
ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಬಲಿಷ್ಠ ನ್ಯೂಜಿಲೆಂಡ್ ಎದುರು 4 ವಿಕೆಟ್ ಅಂತರದ ರೋಚಕ ಜಯ ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇನ್ನು ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿದ್ದ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತಂಡವು ಪ್ರಶಸ್ತಿ ಸುತ್ತಿನಲ್ಲಿ ಮುಗ್ಗರಿಸಿ ನಿರಾಸೆ ಅನುಭವಿಸಿದೆ. ಇದರ ಬೆನ್ನಲ್ಲೇ ಕಿವೀಸ್ ನಾಯಕ ಸ್ಯಾಂಟ್ನರ್, ಫೈನಲ್ ಸೋಲಿಗೆ ಕಾರಣ ಏನು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ ತಂಡವು 251 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ್ದ ಭಾರತ ತಂಡಕ್ಕೆ ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಟೀಂ ಇಂಡಿಯಾ 6 ವಿಕೆಟ್ ಕಳೆದುಕೊಂಡು ಇನ್ನೂ 6 ಎಸೆತ ಬಾಕಿ ಇರುವಂತೆಯೇ ಗೆಲುವಿನ ಕೇಕೆ ಹಾಕಿತು. ರೋಹಿತ್ ಶರ್ಮಾ 76 ರನ್ ಸಿಡಿಸಿದರೆ, ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ 48 ಹಾಗೂ ಕನ್ನಡಿಗ ಕೆ ಎಲ್ ರಾಹುಲ್ ಅಜೇಯ 34 ರನ್ ಸಿಡಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.
'ಇದೊಂದು ಒಳ್ಳೆಯ ಟೂರ್ನಮೆಂಟ್ ಆಗಿತ್ತು. ನಾವು ಒಂದು ತಂಡವಾಗಿ ಹಲವು ಸವಾಲುಗಳನ್ನು ಒಟ್ಟಾಗಿಯೇ ಎದುರಿಸಿದ್ದೇವೆ. ಆದರೆ ನಾವಿಂದು ನಮಗಿಂತ ಉತ್ತಮವಾದ ತಂಡದ ಎದುರು ಸೋತಿದ್ದೇವೆ. ವಿವಿಧ ಸಮಯದಲ್ಲಿ ತಂಡದ ಎಲ್ಲಾ ಆಟಗಾರರು ಒಂದಲ್ಲಾ ಒಂದು ರೀತಿಯಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ' ಎಂದು ಮಿಚೆಲ್ ಸ್ಯಾಂಟ್ನರ್ ಹೇಳಿದ್ದಾರೆ.
'ರೋಹಿತ್ ಶರ್ಮಾ ಹಾಗೂ ಶುಭ್‌ಮನ್ ಗಿಲ್ ಜತೆಯಾಟ ಅದ್ಭುತವಾಗಿತ್ತು. ಅವರು ಪಂದ್ಯವನ್ನು ಭಾರತದತ್ತ ವಾಲುವಂತೆ ಮಾಡಿದರು. ರೋಹಿತ್ ಶರ್ಮಾ ಅವರಂತೂ ಬಹುತೇಕ ಪ್ರತಿ ಎಸೆತದಲ್ಲೂ ರನ್ ಗಳಿಸುತ್ತಿದ್ದರು. ಆಗಲೇ ಪಂದ್ಯ ಕೈಜಾರುತ್ತಿದೆ ಎಂದು ನಮಗನಿಸಲು ಶುರುವಾಯಿತು ಎಂದು ಸ್ಯಾಂಟ್ನರ್ ಫೈನಲ್ ಸೋಲಿಗೆ ಕಾರಣ ಬಿಚ್ಚಿಟ್ಟಿದ್ದಾರೆ.
ಕಿವೀಸ್ ಎದುರಿನ 25 ವರ್ಷ ಹಿಂದಿನ ಲೆಕ್ಕ ಚುಕ್ತಾ ಮಾಡಿದ ಭಾರತ!
'ಭಾರತ ತಂಡದ ಬೌಲಿಂಗ್ ವಿಭಾಗ ಚೆನ್ನಾಗಿತ್ತು. ಪವರ್‌ಪ್ಲೇ ಬಳಿಕ ನಾವು ಕೆಲವು ವಿಕೆಟ್ ಕಳೆದುಕೊಂಡಿದ್ದು, ನಮ್ಮ ರನ್ ಗಳಿಸುವ ವೇಗಕ್ಕೆ ಕಡಿವಾಣ ಬೀಳುವಂತೆ ಮಾಡಿತು. ಎದುರಾಳಿ ತಂಡದ ಸ್ಪಿನ್ನರ್ ಬೌಲರ್‌ಗಳಿಗೆ ನಾವು ಗೌರವ ಕೊಡಲೇಬೇಕು. ಅವರೆಲ್ಲರೂ ವಿಶ್ವದರ್ಜೆಯ ಬೌಲರ್‌ಗಳಾಗಿದ್ದಾರೆ. ನಾವು 20ರಿಂದ 25 ರನ್ ನಿರೀಕ್ಷೆ ಮಾಡಿದ್ದಕ್ಕಿಂತ ಕಡಿಮೆ ಮೊತ್ತ ದಾಖಲಿಸಿದೆವು. ಇದು ಫಲಿತಾಂಶದ ಮೇಲೂ ಪರಿಣಾಮ ಬೀರಿತು' ಎಂದು ಮಿಚೆಲ್ ಸ್ಯಾಂಟ್ನರ್ ಹೇಳಿದ್ದಾರೆ.
ನನಗೆ ನನ್ನ ತಂಡದಲ್ಲಿರುವ ಆಟಗಾರರ ಪ್ರದರ್ಶನದ ಬಗ್ಗೆ ಹೆಮ್ಮೆಯಿದೆ. ನಮ್ಮದು ಯುವ ಹಾಗೂ ಅನುಭವಿಗಳನ್ನೊಳಗೊಂಡ ತಂಡವಾಗಿದ್ದು, ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಆಡಿದರು. ವಿವಿಧ ಸಂದರ್ಭದಲ್ಲಿ ಹೊಣೆಯರಿತು ಆಡುವಂತೆ ಆಟಗಾರರಿದ್ದರೇ ತಂಡವನ್ನು ನಿರ್ವಹಿಸುವುದು ಸುಲಭ ಎಂದು ಕಿವೀಸ್ ಪಡೆಯನ್ನು ಸ್ಯಾಂಟ್ನರ್ ಕೊಂಡಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.