
ಅಹಮದಾಬಾದ್: ಈ ಬಾರಿ ಐಪಿಎಲ್‌ನಲ್ಲಿ 7ನೇ ಶತಕ ದಾಖಲಾಗಿದೆ. ಗುರುವಾರ ಗುಜರಾತ್ ಟೈಟಾನ್ಸ್ ವಿರುದ್ದ ಲಖನ್ ಸೂಪರ್ ಜೈಂಟ್ಸ್‌ನ ಮಿಚೆಲ್ ಮಾರ್ಷ್ ಶತಕ ಬಾರಿಸಿದರು. ಅವರು 64 ಎಸೆತಗಳಲ್ಲಿ 10 ಬೌಂಡರಿ, 8 ಸಿಕರ್‌ನೊಂದಿಗೆ 117 ರನ್ ಸಿಡಿಸಿದರು. ಇದರೊಂದಿಗೆ ತಂಡ 2 ವಿಕೆಟ್‌ಗೆ 235 ರನ್ ಕಲೆಹಾಕಿತು. ಇದೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಆರಂಭಿಕ ಬ್ಯಾಟರ್ ಮಿಚೆಲ್ ಮಾರ್ಷ್, 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಈ ಬಾರಿ ಐಪಿಎಲ್‌ನಲ್ಲಿ ವಿದೇಶಿ ಆಟಗಾರನಿಂದ ದಾಖಲಾದ ಮೊದಲ ಶತಕವಿದು. ಇದಕ್ಕೂ ಮುನ್ನ ವೈಭವ ಸೂರ್ಯ ವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ಪ್ರಿಯಾನ್ಸ್ ಆರ್ಯ, ಕೆ.ಎಲ್.ರಾಹುಲ್, ಸಾಯಿ ಸುದರ್ಶನ್ ಶತಕ ಬಾರಿಸಿದ್ದರು. ಇನ್ನು, ಐಪಿಎಲ್‌ನಲ್ಲಿ ಶತಕ ಬಾರಿಸಿದ ಮೊದಲ ಸಹೋದರರು ಎಂಬ ಖ್ಯಾತಿಗೆ ಮಿಚೆಲ್ ಮಾರ್ಷ್ ಹಾಗೂ ಶಾನ್ ಮಾರ್ಷ್ ಪಾತ್ರರಾಗಿದ್ದಾರೆ. 2008ರಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್(ಈಗ ಪಂಜಾಬ್ ಕಿಂಗ್ಸ್) ಪರ ಶಾನ್ ಮಾರ್ಷ್ ಶತಕ ಬಾರಿಸಿದ್ದರು.
ಲಖನೌಗೆ ಶರಣಾದ ಟೈಟಾನ್ಸ್
ಅಹಮದಾಬಾದ್: ರನ್ ಮಳೆಯೇ ಹರಿದ ಗುರುವಾರದ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ 33 ರನ್ ಗೆಲುವು ಸಾಧಿಸಿದೆ. ಈಗಾಗಲೇ ಪ್ಲೇ-ಆಫ್ ಸ್ಥಾನ ಖಚಿತಪಡಿಸಿಕೊಂಡಿದ್ದ ಗುಜರಾತ್ ಟೈಟಾನ್ಸ್ ಈ ಪಂದ್ಯದ ಸೋಲಿನ ಹೊರತಾಗಿಯೂ ಅಗ್ರಸ್ಥಾನದಲ್ಲೇ ಉಳಿಯಿತು. ತಂಡ 13 ಪಂದ್ಯಗಳನ್ನಾಡಿದ್ದು, 9ರಲ್ಲಿ ಗೆಲುವು, 4ರಲ್ಲಿ ಸೋಲಿನೊಂದಿಗೆ 18 ಅಂಕ ಸಂಪಾದಿಸಿದೆ. ಮತ್ತೊಂದೆಡೆ ಲಖನೌ ಟೂರ್ನಿಯಲ್ಲಿ ಸತತ 4 ಸೋಲುಗಳ ಬಳಿಕ ಗೆಲುವಿನ ಸಿಹಿ ಅನುಭವಿಸಿದೆ. ತಂಡಕ್ಕೆ ಇದು 13 ಪಂದ್ಯಗಳಲ್ಲಿ 5ನೇ ಗೆಲುವು. ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವ ರಿಷಭ್ ಪಂತ್ ಪಡೆ, ಪ್ರತಿಷ್ಠೆಗಾಗಿ ಹೋರಾಡುತ್ತಿದೆ.
ಮೊದಲು ಬ್ಯಾಟ್ ಮಾಡಿದ ಲಖನೌ ಸೂಪರ್ ಜೈಂಟ್ಸ್ ಸ್ಫೋಟಕ ಆಟವಾಡಿತು. ಮಿಚೆಲ್ ಮಾರ್ಷ್ ಶತಕದ ನೆರವಿನಿಂದ ತಂಡ 2 ವಿಕೆಟ್‌ಗೆ 235 ರನ್ ಕಲೆಹಾಕಿತು. ಮಾರ್ಕ್‌ರಮ್ 24 ಎಸೆತಕ್ಕೆ 36 ರನ್ ಗಳಿಸಿ ಔಟಾದ ಬಳಿಕ, ಮಿಚೆಲ್ ಮಾರ್ಷ್-ನಿಕೋಲಸ್ ಪೂರನ್ 52 ಎಸೆತಕ್ಕೆ 121 ರನ್ ಜೊತೆಯಾಟವಾಡಿದರು. ಮಿಚೆಲ್ ಮಾರ್ಷ್ 64 ಎಸೆತಕ್ಕೆ 117 ರನ್ ಸಿಡಿಸಿದರೆ, ಪೂರನ್ 27 ಎಸೆತಕ್ಕೆ ಔಟಾಗದೆ 56 ರನ್ ಬಾರಿಸಿದರು. ರಿಷಭ್ ಪಂತ್ 6 ಎಸೆತಕ್ಕೆ ಎರಡು ಸಿಕ್ಸರ್ ಸಹಿತ ಔಟಾಗದೆ 16 ರನ್ ಗಳಿಸಿದರು.
ಬೃಹತ್ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ 9 ವಿಕೆಟ್‌ಗೆ 202 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಸಾಯಿ ಸುದರ್ಶನ್(21), ನಾಯಕ ಶುಭ್‌ಮನ್ ಗಿಲ್(35), ಜೋಸ್ ಬಟ್ಲರ್(33) ಈ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸಲಿಲ್ಲ. ಸೋಲಿನತ್ತ ಸಾಗುತ್ತಿದ್ದ ತಂಡವನ್ನು ಶಾರುಖ್ ಖಾನ್(29 ಎಸೆತಕ್ಕೆ 57), ರುಥರ್‌ಫೋರ್ಡ್(38) ಗೆಲುವಿನತ್ತ ಕೊಂಡೊಯ್ದರೂ, ಕೊನೆಯಲ್ಲಿ ಎಡವಿದ ತಂಡ ಲಖನೌಗೆ ಶರಣಾಯಿತು. ಡೆತ್ ಓವರ್‌ನಲ್ಲಿ ಆವೇಶ್ ಖಾನ್ ಅದ್ಭುತ ದಾಳಿ ನಡೆಸುವ ಮೂಲಕ ಪಂದ್ಯ ಲಖನೌ ಸೂಪರ್ ಜೈಂಟ್ಸ್ ಪರ ವಾಲುವಂತೆ ಮಾಡಿದರು.
ಸ್ಕೋರ್: ಲಖನೌ 20 ಓವರಲ್ಲಿ 235/2 (ಮಿಚೆಲ್ 117, ಪೂರನ್ ಔಟಾಗದೆ 56, ಕಿಶೋರ್ 1-34), ಗುಜರಾತ್ 20 ಓವರಲ್ಲಿ 202/9 (ಶಾರುಖ್ 57, ರುಥರ್‌ಫೋರ್ಡ್ 38, ಒರೌರ್ಕೆ 3-27)
ಪಂದ್ಯಶ್ರೇಷ್ಠ: ಮಿಚೆಲ್ ಮಾರ್ಷ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.