
ನವ್ಯಶ್ರೀ ಶೆಟ್ಟಿ, ಕನ್ನಡಪ್ರಭ
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜಿಸುವ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 4 ನೇ ಆವೃತ್ತಿಯ ಹರಾಜು ಪ್ರಕ್ರಿಯೆ ಮಂಗಳವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆಯಿತು. ತಾರಾ ಆಟಗಾರ ದೇವದತ್ ಪಡಿಕ್ಕಲ್ ಗರಿಷ್ಠ 13.20 ಲಕ್ಷ ರು.ಗೆ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಬಿಕರಿಯಾಗಿ, ದುಬಾರಿ ಆಟಗಾರ ಎನಿಸಿಕೊಂಡರು.
ಮನೀಶ್ ಪಾಂಡೆ, ಪಡಿಕ್ಕಲ್, ಅಭಿನವ್ ಮನೋಹರ್ ಸೇರಿ 1000ಕ್ಕೂ ಹೆಚ್ಚು ಆಟಗಾರರು ಹರಾಜಿಗೆ ನೋಂದಾಯಿಸಿಕೊಂಡಿದ್ದರು. ಪ್ರತಿ ತಂಡಕ್ಕೂ 50 ಲಕ್ಷ ರು. ಮಿತಿಯಲ್ಲಿ ಕನಿಷ್ಠ 16, ಗರಿಷ್ಠ 18 ಆಟಗಾರರನ್ನು ಖರೀದಿಸಲು ಅವಕಾಶವಿತ್ತು. ಮಂಗಳೂರು ಡ್ರ್ಯಾಗನ್ಸ್ ಹೊರತುಪಡಿಸಿ ಉಳಿದ 5 ತಂಡಗಳು ತಲಾ 18 ಆಟಗಾರರನ್ನು ಖರೀದಿಸಿದರೆ, ಮಂಗಳೂರು ತಂಡ 16 ಆಟಗಾರರನ್ನು ಆಯ್ಕೆ ಮಾಡಿಕೊಂಡಿತು. ಒಟ್ಟು 106 ಆಟಗಾರರು ಬಿಕರಿಯಾದರು.
ಈ ಪೈಕಿ ದೇವದತ್ ಪಡಿಕ್ಕಲ್ ಅವರನ್ನು ಹುಬ್ಬಳ್ಳಿ ತಂಡ 13.20 ಲಕ್ಷ ರು. ನೀಡಿ ಖರೀದಿಸಿತು. ಮತ್ತೊಬ್ಬ ಆಟಗಾರ ಅಭಿನವ್ ಮನೋಹರ್‌ರನ್ನು ಹುಬ್ಬಳ್ಳಿ 12.20 ಲಕ್ಷ ರು. ಕೊಟ್ಟು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಇನ್ನು ಮೈಸೂರು ವಾರಿಯರ್ಸ್ ಮನೀಶ್ ಪಾಂಡೆಯನ್ನು 12.20 ಲಕ್ಷ ರು.ಗೆ ಖರೀದಿಸಿತು. ವೇಗಿಗಳಾದ ವಿದ್ವತ್ ಕಾವೇರಪ್ಪ ₹10.80 ಲಕ್ಷಕ್ಕೆ ಶಿವಮೊಗ್ಗ ಲಯನ್ಸ್, ವಿದ್ಯಾಧರ್ ಪಾಟೀಲ್ ₹8.4 ಲಕ್ಷಕ್ಕೆ ಬೆಂಗಳೂರು ಬ್ಲಾಸ್ಟರ್ ಪಾಲಾದರು. ಪಂದ್ಯಾವಳಿಯು ಆ.11 ರಿಂದ 27ರ ತನಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.
6 ತಂಡದಿಂದ ₹2.92 ಕೋಟಿ ಖರ್ಚು, ಮಯಾಂಕ್ ದುಬಾರಿ ಆಟಗಾರ
ಹರಾಜಿಗೂ ಮೊದಲು ಪ್ರತಿ ತಂಡ ತಲಾ ನಾಲ್ಕು ಆಟಗಾರರನ್ನು ರೀಟೈನ್ ಮಾಡಿಕೊಂಡಿತ್ತು. ಬೆಂಗಳೂರು ಬ್ಲಾಸ್ಟರ್ಸ್ ಮಯಾಂಕ್ ಅಗರ್‌ವಾಲ್‌ಗೆ 14 ಲಕ್ಷ ರು. ನೀಡಿ ತನ್ನಲ್ಲೇ ಉಳಿಸಿಕೊಂಡಿತ್ತು. ಮಯಾಂಕ್ ಮಹಾರಾಜ ಟ್ರೋಫಿಯ ದುಬಾರಿ ಆಟಗಾರ ಎನಿಸಿದ್ದಾರೆ. ಇನ್ನು, ಎಲ್ಲಾ 6 ತಂಡಗಳು ಸೇರಿ ಒಟ್ಟು 2 ಕೋಟಿ 92 ಲಕ್ಷದ 85 ಸಾವಿರ ರು. ಖರ್ಚು ಮಾಡಿವೆ. ರೀಟೈನ್ ಮಾಡಿಕೊಂಡ ಆಟಗಾರರಿಗೆ ನೀಡಿದ ಮೊತ್ತವೂ ಇದರಲ್ಲಿ ಸೇರಿದೆ. ಕರುಣ್ ನಾಯರ್, ಪ್ರಸಿದ್ಧ್ ಕೃಷ್ಣ ಸೇರಿ ಪ್ರಮುಖ ಆಟಗಾರರು ಹರಾಜಿಗೂ ಮೊದಲೇ ರೀಟೈನ್ ಆಗಿದ್ದರು.
ಬಿಕರಿಯಾಗದೆ ಉಳಿದ ದ್ರಾವಿಡ್‌ರ ಪುತ್ರ ಸಮಿತ್!
ಕಳೆದ ವರ್ಷ ಮೈಸೂರು ವಾರಿಯರ್ಸ್ ತಂಡದೊಂದಿಗೆ ಮಹಾರಾಜ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದ, ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್‌ರ ಹಿರಿಯ ಪುತ್ರ ಸಮಿತ್ ದ್ರಾವಿಡ್ ಈ ಬಾರಿ ಹರಾಜಿನಲ್ಲಿ ಬಿಕರಿಯಾಗದೆ ಉಳಿದಿದ್ದಾರೆ. ಕಳೆದ ಆವೃತ್ತಿಯಲ್ಲಿ ಅವರು 7 ಪಂದ್ಯಗಳಲ್ಲಿ 11.71ರ ಸರಾಸರಿಯಲ್ಲಿ ಕೇವಲ 82 ರನ್ ಗಳಿಸಿ ನಿರಾಸೆ ಮೂಡಿಸಿದ್ದರು. ಹೀಗಾಗಿ ಈ ಬಾರಿ ಅವರನ್ನು ಖರೀದಿಸಲು ಯಾವ ತಂಡವೂ ಆಸಕ್ತಿ ತೋರಲಿಲ್ಲ.
ಹುಬ್ಬಳ್ಳಿ ಟೈಗರ್ಸ್‌ನಿಂದ ಮೂರು ಆಟಗಾರರ ಮೇಲೆ 63% ಹಣ ವೆಚ್ಚ!
ಪ್ರತಿ ತಂಡ ರೀಟೈನ್ ಮಾಡಿಕೊಂಡ ಆಟಗಾರರನ್ನೂ ಸೇರಿ ಒಟ್ಟಾರೆ 50 ಲಕ್ಷ ಖರ್ಚು ಮಾಡಲು ಅವಕಾಶವಿತ್ತು. ಹುಬ್ಬಳ್ಳಿ ಟೈಗರ್ಸ್ ಹರಾಜಿಗೂ ಮುನ್ನ ಮೊಹಮದ್ ತಾಹಾರನ್ನು 4.6 ಲಕ್ಷ ರು.ಗೆ ರೀಟೈನ್ ಮಾಡಿಕೊಂಡಿತ್ತು. ಹರಾಜಿನಲ್ಲಿ ಪಡಿಕ್ಕಲ್ ಹಾಗೂ ಅಭಿನವ್ ಮನೋಹರ್‌ರನ್ನು ಖರೀದಿಸಲು 25.4 ಲಕ್ಷ ರು. ವೆಚ್ಚ ಮಾಡಿತು. ಈ ಮೂರು ಆಟಗಾರರಿಗೇ ತಂಡ 30 ಲಕ್ಷ ರು. ಖರ್ಚು ಮಾಡಿದ್ದು, ಇದು ತಂಡದ ಒಟ್ಟು ಮಿತಿಯ ಶೇ.63ರಷ್ಟು ಆಗುತ್ತದೆ. ಒಟ್ಟಾರೆ 18 ಆಟಗಾರರ ಖರೀದಿಗೆ ತಂಡ ವೆಚ್ಚ ಮಾಡಿರುವುದು 47.25 ಲಕ್ಷ. ಇದು 6 ತಂಡಗಳ ಪೈಕಿ ಕನಿಷ್ಠ. ಮೂವರು ತಾರಾ ಆಟಗಾರರ ಖರೀದಿಗೆ 30 ಲಕ್ಷ ರು. ಖರ್ಚು ಮಾಡಿದರೂ, 17.25 ಲಕ್ಷ ರು.ನಲ್ಲಿ ಬಾಕಿ 15 ಆಟಗಾರರನ್ನು ಖರೀದಿಸಿ ತಂಡ ಗಮನ ಸೆಳೆದಿದೆ.
ಟಾಪ್-5 ದುಬಾರಿ ಆಟಗಾರರು
ಆಟಗಾರರ ತಂಡ ಮೊತ್ತ
ಮಯಾಂಕ್ (ರೀಟೈನ್) ಬೆಂಗಳೂರು ₹14 ಲಕ್ಷ
ದೇವದತ್ ಪಡಿಕ್ಕಲ್ ಹುಬ್ಬಳ್ಳಿ ₹13.2 ಲಕ್ಷ
ಅಭಿನವ್ ಮನೋಹರ್ ಹುಬ್ಬಳ್ಳಿ ₹12.2 ಲಕ್ಷ
ಮನೀಶ್ ಪಾಂಡೆ ಮೈಸೂರು ₹12.20 ಲಕ್ಷ
ವಿದ್ವತ್ ಕಾವೇರಪ್ಪ ಶಿವಮೊಗ್ಗ ₹ 10.80 ಲಕ್ಷ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.