40 ಓವರ್‌ಗಳ ಕ್ರಿಕೆಟ್‌ನಲ್ಲಿ ಅಜೇಯ 508 ರನ್‌, 13 ವರ್ಷದ ಯಶ್‌ ಚೌಡೆ ದಾಖಲೆ!

By Santosh NaikFirst Published Jan 14, 2023, 4:54 PM IST
Highlights

ಇಲ್ಲಿನ ಸರಸ್ವತಿ ವಿದ್ಯಾಲಯ 13 ವರ್ಷದ ಯಶ್ ಚೌಡೆ ತಮ್ಮ 178 ಎಸೆತಗಳ ಇನ್ನಿಂಗ್ಸ್‌ನಲ್ಲಿ 285.39ರ ಸ್ಟ್ರೈಕ್‌ ರೇಟ್‌ನಲ್ಲಿ 81 ಬೌಂಡರಿ,  18 ಸಿಕ್ಸರ್‌ಗಳನ್ನು ಸಿಡಿಸುವ ಮೂಲಕ ಗಮನಸೆಳೆದಿದ್ದಾರೆ.

ನಾಗ್ಪುರ (ಜ.14): ಸರಸ್ವತಿ ವಿದ್ಯಾಲಯ ತಂಡದ ಆರಂಭಿಕ ಆಟಗಾರ ಹಾಗೂ ನಾಯಕ ಯಶ್‌ ಶ್ರವನ್‌ ಚೌಡೆ ಮುಂಬೈ ಇಂಡಿಯನ್ಸ್‌ ಜೂನಿಯರ್‌ 14 ವಯೋಮಿತಿ ಕ್ರಿಕೆಟ್‌ ಟೂರ್ನಿಯಲ್ಲಿ ಅಜೇಯ 508 ರನ್‌ಗಳನ್ನು ಸಿಡಿಸುವ ಮುಂಬೈನ ಪ್ರಣವ್‌ ಧನವಾಡೆ, ಪೃಥ್ವಿ ಶಾ ಹಾಗೂ ಅರ್ಮಾನ್‌ ಜಾಫರ್‌ ಸಾಲಿಗೆ ಸೇರ್ಪಡೆಗೊಂಡಿದ್ದಾರೆ. ಶುಕ್ರವಾರ ನಾಗ್ಪುರದಲ್ಲಿ ನಡೆದ ಪಂದ್ಯದಲ್ಲಿ ಯಶ್‌ ಚೌಡೆ ಈ ದಾಖಲೆ ಮಾಡಿದ್ದಾರೆ. ವಿದರ್ಭದಲ್ಲಿ ನಡೆದ 14 ವಯೋಮಿತಿ ಕ್ರಿಕೆಟ್‌ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್‌ ಒಬ್ಬರ ಗರಿಷ್ಠ ಮೊತ್ತ ಇದಾಗಿದೆ. ದೀಕ್ಷಾಭೂಮಿಯ ಅಂಬೇಡ್ಕರ್‌ ಕಾಲೇಜ್‌ ಸ್ಪೋರ್ಟ್ಸ್‌ ಅಕಾಡೆಮಿಯಲ್ಲಿ ಚಂದನ್‌ ಶಾ ಹಾಗೂ ಪ್ರಶಾಂತ್‌ ಬಂಬಲ್‌ ಅವರಿಂದ ತರಬೇತಿ ಪಡೆಯುತ್ತಿರುವ ಚೌಡೆ, ತಮ್ಮ 178 ಎಸೆತಗಳಲ್ಲಿ ಇನ್ನಿಂಗ್ಸ್‌ನಲ್ಲಿ ದಾಖಲೆಯ 81 ಬೌಂಡರಿ, 18 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.ಅವರ ಸ್ಟ್ರೈಕ್‌ ರೇಟ್‌ 285.39 ಆಗಿತ್ತು. ಯಶ್‌ ಚೌಡೆ ಬಾರಿಸಿದ ದಾಖಲೆಯ ಶತಕದ ನೆರವಿನಿಂದ ಸರಸ್ವತಿ ವಿದ್ಯಾಲಯ ತಂಡ ನಿಗದಿತ 40 ಓವರ್‌ಗಳಲ್ಲಿ 705 ರನ್‌ಗಳನ್ನು ಸಿಡಿಸಿತ್ತು. ಆ ಮೂಲಕ ಸಿದ್ದೇಶ್ವರ ವಿದ್ಯಾಲಯ ತಂಡದ ವಿರುದ್ಧ ಬೃಹತ್‌ ಗೆಲುವು ದಾಖಲು ಮಾಡಿತು. ಈ ಪಂದ್ಯ ಕಟೋಲ್‌ ರಸ್ತೆಯ ಮನೆವಾಡಾದ ಜುಲೇಲಾಲ್‌ ಇನ್ಸ್‌ಟಿಟ್ಯೂಟ್‌ ಗ್ರೌಂಡ್‌ನಲ್ಲಿ ನಡೆದಿತ್ತು.

ಮುಂಬೈನ ಪ್ರಣವ್‌ ಧನವಾಡೆ 1009 ರನ್‌ ಬಾರಿಸಿದ್ದು ಶಾಲಾ ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಎನಿಸಿದೆ. ಇನ್ನು ಪೃಥ್ವಿ ಶಾ ಹಾಗೂ ಅರ್ಮಾನ್‌ ಜಾಫರ್‌ ಕ್ರಮವಾಗಿ 546 ರನ್‌ ಹಾಗೂ 498 ರನ್‌ ಬಾರಿಸಿದ್ದು ಅಂತರ ಶಾಲಾ ಕ್ರಿಕೆಟ್‌ನಲ್ಲಿ ದಾಖಲೆ ಎನಿಸಿದೆ.

ಇನ್ನು ವಿದರ್ಭದ ಸರಸ್ವತಿ ವಿದ್ಯಾಲಯ ಸಾಕಷ್ಟು ಪ್ರಖ್ಯಾತ ಕ್ರಿಕೆಟರ್‌ಗಳನ್ನು ರೂಪಿಸಿದ ಶಾಲೆ ಎನಿಸಿದೆ. ವಿದರ್ಭ ತಂಡ ಎರಡು ಬಾರಿ ರಣಜಿ ಟ್ರೋಫಿ ಗೆದ್ದಾಗ ತಂಡದ ನಾಯಕರಾಗಿದ್ದ ಫೈಜ್‌ ಫಜಲ್‌ ಸರಸ್ವತಿ ವಿದ್ಯಾಲಯದಲ್ಲಿಯೇ ಅಭ್ಯಾಸ ಮಾಡದ್ದರು. ಶಾಲಾ ತಂಡದ ಪರವಾಗಿ 280 ರನ್‌ ಬಾರಿಸಿದ್ದು ಅವರ ದಾಖಲೆಯಾಗಿದೆ. ಅವರ ಇನ್ನಿಂಗ್ಸ್‌, ಫಜಲ್‌ ಅವರ ಕ್ರಿಕೆಟ್‌ ಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸಿತ್ತು. ಸರಸ್ವತಿ  ವಿದ್ಯಾಲಯ ಪರವಾಗಿ ಬ್ಯಾಟಿಂಗ್‌ ಆರಂಭಿಸಿದ ಮೊದಲ ಎಸೆತದಿಂದಲೇ 13 ವರ್ಷದ ಯಶ್‌ ಚೌಡೆ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗೈದರು. ಜುಲೇಲಾಲ್‌ ಮೈದಾನದಲ್ಲಿ ಕೆಲವೇ ಹೊತ್ತಿನಲ್ಲಿಯೇ ಅವರು ದೊಡ್ಡ ಇನ್ನಿಂಗ್ಸ್‌ ಆಡುವುದು ಖಚಿತವಾಗಿತ್ತು.

ಶಂಕರ್‌ ನಗರ ಮೂಲದ ಶಾಲೆಯು ಚೌಡೆ ಬಾರಿಸಿದ ಸ್ಫೋಟಕ ಇನ್ನಿಂಗ್ಸ್‌ ಹಾಗೂ ತಿಲಕ್‌ ವಾಕೋಡೆ ಬಾರಿಸಿದ ಅಜೇಯ 127 ರನ್‌ಗಳ ನೆರವಿನಿಂದ 40 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 714 ರನ್‌ ಬಾರಿಸಿತು. ಅದಲ್ಲದೆ, ಮೊದಲ ವಿಕೆಟ್‌ಗೆ ಇವರಿಬ್ಬರು ಆಡಿದ 714 ರನ್‌ ಜೊತೆಯಾಟ ಕೂಡ ದಾಖಲೆ ಎನಿಸಿದೆ. ತಿಲಕ್‌ ವಾಕೋಡೆ ತಮ್ಮ 97 ಎಸೆತಗಳ ಇನ್ನಿಂಗ್ಸ್‌ನಲ್ಲಿ 13 ಬೌಂಡರಿಗಳನ್ನು ಸಿಡಿಸಿದ್ದರು.

ಅನಾರೋಗ್ಯ: ಟಿಂ ತೊರೆದು, ಬೆಂಗಳೂರಿಗೆ ಬಂದ ರಾಹುಲ್ ದ್ರಾವಿಡ್

ಇನ್ನು ಸಿದ್ದೇಶ್ವರ ವಿದ್ಯಾಲಯ ತಂಡದ ಪರವಾಗಿಹೃಷಬ್‌ ರಹಾಂಗ್‌ದಾಳೆ 8 ಓವರ್‌ಗಳಲ್ಲಿ 130 ರನ್‌ ನೀಡಿದರೆ, ಪಾರ್ಥ್‌ ಫಂಡೆ 8 ಓವರ್‌ಗಳಲ್ಲಿ 178 ರನ್‌, ಅಂಕುಶ್‌ ರಹಾಂಗ್‌ದಳೆ ತಮ್ಮ 8 ಓವರ್‌ಗಳ ಕೋಟಾದಲ್ಲಿ187 ರನ್‌ ನೀಡಿದರು. ಅಥರ್ವ ಕರ್ಣೆ 8 ಓವರ್‌ಗಳ ಕೋಟಾದಲ್ಲಿ 102 ರನ್‌ ಬಿಟ್ಟುಕೊಟ್ಟರು. ಇನ್ನು ಸಂಕೇತ್‌ ಸಹಾರೆ 8 ಓವರ್‌ಗಳಲ್ಲಿ 99 ರನ್‌ ಬಿಟ್ಟುಕೊಟ್ಟರು. ಎಲ್ಲರೂ ಕೂಡ ಯಶ್‌ ಚೌಡೆ ಅವರ ಬ್ಯಾಟಿಂಗ್‌ ಪ್ರಹಾರಕ್ಕೆ ಸಿಕ್ಕಿಬಿದ್ದಿದ್ದರು.

ಸೂರ್ಯಕುಮಾರ್ ಯಾದವ್ ಚಿಕ್ಕವನಿದ್ದಾಗ ನನ್ನ ಬ್ಯಾಟಿಂಗ್ ನೋಡಿಲ್ಲ ಅನ್ಸತ್ತೆ: ರಾಹುಲ್ ದ್ರಾವಿಡ್

ಐದು ಓವರ್‌ಗಳ ಆಟದಲ್ಲಿ 9 ರನ್‌ಗೆ 9 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಸಿದ್ದೇಶ್ವರ ವಿದ್ಯಾಲಯ ಪರವಾಗಿ ಕೊನೆಯ ವಿಕೆಟ್‌ಗೆ ಅಥರ್ವ ಕರ್ಣೆ ಕಣಕ್ಕಿಳಿಯಲಿಲ್ಲ. ಸಮಯಕ್ಕೆ ಸರಿಯಾಗಿ ಮೈದಾನಕ್ಕೆ ಬರದ ಕಾರಣಕ್ಕೆ ಸಿದ್ದೇಶ್ವರ ವಿದ್ಯಾಲಯ ಪರವಾಗಿ 9 ಮಂದಿಯಷ್ಟೇ ಬ್ಯಾಟಿಂಗ್‌ ಮಾಡಿದರು. ಅಂಕಿತ್‌ ಮಗೇಡ್‌ಕರ್‌ 3 ಓವರ್‌ಗಳ ಕೋಟಾದಲ್ಲಿ 1 ಮೇಡನ್‌ನೊಂದಿಗೆ  6 ರನ್‌ ನೀಡಿ 6 ವಿಕೆಟ್‌ ಉರುಳಿಸಿದರೆ, ಆರ್ತೇಶ್‌ ಅಂಬಾದಾರೆ 2 ಓವರ್‌ಗಳ ಕೋಟಾದಲ್ಲಿ1 ಮೇಡನ್‌ನೊಂದಿಗೆ 3 ರನ್‌ ನೀಡಿ 2 ವಿಕೆಟ್‌ ಉರುಳಿಸಿದರು.

click me!