
ಕೋಲ್ಕತಾ(ಜೂ.01): ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾಡಿದ ಒಂದು ಟ್ವೀಟ್ ಹಲವು ಗೊಂದಲಗಳಿಗೆ ಕಾರಣಾಗಿತ್ತು. ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿದ್ದೇನೆ ಎಂಬ ಟ್ವೀಟ್‌ನಿಂದ ಗಂಗೂಲಿ ರಾಜೀನಾಮೆ,ಗಂಗೂಲಿ ರಾಜಕೀಯಕ್ಕೆ ಅನ್ನೋ ಚರ್ಚೆಗಳು ಹೆಚ್ಚಾಯಿತು. ಇದರ ಬೆನ್ನಲ್ಲೇ ಖುದ್ದು ಸೌರವ್ ಗಂಗೂಲಿ ಸ್ಪಷ್ಟನೆ ನೀಡಿದ್ದಾರೆ. ನನ್ನ ಹೊಸ ಉದ್ಯಮ ಎಜುಕೇಶನಲ್ ಆ್ಯಪ್ ಎಂದಿದ್ದಾರೆ.
ಸದ್ಯ ಶಿಕ್ಷಣ ಕುರಿತು ಹಲವು ಆ್ಯಪ್‌ಗಳಿವೆ. ಈ ಆ್ಯಪ್‌ಗಳಿಗೆ ಪ್ರತಿಸ್ಪರ್ಧಿಯಾಗಿ ಭಾರತದಲ್ಲಿ ಹೊಸ ಶಿಕ್ಷಣ ಆ್ಯಪ್ ಬಿಡುಗಡೆ ಮಾಡಲು ಗಂಗೂಲಿ ಮುಂದಾಗಿದ್ದಾರೆ. ಇದರ ಪ್ರಚಾರಕ್ಕಾಗಿ ಗಂಗೂಲಿ ಮಾರ್ಮಿಕವಾಗಿ ಟ್ವೀಟ್ ಮಾಡಿದ್ದರು. ಇದು ಹಲವು ಗೊಂದಲಕ್ಕೆ ಕಾರಣವಾಗಿತ್ತು. ಇದೀಗ ಗಂಗೂಲಿ ಉತ್ತರ ನೀಡಿ ಎಲ್ಲಾ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ರಾಜೀನಾಮೆ ವದಂತಿ, ಸ್ಪಷ್ಟನೆ ನೀಡಿದ ಜಯ್ ಶಾ!
‘ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಬೇಕು ಎಂದು ಹೊಸ ಯೋಜನೆ ರೂಪಿಸಿದ್ದೇನೆ’ ಎಂದು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಬುಧವಾರ ಟ್ವೀಟ್ ಮಾಡಿದ್ದರು. ಇದು ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ಸೇರುವ ಸೂಚನೆ ನೀಡಿದ್ದಾರೆ ಎಂಬ ವದಂತಿ ಹಬ್ಬಿತ್ತು.
ಈ ಮೂಲಕ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ರಾಜಕೀಯಕ್ಕೆ ಧುಮುಕುವ ಸಾಧ್ಯತೆಗಳಿವೆ ಹಾಗೂ ರಾಜ್ಯಸಭೆಗೆ ಬಿಜೆಪಿಯಿಂದ ನಾಮಾಂಕಿತರಾಗಲಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬಂದಿತ್ತು, ಇದು ರಾಜಕೀಯ ಹಾಗೂ ಕ್ರಿಕೆಟ್ ಜಗತ್ತಿನಲ್ಲಿ ಕುತೂಹಲ ಮೂಡಿಸಿ್ತು.
‘ನನ್ನ ಕ್ರಿಕೆಟ್ ವೃತ್ತಿಬದುಕನ್ನು ಆರಂಭಿಸಿ 2022ಕ್ಕೆ 30 ವರ್ಷಗಳಾಗುತ್ತಿವೆ. ಅಲ್ಲಿಂದ ಇಲ್ಲಿಯವರೆಗೆ ಕ್ರಿಕೆಟ್ ನನಗೆ ಸಾಕಷ್ಟನ್ನು ನೀಡಿದೆ. ಅದರಲ್ಲೂ ಮುಖ್ಯವಾಗಿ ನನಗೆ ನಿಮ್ಮೆಲ್ಲರ ಬೆಂಬಲವನ್ನು ನೀಡಿದೆ. ಈ ಪ್ರಯಾಣದಲ್ಲಿ ಇಷ್ಟುಎತ್ತರಕ್ಕೇರಲು ಜೊತೆಗಿದ್ದ ಪ್ರತಿಯೊಬ್ಬರಿಗೂ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ದಿನ ನಾನು ಹೆಚ್ಚು ಜನರಿಗೆ ಸಹಾಯವಾಗುವಂತಹುದ್ದನ್ನು ಆರಂಭಿಸಲು ಯೋಜಿಸಿದ್ದೇನೆ. ನನ್ನ ಜೀವನದ ಹೊಸ ಅಧ್ಯಾಯಕ್ಕೂ ಇದೇ ರೀತಿ ಬೆಂಬಲ ನೀಡುತ್ತೀರಿ ಎಂದು ಭಾವಿಸುತ್ತೇನೆ’ ಎಂದು ಅವರು ಟ್ವೀಟ್ ಮಾಡಿದ್ದರು.
ಗಂಗೂಲಿ ಯಶಸ್ವಿ ರಾಜಕಾರಣಿ ಆಗಬಲ್ಲರು: ಪತ್ನಿ ಡೋನಾ
ಇತ್ತೀಚೆಗೆ ಸೌರವ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೋಲ್ಕತಾದ ತಮ್ಮ ನಿವಾಸದಲ್ಲಿ ಔತಣ ನೀಡಿದ್ದರು. ಆಗಲೇ ಸೌರವ್ ಬಿಜೆಪಿ ಸೇರುವ ಪುಕಾರು ಎದ್ದಿದ್ದವು.
ಬಿಸಿಸಿಐಗೆ ರಾಜೀನಾಮೆ ನೀಡಿಲ್ಲ:
ಈ ನಡುವೆ, ಸೌರವ್ ಬಿಸಿಸಿಐ ಅಧ್ಯಕ್ಷ ಗಾದಿಗೆ ರಾಜೀನಾಮೆ ನೀಡಿದ್ದಾರೆ ಎಂದು ಅವರ ಟ್ವೀಟರ್ ಬರಹದ ಬಳಿಕ ಪುಕಾರು ಹಬ್ಬಿದ್ದವು. ಆದರೆ ಈ ಸುದ್ದಿಗಳು ಸುಳ್ಳು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸ್ಪಷ್ಟಪಡಿಸಿದ್ದಾರೆ.ಆದರೆ ಸೌರವ್ ಬಿಸಿಸಿಐ ಅಧ್ಯಕ್ಷಗಿರಿ ಇನ್ನೊಂದು ತಿಂಗಳಲ್ಲಿ ಮುಗಿಯಲಿದೆ ಎಂಬುದು ಇಲ್ಲಿ ಗಮನಾರ್ಹ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.