆಹಲಿ(ಜ.02): ರೋಹಿತ್‌ ಶರ್ಮಾ ಭಾರತ ತಂಡದ ಏಕದಿನ ಹಾಗೂ ಟೆಸ್ಟ್‌ ನಾಯಕರಾಗಿ ಮುಂದುವರಿಯಲಿದ್ದು, ಸದ್ಯಕ್ಕೆ ಯಾವುದೇ ಬದಲಾವಣೆಗಳಿಲ್ಲ. ಅವರ ನಾಯಕತ್ವದ ಬಗ್ಗೆ ಬಿಸಿಸಿಐಗೆ ಯಾವುದೇ ಅಸಮಾಧನವಿಲ್ಲ ಎಂದು ಮೂಲಗಳು ತಿಳಿಸಿರುವುದಾಗಿ ಪ್ರತಿಷ್ಠಿತ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಭಾನುವಾರ ನಡೆದ ಪರಾಮರ್ಶೆ ಸಭೆಯಲ್ಲಿ ಬಿಸಿಸಿಐ ಕಾರ‍್ಯದರ್ಶಿ ಜಯ್‌ ಶಾ ಆಗಲಿ, ಕೋಚ್‌ ರಾಹುಲ್‌ ದ್ರಾವಿಡ್‌ ಆಗಲಿ ರೋಹಿತ್‌ರನ್ನು ಬದಲಿಸುವ ಬಗ್ಗೆ ಪ್ರಸ್ತಾಪ ಮಾಡಲಿಲ್ಲ. ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಪ್ರವೇಶಿಸುವುದು ಹಾಗೂ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡ ಕಟ್ಟುವ ಬಗ್ಗೆಯಷ್ಟೇ ಚರ್ಚೆ ಆಯಿತು. ಈ ಎರಡೂ ಹೊಣೆಯನ್ನು ರೋಹಿತ್‌ ಸಮರ್ಥವಾಗಿ ನಿಭಾಯಿಸಲಿದ್ದಾರೆ ಎನ್ನುವ ವಿಶ್ವಾಸ ಬಿಸಿಸಿಐಗಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು ಎನ್ನಲಾಗಿದೆ.

Tap to resize

Latest Videos

‘ರೋಹಿತ್‌ ಟೆಸ್ಟ್‌ ಹಾಗೂ ಏಕದಿನ ಮಾದರಿಗಳಲ್ಲಿ ಭಾರತ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದು ಅವರನ್ನು ಬದಲಿಸುವ ಬಗ್ಗೆ ಸಭೆಯಲ್ಲಿ ಯಾವುದೇ ಚರ್ಚೆ ನಡೆಯಲಿಲ್ಲ. ಈ ಎರಡೂ ಮಾದರಿಗಳಲ್ಲಿ ಅವರ ನಾಯಕತ್ವದ ದಾಖಲೆಗಳನ್ನು ಗಮನಿಸಿದಾಗ ಅತ್ಯುತ್ತಮ ಎನಿಸದೆ ಇರುವುದಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಲ್ಲಿ ಹೇಳಲಾಗಿದೆ.

ಟಿ20ಗೆ ಹಾರ್ದಿಕ್‌ ಹೊಸ ನಾಯಕರಾಗುವುದು ಖಚಿತ?

ಬಿಸಿಸಿಐ ಅಧಿಕಾರಿಯ ಪ್ರಕಾರ ರೋಹಿತ್‌ರನ್ನು ಟೆಸ್ಟ್‌ ಹಾಗೂ ಏಕದಿನ ನಾಯಕರಾಗಿ ಮುಂದುವರಿಸಲು ಕ್ರಿಕೆಟ್‌ ಮಂಡಳಿಗೆ ಯಾವುದೇ ವಿರೋಧವಿಲ್ಲ. ಆದರೆ ಟಿ20 ತಂಡದ ನಾಯಕತ್ವವನ್ನು ಹಾರ್ದಿಕ್‌ ಪಾಂಡ್ಯಗೆ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದ್ದು, ರೋಹಿತ್‌ಗೆ ತಾವು ಟಿ20 ನಾಯಕತ್ವವನ್ನು ಬಿಟ್ಟುಕೊಡಬೇಕಿದೆ ಎಂದು ಸಭೆಗೂ ಮೊದಲೇ ಸೂಚನೆ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಮುಂದಿನ ವಾರ ನೂತನ ಆಯ್ಕೆ ಸಮಿತಿಯ ಘೋಷಣೆಯಾಗಲಿದ್ದು, ಆ ನಂತರ ಹಾರ್ದಿಕ್‌ರ ನೇಮಕದ ಬಗ್ಗೆ ಬಿಸಿಸಿಐ ಅಧಿಕೃತ ಪ್ರಕಟಣೆ ನೀಡಲಿದೆ ಎನ್ನಲಾಗಿದೆ.

ಟೀಂ ಇಂಡಿಯಾಗೆ ಆಯ್ಕೆಗೆ ಯೋ-ಯೋ ಟೆಸ್ಟ್‌ ಕಡ್ಡಾಯ..!

2023ರಲ್ಲಿ ಮಹತ್ವದ ಸರಣಿಗಳನ್ನಾಡಲಿರುವ ಟೀಂ ಇಂಡಿಯಾ

ಭಾರತ ಕ್ರಿಕೆಟ್‌ ತಂಡ 2023ರಲ್ಲೂ ಮಹತ್ವದ ಸರಣಿಗಳನ್ನು ಆಡಲಿದೆ. ಜನವರಿ ಮೊದಲ ವಾರದಲ್ಲೇ ತವರಿನ ಸರಣಿಗಳು ಆರಂಭಗೊಳ್ಳಲಿದ್ದು, ಫೆಬ್ರವರಿ-ಮಾರ್ಚ್‌ನಲ್ಲಿ ಆಸ್ಪ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್‌ ಸರಣಿ ಆಡಲಿದೆ. ಈ ಸರಣಿಯನ್ನು ಗೆದ್ದು ಸತತ 2ನೇ ಬಾರಿಗೆ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೇರಲು ಟೀಂ ಇಂಡಿಯಾ ಕಾತರಿಸುತ್ತಿದೆ. ಜೂನ್‌ನಲ್ಲಿ ಟೆಸ್ಟ್‌ ವಿಶ್ವಕಪ್‌ ಫೈನಲ್‌ ನಡೆಯಲಿದೆ. ಇದೇ ವೇಳೆ ಅಕ್ಟೋಬರ್‌-ನವೆಂಬರ್‌ನಲ್ಲಿ ತವರಿನಲ್ಲಿ ಏಕದಿನ ವಿಶ್ವಕಪ್‌ ಗೆಲ್ಲುವ ತವಕವೂ ಭಾರತ ತಂಡಕ್ಕಿದೆ. 2023ರಲ್ಲಿ ಭಾರತಕ್ಕೆ 8 ಟೆಸ್ಟ್‌, 18 ಏಕದಿನ(ಏಷ್ಯಾಕಪ್‌, ವಿಶ್ವಕಪ್‌ ಹೊರತುಪಡಿಸಿ), 17 ಟಿ20 ಪಂದ್ಯಗಳನ್ನು ಆಡಲಿದೆ.

ಲಂಕಾ ವಿರುದ್ಧ ಟಿ20: ಇಂದು ಭಾರತ ಅಭ್ಯಾಸ

ಮುಂಬೈ: ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20 ಸರಣಿ ಮಂಗಳವಾರ ಆರಂಭಗೊಳ್ಳಲಿದ್ದು, ಭಾರತ ತಂಡ ಭಾನುವಾರ ಮುಂಬೈ ತಲುಪಿತು. ತಂಡದ ಕೆಲ ಆಟಗಾರರು ಭಾನುವಾರ ಸಂಜೆ ಕೆಲ ಹೊತ್ತು ಅಭ್ಯಾಸ ನಡೆಸಿದರು. ತಂಡವು ಸೋಮವಾರ ವಾಂಖೇಡೆ ಕ್ರೀಡಾಂಗಣದಲ್ಲಿ ನೆಟ್ಸ್‌ ಅಭ್ಯಾಸ ನಡೆಸಲಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. ಶನಿವಾರ ರಾತ್ರಿ ಮುಂಬೈಗೆ ಬಂದಿಳಿದ ಶ್ರೀಲಂಕಾ ತಂಡ ಭಾನುವಾರ ಮೊದಲ ಅಭ್ಯಾಸ ನಡೆಸಿತು.

click me!