
ನವದೆಹಲಿ (ಜ.9):ಕ್ರಿಕೆಟ್ ಪಂದ್ಯದ ವೇಳೆ ಕುಸಿದು ಬಿದ್ದು ನಿಧನರಾದ ಮಿಜೋರಾಂನ ಮಾಜಿ ರಣಜಿ ಆಟಗಾರ ಕೆ. ಲಾಲ್ರೆಮ್ರುಟಾ ಅವರ ನಿಧನಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂತಾಪ ಸೂಚಿಸಿದೆ. "ಮಿಜೋರಾಂ ಕ್ರಿಕೆಟಿಗ ಕೆ. ಲಾಲ್ರೆಮ್ರುವಾಟಾ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ರಣಜಿ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಜೋರಾಂ ಅನ್ನು ಹೆಮ್ಮೆಯಿಂದ ಪ್ರತಿನಿಧಿಸಿದ್ದರು. ಅವರ ಕುಟುಂಬ, ಸ್ನೇಹಿತರು ಮತ್ತು ಮಿಜೋರಾಂ ಕ್ರಿಕೆಟ್ ಸಮುದಾಯಕ್ಕೆ ಬಿಸಿಸಿಐ ದುಃಖ ಭರಿಸುವ ಶಕ್ತಿ ನೀಡಲಿ, ನಮ್ಮ ಪ್ರಾರ್ಥನೆಗಳು ಅವರೊಂದಿಗೆ ಇದೆ" ಎಂದು ಬಿಸಿಸಿಐ ಡೊಮೆಸ್ಟಿಕ್ ಎಕ್ಸ್‌ನಲ್ಲಿ ಹಂಚಿಕೊಂಡಿದೆ.
ವೆಂಗ್ನುವೈ ರೈಡರ್ಸ್ CC ಮತ್ತು ಚಾವ್ನ್‌ಪುಯಿ ILMOV CC ನಡುವಿನ ಖಲೀದ್ ಸ್ಮಾರಕ 2 ನೇ ಡಿವಿಷನ್ ಸ್ಕ್ರೀನಿಂಗ್ ಟೂರ್ನಮೆಂಟ್ ಪಂದ್ಯದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ವೆಂಗ್ನುವೈ ರೈಡರ್ಸ್ CC ಪರ ಆಡುತ್ತಿದ್ದ ಲಾಲ್ರೆಮ್ರುವಾಟಾ ಆಟ ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ತಕ್ಷಣವೇ ಅವರ ಸಹಾಯಕ್ಕೆ ಆಟಗಾರರು ಬಂದಿದ್ದರು. ನಂತರ ಅವರನ್ನು ವೈದ್ಯಕೀಯ ಚಿಕಿತ್ಸೆಗೆ ಕರೆದೊಯ್ಯಲಾಯಿತು, ಆದರೆ, ಚಿಕಿತ್ಸೆ ಫಲಕಾರಿಯಾಗಿದೇ ಅವರು ಸಾವು ಕಂಡಿದ್ದಾರೆ.
ಎರಡನೇ ಡಿವಿಷನ್ ಪಂದ್ಯಾವಳಿಯಲ್ಲಿ ಆಡುವಾಗ ಲಾಲ್ರೆಮ್ರುವಾಟಾ ಪಾರ್ಶ್ವವಾಯುವಿಗೆ ಒಳಗಾದರು ಎಂದು ಮಿಜೋರಾಂ ಕ್ರಿಕೆಟ್ ಅಸೋಸಿಯೇಷನ್ (CAM) ತನ್ನ ಹೇಳಿಕೆಯಲ್ಲಿ ತಿಳಿಸಿದೆ. CAM ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದೆ ಮತ್ತು ಅವರ ಸಾವು ಮಿಜೋರಾಂ ಕ್ರಿಕೆಟ್‌ಗೆ ಅಪಾರ ನಷ್ಟವಾಗಿದೆ ಎಂದು ಹೇಳಿದೆ.
ಲಾಲ್ರೆಮ್ರುವಾಟಾ ರಣಜಿ ಟ್ರೋಫಿಯಲ್ಲಿ ಎರಡು ಬಾರಿ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಏಳು ಬಾರಿ ಮಿಜೋರಾಂ ಅನ್ನು ಪ್ರತಿನಿಧಿಸಿದ್ದರು. ಅವರು ಸ್ಥಳೀಯ ಮಟ್ಟದಲ್ಲಿ ಹಲವಾರು ಕ್ಲಬ್ ಪರವಾಗಿ ಆಡಿದ್ದರು. ಅವರು ಸೀನಿಯರ್ ಟೂರ್ನಮೆಂಟ್ ಕಮಿಟಿಯಲ್ಲಿ ಸೇವೆ ಸಲ್ಲಿಸಿದರು.
ವಿಕೆಟ್ ಕೀಪರ್ ಆಗಿದ್ದ ಲಾಲ್ರೆಮ್ರುವಾಟಾ 2018 ರಲ್ಲಿ ಮೇಘಾಲಯ ವಿರುದ್ಧ ಪ್ರಥಮ ದರ್ಜೆ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು ಮತ್ತು 2022 ರಲ್ಲಿ ನಾಗಾಲ್ಯಾಂಡ್ ವಿರುದ್ಧ ತಮ್ಮ ಕೊನೆಯ ಪಂದ್ಯವನ್ನು ಆಡಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.