ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗುವುದು ಖಚಿತವಾಗಿದೆ. ಅಕ್ಟೋಬರ್ 23ರಂದು ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ. ಗಂಗೂಲಿ ಆಯ್ಕೆಗೆ ಕಾರಣವೇನು ಎನ್ನುವುದರ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ ನೋಡಿ...
ಮುಂಬೈ(ಅ.15): ನಿರೀಕ್ಷೆಯಂತೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್‌ನ ಚುಕ್ಕಾಣಿ ಹಿಡಿಯಲಿದ್ದಾರೆ. ಸೋಮವಾರ ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಗಂಗೂಲಿ, ಅಕ್ಟೋಬರ್ 23ರಂದು ನಡೆಯಲಿರುವ ವಾರ್ಷಿಕ ಸಾಮಾನ್ಯ ಸಭೆ ವೇಳೆ ಅಧಿಕೃತವಾಗಿ ಅಧ್ಯಕ್ಷಗಾದಿಗೇರಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಏಕೈಕ ಅಭ್ಯರ್ಥಿ ಗಂಗೂಲಿಯಾಗಿರುವ ಕಾರಣ, ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ಸೌರವ್ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ ಗಾದಿ; ಟ್ರೋಲ್ ಆದ ಕೋಚ್ ಶಾಸ್ತ್ರಿ!
undefined
ಸೋಮವಾರ ಒಟ್ಟು 8 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ, ಕಾರ್ಯದರ್ಶಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಇವರೊಂದಿಗೆ ಮಾಹಿಮ್ ವರ್ಮಾ(ಉಪಾಧ್ಯಕ್ಷ), ಬಿಸಿಸಿಐ ಮಾಜಿ ಅಧ್ಯಕ್ಷ, ಕೇಂದ್ರ ಸಚಿವ ಅನುರಾಗ್ ಠಾಕೂರ್‌ರ ಸಹೋದರ್ ಅರುಣ್ ಧುಮಾಲ್ (ಖಜಾಂಚಿ), ಮಾಜಿ ಕ್ರಿಕೆಟಿಗ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮಾಜಿ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ (ಐಪಿಎಲ್ ಅಧ್ಯಕ್ಷ), ಕೇರಳ ಕ್ರಿಕೆಟ್ ಮುಖ್ಯಸ್ಥ ಜಯೇಶ್ ಜಾರ್ಜ್ (ಜಂಟಿ ಕಾರ್ಯದರ್ಶಿ), ಖಯಿರುಲ್ ಜಮಿಲ್ (ಆಡಳಿತ ಮಂಡಳಿ ಸದಸ್ಯ) ಹಾಗೂ ಪ್ರಬ್ಜೋತ್ ಸಿಂಗ್ (ಕೌನ್ಸಿಲರ್) ನಾಮಪತ್ರ ಸಲ್ಲಿಸಿದರು. ಈ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗುವ ನಿರೀಕ್ಷೆ ಇದೆ. ಬಂಗಾಳ ಕ್ರಿಕೆಟ್ ಸಂಸ್ಥೆಯ ಹಾಲಿ ಅಧ್ಯಕ್ಷರಾಗಿರುವ ಗಂಗೂಲಿ ಹಾಗೂ ಕೇರಳ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿರುವ ಜಾರ್ಜ್, ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕಿದೆ.
ಗಂಗೂಲಿಗೆ BCCI ಅಧ್ಯಕ್ಷ ಪಟ್ಟ ಖಚಿತ; ಮೊದಲ ಪ್ರತಿಕ್ರಿಯೆ ನೀಡಿದ ದಾದಾ!
ಹಳೆ ಹುಲಿಗಳ ಸಾಥ್!: ಸೋಮವಾರ ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿತ್ತು. ಇಲ್ಲಿನ ಬಿಸಿಸಿಐ ಕೇಂದ್ರ ಕಚೇರಿಗೆ ನಾಮಪತ್ರ ಸಲ್ಲಿಸಲು ಆಗಮಿಸಿದ ಗಂಗೂಲಿ ಜತೆಗೆ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್, ಮಾಜಿ ಕಾರ್ಯದರ್ಶಿ ಹಾಗೂ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ದಿಗ್ಗಜ ನಿರಂಜನ್ ಶಾ ಹಾಗೂ ಐಪಿಎಲ್ನ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ ಇದ್ದರು.
ಗಂಗೂಲಿಗೆ 9 ತಿಂಗಳ ಅಧಿಕಾರ!
ಹಾಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ(ಸಿಎಬಿ) ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ, ಬಿಸಿಸಿಐ ಅಧ್ಯಕ್ಷರಾಗಿ ಕೇವಲ 9 ತಿಂಗಳು ಮಾತ್ರ ಅಧಿಕಾರದಲ್ಲಿರಬಹುದಾಗಿದೆ. 2015ರಲ್ಲಿ ಸಿಎಬಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಗಂಗೂಲಿ, 2018ರಲ್ಲಿ ಪುನರಾಯ್ಕೆಗೊಂಡಿದ್ದರು. ನ್ಯಾ.ಲೋಧಾ ಸಮಿತಿ ಶಿಫಾರಸಿನ ಪ್ರಕಾರ, ಯಾರೊಬ್ಬರು ಸತತ 2 ಅವಧಿಗಳಿಗೆ ಅಧಿಕಾರದಲ್ಲಿದ್ದ ಬಳಿಕ 3 ವರ್ಷಗಳ ಕಾಲ ಕಡ್ಡಾಯವಾಗಿ ಕೂಲಿಂಗ್ ಆಫ್ ಅವಧಿಗೆ ತೆರಳಬೇಕಿದೆ. ಹೀಗಾಗಿ ಗಂಗೂಲಿ ಜುಲೈ 2020ರವರೆಗಷ್ಟೇ ಬಿಸಿಸಿಐ ಅಧ್ಯಕ್ಷ ಹುದ್ದೆಯಲ್ಲಿರಬಹುದಾಗಿದೆ. 3 ವರ್ಷಗಳ ಬಳಿಕ ಅವರು ಕ್ರಿಕೆಟ್ ಆಡಳಿತಕ್ಕೆ ಮರಳಬಹುದು.
ಅಧ್ಯಕ್ಷನಾದ ಭಾರತದ 2ನೇ ಟೆಸ್ಟ್ ನಾಯಕ!
ಭಾರತ ಪರ ಟೆಸ್ಟ್ ಆಡಿ ಬಳಿಕ ಬಿಸಿಸಿಐ ಅಧ್ಯಕ್ಷನಾಗಲಿರುವ ಕೇವಲ 2ನೇ ಕ್ರಿಕೆಟಿಗ ಸೌರವ್ ಗಂಗೂಲಿ. 1954ರಿಂದ 1956ರ ವರೆಗೂ ವಿಜಿಯನಗರಂನ ಮಹಾರಾಜ ಪಸುಪತಿ ವಿಜಯ್ ಆನಂದ್ ಗಜಪತಿ ರಾಜು ಬಿಸಿಸಿಐ ಅಧ್ಯಕ್ಷರಾಗಿದ್ದರು. 1936ರ ಇಂಗ್ಲೆಂಡ್ ಪ್ರವಾಸದಲ್ಲಿ ಅವರು ಭಾರತ ತಂಡವನ್ನು ಮುನ್ನಡೆಸಿದ್ದರು. ಸುನಿಲ್ ಗವಾಸ್ಕರ್ ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಗಂಗೂಲಿ ಆಯ್ಕೆಗೆ ಕಾರಣಗಳೇನು?
ಜಗ್‌ಮೋಹನ್ ದಾಲ್ಮೀಯ ನಿಧನದ ಬಳಿಕ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷಗಾದಿಗೇರಿದ್ದ ಗಂಗೂಲಿ, ಸಂಸ್ಥೆಯ ಆಡಳಿತವನ್ನು ಅತ್ಯುನ್ನತವಾಗಿ ನಡೆಸಿದರು. ಭಾರತದ ಕ್ರಿಕೆಟ್ ಕಾಶಿ ಎಂದೇ ಕರೆಸಿಕೊಳ್ಳುವ ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದ ಮೂಲಸೌಕರ್ಯಗಳನ್ನು ಉನ್ನತೀಕರಣಗೊಳಿಸಿದ್ದ ಗಂಗೂಲಿ, ಅತ್ಯುತ್ತಮ ಆಡಳಿತಗಾರನಾಗಿ ಗುರುತಿಸಿಕೊಂಡಿದ್ದರು. ಕ್ರಿಕೆಟ್ ಆಡಳಿತದಲ್ಲಿ ಹಲವು ವರ್ಷಗಳ ಕಾಲ ಪಳಗಿರುವ, ಈಗಲೂ ಪ್ರಾಬಲ್ಯ ಹೊಂದಿರುವ ಎನ್.ಶ್ರೀನಿವಾಸನ್, ನಿರಂಜನ್ ಶಾ, ರಾಜೀವ್ ಶುಕ್ಲಾ ವಿವಿಧ ಕಾರಣಗಳಿಂದ ಬಿಸಿಸಿಐ ಆಡಳಿತಕ್ಕೆ ಮರಳಲು ಸಾಧ್ಯವಾಗಲಿಲ್ಲ. ಇವರೆಲ್ಲರ ವಿಶ್ವಾಸ ಹೊಂದಿರುವ ಗಂಗೂಲಿಯನ್ನು ಅಧ್ಯಕ್ಷ ಸ್ಥಾನಕ್ಕೇರಿಸಲಾಗಿದೆ. ಅಲ್ಲದೆ 3 ವರ್ಷಗಳ ಬಳಿಕ ಬಿಸಿಸಿಐಗೆ ಪೂರ್ಣಾವಧಿ ಅಧ್ಯಕ್ಷನ ನೇಮಕವಾಗುತ್ತಿದೆ. ಸುಪ್ರೀಂ ಕೋರ್ಟ್ ನೇಮಿತ ಆಡಳಿತ ಸಮಿತಿ ಅಧಿಕಾರದಲ್ಲಿದ್ದ ವೇಳೆ ಬಿಸಿಸಿಐ ಗೊಂದಲದ ಗೂಡಾಗಿತ್ತು. ಹೀಗಾಗಿ, ಒಬ್ಬ ಪ್ರಬಲ ವ್ಯಕ್ತಿಯನ್ನು ಅಧ್ಯಕ್ಷನ ಸ್ಥಾನಕ್ಕೆ ತರಬೇಕಿತ್ತು. ಸದ್ಯಕ್ಕೆ ಗಂಗೂಲಿಗಿಂತ ಸೂಕ್ತ ವ್ಯಕ್ತಿ ಮತ್ತೊಬ್ಬರಿಲ್ಲ ಎನ್ನುವ ನಿರ್ಧಾರಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಪ್ರತಿನಿಧಿಗಳು ಬಂದಿದ್ದಾರೆ.