RCB ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯ ವೀಕ್ಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿದ್ದರು. RCB ಸೋತಿದ್ದರಿಂದ ನೆಟ್ಟಿಗರು ಸಿದ್ದರಾಮಯ್ಯ ಅವರನ್ನು ಟ್ರೋಲ್ ಮಾಡಿದ್ದಾರೆ.
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 24ನೇ ಪಂದ್ಯದಲ್ಲಿ ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 13 ಎಸೆತಗಳು ಬಾಕಿ ಇರುವಂತೆಯೇ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಪಂದ್ಯ ವೀಕ್ಷಿಸಲು ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಹೌದು, ಆರ್‌ಸಿಬಿ ಹಾಗೂ ಡೆಲ್ಲಿ ನಡುವಿನ ಪಂದ್ಯವನ್ನು ವೀಕ್ಷಿಸಲು ಸಿದ್ದರಾಮಯ್ಯ ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದರು. ಡೆಲ್ಲಿ-ಆರ್‌ಸಿಬಿ ಪಂದ್ಯ ವೀಕ್ಷಿಸುತ್ತಿರುವ ವಿಡಿಯೋ ಜತೆಗೆ ಮುಖ್ಯಮಂತ್ರಿಗಳು, 'ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ Royal Challengers Bengaluru vs Delhi Capitals ನಡುವಿನ ಪಂದ್ಯ ವೀಕ್ಷಿಸುತ್ತಾ, ಪ್ರೇಕ್ಷಕರ ಜೊತೆ ಸೇರಿ ನಮ್ಮವರನ್ನು ಪ್ರೋತ್ಸಾಹಿಸಿದೆ.
ನಮ್ಮ ಆರ್‌ಸಿಬಿ ಉತ್ತಮ ಬ್ಯಾಟ್ಸ್‌ಮನ್‌ಗಳು ಹಾಗೂ ಅತ್ಯುತ್ತಮ ಬೌಲರ್‌ಗಳನ್ನು ಒಳಗೊಂಡ ಒಂದು ಸಮತೋಲಿತ ತಂಡವಾಗಿ ಈ ವರೆಗೆ ಪ್ರದರ್ಶನ ನೀಡುತ್ತಾ ಬಂದಿದ್ದು, ಇದೇ ರೀತಿ ಮುಂದುವರೆದರೆ ಈ ಬಾರಿ ಕಪ್ ಗೆಲ್ಲಲಿದೆ ಎನ್ನುವ ವಿಶ್ವಾಸ ನನ್ನದು ಎಂದು ಬರೆದುಕೊಂಡಿದ್ದರು.
#RCBvDC
ಇನ್ನು ಆರ್‌ಸಿಬಿ ತಂಡವು ಡೆಲ್ಲಿ ಎದುರು ಸೋಲು ಕಾಣುತ್ತಿದ್ದಂತೆಯೇ ನೆಟ್ಟಿಗರು ಸಿದ್ದರಾಮಯ್ಯ ಅವರನ್ನು ಟ್ರೋಲ್ ಮಾಡಿದ್ದಾರೆ. ನೀವು ಪಂದ್ಯ ವೀಕ್ಷಿಸಲು ಬಂದಿದ್ದರಿಂದಲೇ ಆರ್‌ಸಿಬಿ ಪಂದ್ಯ ಸೋತಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಸಿದ್ದರಾಮಯ್ಯ ಅವರು ಬಂದಿದ್ದರಿಂದಲೇ ಆರ್‌ಸಿಬಿ ಗೌರವಾನ್ವಿತ ಮೊತ್ತ ಕಲೆಹಾಕಿದೆ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯ ಅವರ ಈ ಸೋಷಿಯಲ್ ಮೀಡಿಯಾ ಪೋಸ್ಟ್‌ಗೆ ಸಾಕಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಇನ್‌ಸ್ಟಾಗ್ರಾಮ್‌ನಲ್ಲಿ ಜಾಹಿರಾತು ವಿಡಿಯೋ ಡಿಲೀಟ್ ಮಾಡಿದ ಕೊಹ್ಲಿ! ಕೊನೆಯಲ್ಲಿ ಸಿಹಿ ಟ್ವಿಸ್ಟ್!
ಹೇಗಿತ್ತು ಆರ್‌ಸಿಬಿ-ಡೆಲ್ಲಿ ಮ್ಯಾಚ್
ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತವರಿನಾಚೆ ಮೂರು ಪಂದ್ಯಗಳನ್ನು ಗೆದ್ದು, ತವರಿನಲ್ಲಿ ಮೊದಲ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕಿಳಿದಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ತಂಡಕ್ಕೆ ಫಿಲ್ ಸಾಲ್ಟ್ ಹಾಗೂ ವಿರಾಟ್ ಕೊಹ್ಲಿ ಮೊದಲ ವಿಕೆಟ್‌ಗೆ ಕೇವಲ 3.5 ಓವರ್‌ಗಳಲ್ಲಿ 61 ರನ್‌ಗಳ ಜತೆಯಾಟವಾಡುವ ಮೂಲಕ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಆದರೆ ಫಿಲ್ ಸಾಲ್ಟ್ ರನೌಟ್ ಆಗುತ್ತಿದ್ಧಂತೆಯೇ ಆರ್‌ಸಿಬಿ ತಂಡವು ನಾಟಕೀಯ ಕುಸಿತ ಕಂಡಿತು. ಅಂತಿಮವಾಗಿ ಆರ್‌ಸಿಬಿ 7 ವಿಕೆಟ್ ಕಳೆದುಕೊಂಡು 163 ರನ್ ಗಳಿಸಲಷ್ಟೇ ಶಕ್ತವಾಯಿತು.
ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಡೆಲ್ಲಿ 30 ರನ್ ಗಳಿಸುವಷ್ಟರಲ್ಲಿ ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಆದರೆ ಇದಾದ ಬಳಿಕ ಲೋಕಲ್ ಬಾಯ್ ಕೆ ಎಲ್ ರಾಹುಲ್ 53 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 6 ಆಕರ್ಷಕ ಸಿಕ್ಸರ್ ಗಳ ನೆರವಿನಿಂದ ಅಜೇಯ 93 ರನ್ ಸಿಡಿಸಿ ತಂಡವನ್ನು ಅನಾಯಾಸವಾಗಿ ಗೆಲುವಿನ ದಡ ಸೇರಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಟ್ರಿಸ್ಟಿನ್ ಸ್ಟಬ್ಸ್ ಅಜೇಯ 38 ರನ್ ಬಾರಿಸಿ ರಾಹುಲ್‌ಗೆ ಉತ್ತಮ ಸಾಥ್ ನೀಡಿದರು.
ಇದನ್ನೂ ಓದಿ: 128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಕಮ್‌ಬ್ಯಾಕ್; 6 ಬಲಿಷ್ಠ ತಂಡಗಳು ಭಾಗಿ!
ಆರ್‌ಸಿಬಿ ತಂಡವು ತನ್ನ ಮುಂದಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಏಪ್ರಿಲ್ 13 ರಂದು ನಡೆಯಲಿರುವ ಈ ಪಂದ್ಯವು ಜೈಪುರದ ಸವಾಯಿ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದೆ.