2027ರ ಏಕದಿನ ವಿಶ್ವಕಪ್‌ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟಿಸಿದ ಸನ್ನಿ; 10ಕ್ಕೆ 9 ಅಂಕ ನೀಡಿದ ಆಕಾಶ್‌ ಚೋಪ್ರಾ

Published : Aug 06, 2026, 02:03 PM IST
Team India

ಸಾರಾಂಶ

2027ರ ಏಕದಿನ ವಿಶ್ವಕಪ್‌ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತಮ್ಮ 15 ಸದಸ್ಯರ ಸಂಭಾವ್ಯ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ. ಶುಭ್‌ಮನ್ ಗಿಲ್ ನಾಯಕತ್ವದ ಈ ತಂಡದಲ್ಲಿ ಅನುಭವಿಗಳಾದ ರೋಹಿತ್, ಕೊಹ್ಲಿ ಇದ್ದರೂ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್‌ಗೆ ಸ್ಥಾನ ನೀಡದಿರುವುದು ಚರ್ಚೆಗೆ ಕಾರಣವಾಗಿದೆ. ಈ ತಂಡವನ್ನು ವಿಶ್ಲೇಷಿಸಿರುವ ಆಕಾಶ್ ಚೋಪ್ರಾ, 10ಕ್ಕೆ 9 ಅಂಕಗಳನ್ನು ನೀಡಿದ್ದಾರೆ.

ಬೆಂಗಳೂರು: 2027ರ ಏಕದಿನ ವಿಶ್ವಕಪ್ ಟೂರ್ನಿಗೆ ಇನ್ನು ಕೇವಲ 14 ತಿಂಗಳುಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಭಾರತ ತಂಡ ಹೇಗಿರಬೇಕು ಎನ್ನುವ ಚರ್ಚೆ ಭಾರತೀಯ ಕ್ರಿಕೆಟ್ ವಲಯದಲ್ಲಿ ಜೋರಾಗಿದೆ. ಭಾರತ ತಂಡವು ಕೊನೆಯ ಬಾರಿಗೆ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದು ಬೀಗಿತ್ತು. ಇದಾಗಿ ಒಂದೂವರೆ ದಶಕ ಕಳೆದರೂ ಮತ್ತೊಮ್ಮೆ ಏಕದಿನ ವಿಶ್ವಕಪ್ ಗೆಲ್ಲುವ ಭಾರತದ ಕನಸು ಸದ್ಯ ಕನಸಾಗಿಯೇ ಉಳಿದಿದೆ. 

ಕಳೆದ ಬಾರಿ ಅಂದರೆ, ಭಾರತದಲ್ಲೇ ಆಯೋಜನೆಗೊಂಡಿದ್ದ 2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅಜೇಯವಾಗಿ ಫೈನಲ್ ಪ್ರವೇಶಿಸಿತ್ತಾದರೂ, ಫೈನಲ್‌ನಲ್ಲಿ ಮುಗ್ಗರಿಸಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಇದಾದ ಬಳಿಕ ಭಾರತ ತಂಡವು 2024ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿ ಹಾಗೂ 2026ರ ಟಿ20 ವಿಶ್ವಕಪ್, ಹೀಗೆ ಭಾರತ ಹ್ಯಾಟ್ರಿಕ್ ಐಸಿಸಿ ಟ್ರೋಫಿ ಜಯಿಸಿದೆ. ಇದೀಗ ಶುಭ್‌ಮನ್ ಗಿಲ್ ನೇತೃತ್ವದ ಟೀಂ ಇಂಡಿಯಾ 2027ರ ಏಕದಿನ ವಿಶ್ವಕಪ್ ಗೆಲ್ಲುವ ಪಣ ತೊಟ್ಟಿದೆ.

ಬಲಿಷ್ಠ ಭಾರತ ತಂಡವನ್ನು ಆಯ್ಕೆ ಮಾಡಿದ ಸುನಿಲ್ ಗವಾಸ್ಕರ್:

ಈಗಾಗಲೇ ಹಲವು ಮಾಜಿ ಕ್ರಿಕೆಟಿಗರು ಮುಂಬರುವ ಏಕದಿನ ವಿಶ್ವಕಪ್‌ಗೆ ತಮ್ಮದೇ ಆದ ಸಂಭಾವ್ಯ ಭಾರತ ತಂಡವನ್ನು ಆಯ್ಕೆ ಮಾಡುತ್ತಾ ಬಂದಿದ್ದಾರೆ. ಇದೀಗ ಕ್ರಿಕೆಟ್ ವಲಯದಲ್ಲಿ ಸನ್ನಿ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ 1983ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ಸುನಿಲ್ ಗವಾಸ್ಕರ್, 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ.

ಸುನಿಲ್ ಗವಾಸ್ಕರ್ ಆಯ್ಕೆ ಮಾಡಿದ ಭಾರತ ತಂಡದಲ್ಲಿ ಶುಭ್‌ಮನ್ ಗಿಲ್ ಸಹಜವಾಗಿಯೇ ನಾಯಕರಾಗಿದ್ದು, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಹಾಗೂ ಕೆ ಎಲ್ ರಾಹುಲ್ ಟಾಪ್ 5 ಬ್ಯಾಟರ್‌ಗಳಾಗಿ ಸ್ಥಾನ ಪಡೆದಿದ್ದಾರೆ. ಈ ಐವರು ಆಟಗಾರರು 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಇನ್ನು ಬ್ಯಾಕ್‌ಅಪ್ ವಿಕೆಟ್ ಕೀಪರ್ ರೂಪದಲ್ಲಿ ಇಶಾನ್ ಕಿಶನ್ ಸ್ಥಾನ ಪಡೆದಿದ್ದಾರೆ. ಇಶಾನ್ ಕಿಶನ್ ಸದ್ಯ ಯಾವುದೇ ಮಾದರಿಯ ಕ್ರಿಕೆಟ್‌ಗೂ ಹೊಂದಿಕೊಳ್ಳುವ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ವೇಗದ ಬೌಲಿಂಗ್ ಆಲ್ರೌಂಡರ್‌ಗಳಾಗಿ ಹಾರ್ದಿಕ್ ಪಾಂಡ್ಯ ಹಾಗೂ ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆದರೆ, ಸ್ಪಿನ್ ಬೌಲಿಂಗ್ ಆಲ್ರೌಂಡರ್ ಆಗಿ ರವೀಂದ್ರ ಜಡೇಜಾ ಹಾಗೂ ಅಕ್ಷರ್ ಪಟೇಲ್ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ತಜ್ಞ ಸ್ಪಿನ್ನರ್ ಆಗಿ ಕುಲ್ದೀಪ್ ಯಾದವ್ ಸ್ಥಾನ ಪಡೆದರೆ, ವೇಗದ ಬೌಲರ್‌ಗಳಾಗಿ ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ ಹಾಗೂ ಮೊಹಮ್ಮದ್ ಸಿರಾಜ್ ಸ್ಥಾನ ಪಡೆದುಕೊಂಡಿದ್ದಾರೆ.

ಭುವಿ, ಶಮಿಗಿಲ್ಲ ಸ್ಥಾನ:

ಇನ್ನು ಮುಂಬರುವ ದಿನಗಳಲ್ಲಿ ಭಾರತ ತಂಡವು ಅನುಭವಿ ಬೌಲರ್‌ಗಳಾದ ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್‌ಗೆ ಭಾರತ ತಂಡದಲ್ಲಿ ಮಣೆ ಹಾಕುವ ಸಾಧ್ಯತೆಯಿದೆ ಎನ್ನುವ ಚರ್ಚೆ ಜೋರಾಗಿದೆ. ಮುಂಬರುವ ಏಕದಿನ ವಿಶ್ವಕಪ್ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹಾಗೂ ನಮೀಬಿಯಾದಲ್ಲಿ ನಡೆಯುವುದರಿಂದ ಅಲ್ಲಿ ಅನುಭವಿ ವೇಗಿಗಳು ಬೇಕು ಎನ್ನುವ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಭುವಿ ಹಾಗೂ ಶಮಿ ಮುಂಬರುವ ಏಕದಿನ ವಿಶ್ವಕಪ್ ಆಡುವ ಕನಸು ಕಾಣುತ್ತಿದ್ದಾರೆ. ಆದರೆ ಸನ್ನಿ ಈ ಇಬ್ಬರಿಗೆ ಸಂಭಾವ್ಯ ತಂಡದಲ್ಲಿ ಸ್ಥಾನ ನೀಡದಿರುವುದು ಅಚ್ಚರಿಗೆ ಕಾರಣವಾಗಿದೆ.

ಸನ್ನಿ ಆರಿಸಿದ ತಂಡಕ್ಕೆ 10ಕ್ಕೆ 9 ಅಂಕ ನೀಡಿದ ಆಕಾಶ್ ಚೋಪ್ರಾ:

ಇನ್ನು ಸುನಿಲ್ ಗವಾಸ್ಕರ್ ಆರಿಸಿದ ವಿಶ್ವಕಪ್ ತಂಡವನ್ನು ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಪೋರ್ಟ್‌ ಮಾರ್ಟಮ್ ಮಾಡಿದ್ದು, 10ಕ್ಕೆ ಒಂಬತ್ತು ಅಂಕ ನೀಡಿದ್ದಾರೆ. ಗವಾಸ್ಕರ್ ಸರ್, ಟಾಪ್-5 ಬ್ಯಾಟರ್‌ಗಳನ್ನು ಹೊರತುಪಡಿಸಿ, ಉಳಿದಂತೆ ಸಾಕಷ್ಟು ಅಳೆದು ತೂಗಿ ಒಬ್ಬರಿಗೆ ಸರಿಯಾಗಿ ಮತ್ತೊಬ್ಬರು ಎನ್ನುವಂತೆ ತಂಡವನ್ನು ಆರಿಸಿದ್ದಾರೆ. ಹಾರ್ದಿಕ್ ಪಾಂಡ್ಯಗೆ, ನಿತೀಶ್ ಕುಮಾರ್ ರೆಡ್ಡಿ, ಜಡೇಜಾ ಜತೆ ಅಕ್ಷರ್ ಪಟೇಲ್ ಆಯ್ಕೆ ಮಾಡಿದ್ದಾರೆ.

ಇನ್ನು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್‌ ಸಿರಾಜ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ ಈ ಎಲ್ಲರೂ ಬೌಲಿಂಗ್ ಜತೆಗೆ ಬ್ಯಾಟಿಂಗ್‌ನಲ್ಲೂ ಕೊಂಚ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಎಡಗೈ ವೇಗಿ ಅರ್ಶದೀಪ್ ಸಿಂಗ್‌ಗೆ ಸನ್ನಿ ಸರ್ ಮಣೆ ಹಾಕಿರುವುದರಿಂದ ಈ ತಂಡಕ್ಕೆ ನಾನು 10ಕ್ಕೆ 8.5ರಿಂದ 9 ಅಂಕ ನೀಡುತ್ತೇನೆ ಎಂದಿದ್ದಾರೆ.

2027ರ ಏಕದಿನ ವಿಶ್ವಕಪ್‌ಗೆ ಸುನಿಲ್ ಗವಾಸ್ಕರ್ ಆರಿಸಿದ ಭಾರತ ತಂಡ ಹೀಗಿದೆ:

ಶುಭ್‌ಮನ್ ಗಿಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಇಶಾನ್ ಕಿಶನ್‌, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಶದೀಪ್ ಸಿಂಗ್, ಹರ್ಷಿತ್ ರಾಣಾ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹುಡುಗಿಯರ ಬಗ್ಗೆ ಎಚ್ಚರ, ಆ ಇಬ್ಬರಂತೆ ಆಗಬೇಡ -ಸೂರ್ಯವಂಶಿಗೆ ರಾಬಿನ್ ಉತ್ತಪ್ಪ ವಾರ್ನಿಂಗ್
ಈತ ತಂಡದಲ್ಲಿದ್ರೇ ಟೀಂ ಇಂಡಿಯಾ, 2027ರ ಏಕದಿನ ವಿಶ್ವಕಪ್ ಗೆಲ್ಲಲ್ಲ..! ಆಯ್ಕೆ ಸಮಿತಿ-ಬಿಸಿಸಿಐ ನಡುವೆಯೇ ತಿಕ್ಕಾಟ?