
ಬೆಂಗಳೂರು: ಈ ಬಾರಿ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಕರ್ನಾಟಕದ ಯುವ ಕ್ರಿಕೆಟಿಗ ಮನೋಜ್ ಭಾಂಡಗೆ ಸ್ಫೋಟಕ ಆಟವಾಡುತ್ತಿದ್ದಾರೆ. ಮೈಸೂರು ವಾರಿಯರ್ಸ್ ತಂಡದಲ್ಲಿರುವ 25 ವರ್ಷದ ಮನೋಜ್ ಗುರುವಾರ ಶಿವಮೊಗ್ಗ ವಿರುದ್ಧ 16 ಎಸೆತಗಳಲ್ಲಿ ಔಟಾಗದೆ 42, ಶುಕ್ರವಾರ ಬೆಂಗಳೂರು ವಿರುದ್ಧ 33 ಎಸೆತಗಳಲ್ಲಿ ಔಟಾಗದೆ 58 ರನ್ ಸಿಡಿಸಿದ್ದಾರೆ. ಎರಡೂ ಪಂದ್ಯಗಳಲ್ಲಿ ಫಿನಿಶರ್ ಆಗಿ ಮಿಂಚಿದ್ದಾರೆ.
ಆದರೆ ಮನೋಜ್ ಕಳೆದ 2 ವರ್ಷಗಳಿಂದ ಆರ್‌ಸಿಬಿ ತಂಡದಲ್ಲಿದ್ದರೂ, ಆಡಲು ಯಾವುದೇ ಅವಕಾಶ ಸಿಕ್ಕಿರಲಿಲ್ಲ. ಇದನ್ನೇ ಮುಂದಿಟ್ಟುಕೊಂಡು ಅಭಿಮಾನಿಗಳು ಆರ್‌ಸಿಬಿ ಫ್ರಾಂಚೈಸಿಯನ್ನು ಸಾಮಾಜಿಕ ತಾಣಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ರೀತಿ ಸ್ಫೋಟಕ ಆಡವಾಡುತ್ತಿದ್ದ ಆಟಗಾರನನ್ನು 2 ವರ್ಷಗಳಿಂದ ಬೆಂಚ್ ಕಾಯಿಸುತ್ತಿದ್ದೀರಿ. ಉತ್ತಮ ಆಟಗಾರರಿಗೆ ಅವಕಾಶ ಕೊಡಲ್ಲ ಎಂದು ಟೀಕಿಸಿದ್ದಾರೆ. ಮನೋಜ್‌ರನ್ನು ಆರ್‌ಸಿಬಿ 2023ರ ಐಪಿಎಲ್‌ಗೂ ಮುನ್ನ ₹20 ಲಕ್ಷ ನೀಡಿ ಖರೀದಿಸಿತ್ತು. ಆದರೆ ಈ ವರೆಗೂ ಒಂದೂ ಪಂದ್ಯವಾಡಲು ಅವಕಾಶ ಸಿಕ್ಕಿಲ್ಲ.
ಮಹಾರಾಜ ಟ್ರೋಫಿ: ಮಂಗಳೂರು ಡ್ರ್ಯಾಗನ್ಸ್‌ಗೆ ಮಣಿದ ಶಿವಮೊಗ್ಗ ಲಯನ್ಸ್
ಬೆಂಗಳೂರು: 3ನೇ ಆವೃತ್ತಿಯ ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮಂಗಳೂರು ಡ್ರ್ಯಾಗನ್ಸ್ ಮೊದಲ ಗೆಲುವು ದಾಖಲಿಸಿದೆ. ಶನಿವಾರ ಶಿವಮೊಗ್ಗ ಲಯನ್ಸ್ ವಿರುದ್ಧ ಮಂಗಳೂರು 8 ವಿಕೆಟ್ ಜಯಗಳಿಸಿತು. ಶಿವಮೊಗ್ಗ ಟೂರ್ನಿಯಲ್ಲಿ ಸತತ 2ನೇ ಸೋಲನುಭವಿಸಿತು.
ಮೊದಲು ಬ್ಯಾಟ್ ಮಾಡಿದ ಶಿವಮೊಗ್ಗ ಅಭಿನವ್ ಮನೋಹರ್ ಸ್ಫೋಟಕ ಆಟದ ನೆರವಿನಿಂದ 6 ವಿಕೆಟ್‌ಗೆ 175 ರನ್ ಕಲೆಹಾಕಿತು. ರೋಹಿತ್ 24, ಧ್ರುವ್ ಪ್ರಭಾಕರ್ 20, ಅವಿನಾಶ್ 22 ರನ್ ಗಳಿಸಿದರೆ, ಮಂಗಳೂರು ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಅಭಿನವ್ 34 ಎಸೆತಗಳಲ್ಲಿ 3 ಬೌಂಡರಿ, 9 ಸಿಕ್ಸರ್‌ನೊಂದಿಗೆ 84 ರನ್ ಸಿಡಿಸಿದರು.
ತಂದೆಯಂತೆ ಮಗ; ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಗಿಲೆತ್ತರದ ಸಿಕ್ಸರ್ ಸಿಡಿಸಿದ ಸಮಿತ್ ದ್ರಾವಿಡ್..! ವಿಡಿಯೋ ವೈರಲ್
ಆರಂಭಿಕ 12 ಓವರ್‌ಗಳಲ್ಲಿ 4 ವಿಕೆಟ್‌ಗೆ ಕೇವಲ 69 ರನ್ ಗಳಿಸಿದ್ದ ತಂಡವನ್ನು ಅಭಿನವ್ ತಮ್ಮ ಅಬ್ಬರದ ಆಟದ ಮೂಲಕ ಮೇಲೆತ್ತಿದರು. ತಂಡ ಕೊನೆ 8 ಓವರಲ್ಲಿ 106 ರನ್ ಸೇರಿಸಿತು.
ದೊಡ್ಡ ಗುರಿಯನ್ನು ಲೀಲಾಜಾಲವಾಗಿ ಬೆನ್ನತ್ತಿದ ಮಂಗಳೂರು, 16.2 ಓವರ್‌ಗಳಲ್ಲೇ ಗೆದ್ದು ಸಂಭ್ರಮಿಸಿತು. ಮೊದಲ ವಿಕೆಟ್‌ಗೆ ಮ್ಯಾಕ್‌ನೀಲ್ ನೊರೊನ್ಹಾ ಹಾಗೂ ರೋಹನ್ ಪಾಟೀಲ್ 5.5 ಓವರ್‌ಗಳಲ್ಲಿ 75 ರನ್ ಸೇರಿಸಿದರು.
ನೊರೊನ್ಹಾ 19 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್‌ನೊಂದಿಗೆ 43 ರನ್ ಚಚ್ಚಿದರು. ರೋಹನ್ 40 ಎಸೆತಗಳಲ್ಲಿ 6 ಬೌಂಡರಿ, 5 ಸಿಕ್ಸರ್‌ನೊಂದಿಗೆ 72 ರನ್ ಬಾರಿಸಿ ಔಟಾದರು. ಸಿದ್ಧಾರ್ಥ್ 19 ಎಸೆತಗಳಲ್ಲಿ ಔಟಾಗದೆ 38 ರನ್ ಸಿಡಿಸಿ ತಂಡವನ್ನು ಗೆಲ್ಲಿಸಿದರು.
ಏನ್ ದುರಂತ ಇದು..! ಪಾಕ್‌ನ 2 ಕ್ರೀಡಾಂಗಣದಲ್ಲಿ ಬಾಡಿಗೆ ಫ್ಲಡ್‌ಲೈಟ್‌ಗಳನ್ನು ಅಳವಡಿಸಲಿರುವ ಪಿಸಿಬಿ!
ಸ್ಕೋರ್: ಶಿವಮೊಗ್ಗ 20 ಓವರಲ್ಲಿ 175/6 (ಅಭಿನವ್ 84*, ನಿಶ್ಚಿತ್ 2-31), ಮಂಗಳೂರು 16.2 ಓವರ್‌ಗಳಲ್ಲಿ 178/2 (ರೋಹನ್ 72, ನೊರೊನ್ಹಾ 43, ರಾಜ್‌ವೀರ್ 1-23)
ಪಂದ್ಯಶ್ರೇಷ್ಠ: ರೋಹನ್ ಪಾಟೀಲ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.