ಬೌಂಡರಿ ಕೌಂಟ್ ನಿಯಮಕ್ಕೆ ಫುಲ್‌ ಸ್ಟಾಪ್‌ಯಿಟ್ಟ ICC

By Web DeskFirst Published Oct 15, 2019, 1:21 PM IST
Highlights

2019ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಳಸಲಾಗಿದ್ದ ಬೌಂಡರಿ ಕೌಂಟ್ ನಿಯಮಕ್ಕೆ ತಿಲಾಂಜಲಿ ಹೇಳಲು ಕೊನೆಗೂ ಐಸಿಸಿ ತೀರ್ಮಾನಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ದುಬೈ(ಅ.15): ಐಸಿಸಿ ಟೂರ್ನಿ​ಗಳ ಸೆಮಿ​ಫೈ​ನಲ್‌ ಇಲ್ಲವೇ ಫೈನಲ್‌ ಪಂದ್ಯ​ಗಳು ಟೈ ಆದರೆ ಇನ್ಮುಂದೆ ಬೌಂಡರಿ ನಿಯ​ಮ​ವನ್ನು ಬಳ​ಸ​ಲಾ​ಗು​ವು​ದಿಲ್ಲ ಎಂದು ಐಸಿಸಿ ತಿಳಿ​ಸಿದೆ. ಈ ಮೂಲಕ 2019ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಳಕೆಯಾದ ನಿಯಮ ಇನ್ನು ಮುಂದೆ ಇತಿಹಾಸ ಸೇರಲಿದೆ.

ಪಂದ್ಯ ಗೆಲ್ಲುವವರೆಗೂ ಸೂಪರ್ ಓವರ್!

ಈ ಮೊದಲಿನ ಐಸಿಸಿ ನಿಯಮದಂತೆ ಸೆಮಿಫೈನಲ್ ಹಾಗೂ ಫೈನಲ್'ನಲ್ಲಿ ಪಂದ್ಯ ಟೈ ಆದರೆ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಗುತ್ತಿತ್ತು. ಒಂದು ವೇಳೆ ಸೂಪರ್ ಓವರ್ ಕೂಡಾ ಟೈ ಆದರೆ, ಪಂದ್ಯದಲ್ಲಿ ಅತಿಹೆಚ್ಚು ಬೌಂಡರಿ ಬಾರಿಸಿದ ತಂಡವನ್ನು ವಿಜೇತ ತಂಡವೆಂದು ಘೋಷಿಸಲಾಗುತ್ತಿತ್ತು. ಆದರೆ ಇದೀಗ ಸೂಪರ್‌ ಓವರ್‌ ನಿಯ​ಮ​ ಬದ​ಲಾ​ಗಿದ್ದು, ಫಲಿ​ತಾಂಶ ಬರುವ ವರೆಗೂ ಸೂಪರ್‌ ಓವರ್‌ ಮುಂದು​ವ​ರಿ​ಸುವು​ದಾಗಿ ಸೋಮ​ವಾರ ಐಸಿಸಿ ಘೋಷಿ​ಸಿದೆ.

ಸೂಪರ್ ಓವರ್ ನಿಯಮಗಳೇನು..? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

2019ರ ಜೂನ್ 14ರಂದು ಲಾರ್ಡ್ಸ್ ಮೈದಾನದಲ್ಲಿ ವಿಶ್ವಕಪ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ 241 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೂಡಾ 241 ರನ್ ಗಳಿಸಿತು. ಹೀಗಾಗಿ ಸೂಪರ್ ಓವರ್ ಮೂಲಕ ಫಲಿತಾಂಶದ ಮೊರೆಹೋಗಬೇಕಾಯಿತು. ಸೂಪರ್ ಓವರ್'ನಲ್ಲೂ ಉಭಯ ತಂಡಗಳು 15 ರನ್ ಗಳಿಸಿ ಮತ್ತೆ ಪಂದ್ಯ ಟೈ ಆಯಿತು.  ಹೀಗಾಗಿ ಅತಿ ಹೆಚ್ಚು ಬೌಂಡರಿ ಬಾರಿಸಿದ ತಂಡವಾದ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ಘೋಷಿಸಲಾಗಿತ್ತು. ಐಸಿಸಿಯ ಈ ನಿಯಮ ಹಲವು ಹಿರಿ-ಕಿರಿಯ ಕ್ರಿಕೆಟಿಗರು ಸೇರಿದಂತೆ ಕ್ರೀಡಾಭಿಮಾನಿಗಳ ಕೆಂಗಣ್ಣಿಗೂ ಗುರಿಯಾಗಿತ್ತು. 

ಸೂಪರ್ ಓವರ್ ಕೂಡಾ ಟೈ: ಐಸಿಸಿ ಬೌಂಡರಿ ನಿಯಮಕ್ಕೆ ಕಿಡಿಕಾರಿದ ಕ್ರಿಕೆಟಿಗರು..!

ಇದೀಗ ಸೂಪರ್ ಓವರ್ ನಿಯಮ ಬದಲಾಗಿದ್ದು, ಗುಂಪು ಹಂತದ ಪಂದ್ಯಗಳಲ್ಲಿ ಪಂದ್ಯ ಟೈ ಆಗಿ, ಸೂಪರ್ ಓವರ್ ಕೂಡಾ ಟೈ ಆದರೆ ಫಲಿತಾಂಶವನ್ನು ಟೈ ಎಂದೇ ಘೋಷಿಸಲು ಐಸಿಸಿ ತೀರ್ಮಾನಿಸಿದೆ. ಆದರೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯದ ಸೂಪರ್ ಓವರ್ ಕೂಡಾ ಟೈ ಆದರೆ ಫಲಿತಾಂಶ ಬರುವರೆಗೂ ಸೂಪರ್ ಓವರ್ ಆಡಿಸಲು ಐಸಿಸಿ ತೀರ್ಮಾನಿಸಿದೆ.   

click me!