ಕ್ರಿಕೆಟ್ ವಿಚಾರದಲ್ಲಿ ಎಚ್ಚರಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಬಿಸಿಸಿಐ ಕೆಲವು ಭಾರಿ ಎಡವಿದೆ. ಇದೀಗ ಸಯ್ಯದ್ ಮುಷ್ತಾಕ್ ಆಲಿ ಟಿ20 ಟೂರ್ನಿಯಲ್ಲಿ ಬಿಸಿಸಿಐ ನಿಯಮ ಹಾಸ್ಯಸ್ಪದಕ್ಕೆ ಕಾರಣವಾಗಿದೆ. ಅಂಕಪಟ್ಟಿಯಲ್ಲಿ ಸ್ಥಾನ ಪರಿಗಣನೆಗೆ ನೆಟ್ ರನ್‌ರೇಟ್, ಗುಂಪು ಹಂತದ ಫಲಿತಾಂಶ ಎರಡೂ ಪರಿಗಣನೆ ತೆಗೆದುಕೊಳ್ಳೋ ಮೂಲಕ ಮತ್ತಷ್ಟು ಗೊಂದಲ ಸೃಷ್ಟಿಸಿದೆ.
ಮುಂಬೈ(ನ.20): ಸಯ್ಯದ್ ಮುಷ್ತಾಕ್ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. ಆದರೆ ಗೊಂದಲ ಮುಂದುವರಿದಿದೆ. ಸೂಪರ್ ಲೀಗ್ ಹಂತದಲ್ಲಿ ಆಡುವ ತಂಡಗಳು ಯಾವುವು ಎನ್ನುವುದು ನಿರ್ಧಾರವಾಗಿದೆ. ಆದರೆ ತಂಡಗಳನ್ನು ಆಯ್ಕೆ ಮಾಡಲು ಬಳಸಿದ ಮಾನದಂಡಗಳು ವಿವಾದಕ್ಕೆ ಕಾರಣವಾಗಿವೆ. ಒಂದು ಟೂರ್ನಿಯಲ್ಲಿ ಎರಡೆರೆಡು ಮಾನದಂಡಗಳು ಇರಲು ಹೇಗೆ ಸಾಧ್ಯ? ಎನ್ನುವ ಪ್ರಶ್ನೆ ಉದ್ಭವವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಮುಷ್ತಾಕ್ ಅಲಿ ಟಿ20: ಸೂಪರ್ ಲೀಗ್ ವೇಳಾಪಟ್ಟಿ ಪ್ರಕಟ
undefined
2ನೇ ಸ್ಥಾನಕ್ಕೆ ತಳ್ಳಲ್ಪಟ್ಟ ಕರ್ನಾಟಕ
ಸೋಮವಾರ ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಂಡವು. ‘ಎ’ ಗುಂಪಿನ ಪಂದ್ಯಗಳು ಭಾನುವಾರವೇ ಮುಗಿದಿದ್ದವು. ಕೊನೆ ಪಂದ್ಯದಲ್ಲಿ ಗೋವಾ ವಿರುದ್ಧ ಗೆದ್ದ ಕರ್ನಾಟಕ, ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು. ಈ ಲೆಕ್ಕಾಚಾರದ ಪ್ರಕಾರ, ಸೂಪರ್ ಲೀಗ್‌ನಲ್ಲಿ ಕರ್ನಾಟಕ ‘ಎ’ ಗುಂಪಿನಲ್ಲಿ ಸ್ಥಾನ ಪಡೆಯಬೇಕಿತ್ತು. ಆದರೆ ನೆಟ್ ರನ್‌ರೇಟ್ ಬದಲಿಗೆ ಗುಂಪು ಹಂತದ ಫಲಿತಾಂಶವನ್ನು ಪರಿಗಣಿಸಿದ ಕಾರಣ, ಕರ್ನಾಟಕ ‘ಎ’ ಗುಂಪಿನಲ್ಲಿ 2ನೇ ಸ್ಥಾನ ಪಡೆದು, ಸೂಪರ್ ಲೀಗ್‌ನಲ್ಲಿ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.
ಈ ನಿಯಮ ಎಲ್ಲಾ ಗುಂಪುಗಳಿಗೆ ಅನ್ವಯಿಸಿದ್ದರೆ ಯಾವುದೇ ಗೊಂದಲವಿರುತ್ತಿರಲಿಲ್ಲ. ಆದರೆ ‘ಬಿ’ ಹಾಗೂ ‘ಸಿ’ ಗುಂಪಿನಲ್ಲಿ ಗುಂಪು ಹಂತದ ಫಲಿತಾಂಶದ ಬದಲಿಗೆ ನೆಟ್ ರನ್‌ರೇಟ್ ಅನ್ನು ಪರಿಗಣಿಸಿ, ಸೂಪರ್ ಲೀಗ್‌ಗೆ ಪ್ರವೇಶ ನೀಡಲಾಗಿದೆ.
ಇದನ್ನೂ ಓದಿ: ಮುಷ್ತಾಕ್ ಅಲಿ ಟ್ರೋಫಿ: ಗೋವಾ ಮಣಿಸಿ ಸೂಪರ್ ಲೀಗ್ ಪ್ರವೇಶಿಸಿದ ಕರ್ನಾಟ
ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ, ಐಪಿಎಲ್ ಸೇರಿದಂತೆ ಎಲ್ಲಾ ಪ್ರತಿಷ್ಠಿತ ಲೀಗ್‌ಗಳಲ್ಲಿ ತಂಡಗಳು ಮುಂದಿನ ಹಂತಕ್ಕೆ ಪ್ರವೇಶಿಸಲು ನೆಟ್ ರನ್‌ರೇಟ್ ಅನ್ನೇ ಮಾನದಂಡವಾಗಿ ಬಳಕೆ ಮಾಡಲಾಗುತ್ತದೆ. ಉತ್ತಮ ನೆಟ್ ರನ್‌ರೇಟ್ ಗಳಿಸಲು ತಂಡಗಳು ಪ್ರಯತ್ನಿಸಲಿವೆ. ಹೀಗಿರುವಾಗ ಒಂದು ತಂಡಕ್ಕೆ ಒಂದು ನಿಯಮ, ಇನ್ನುಳಿದ ತಂಡಳಿಗೆ ಒಂದು ನಿಯಮ ಅನ್ವಯಿಸಿರುವುದು ಬಿಸಿಸಿಐನ ವ್ಯವಸ್ಥೆ ಬಗ್ಗೆ ಪ್ರಶ್ನೆಗಳು ಏಳುವಂತೆ ಮಾಡಿದೆ.
ಕರ್ನಾಟಕಕ್ಕೇಕೆ 2ನೇ ಸ್ಥಾನ?
‘ಎ’ ಗುಂಪಿನಲ್ಲಿದ್ದ ಕರ್ನಾಟಕ ಆಡಿದ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದು, 1ರಲ್ಲಿ ಸೋಲುಂಡಿತ್ತು. ಒಟ್ಟು 20 ಅಂಕಗಳನ್ನು ಗಳಿಸಿತ್ತು. ತಂಡದ ನೆಟ್ ರನ್‌ರೇಟ್ +2.052. ಬರೋಡಾ ತಂಡ 6 ಪಂದ್ಯಗಳಲ್ಲಿ 5 ಜಯ, 1 ಸೋಲಿನೊಂದಿಗೆ 20 ಅಂಕ ಗಳಿಸಿತು. ತಂಡದ ನೆಟ್ ರನ್‌ರೇಟ್ +1.351. ಎರಡೂ ತಂಡಗಳು ತಲಾ 20 ಅಂಕ ಗಳಿಸಿದ ಕಾರಣ, ಉತ್ತಮ ನೆಟ್ ರನ್‌ರೇಟ್ ಹೊಂದಿರುವ ತಂಡಕ್ಕೆ ಅಗ್ರಸ್ಥಾನ ಸಿಗಬೇಕು. ಬರೋಡಾಗಿಂತ ಉತ್ತಮ ನೆಟ್ ರನ್‌ರೇಟ್ ಹೊಂದಿದ್ದರೂ ಕರ್ನಾಟಕಕ್ಕೆ 2ನೇ ಸ್ಥಾನ ಸಿಕ್ಕಿದೆ. ಗುಂಪು ಹಂತದ ಪಂದ್ಯದಲ್ಲಿ ಬರೋಡಾ ವಿರುದ್ಧ ಕರ್ನಾಟಕ ಸೋಲುಂಡಿತ್ತು ಎನ್ನುವ ಕಾರಣಕ್ಕೆ ರಾಜ್ಯ ತಂಡವನ್ನು 2ನೇ ಸ್ಥಾನಕ್ಕಿಳಿಸಿ, ಬರೋಡಾಕ್ಕೆ ಅಗ್ರಸ್ಥಾನ ನೀಡಲಾಗಿದೆ.
ಇದನ್ನೂ ಓದಿ: ಕ್ರಿಕೆಟ್‌ಗೆ ಮರಳಿದ ಪೃಥ್ವಿ: ಟಿ20ಯಲ್ಲಿ ಸ್ಫೋಟಕ ಫಿಫ್ಟಿ
‘ಬಿ’ ಗುಂಪಿನಲ್ಲಿ ಆಗಿದ್ದೇನು?
‘ಬಿ’ ಗುಂಪಿನಲ್ಲಿ ತಮಿಳುನಾಡು ತಂಡ 20 ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿತು. ರಾಜಸ್ಥಾನ, ವಿದರ್ಭ ಹಾಗೂ ಕೇರಳ ತಂಡಗಳು ತಲಾ 16 ಅಂಕ ಗಳಿಸಿದವು. ಮೂರೂ ತಂಡಗಳು ಆಡಿದ 6 ಪಂದ್ಯಗಳಲ್ಲಿ ತಲಾ 4ರಲ್ಲಿ ಗೆದ್ದು, 2ರಲ್ಲಿ ಸೋಲುಂಡವು. ಗುಂಪು ಹಂತದಲ್ಲಿ ಕೇರಳ ವಿರುದ್ಧ ವಿದರ್ಭ ಸೋತಿತ್ತು. ವಿದರ್ಭ ವಿರುದ್ಧ ರಾಜಸ್ಥಾನ ಸೋತಿತ್ತು. ರಾಜಸ್ಥಾನ ವಿರುದ್ಧ ಕೇರಳ ಸೋತಿತ್ತು. 6 ಪಂದ್ಯಗಳ ಮುಕ್ತಾಯಕ್ಕೆ +1.938 ನೆಟ್ ರನ್‌ರೇಟ್ ಪಡೆದ ರಾಜಸ್ಥಾನಕ್ಕೆ 2ನೇ ಸ್ಥಾನ ಸಿಕ್ಕಿದೆ. +0.566 ರನ್‌ರೇಟ್ ಹೊಂದಿರುವ ವಿದರ್ಭಕ್ಕೆ 3ನೇ, +0.503 ರನ್‌ರೇಟ್ ಹೊಂದಿರುವ ಕೇರಳಕ್ಕೆ 4ನೇ ಸ್ಥಾನ ನೀಡಲಾಗಿದೆ. ‘ಬಿ’ ಗುಂಪಿನಲ್ಲಿ ನೆಟ್ ರನ್‌ರೇಟ್ ಆಧಾರದಲ್ಲಿ ರಾಜಸ್ಥಾನ ಸೂಪರ್ ಲೀಗ್‌ಗೆ ಪ್ರವೇಶ ಪಡೆದಿದೆ.
‘ಸಿ’ ಗುಂಪಿನಲ್ಲಿ ಆಗಿದ್ದೇನು?
7 ಪಂದ್ಯಗಳಿಂದ 20 ಅಂಕ ಗಳಿಸಿದ ಮಹಾರಾಷ್ಟ್ರ ‘ಸಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದೆ. ಪಂಜಾಬ್, ಚಂಡೀಗಢ, ಛತ್ತೀಸ್‌ಗಢ, ಹೈದರಾಬಾದ್ ಹಾಗೂ ರೈಲ್ವೇಸ್ ತಂಡಗಳು ತಲಾ 4 ಗೆಲುವುಗಳೊಂದಿಗೆ 16 ಅಂಕ ಗಳಿಸಿವೆ. ಈ 5 ತಂಡಗಳ ಪೈಕಿ ಉತ್ತಮ ರನ್‌ರೇಟ್ ಹೊಂದಿರುವ ಕಾರಣ ಪಂಜಾಬ್ ಸೂಪರ್ ಲೀಗ್‌ಗೆ ಪ್ರವೇಶಿಸಿದೆ.
‘ಡಿ’ ಹಾಗೂ ‘ಇ’ ಗುಂಪಿನಲ್ಲೂ ನೆಟ್ ರನ್‌ರೇಟ್ ಆಧಾರದಲ್ಲೇ ತಂಡಗಳಿಗೆ ಸ್ಥಾನ ನೀಡಲಾಗಿದೆ. ಇದೇ ಮಾನದಂಡವನ್ನು ‘ಎ’ ಗುಂಪಿನಲ್ಲಿ ಏಕೆ ಅಳವಡಿಸಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ಹುಡುಕಿದಾಗ, ಬಿಸಿಸಿಐ ನಿಯಮದಲ್ಲೇ ಗೊಂದಲವಿರುವುದು ಸ್ಪಷ್ಟವಾಗುತ್ತದೆ.
ಇದನ್ನೂ ಓದಿ: ಮನೀಶ್ ಪಾಂಡೆ ಭರ್ಜರಿ ಶತಕ, ಕರ್ನಾಟಕಕ್ಕೆ ಬೃಹತ್ ಗೆಲುವು!
ಬಿಸಿಸಿಐ ನಿಯಮವೇನು?
ಕ್ರಿಕೆಟ್‌ನ ಹಲವು ನಿಯಮಗಳ ಬಗ್ಗೆ ಈಗಾಗಲೇ ಭಾರೀ ಗೊಂದಲವಿದೆ. ಡಕ್ವರ್ತ್ ಲೂಯಿಸ್‌ನಂತಹ ನಿಯಮ ದಿಗ್ಗಜ ಕ್ರಿಕೆಟಿಗರಿಗೂ ಅರ್ಥವಾಗಿಲ್ಲ. ಬಿಸಿಸಿಐನ ನಿಯಮವೂ ಅದೇ ಸಾಲಿಗೆ ಸೇರಿಕೊಳ್ಳುತ್ತದೆ. ಎರಡು ತಂಡಗಳ ನಡುವೆ ಅಂಕಗಳು ಸಮಗೊಂಡರೆ ಗುಂಪು ಹಂತದ ಫಲಿತಾಂಶ ಪರಿಗಣಿಸಲಾಗುತ್ತದೆ, ಎರಡಕ್ಕಿಂತ ಹೆಚ್ಚಿನ ತಂಡಗಳ ನಡುವೆ ಅಂಕಗಳು ಸಮಯಗೊಂಡರೆ ನೆಟ್ ರನ್‌ರೇಟ್ ಪರಿಗಣಿಸಲಾಗುತ್ತದೆ. ಹೀಗೆ ಎರಡು ವಿವಿಧ ನಿಯಮಗಳನ್ನು ಪಾಲಿಸಲಾಗುತ್ತಿದೆ. ನೆಟ್ ರನ್ರೇಟ್ನಂತಹ ಸರಳ ವ್ಯವಸ್ಥೆ ಇರುವಾಗ ಅದರೊಂದಿಗೆ ಮತ್ತೊಂದು ಮಾನದಂಡವನ್ನು ಪರಿಗಣಿಸುವುದೇಕೆ ಎನ್ನುವ ಪ್ರಶ್ನೆಗೆ ಬಹುಶಃ ಬಿಸಿಸಿಐ ಬಳಿಯೂ ಉತ್ತರವಿಲ್ಲ.
ನಿಯಮ ಬದಲಿಸುತ್ತಾ ಬಿಸಿಸಿಐ?
ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೂಪರ್ ಓವರ್ ಸಹ ಟೈ ಆದಾಗ ಬೌಂಡರಿ ನಿಯಮದ ಸಹಾಯದಿಂದ ಇಂಗ್ಲೆಂಡ್ ವಿಶ್ವ ಚಾಂಪಿಯನ್ ಆಗಿತ್ತು. ಐಸಿಸಿಯ ಬೌಂಡರಿ ನಿಯಮ ಭಾರೀ ಟೀಕೆಗೆ ಗುರಿಯಾಗಿತ್ತು. ಮುಜುಗರಕ್ಕೆ ಒಳಗಾದ ಐಸಿಸಿ ಇತ್ತೀಚೆಗೆ ನಿಯಮ ಬದಲಿಸಿತು. ಸೆಮಿಫೈನಲ್, ಫೈನಲ್‌ಗಳಲ್ಲಿ ಸೂಪರ್ ಓವರ್ ಟೈ ಆದರೆ ಫಲಿತಾಂಶ ಬರುವ ವರೆಗೂ ಸೂಪರ್ ಓವರ್ ನಡೆಸುವುದಾಗಿ ಘೋಷಿಸಿತು. ಬಿಸಿಸಿಐ ಸಹ ತನ್ನ ನಿಯಮವನ್ನು ಶೀಘ್ರದಲ್ಲೇ ಬದಲಿಸಬೇಕಿದೆ.