
ಕೊಪ್ಪಳ: ಟೀಂ ಇಂಡಿಯಾ ಕ್ರಿಕೆಟಿಗ ಇಶಾಂತ್ ಶರ್ಮಾ ಇಲ್ಲಿನ ಗಂಗಾವತಿ ತಾಲೂಕಿನಲ್ಲಿರುವ ಪುರಾಣ ಪ್ರಸಿದ್ದ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿ ಆಂಜನೇಯನ ದರ್ಶನ ಪಡೆದುಕೊಂಡಿದ್ದಾರೆ. ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ಟೀಂ ಇಂಡಿಯಾ ನೀಳಕಾಯದ ವೇಗಿ ಇಶಾಂತ್ ಶರ್ಮಾ ಬರೋಬ್ಬರಿ 575 ಮೆಟ್ಟಿಲುಗಳನ್ನು ಏರಿ ಹನುಮನ ದರ್ಶನ ಪಡೆದುಕೊಂಡಿದ್ದಾರೆ.
ಕಳೆದ ವರ್ಷ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನಲ್ಲಿ ಇಶಾಂತ್ ಶರ್ಮಾ ಅವರನ್ನು ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು 75 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇಶಾಂತ್ ಶರ್ಮಾ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಗುಜರಾತ್ ಟೈಟಾನ್ಸ್ ಪರ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇಶಾಂತ್ ಶರ್ಮಾ 7 ಪಂದ್ಯಗಳನ್ನಾಡಿ 4 ವಿಕೆಟ್ ಕಬಳಿಸಲಷ್ಟೇ ಶಕ್ತರಾಗಿದ್ದರು. ಇದೀಗ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ವಿರಾಟ್ ಕೊಹ್ಲಿಯ ಆಪ್ತ ಗೆಳೆಯ ಇಶಾಂತ್ ಶರ್ಮಾ, ಒಂದು ದಶಕಗಳ ಕಾಲ ಟೀಂ ಇಂಡಿಯಾದ ಪ್ರಮುಖ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಆದರೆ 2021ರ ನವೆಂಬರ್‌ನಿಂದೀಚೆಗೆ ಡೆಲ್ಲಿ ಮೂಲದ ಇಶಾಂತ್ ಶರ್ಮಾ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದಾರೆ. ಇದೀಗ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲು ಎದುರು ನೋಡುತ್ತಿದ್ದಾರೆ.
ಟೀಂ ಇಂಡಿಯಾ ಕ್ರಿಕೆಟಿಗ ಇಶಾಂತ್ ಶರ್ಮಾ ಟ್ರ್ಯಾಕ್ ರೆಕಾರ್ಡ್
2007ರಲ್ಲಿ ಇಶಾಂತ್ ಶರ್ಮಾ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಆದರೆ ಪದೇ ಪದೇ ಗಾಯದ ಸಮಸ್ಯೆ ಅವರನ್ನು ಇನ್ನಿಲ್ಲದಂತೆ ಕಾಡಿತು. ಭಾರತ ಪರ ನೂರಕ್ಕೂ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ಕೆಲವೇ ಕೆಲವು ವೇಗದ ಬೌಲರ್‌ಗಳಲ್ಲಿ ಇಶಾಂತ್ ಶರ್ಮಾ ಕೂಡಾ ಒಬ್ಬರಾಗಿದ್ದಾರೆ. ಭಾರತ ಪರ ಇಶಾಂತ್ ಶರ್ಮಾ 105 ಟೆಸ್ಟ್, 80 ಏಕದಿಕ ಹಾಗೂ 14 ಟಿ20 ಪಂದ್ಯಗಳನ್ನಾಡಿ ಕ್ರಮವಾಗಿ 311, 115 ಹಾಗೂ 8 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
2016ರವರೆಗೆ ಟೀಂ ಇಂಡಿಯಾದ ಪ್ರಮುಖ ವೇಗದ ಅಸ್ತ್ರವಾಗಿ ಗುರುತಿಸಿಕೊಂಡಿದ್ದ ಇಶಾಂತ್ ಶರ್ಮಾ, ಇದಾದ ಬಳಿಕ ಮೊಹಮ್ಮದ್ ಶಮಿ ಹಾಗೂ ಜಸ್ಪ್ರೀತ್ ಬುಮ್ರಾ, ಉಮೇಶ್ ಯಾದವ್ ಎಂಟ್ರಿ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರಾಗತೊಡಗಿದರು. 2021ರಿಂದೀಚೆಗೆ ಇಶಾಂತ್ ಶರ್ಮಾ ಅವರನ್ನು ಬಿಸಿಸಿಐ ನಿರಂತರವಾಗಿ ಕಡೆಗಣಿಸುತ್ತಾ ಬಂದಿದೆ.
ಇನ್ನು ಅಂಜನಾದ್ರಿಯ ಬಗ್ಗೆ ಹೇಳುವುದಾದರೇ, ಇದು ಕೊಪ್ಪಳ ಜಿಲ್ಲೆಯ ಐತಿಹಾಸಿಕ ತಾಣಗಳಲ್ಲಿ ಒಂದಾಗಿದೆ. ಇದನ್ನು ಹನುಮಂತನ ಜನ್ಮಸ್ಥಳವೆಂದು ಗುರುತಿಸಲಾಗುತ್ತಿದೆ. ಈ ಸ್ಥಳವನ್ನು ಪುರಾಣಗಳಲ್ಲಿ ಕಿಷ್ಕಿಂದೆ ಎಂದು ಕರೆಯಲಾಗುತ್ತಿತ್ತು. ಅಂಜನಾದ್ರಿ ಬೆಟ್ಟದ ತುದಿಯಲ್ಲಿ ಹನುಮಂತನ ದೇವಸ್ಥಾನವಿದ್ದು, ಇದಕ್ಕೆ 574 ಮೆಟ್ಟಿಲುಗಳಿವೆ. ಈ ಹನುಮನ ದರ್ಶನ ಪಡೆಯಲು ದೇಶ-ವಿದೇಶಗಳಿಂದ ಭಕ್ತರು ಬರುತ್ತಾರೆ. ಅಂಜನಾದ್ರಿ ಬೆಟ್ಟದ ತುದಿಯಿಂದ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಈ ಬೆಟ್ಟಕ್ಕೆ ಭೇಟಿ ನೀಡುತ್ತಾರೆ.
ಅಂಜನಾದ್ರಿ ಬೆಟ್ಟದ ವಿವಾದ
ಅಂಜನಾದ್ರಿ ಬೆಟ್ಟದ ಮೇಲಿರುವ ಆಂಜನೇಯ ದೇವಸ್ಥಾನದ ಪೂಜಾ ಹಕ್ಕಿಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ವಿವಾದವಿದೆ. ಈ ದೇವಸ್ಥಾನವು ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿದೆ. ಹಲವು ವರ್ಷಗಳಿಂದ ಇಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರುವ ವಿದ್ಯಾದಾಸ್ ಬಾಬಾ ಅವರು, ತಮಗೇ ಪೂಜೆಯ ಹಕ್ಕು ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ವಿದ್ಯಾದಾಸ್ ಬಾಬಾ ಅವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಮಧ್ಯಂತರ ಆದೇಶ ನೀಡಿತ್ತು. ಅಲ್ಲದೆ, ಅವರಿಗೆ ಬೆಟ್ಟದ ಮೇಲೆ ಮೂಲಭೂತ ಸೌಕರ್ಯಗಳಿರುವ ಕೊಠಡಿ ಒದಗಿಸುವಂತೆಯೂ ಸೂಚಿಸಿತ್ತು.
ಆದರೆ ಕಳೆದ ಆಗಸ್ಟ್‌ನಲ್ಲಿ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಇಲ್ಲಿನ ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದಾಗ ಬೇರೊಬ್ಬ ಅರ್ಚಕರು ಪೂಜೆ ಸಲ್ಲಿಸಿದ್ದರು. ಇದನ್ನು ವಿದ್ಯಾದಾಸ್ ಬಾಬಾ ವಿರೋಧಿಸಿದ್ದರು. ಜೊತೆಗೆ, ಬೇರೊಬ್ಬ ಅರ್ಚಕರು ಪೂಜೆ ಸಲ್ಲಿಕೆ ಮಾಡಿದ್ದನ್ನು ವಿಡಿಯೋ ಮಾಡಿಟ್ಟುಕೊಂಡು, ಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದ್ದರು. ಇದಾದ ಬಳಿಕ, ದೇವಸ್ಥಾನದ ಹುಂಡಿ ಹಣದ ವಿಚಾರವಾಗಿಯೂ ವಿದ್ಯಾದಾಸ್ ಬಾಬಾ ಮತ್ತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ರಾವ್ ನಡುವೆ ಮಾತಿನ ಚಕಮಕಿ ನಡೆದಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.