100ನೇ ಟೆಸ್ಟ್‌ನಲ್ಲಿ 400 ವಿಕೆಟ್‌ ಪೂರೈಸಿದ ಸ್ಟಾರ್ಕ್‌! ಕೇವಲ 15 ಎಸೆತದಲ್ಲಿ 5 ಬಲಿಪಡೆದ ಎಡಗೈ ವೇಗಿ

Published : Jul 16, 2025, 08:33 AM IST
Mitchell Starc. (Photo: ICC)

ಸಾರಾಂಶ

ಮಿಚೆಲ್‌ ಸ್ಟಾರ್ಕ್‌ ತಮ್ಮ 100ನೇ ಟೆಸ್ಟ್‌ನಲ್ಲಿ 400 ವಿಕೆಟ್‌ ಪಡೆದರು. ವೆಸ್ಟ್‌ಇಂಡೀಸ್‌ 27 ರನ್‌ಗಳಿಗೆ ಆಲೌಟ್‌ ಆಗಿ ಸೋಲನುಭವಿಸಿತು. ಸ್ಟಾರ್ಕ್ 15 ಎಸೆತಗಳಲ್ಲಿ 5 ವಿಕೆಟ್‌ ಪಡೆದರು.

ಕಿಂಗ್‌ಸ್ಟನ್‌: ಆಸ್ಟ್ರೇಲಿಯಾದ ದಿಗ್ಗಜ ವೇಗಿ ಮಿಚೆಲ್‌ ಸ್ಟಾರ್ಕ್‌ ತಮ್ಮ 100ನೇ ಟೆಸ್ಟ್‌ನಲ್ಲಿ 400 ವಿಕೆಟ್‌ಗಳ ಮೈಲಿಗಲ್ಲು ತಲುಪಿದರು. ವಿಂಡೀಸ್‌ನ ಆರಂಭಿಕ ಬ್ಯಟರ್‌ ಮಿಕೈಲ್‌ ಲೂಯಿ, ಸ್ಟಾರ್ಕ್‌ರ 400ನೇ ಬಲಿ ಎನಿಸಿದರು. 400 ಟೆಸ್ಟ್‌ ವಿಕೆಟ್‌ ಪಡೆದ ವಿಶ್ವದ 18ನೇ, ವೇಗದ ಬೌಲರ್‌ಗಳ ಪೈಕಿ 11ನೇ ಆಟಗಾರ ಎನಿಸಿದರು. ಈ ಮೈಲಿಗಲ್ಲು ತಲುಪಿದ ಆಸ್ಟ್ರೇಲಿಯಾದ ಕೇವಲ 4ನೇ ಬೌಲರ್‌ ಎನ್ನುವ ಹಿರಿಮೆಗೂ ಪಾತ್ರರಾದರು.

15 ಎಸೆತದಲ್ಲಿ 5 ವಿಕೆಟ್‌: ಸ್ಟಾರ್ಕ್‌ ವಿಶ್ವ ದಾಖಲೆ!

ಟೆಸ್ಟ್‌ನಲ್ಲಿ ಅತಿವೇಗದ 5 ವಿಕೆಟ್‌ ಗೊಂಚಲು ಪಡೆದ ವಿಶ್ವದಾಖಲೆಯನ್ನು ಸ್ಟಾರ್ಕ್‌ ಬರೆದರು. ಕೇವಲ 15 ಎಸೆತದಲ್ಲಿ ಅವರು 5 ವಿಕೆಟ್‌ ಕಬಳಿಸಿ, ತಲಾ 19 ಎಸೆತಗಳಲ್ಲಿ 5 ವಿಕೆಟ್‌ ಪಡೆದಿದ್ದ ಆಸ್ಟ್ರೇಲಿಯಾದ ಎರ್ನಿ ತೊಷಾಕ್‌, ಸ್ಕಾಟ್‌ ಬೋಲೆಂಡ್‌ ಹಾಗೂ ಇಂಗ್ಲೆಂಡ್‌ನ ಸ್ಟುವರ್ಟ್‌ ಬ್ರಾಡ್‌ರ ದಾಖಲೆಯನ್ನು ಮುರಿದರು.

ವಿಂಡೀಸನ್ನು 27 ರನ್‌ಗೆ ಆಲೌಟ್‌ ಮಾಡಿದ ಆಸೀಸ್‌!

ಆಸ್ಟ್ರೇಲಿಯಾದ ಮಾರಕ ಬೌಲಿಂಗ್‌ ದಾಳಿಗೆ ಧೂಳೀಪಟವಾದ ವೆಸ್ಟ್‌ಇಂಡೀಸ್‌, ಹಗಲು-ರಾತ್ರಿ ಮಾದರಿಯಲ್ಲಿ ನಡೆದ 3ನೇ ಟೆಸ್ಟ್‌ನ 2ನೇ ಇನ್ನಿಂಗ್ಸಲ್ಲಿ ಕೇವಲ 27 ರನ್‌ಗೆ ಆಲೌಟ್‌ ಆಗಿ ಮುಖಭಂಗಕ್ಕೊಳಗಾಯಿತು. ಇದು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲೇ 2ನೇ ಕನಿಷ್ಠ ಮೊತ್ತ ಎನಿಸಿತು.

2ನೇ ಇನ್ನಿಂಗ್ಸಲ್ಲಿ ಆಸ್ಟ್ರೇಲಿಯಾವನ್ನು 121 ರನ್‌ಗೆ ಆಲೌಟ್‌ ಮಾಡಿದ ವಿಂಡೀಸ್‌ ಗೆಲ್ಲಲು 204 ರನ್‌ ಗುರಿ ಪಡೆಯಿತು. ಸಾಧಾರಣ ಗುರಿ ಬೆನ್ನತ್ತಲು ಕ್ರೀಸ್‌ಗಿಳಿದ ವಿಂಡೀಸ್‌ ಬ್ಯಾಟರ್‌ಗಳನ್ನು ಆಸ್ಟ್ರೇಲಿಯಾದ ವೇಗಿಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಿದರು.

ಮೊದಲ ಓವರಲ್ಲೇ 3 ವಿಕೆಟ್‌: ಮಿಚೆಲ್‌ ಸ್ಟಾರ್ಕ್‌ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ಕ್ಯಾಂಬೆಲ್‌ರನ್ನು ಔಟ್‌ ಮಾಡಿದರು. ಅಲ್ಲದೇ ಮೊದಲ ಓವರಲ್ಲಿ ವಿಂಡೀಸ್‌ ಖಾತೆ ತೆರೆಯದೆ 3 ವಿಕೆಟ್ ಕಳೆದುಕೊಂಡಿತು. 11 ರನ್‌ಗೆ 6 ವಿಕೆಟ್‌ ಕಳೆದುಕೊಂಡ ವಿಂಡೀಸ್‌, ಟೆಸ್ಟ್‌ ಇತಿಹಾಸದಲ್ಲೇ ಕನಿಷ್ಠ ಮೊತ್ತಕ್ಕೆ ಆಲೌಟ್‌ ಆಗುವ ಭೀತಿಯಲ್ಲಿತ್ತು. ಆದರೆ ಜಸ್ಟಿನ್‌ ಗ್ರೀವ್ಸ್‌ರ 11 ರನ್‌, 6 ಇತರೆ ರನ್‌ ತಂಡವನ್ನು ಆ ಅವಮಾನದಿಂದ ಪಾರು ಮಾಡಿದರೂ, 27 ರನ್‌ಗೆ ಆಲೌಟ್‌ ಆದ ವಿಂಡೀಸ್‌ 2ನೇ ಕನಿಷ್ಠ ಮೊತ್ತ ದಾಖಲಿಸಿದ ಅಪಖ್ಯಾತಿಗೆ ಗುರಿಯಾಯಿತು.

ಸ್ಟಾರ್ಕ್‌ 7.3 ಓವರಲ್ಲಿ 4 ಮೇಡನ್‌ ಸಹಿತ 9 ರನ್‌ಗೆ 6 ವಿಕೆಟ್‌ ಕಿತ್ತರೆ, ಸ್ಕಾಟ್‌ ಬೋಲೆಂಡ್‌ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದರು. ಹೇಜಲ್‌ವುಡ್‌ಗೆ 1 ವಿಕೆಟ್‌ ದೊರೆಯಿತು. 14.3 ಓವರಲ್ಲಿ ವಿಂಡೀಸ್‌ ಇನ್ನಿಂಗ್ಸ್‌ ಕೊನೆಗೊಂಡಿತು. 7 ಬ್ಯಾಟರ್‌ಗಳು ಡಕೌಟ್‌ ಆದರು.

ಸ್ಕೋರ್‌: ಆಸ್ಟ್ರೇಲಿಯಾ 225 ಹಾಗೂ 121, ವಿಂಡೀಸ್‌ 143 ಹಾಗೂ 27

ಟೆಸ್ಟ್‌ನಲ್ಲಿ ಕನಿಷ್ಠ ಮೊತ್ತ

ತಂಡ ರನ್‌ ಎದುರಾಳಿ ಇನ್ನಿಂಗ್ಸ್‌ ವರ್ಷ

ನ್ಯೂಜಿಲೆಂಡ್‌ 26 ಇಂಗ್ಲೆಂಡ್‌ 3ನೇ 1955

ವೆಸ್ಟ್‌ಇಂಡೀಸ್‌ 27 ಆಸ್ಟ್ರೇಲಿಯಾ 4ನೇ 2025

ದ.ಆಫ್ರಿಕಾ 30 ಇಂಗ್ಲೆಂಡ್‌ 4ನೇ 1896

ದ.ಆಫ್ರಿಕಾ 30 ಇಂಗ್ಲೆಂಡ್‌ 2ನೇ 1924

ದ.ಆಫ್ರಿಕಾ 35 ಇಂಗ್ಲೆಂಡ್‌ 4ನೇ 1899

07 ಡಕೌಟ್‌

ವಿಂಡೀಸ್‌ನ 2ನೇ ಇನ್ನಿಂಗ್ಸಲ್ಲಿ 7 ಬ್ಯಾಟರ್‌ಗಳು ಡಕೌಟ್‌ ಆದರು. ಟೆಸ್ಟ್‌ ಇತಿಹಾಸದಲ್ಲೇ ಇದು ಗರಿಷ್ಠ. ಈ ಹಿಂದೆ 5 ಬೇರೆ ಬೇರೆ ತಂಡಗಳು ತಲಾ 6 ಡಕೌಟ್‌ಗಳಿಗೆ ಸಾಕ್ಷಿಯಾಗಿದ್ದವು.

12ನೇ ಹ್ಯಾಟ್ರಿಕ್‌

ಸ್ಕಾಟ್‌ ಬೋಲೆಂಡ್‌ ಪಡೆದ ಹ್ಯಾಟ್ರಿಕ್‌ ವಿಕೆಟ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಬೌಲರ್‌ನಿಂದ ದಾಖಲಾದ 12ನೇ ಹ್ಯಾಟ್ರಿಕ್‌. 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರಿಕೆಟ್ ಮಾತ್ರವಲ್ಲ, Smriti Mandhana ಫ್ಯಾಷನ್ ಸೆನ್ಸ್ ಕೂಡ ನಂ. 1… Photos Viral
ಟಿ20 ವಿಶ್ವಕಪ್ ಗೆಲುವಿನಿಂದ ನಿವೃತ್ತಿಗೆ ಸಜ್ಜಾದ್ರಾ ಟೀಂ ಇಂಡಿಯಾದ ಐವರು ಕ್ರಿಕೆಟರ್ಸ್?