ಬಹುನಿರೀಕ್ಷಿತ ಆಸ್ಟ್ರೇಲಿಯಾದಲ್ಲಿ ನಡೆಯಬೇಕಿದ್ದ ಐಸಿಸಿ ಟಿ20 ವಿಶ್ವಕಪ್ ಮುಂದೂಡುವುದು ಖಚಿತ ಎನಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಮಾತ್ರ ಬಾಕಿ ಉಳಿದಿದೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.
ನವದೆಹಲಿ(ಮೇ.23): 2020ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮುಂದೂಡಲ್ಪಡುವ ಸಾಧ್ಯತೆ ಇದೆ. ಈ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಟೂರ್ನಿ ನಡೆಯಬೇಕಿದ್ದು, ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ, ಟೂರ್ನಿ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಲಿದೆ ಎನ್ನಲಾಗಿದೆ. ಮೇ 28ರಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಸಭೆ ನಡೆಸಲಿದ್ದು, ಆ ಬಳಿಕ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂಬರುವ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಯೋಜನೆಗೆ ವೇಳಾಪಟ್ಟಿ ನಿಗದಿಯಾಗಿದೆ. ಆದರೆ ಕೊರೋನಾ ನಿಯಂತ್ರಣಕ್ಕೆ ಬರಬಹುದು ಎನ್ನುವ ಐಸಿಸಿ ನಿರೀಕ್ಷೆ ಹುಸಿಯಾಗಿದೆ. ಈಗ ಐಸಿಸಿ ಹೊಸ ಲೆಕ್ಕಾಚಾರ ಆರಂಭಿಸಿದೆ.
undefined
ಮುಂದೂಡಿಕೆಯಾಗುವ ಟೂರ್ನಿಯನ್ನು ನಡೆಸಲು ಐಸಿಸಿ ಮುಂದೆ 3 ಆಯ್ಕೆಗಳಿವೆ.
ಮೊದಲನೇ ಆಯ್ಕೆ, 2021ರ ಫೆಬ್ರವರಿ-ಮಾರ್ಚ್‌ನಲ್ಲಿ ಟೂರ್ನಿ ನಡೆಸುವುದಾಗಿದೆ. ಆದರೆ ಐಪಿಎಲ್ ಹಾಗೂ ಇಂಗ್ಲೆಂಡ್‌ನ ಭಾರತ ಪ್ರವಾಸ ಇದೇ ಸಮಯದಲ್ಲಿರುವ ಕಾರಣ, ಪ್ರಸಾರ ಹಕ್ಕು ಹೊಂದಿರುವ ಸ್ಟಾರ್ ವಾಹಿನಿ ಇದಕ್ಕೆ ಒಪ್ಪುವುದು ಅನುಮಾನ.
ಅಕ್ಟೋಬರ್-ನವೆಂಬರ್‌ನಲ್ಲಿ ಐಪಿಎಲ್ ಟಿ20 ಟೂರ್ನಿ, BCCI ಕಸರತ್ತು ಆರಂಭ?
2ನೇ ಆಯ್ಕೆ, 2021ರ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಬೇಕಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಬಿಸಿಸಿಐ ಬಿಟ್ಟುಕೊಟ್ಟು, 2022ರಲ್ಲಿ ನಡೆಸಲು ಒಪ್ಪಿದರೆ 2021ರ ಅಕ್ಟೋಬರ್-ನವೆಂಬರ್‌ನಲ್ಲಿ ಆಸ್ಪ್ರೇಲಿಯಾದಲ್ಲಿ ವಿಶ್ವಕಪ್ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ.
2020ರ ಟೂರ್ನಿ ರದ್ದುಗೊಳಿಸಿ 2022ರಲ್ಲಿ ಆಸ್ಪ್ರೇಲಿಯಾದಲ್ಲಿ ನಡೆಸುವುದು 3ನೇ ಆಯ್ಕೆಯಾಗಿದೆ. 2022ರಲ್ಲಿ ಯಾವುದೇ ಜಾಗತಿಕ ಮಟ್ಟದ ಟೂರ್ನಿ ನಿಗದಿಯಾಗಿಲ್ಲ. ಹೀಗಾಗಿ ಈ ಆಯ್ಕೆ ಸೂಕ್ತ ಎನ್ನುವ ಚರ್ಚೆ ನಡೆಯುತ್ತಿದೆ.