ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಧೋನಿ ಅಜೇಯ 30 ರನ್ ಗಳಿಸಿದರೂ, ಚೆನ್ನೈ ಸೋತಿತು. ಸೋಲುವ ಹಂತದಲ್ಲಿ ಧೋನಿ ಸಿಕ್ಸರ್ ಹೊಡೆದರೂ, ಗೆಲುವಿನ ಆಸೆಯಿದ್ದಾಗ ರನ್ ಗಳಿಸಿಲ್ಲ ಎಂಬ ಅಂಕಿ ಅಂಶಗಳು ಬಹಿರಂಗವಾಗಿವೆ.
ಬೆಂಗಳೂರು (ಮಾ.29): ಒಂದು ಕಾಲದಲ್ಲಿ ಮ್ಯಾಚ್ ಫಿನಿಶರ್, ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿದ್ದ ಎಂಎಸ್ ಧೋನಿಗೆ ವಯಸ್ಸಾಗಿದೆ ಅನ್ನೋದು ಅವರು ಆಟದಲ್ಲಿಯೇ ಗೊತ್ತಾಗುತ್ತಿದೆ. ಆರ್‌ಸಿಬಿ ವಿರುದ್ಧ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಎಂಎಸ್ ಧೋನಿ 16 ಎಸೆತದಲ್ಲಿ ಅಜೇಯ 30 ರನ್ ಸಿಡಿಸಿದರು. ಇದರಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸೇರಿತ್ತು. ಧೋನಿ ಆಡಿದ ಇನ್ನಿಂಗ್ಸ್ ಚೆನ್ನೈನ ಕೆಲ ಫ್ಯಾನ್ಸ್‌ಗಳಿಗೆ ಸಖತ್ ಖುಷಿಕೊಟ್ಟರೂ, ಚೆನ್ನೈ ಗೆಲ್ಲಬೇಕು ಎಂದು ಬಯಸಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ ತಂದಿದೆ.
ಅದಕ್ಕೆ ಕಾರಣ, ಹೀಗೆ ಬ್ಯಾಟಿಂಗ್ ಮಾಡಬಹುದಾಗಿದ್ದ ಧೋನಿ 9ನೇ ಕ್ರಮಾಂಕದಲ್ಲಿ ಅದೂ ತಂಡ ಇನ್ನೇನು ಸೋಲುವ ಹಂತದಲ್ಲಿದ್ದಾಗ ಬಂದಿದ್ದು ಸರಿ ಕಂಡಿಲ್ಲ. ಇದಕ್ಕಾಗಿ ಧೋನಿಗೆ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ತಂಡ ಗೆಲ್ಲಲೇಬೇಕು ಅನ್ನೋ ಆಸೆಯಿದ್ದರೆ ಧೋನಿಯಂಥ ಬ್ಯಾಟ್ಸ್‌ಮನ್ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡೋದು ಸರಿಯಲ್ಲ. ಅವರು ಇನ್ನಷ್ಟು ಮೇಲಿನ ಕ್ರಮಾಂಕದಲ್ಲಿ ಆಡಬೇಕಿತ್ತು. ಗೆಲುವಿನ ಆಸೆಯೇ ಇಲ್ಲದಂಥ ಹೊತ್ತಲ್ಲಿ ಬಂದು ಸಿಕ್ಸರ್ ಹೊಡೆದ ಮಾತ್ರಕ್ಕೆ ಅವರೇನು ದೇವರಾಗೋದಿಲ್ಲ ಎಂದು ಧೋನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದರ ನಡುವೆ ಧೋನಿಯ ಬ್ಯಾಟಿಂಗ್ ಕ್ಷಮತೆ ಕುಂದಿರುವ ಬಗ್ಗೆ ಅವರಲ್ಲಿ ಇನ್ನು ಒತ್ತಡವನ್ನು ತಾಳಿಕೊಳ್ಳುವ ಶಕ್ತಿಯಾಗಲಿ ಇಲ್ಲ ಎನ್ನುವಂಥ ಅಂಕಿ-ಅಂಶಗಳು ಹೊರಬಂದಿವೆ.
2023ರಿಂದ ಐಪಿಎಲ್‌ನಲ್ಲಿ ಚೆನ್ನೈ ತಂಡ ರನ್‌ಚೇಸಿಂಗ್ ವೇಳೆ ಸೋಲುವಂಥ ಸಮಯ ಬಂದಾಗ ಧೋನಿ 12 ಬೌಂಡರಿ ಹಾಗೂ 12 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಇದೇ ಅವಧಿಯಲ್ಲಿ ಚೆನ್ನೈ ತಂಡ ರನ್‌ಚೇಸಿಂಗ್ ವೇಳೆ ಗೆಲ್ಲುವಂಥ ಸಮಯದಲ್ಲಿ ಅವರು ಒಂದೇ ಒಂದು ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿಲ್ಲ ಎನ್ನುವ ಮಾಹಿತಿ ಗೊತ್ತಾಗಿದೆ.
2023-2025ರ ಐಪಿಎಲ್ (ಆರ್‌ಸಿಬಿ ಮ್ಯಾಚ್‌ವರೆಗೆ) ಅವಧಿಯಲ್ಲಿ ರನ್ ಚೇಸಿಂಗ್ ವೇಳೆ ಒಟ್ಟು 8 ಪಂದ್ಯಗಳನ್ನು ಗೆದ್ದಿದೆ. ಈ ಪಂದ್ಯಗಳಲ್ಲಿ ಧೋನಿ 4 ಇನ್ನಿಂಗ್ಸ್‌ಗಳನ್ನು ಆಡಿದ್ದು ಮೂರು ಬಾರಿ ಅಜೇಯವಾಗಿ ಉಳಿದಿದ್ದಾರೆ. ಇವುಗಳಿಂದ ಧೋನಿ ಬಾರಿಸಿದ್ದು ಕೇವಲ 3 ರನ್. ಎದುರಿಸಿದ್ದ 9 ಎಸೆತ. ಒಂದು ಪಂದ್ಯದಲ್ಲಿ ಸೊನ್ನೆಗೆ ಔಟಾಗಿದ್ದಾರೆ.
ಆರ್‌ಸಿಬಿ ಎದುರು ಸೋಲುತ್ತಿದ್ದಂತೆಯೇ ಧೋನಿಯನ್ನೇ ಟ್ರೋಲ್ ಮಾಡಿದ ಸಿಎಸ್‌ಕೆ ಫ್ಯಾನ್ಸ್!
ಇದೇ ಅವಧಿಯಲ್ಲಿ ಚೆನ್ನೈ ತಂಡ ರನ್‌ಚೇಸಿಂಗ್ ವೇಳೆ ಸೋಲುವಂಥ ಸಮಯ ಬಂದಾಗ ಎಂಎಸ್ ಧೋನಿ 6 ಪಂದ್ಯಗಳನ್ನು ಅಡಿದ್ದು, 5ರಲ್ಲಿ ಕ್ರೀಸ್‌ಗೆ ಇಳಿದಿದ್ದಾರೆ. 4 ಬಾರಿ ಅಜೇಯವಾಗಿಯೂ ಉಳಿದಿದ್ದರು. ಇದರಲ್ಲಿ ಅವರು 150 ರನ್ ಬಾರಿಸಿದ್ದು ಗರಿಷ್ಠವಾಗಿದೆ. ಅಜೇಯ 37 ರನ್ ಬಾರಿಸಿದ್ದು ಗರಿಷ್ಠ ಮೊತ್ತ 73 ಎಸೆತಗಳನ್ನೂ ಕೂಡು ಅವರು ಎದುರಿಸಿದ್ದಾರೆ. ಈ ಪಂದ್ಯಗಳಿಂದ ಅವರು 12 ಬೌಂಡರಿ, 12 ಸಿಕ್ಸರ್ ಬಾರಿಸಿದ್ದಾರೆ.
ಒಂದು ವೇಳೆ ವಿಕೆಟ್ ಕೀಪರ್ ಆಗದಿದ್ರೆ ಧೋನಿ ಏನಾಗ್ತಿದ್ರು? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಕ್ಯಾಪ್ಟನ್ ಕೂಲ್!
ಇದರಲ್ಲಿ ಗೊತ್ತಾಗುವ ವಿಚಾರ ಏನೆಂದರೆ, ಧೋನಿ ಸೋಲುವಂಥ ಪಂದ್ಯಗಳಲ್ಲಿ ಭರ್ಜರಿಯಾಗಿ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸಿದರೂ ತಂಡಕ್ಕೆ ಗೆಲುವು ಕೊಡಲು ಸಾಧ್ಯವಾಗಿಲ್ಲ. ಇನ್ನು ಗೆಲ್ಲುವಂಥ ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ರನ್ ಹರಿದಿಲ್ಲ.