ಮುಂಬೈ ಮೂಲದ 19 ವರ್ಷದ ಪ್ರತಿಭಾನ್ವಿತ ಕ್ರಿಕೆಟಿಗ ಮುಷೀರ್ ಖಾನ್, ಗಂಭೀರವಾದ ಅಪಘಾತಕ್ಕೀಡಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಲಖನೌ: ಭಾರತದ ಪ್ರತಿಭಾನ್ವಿತ ಬ್ಯಾಟರ್ ಸರ್ಫರಾಜ್ ಖಾನ್ ಸಹೋದರ, ಮುಷೀರ್ ಖಾನ್ ಉತ್ತರ ಪ್ರದೇಶದ ಲಖನೌ-ಕಾನ್ಪುರ ಮಾರ್ಗದಲ್ಲಿ ಪ್ರಯಾಣ ಮಾಡುವಾಗ ರಸ್ತೆ ಅಪಘಾತಕ್ಕೊಳಗಾಗಿದ್ದಾರೆ ಎಂದು ವರದಿಯಾಗಿದೆ.
ಮುಂಬೈ ಕ್ರಿಕೆಟ್ ತಂಡದ ಪ್ರತಿಭಾನ್ವಿತ ಆಲ್ರೌಂಡರ್ ಆಗಿರುವ ಮಷೀರ್ ಖಾನ್ ತನ್ನ ತಂದೆ ಮತ್ತು ಕೋಚ್ ಆಗಿರುವ ನೌಶಾದ್ ಖಾನ್ ಜತೆ ಇರಾನಿ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಪ್ರಯಾಣ ಮಾಡುವಾಗ ಈ ಅವಘಡ ಸಂಭವಿಸಿದೆ. ಈ ಅಪಘಾತದಲ್ಲಿ ಮುಷೀರ್ ಖಾನ್ ಹಾಗೂ ನೌಶಾದ್ ಖಾನ್ ಇಬ್ಬರಿಗೂ ಗಾಯಗಳಾಗಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
undefined
ಇತ್ತೀಚೆಗಷ್ಟೇ ನಡೆದ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ 'ಸಿ' ತಂಡವನ್ನು ಪ್ರತಿನಿಧಿಸಿದ್ದ ಮುಷೀರ್ ಖಾನ್ ಭಾರತ 'ಎ' ತಂಡದ ಎದುರು ಅಮೋಘ 181 ರನ್ ಸಿಡಿಸಿ ಅಬ್ಬರಿಸಿದ್ದರು. ಮುಷೀರ್ ಖಾನ್ ಇದುವರೆಗೂ 9 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ.
ಮುಷೀರ್ ಖಾನ್ ಅಪಘಾತಕ್ಕೊಳಗಾಗಿರುವುದರಿಂದ 19 ವರ್ಷದ ಆಟಗಾರನೀಗ ರೆಸ್ಟ್ ಆಫ್ ಇಂಡಿಯಾ ವಿರುದ್ಧ ಅಕ್ಟೋಬರ್ 01ರಿಂದ 05ರ ವರೆಗೆ ಲಖನೌದ ಏಕಾನ ಸ್ಟೇಡಿಯಂನಲ್ಲಿ ನಡೆಯಲಿರುವ ಇರಾನಿ ಟ್ರೋಫಿಯಿಂದ ಹೊರಬಿದ್ದಿದ್ದಾರೆ. ಇನ್ನು ಇದಷ್ಟೇ ಅಲ್ಲದೇ ಅಕ್ಟೋಬರ್ 11ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಆರಂಭಿಕ ಕೆಲ ಪಂದ್ಯಗಳಿಗೂ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಕೆಲ ಮಾಧ್ಯಮಗಳ ವರದಿಯ ಪ್ರಕಾರ ಮಷೀರ್ ಖಾನ್ ಕುತ್ತಿಗೆಗೆ ಬಲವಾದ ಪೆಟ್ಟು ಬಿದ್ದಿದ್ದು, ಮುಂದಿನ ಮೂರು ತಿಂಗಳುಗಳ ಕಾಲ ಕ್ರಿಕೆಟ್‌ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.
"ಮುಷೀರ್ ಖಾನ್, ಮುಂಬೈ ಕ್ರಿಕೆಟ್ ತಂಡದ ಜತೆಗೆ ಇರಾನಿ ಟ್ರೋಫಿಯಾಡಲು ಲಖನೌಗೆ ತೆರಳಿರಲಿಲ್ಲ. ಅವರು ಬಹುಶಃ ಅಝಂಘರ್‌ನಿಂದ ತಮ್ಮ ತಂದೆಯ ಜತೆಗೆ ಲಖನೌಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ" ಎಂದು ವರದಿಯಾಗಿದೆ.