
ಚೆನ್ನೈ: ಆರಂಭಿಕ ಪಂದ್ಯದಲ್ಲಿ ಗೆದ್ದರೂ ಬಳಿಕ ಸತತ 4 ಪಂದ್ಯಗಳಲ್ಲಿ ಶರಣಾಗಿರುವ 5 ಬಾರಿ ಚಾಂಪಿಯನ್ ಚೆನ್ನೈ, ಗೆಲುವಿನ ಹಳಿಗೆ ಮರಳಲು ಒದ್ದಾಡುತ್ತಿದೆ. ತಂಡ ಶುಕ್ರವಾರ ಹಾಲಿ ಚಾಂಪಿಯನ್ ಕೋಲ್ಕತಾ ವಿರುದ್ಧ ಆಡಲಿದ್ದು, ಕಠಿಣ ಸವಾಲು ಎದುರಾಗುವುದು ಖಚಿತ. ಈ ಪಂದ್ಯದಲ್ಲಿ ನಾಯಕನಾಗಿ ಎಂ ಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದು, ಇನ್ನಾದರೂ ಸಿಎಸ್‌ಕೆ ಅದೃಷ್ಟ ಬದಲಾಗುತ್ತಾ ಎನ್ನುವ ಕುತೂಹಲ ಜೋರಾಗಿದೆ.
ಚೆನ್ನೈ 5 ಪಂದ್ಯಗಳನ್ನಾಡಿದ್ದು, ಕೇವಲ 2 ಅಂಕದೊಂದಿಗೆ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ತವರಿನಲ್ಲೇ 2 ಪಂದ್ಯ ಸೋತಿರುವುದು ತಂಡವನ್ನು ಮತ್ತಷ್ಟು ಕುಗ್ಗಿಸಿದೆ. ತಂಡಕ್ಕೆ ಚೇಸಿಂಗ್ ಸಿಕ್ಕಾಗಲೇ ಎಲ್ಲಾ 4 ಪಂದ್ಯ ಸೋತಿರುವುದು ಗಮನಾರ್ಹ. ಬೌಲಿಂಗ್ ವಿಭಾಗದಲ್ಲಿ ನೂರ್ ಅಹ್ಮದ್ (11 ವಿಕೆಟ್), ಖಲೀಲ್ ಅಹ್ಮದ್ (10 ವಿಕೆಟ್) ಹೊರತುಪಡಿಸಿ ಬೇರೆಲ್ಲಾ ಆಟಗಾರರು ವಿಫಲರಾಗಿದ್ದಾರೆ. ಗೆಲುವಿನ ಗುರಿಯೇ ಇಲ್ಲದಂತೆ ಆಡುತ್ತಿರುವ ಬ್ಯಾಟರ್ಸ್ ಜೊತೆಗೆ ಫೀಲ್ಡಿಂಗ್‌ನಲ್ಲೂ ಸರಣಿ ಕ್ಯಾಚ್ ಡ್ರಾಪ್ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಋತುರಾಜ್ ಗಾಯಕ್ವಾಡ್ ಗಾಯದ ಸಮಸ್ಯೆಯಿಂದಾಗಿ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿರುವುದು ಸಿಎಸ್‌ಕೆ ಪಡೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ನಾನು ಎಂದೆಂದಿಗೂ ಧೋನಿ ಅಭಿಮಾನಿ! ಟ್ರೋಲ್ ಮಾಡಿದವರಿಗೆ ರಾಯುಡು ತಿರುಗೇಟು!
ಮತ್ತೊಂದೆಡೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ಸಾಧನೆ ಕೂಡಾ ಉತ್ತಮವೇನಲ್ಲ. ಆಡಿರುವ 5 ಪಂದ್ಯಗಳ ಪೈಕಿ ಕೇವಲ 2ರಲ್ಲಿ ಗೆದ್ದಿದೆ. ಅಸ್ಥಿರ ಆಟದಿಂದಾಗಿ ತಂಡ ಸೋಲಿನ ಸುಳಿಯಲ್ಲಿ ಸಿಲುಕಿದೆ. ನಾಯಕ ರಹಾನೆ (188 ರನ್) ಹೊರತುಪಡಿಸಿ ಬೇರೆ ಯಾರೂ 140ಕ್ಕಿಂತ ಹೆಚ್ಚು ರನ್ ಗಳಿಸಿಲ್ಲ. ವರುಣ್ ಚಕ್ರವರ್ತಿ ಪಡೆದಿರುವ 6 ವಿಕೆಟ್ ತಂಡದ ಬೌಲರ್‌ನ ಗರಿಷ್ಠ ಸಾಧನೆ. ಹೀಗಾಗಿ ಚೆನ್ನೈ ಜೊತೆ ಕೆಕೆಆರ್ ತಂಡದಲ್ಲೂ ಸಂಘ ಟಿತ ಆಟದ ಅನಿವಾರ್ಯತೆ ಇದೆ. ಕಳೆದ ಪಂದ್ಯದಲ್ಲಿ ಲಖನೌ ಎದುರು 4 ರನ್ ರೋಚಕ ಸೋಲು ಅನುಭವಿಸಿದ್ದ ಕೆಕೆಆರ್ ಇದೀಗ ಗೆಲುವಿನ ಹಳಿಗೆ ಮರಳಲು ಎದುರು ನೋಡುತ್ತಿದೆ.
ಪಂದ್ಯ ಆರಂಭ: ಸಂಜೆ 7.30ಕ್ಕೆ
ಋತುರಾಜ್ ಹೊರಕ್ಕೆ: ಚೆನ್ನೈಗೆ ಧೋನಿ ನಾಯಕ
ಚೆನ್ನೈ: ಚೆನ್ನೈ ನಾಯಕ ಋತುರಾಜ್ ಗಾಯಕ್ವಾಡ್ ಮೊಣಕೈ ಗಾಯಕ್ಕೆ ತುತ್ತಾಗಿದ್ದು, 18ನೇ ಆವೃತ್ತಿಯ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ. ಅವರ ಬದಲು ಟೂರ್ನಿಯ ಉಳಿದ ಪಂದ್ಯಗಳಿಗೆ ಎಂ.ಎಸ್.ಧೋನಿ ನಾಯಕತ್ವ ವಹಿಸಲಿದ್ದಾರೆ. ಕೋಲ್ಕತಾ ವಿರುದ್ಧ ಪಂದ್ಯಕ್ಕೂ ಮುನ್ನ ಗುರುವಾರ
ಪತ್ರಿಕಾಗೋಷ್ಠಿಯಲ್ಲಿ ಚೆನ್ನೈ ಮುಖ್ಯ ಕೋಚ್ ಸ್ಟೀಫನ್ ಪ್ಲೆಮಿಂಗ್ ಇದನ್ನು ಖಚಿತಪಡಿಸಿದರು.
'ಋತುರಾಜ್ ಟೂರ್ನಿಯ ಇನ್ನುಳಿದ ಪಂದ್ಯಗಳಿಗೆ ಆಡುವುದಿಲ್ಲ. ಅನ್‌ಕ್ಯಾಪ್ ಆಟಗಾರ ಧೋನಿ ನಾಯಕತ್ವ ವಹಿಸಲಿದ್ದಾರೆ' ಎಂದಿದ್ದಾರೆ. ಧೋನಿ 2008ರಿಂದ 2023ರ ವರೆಗೂ ಚೆನ್ನೈ ನಾಯಕರಾಗಿದ್ದರು. ಅವರ ನೇತೃತ್ವದಲ್ಲೇ ತಂಡ 5 ಬಾರಿ ಚಾಂಪಿಯನ್ ಆಗಿದೆ. 2024ರ ಆವೃತ್ತಿಗೂ ಮುನ್ನ ಗಾಯಕ್ವಾಡ್‌ಗೆ ನಾಯಕತ್ವ ಬಿಟ್ಟುಕೊಟ್ಟಿದ್ದರು.
ಇದನ್ನೂ ಓದಿ: RCBvsDC: ಆರ್‌ಸಿಬಿಗೆ ಸೋಲಿನ ತಾಳಿ ಕಟ್ಟಿದ ಕರಿಮಣಿ ಮಾಲೀಕ ರಾಹುಲ್ಲ!
ನಿವೃತ್ತಿ ಬಗ್ಗೆ ನನ್ನ ದೇಹ ನಿರ್ಧರಿಸುತ್ತದೆ: ಧೋನಿ
ನವದೆಹಲಿ: ಐಪಿಎಲ್‌ನಿಂದ ನಿವೃತ್ತಿಯಾಗುವ ಬಗ್ಗೆ ಭಾರತದ ದಿಗ್ಗಜ ಕ್ರಿಕೆಟಿಗ ಎಂ.ಎಸ್.ಧೋನಿ ಮೌನ ಮುರಿದಿದ್ದಾರೆ. ನಿವೃತ್ತಿಯ ಬಗ್ಗೆ ನಾನಲ್ಲ, ನನ್ನ ದೇಹ ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಿಎಸ್‌ಕೆ ಆಟಗಾರ ಧೋನಿ, ‘ನಾನು ಈಗಲೂ ಐಪಿಎಲ್ ಆಡುತ್ತಿದ್ದೇನೆ ಮತ್ತು ಸದ್ಯಕ್ಕೆ 1 ವರ್ಷದ ಐಪಿಎಲ್ ಬಗ್ಗೆ ಮಾತ್ರ ಯೋಚಿಸುತ್ತೇನೆ. ಈ ಐಪಿಎಲ್ ಮುಗಿದು, ಜುಲೈನಲ್ಲಿ ನನಗೆ 44 ವರ್ಷವಾಗುತ್ತದೆ. ಇನ್ನೊಂದು ವರ್ಷ ಆಡಬೇಕೇ ಬೇಡವೇ ಎಂಬ ನಿರ್ಧಾರ ಕೈಗೊಳ್ಳಲು ನನಗೆ 10 ತಿಂಗಳ ಸಮಯಾವಕಾಶವಿದೆ’ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.