
ಕೋಲ್ಕತ್ತಾ (ಮೇ.21): 2025 ರ ಐಪಿಎಲ್ ಸಮಯದಲ್ಲಿ ತಮಗೆ ಆದ ಭಯಾನಕ ಅನುಭವವನ್ನು ಇಂಗ್ಲೆಂಡ್‌ನ ಸ್ಟಾರ್ ಆಲ್‌ರೌಂಡರ್ ಮೊಯಿನ್ ಅಲಿ ಹಂಚಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಉದ್ವಿಗ್ನತೆಯಿಂದಾಗಿ ಐಪಿಎಲ್ ಅನ್ನು ಮಧ್ಯದಲ್ಲಿಯೇ ತೊರೆಯಬೇಕಾಯಿತು ಎಂದು ಅವರು ಹೇಳಿದ್ದಾರೆ.
ಭಾರತ ದಾಳಿ ನಡೆಸುವ ವೇಳೆ ಅವರ ಪೋಷಕರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಇದ್ದರು. ಆ ಸಮಯದಲ್ಲಿ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಾಂಬ್ ದಾಳಿ ನಡೆಸಿತ್ತು. "ಸರಿಯಾಗಿ ಅದೇ ಸಮಯದಲ್ಲಿ ನನ್ನ ಪೋಷಕರು ಕಾಶ್ಮೀರದಲ್ಲಿದ್ದರು. ಆದರೆ, ಭಾರತದ ಬದಲಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಅವರಿದ್ದರು. ಇದೇ ಪ್ರದೇಶದಲ್ಲಿ ಭಾರತ ದಾಳಿ ನಡೆಸಿತ್ತು. ಬಾಂಬ್‌ಗಳು ಅವರು ಇದ್ದ ಸ್ಥಳದಿಂದ ಬಹುಶಃ ಒಂದು ಗಂಟೆ ದೂರ ಇರುವ ಸ್ಥಳದಲ್ಲಿ ಬೀಳುತ್ತಿದ್ದವು. ಇಡೀ ವಿಷಯ ತಿಳಿದು ನಾನು ಭಯಪಟ್ಟುಹೋಗಿದ್ದೆ. ಆದರೆ, ಅದೇ ದಿನ ಅವರು ವಿಮಾನ ಹತ್ತಲು ಸಾಧ್ಯವಾಯಿತು. ಅದನ್ನು ತಿಳಿದು ನನಗೆ ಸ್ವಲ್ಪ ಸಮಾಧಾನವಾಯಿತು. ಆದರೆ ಪರಿಸ್ಥಿತಿ ಭಯಾನಕವಾಗಿತ್ತು" ಎಂದು ಮೊಯಿನ್ ಅಲಿ ಬಿಯರ್ಡ್ ಬಿಫೋರ್ ವಿಕೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಹೇಳಿದ್ದಾರೆ.
ಈ ತಿಂಗಳ ಆರಂಭದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ 2025 ರ ಐಪಿಎಲ್ ಅನ್ನು ಒಂಬತ್ತು ದಿನಗಳವರೆಗೆ ಮುಂದೂಡಲಾಯಿತು. ಪಂದ್ಯಾವಳಿಯು ಕೆಲ ಸಮಯದ ಬಳಿಕ ಪುನರಾರಂಭವಾಯಿತು ಆದರೆ ಧರ್ಮಶಾಲಾದಲ್ಲಿ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ vs ದೆಹಲಿ ಕ್ಯಾಪಿಟಲ್ಸ್ ಪಂದ್ಯವನ್ನು ಇನ್ನಿಂಗ್ಸ್ ಮಧ್ಯದಲ್ಲಿಯೇ ರದ್ದುಗೊಳಿಸಲಾಯಿತು. ಪಂದ್ಯ ನಡೆಯುವ ಸಮಯದಲ್ಲಿಯೇ ಪಾಕಿಸ್ತಾನ ಡ್ರೋನ್ ದಾಳಿ ಮಾಡಿದ್ದರಿಂದ ಇಡೀ ಪ್ರದೇಶದಲ್ಲಿ ಬ್ಲಾಕ್‌ಔಟ್ ಮಾಡಲಾಗಿತ್ತು.
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡುವ ಇಂಗ್ಲೆಂಡ್ ಆಲ್ ರೌಂಡರ್ ಮೊಯಿನ್ ಅಲಿ, ಸಂಘರ್ಷವು ಬೇಗನೆ ತಮ್ಮ ವೈಯಕ್ತಿಕವಾಯಿತು ಎಂದು ಹೇಳಿದರು. "ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ನಡೆದ ದಾಳಿಯ ನಂತರ ಇಡೀ ಪರಿಸ್ಥಿತಿ ಹದಗೆಡಲು ಪ್ರಾರಂಭಿಸಿತು. ಅದರ ನಂತರ, ಎಲ್ಲವೂ ಇದ್ದಕ್ಕಿದ್ದಂತೆ ಬಹಳ ಬೇಗನೆ ಉಲ್ಬಣಗೊಂಡಿತು. ಇದ್ದಕ್ಕಿದ್ದಂತೆ ನಾವು ಇವೆಲ್ಲದರ ಮಧ್ಯೆ ಸಿಲುಕಿಕೊಂಡೆ. ನಾವು ಯುದ್ಧದ ಮಧ್ಯದಲ್ಲಿದ್ದೇವೆ ಎಂದು ಭಾಸವಾಯಿತು, ಆದರೂ ನಮಗೆ ನಿಜವಾಗಿಯೂ ಏನೂ ಕೇಳಲಿಲ್ಲ (ಕ್ಷಿಪಣಿ ದಾಳಿಯಂತೆ). ಇದ್ದಕ್ಕಿದ್ದಂತೆ, ನಾವು ದೇಶದಿಂದ ಹೊರಬರಲು ಪ್ರಯತ್ನಿಸಬೇಕು ಎನ್ನುವುದಂತೂ ಅರಿವಾಯಿತು" ಎಂದು ಅವರು ಹೇಳಿದರು.
ಟೂರ್ನಮೆಂಟ್ ಅಧಿಕೃತವಾಗಿ ಮುಂದೂಡಲ್ಪಡುವ ಮೊದಲೇ ತಾನು ಭಾರತವನ್ನು ತೊರೆದಿದ್ದೆ ಎಂದು ಮೊಯೀನ್ ಅಲಿ ಹೇಳಿದ್ದಾರೆ. ಅವರು ವೈರಲ್ ಜ್ವರದಿಂದ ಬಳಲುತ್ತಿದ್ದರು. "ಐಪಿಎಲ್ ರದ್ದಾಗುವ ಹಿಂದಿನ ರಾತ್ರಿಯೇ ನಾನು ಹೊರಟ್ಟಿದ್ದೆ.ನಾನು ಐಪಿಎಲ್ ಆಡುತ್ತಿದ್ದೇನೆಯೇ ಅಥವಾ ಪಿಎಸ್ಎಲ್ ಆಡುತ್ತಿದ್ದೇನೆಯೇ ಎಂದು ಯೋಚಿಸದ ವ್ಯಕ್ತಿ ನಾನು. ಮುಖ್ಯ ವಿಷಯವೆಂದರೆ ಸುರಕ್ಷಿತವಾಗಿರುವುದು, ಅಥವಾ ಸಾಧ್ಯವಾದಷ್ಟು ಸುರಕ್ಷಿತವಾಗಿರಲು ಪ್ರಯತ್ನಿಸುವುದು. ಏಕೆಂದರೆ ಈ ಜಗತ್ತಿನಲ್ಲಿ ನೀವು ಎಲ್ಲಿಯೂ 100% ಸುರಕ್ಷಿತವಾಗಿಲ್ಲ' ಎಂದು ಹೇಳಿದ್ದಾರೆ.
ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿ, ಪಾಕಿಸ್ತಾನ ಮೂಲದವರು. ಅವರು ಹುಟ್ಟಿದ್ದು ಬರ್ಮಿಂಗ್‌ಹ್ಯಾಂನಲ್ಲಿ ಆಗಿದ್ದರೂ, ಅವರ ಅಜ್ಜ, ಪಾಕ್ ಆಕ್ರಮಿತ ಕಾಶ್ಮೀರದ ಮೀರ್ಪುರ ಜಿಲ್ಲೆಯವರು. ಇನ್ನು ಅವರ ಅಜ್ಜಿ ಬೆಟ್ಟಿ ಕಾಕ್ಸ್ ಮೂಲತಃ ಇಂಗ್ಲೆಂಡ್‌ನವರು. ಮೊಯಿನ್ ಅಲಿ ಇಂಗ್ಲೀಷ್‌ನೊಂದಿಗೆ ಉರ್ದು ಹಾಗೂ ಪಂಜಾಬಿಯನ್ನು ಸುಲಲಿತವಾಗಿ ಮಾತನಾಡುತ್ತಾರೆ. ಅಲಿ ಅವರ ಅಪ್ಪ ಇಂಗ್ಲೆಂಡ್‌ನಲ್ಲಿ ಟ್ಯಾಕ್ಸಿ ಡ್ರೈವರ್ ಆಗಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.