2023 ಏಕದಿನ ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ 20 ಸಂಭಾವ್ಯ ಆಟಗಾರರ ಹೆಸರು ಫೈನಲ್‌..!

By Naveen Kodase  |  First Published Jan 1, 2023, 5:52 PM IST

ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಈಗಿನಿಂದಲೇ ಸಿದ್ದತೆ
ಏಕದಿನ ವಿಶ್ವಕಪ್ ಆಡಬಲ್ಲ ಸಂಭಾವ್ಯ 20 ಆಟಗಾರರ ಪಟ್ಟಿ ಮಾಡಿದ ಬಿಸಿಸಿಐ
ಆಟಗಾರರ ವರ್ಕ್‌ಲೋಡ್ ಮ್ಯಾನೇಜ್ ಮಾಡುವ ಜವಾಬ್ದಾರಿ ಎನ್‌ಸಿಎ ಹೆಗಲಿಗೆ


ಮುಂಬೈ(ಜ.01): ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ತವರಿನಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಈಗಾಗಲೇ ಸಿದ್ದತೆ ಆರಂಭಿಸಿದ್ದು, ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಿರುವ ಸಂಭಾವ್ಯ 20 ಆಟಗಾರರ ಹೆಸರನ್ನು ಫೈನಲ್‌ ಮಾಡಲಾಗಿದೆ ಎಂದು ವರದಿಯಾಗಿದೆ.

ಇನ್ನುಳಿದಂತೆ ಗಾಯಾಳು ಸಮಸ್ಯೆಯಿಂದ ಪಾರಾಗುವ ಉದ್ದೇಶದಿಂದ ಪ್ರಮುಖ ಆಟಗಾರರು ಮುಂಬರುವ ಇಂಡಿಯನ್‌ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಹೊರಗುಳಿಯುವಂತೆ ಬಿಸಿಸಿಐ ಸೂಚಿಸುವ ಸಾಧ್ಯತೆಯಿದ್ದು, ಐಸಿಸಿ ಟೂರ್ನಿಯ ಮೇಲೆ ಗಮನ ಕೊಡಬೇಕೆಂದು ತಿಳಿಸಿದೆ. ಇಂದು ಬಿಸಿಸಿಐ ತಂಡದ ಪ್ರದರ್ಶನದ ಪುನರಾವಲೋಕನ ಸಭೆಯಲ್ಲಿ ಕೆಲವೊಂದು ಮಹತ್ತರ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಈ ಪುನರಾವಲೋಕನ ಸಭೆಯಲ್ಲಿ ಟೀಂ ಇಂಡಿಯಾ ಹೆಡ್‌ ಕೋಚ್ ರಾಹುಲ್ ದ್ರಾವಿಡ್, ನಾಯಕ ರೋಹಿತ್ ಶರ್ಮಾ, ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ವಿವಿಎಸ್ ಲಕ್ಷ್ಮಣ್‌, ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಹಾಗೂ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

Tap to resize

Latest Videos

2023ರಲ್ಲಿ ಭಾರತ ಕ್ರಿಕೆಟ್‌ ತಂಡವು 35 ಏಕದಿನ ಪಂದ್ಯಗಳನ್ನಾಡಲಿದೆ. ಇದು ಲಂಕಾ ವಿರುದ್ದ ತವರಿನಲ್ಲಿ 3 ಪಂದ್ಯಗಳ ಏಕದಿನ ಸರಣಿಯಿಂದಲೇ ಏಕದಿನ ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭವಾಗಲಿದೆ. ಆಟಗಾರರ ವರ್ಕ್‌ಲೋಡ್‌ ಗಮನದಲ್ಲಿಟ್ಟುಕೊಂಡು, ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯು 10 ಐಪಿಎಲ್‌ ಫ್ರಾಂಚೈಸಿಗಳ ಜತೆ ಚರ್ಚಿಸಿ ಆಟಗಾರರಿಗೆ ವಿಶ್ರಾಂತಿ ನೀಡುವ ಬಗ್ಗೆ, ಫಿಟ್ನೆಸ್ ಕಾಪಾಡಿಕೊಳ್ಳುವುದರ ಕುರಿತಂತೆ ಸಮಾಲೋಚನೆ ನಡೆಸಲು ತೀರ್ಮಾನಿಸಲಾಗಿದೆ.

ಪೃಥ್ವಿ ಶಾರನ್ನು ಸರಿಯಾದ ಟ್ರ್ಯಾಕ್‌ಗೆ ತನ್ನಿ; ಕೋಚ್ ದ್ರಾವಿಡ್‌ಗೆ ಗೌತಮ್ 'ಗಂಭೀರ' ಸಲಹೆ..!

ಇನ್ನು ಈ ಪುನರಾವಲೋಕನ ಸಭೆಯಲ್ಲಿ 2022ರಲ್ಲಿ ಟೀಂ ಇಂಡಿಯಾ ಏಷ್ಯಾಕಪ್ ಹಾಗೂ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ್ದರ ಬಗ್ಗೆಯೂ ಚರ್ಚೆಯನ್ನು ನಡೆಸಲಾಯಿತು ಎಂದು ವರದಿಯಾಗಿದೆ.

ಇನ್ನು ಈ ಸಭೆಯ ಬಳಿಕ ಬಿಸಿಸಿಐ ಮೂರು ಮಹತ್ವದ ತೀರ್ಮಾನಗಳನ್ನು ತೆಗೆದುಕೊಂಡಿದೆ:

1. ರಾಷ್ಟ್ರೀಯ ತಂಡಕ್ಕೆ ನೇಮಕ ಮಾಡುವಾಗ, ದೇಶಿ ಕ್ರಿಕೆಟ್‌ ಟೂರ್ನಿಯಲ್ಲಿನ ಪ್ರದರ್ಶನವನ್ನು ಮಾನದಂಡವಾಗಿಟ್ಟುಕೊಂಡೇ, ರಾಷ್ಟ್ರೀಯ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಬೇಕು ಎಂದು ತೀರ್ಮಾನಿಸಲಾಗಿದೆ.

2. ಇನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವ ಮುನ್ನ ಯೋ-ಯೋ ಟೆಸ್ಟ್‌ ಹಾಗೂ ಡೆಕ್ಸಾ ಕಡ್ಡಾಯಗೊಳಿಸಲಾಗಿದೆ. ಇದು ಯುವ ಹಾಗೂ ಎಲ್ಲಾ ಆಟಗಾರರಿಗೂ ಅನ್ವಯವಾಗಲಿದೆ.

3. 2023ರ ಐಸಿಸಿ ಟೂರ್ನಿಗಳನ್ನು ಗಮನದಲ್ಲಿಟ್ಟುಕೊಂಡು, ಆಟಗಾರರ ವರ್ಕ್‌ಲೋಡ್‌ ನಿರ್ವಹಣೆ ಮಾಡಲು ನ್ಯಾಷನಲ್ ಕ್ರಿಕೆಟ್‌ ಅಕಾಡೆಮಿಯು, 10 ಐಪಿಎಲ್ ಫ್ರಾಂಚೈಸಿಗಳ ಜತೆ ಸಂಪರ್ಕದಲ್ಲಿದ್ದು, ಕೆಲ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುವ ಕುರಿತಂತೆ ಸಲಹೆ-ಸೂಚನೆ ನೀಡಲು ಅವಕಾಶ ಕಲ್ಪಿಸಲಾಗಿದೆ.

click me!