2025ರ ಐಪಿಎಲ್‌ನಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ 50 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಚೆಪಾಕ್‌ನಲ್ಲಿ 17 ವರ್ಷಗಳ ಬಳಿಕ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಿದ್ದು, ವಿರಾಟ್ ಕೊಹ್ಲಿ ಸಂಭ್ರಮಿಸಿದ್ದಾರೆ.
ಬೆಂಗಳೂರು: 2025ರ ಐಪಿಎಲ್ ಟೂರ್ನಿಯಲ್ಲಿ ಬದ್ದ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 50 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿದೆ. ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಟೂರ್ನಿಯಲ್ಲಿ ಸತತ ಎರಡನೇ ಗೆಲುವು ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಈ ಗೆಲುವು ಆರ್‌ಸಿಬಿ ಪಾಲಿಗೆ ಒಂದು ರೀತಿಯ ಅವಿಸ್ಮರಣೀಯ ಗೆಲುವು ಎನಿಸಿಕೊಂಡಿದೆ. ಇದಕ್ಕೆ ಕಾರಣ ಚೆಪಾಕ್ ಮೈದಾನದಲ್ಲಿ ಆರ್‌ಸಿಬಿ ತಂಡವು ಕಳೆದ 17 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಎದುರು ಗೆಲುವಿಗಾಗಿ ಹಾತೊರೆಯುತ್ತಿತ್ತು. ಈ ಮೈದಾನದಲ್ಲಿ ಸಿಎಸ್‌ಕೆ ಎದುರು ಚೊಚ್ಚಲ ಆವೃತ್ತಿಯ ಐಪಿಎಲ್ ಹೊರತುಪಡಿಸಿ ಉಳಿದ 8 ಮುಖಾಮುಖಿಯಲ್ಲಿ ಆರ್‌ಸಿಬಿ ಸೋಲು ಅನುಭವಿಸಿತ್ತು. ಆರ್‌ಸಿಬಿ ತಂಡವು ಚೆಪಾಕ್‌ನಲ್ಲಿ 2008ರಲ್ಲಿ ಕೊನೆಯ ಬಾರಿ ಗೆಲುವಿನ ನಗೆ ಬೀರಿತ್ತು.
ಇನ್ನು ಆರ್‌ಸಿಬಿ ತಂಡವು ಚೆನ್ನೈ ತವರು ಮೈದಾನದಲ್ಲೇ ಅತಿದೊಡ್ಡ ರನ್ ಅಂತರದ ಗೆಲುವು ಸಾಧಿಸುವ ಮೂಲಕ ಗಾಯಕ್ವಾಡ್ ಪಡೆಯ ಮೇಲೆ ಸ್ವೀಟ್ ರಿವೇಂಜ್ ತೀರಿಸಿಕೊಂಡಿದೆ. ಇದರ ಬೆನ್ನಲ್ಲೇ 36 ವರ್ಷದ ವಿರಾಟ್ ಕೊಹ್ಲಿ, ಡ್ರೆಸ್ಸಿಂಗ್ ರೂಮ್‌ನಲ್ಲಿ ಬಿಂದಾಸ್ ಸ್ಟೆಪ್ಸ್ ಹಾಕುವ ಮೂಲಕ ಗೆಲುವನ್ನು ಸಂಭ್ರಮಿಸಿದ್ದಾರೆ. ತಾವು ನಾಯಕರಾಗಿದ್ದಾಗ ಗೆಲ್ಲಲು ಸಾಧ್ಯವಾಗದನ್ನು ವಿರಾಟ್ ಕೊಹ್ಲಿ, ತಂಡದ ಆಟಗಾರನಾಗಿದ್ದುಕೊಂಡು ಎರಡನೇ ಬಾರಿಗೆ ಚೆಪಾಕ್ ಮೈದಾನದಲ್ಲಿ ಆರ್‌ಸಿಬಿ ಗೆಲುವಿನ ಭಾಗ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: IPL 2025: RCB ಚೆಪಾಕ್ ಕೋಟೆಯನ್ನು ಭೇದಿಸಿದ್ದು ಹೇಗೆ?
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ ತಂಡವು 196 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಆರ್‌ಸಿಬಿ ಪರ ವಿರಾಟ್ ಕೊಹ್ಲಿ 30 ಎಸೆತಗಳನ್ನು ಎದುರಿಸಿ 31 ರನ್ ಗಳಿಸಿ ನೂರ್ ಅಹಮದ್‌ಗೆ ವಿಕೆಟ್ ಒಪ್ಪಿಸಿದರು. ಇನ್ನು ಗುರಿ ಬೆನ್ನತ್ತಿದ ಸಿಎಸ್‌ಕೆ ತಂಡವು ನಿಗದಿತ 20 ಓವರ್‌ಗಳಲ್ಲಿ 146 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಪಾಲಿನ ಮುಂದಿನ ಮುಂದಿನ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ದ ಕಣಕ್ಕಿಳಿಯಲಿದೆ. ಏಪ್ರಿಲ್ 02ರಂದು ಆರ್‌ಸಿಬಿ ತಂಡವು ತವರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಭ್‌ಮನ್ ಗಿಲ್ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.