ಭಾರತದ ಲಾರ್ಡ್ಸ್‌ ಟೆಸ್ಟ್ ಸೋಲಿಗೆ ಕಾರಣ ಏನು? ಇಂಟ್ರೆಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ದಿನೇಶ್ ಕಾರ್ತಿಕ್, ನಾಸಿರ್ ಹುಸೇನ್!

Published : Jul 15, 2025, 05:12 PM IST
Team India lost the Lord's Test

ಸಾರಾಂಶ

ಲಾರ್ಡ್ಸ್‌ನಲ್ಲಿ ಭಾರತದ ಸೋಲಿನ ಬಗ್ಗೆ ದಿನೇಶ್ ಕಾರ್ತಿಕ್ ಮತ್ತು ನಾಸಿರ್ ಹುಸೇನ್ ವಿಶ್ಲೇಷಣೆ ನಡೆಸಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಮಿನಿ-ಕುಸಿತ ಮತ್ತು ರಿಷಭ್ ಪಂತ್ ರನ್ ಔಟ್ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಿದವು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಲಂಡನ್: ಲಾರ್ಡ್ಸ್‌ನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ರೋಚಕ ಮೂರನೇ ಟೆಸ್ಟ್‌ನ ಫಲಿತಾಂಶವನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಕ್ಷಣಗಳ ಬಗ್ಗೆ ಟೀಂ ಇಂಡಿಯಾ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಮತ್ತು ಇಂಗ್ಲೆಂಡ್‌ನ ಮಾಜಿ ನಾಯಕ ನಾಸಿರ್ ಹುಸೇನ್ ಮನಬಿಚ್ಚಿ ಮಾತನಾಡಿದ್ದಾರೆ.

ಎರಡೂ ತಂಡಗಳು ಗೆಲುವಿಗಾಗಿ ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. ಆದರೆ ಲಾರ್ಡ್ಸ್‌ನಲ್ಲಿ 22 ರನ್‌ಗಳ ಜಯಭೇರಿ ಬಾರಿಸುವಲ್ಲಿ ಇಂಗ್ಲೆಂಡ್ ತಂಡವು ಯಶಸ್ವಿಯಾಯಿತು. ರವೀಂದ್ರ ಜಡೇಜಾ ಅವರ ಕೊನೆಯ ಹಂತದ ಪ್ರತಿರೋಧದ ಹೊರತಾಗಿಯೂ 193 ರನ್‌ಗಳ ಗುರಿಯನ್ನು ಬೆನ್ನಟ್ಟಲು ಟೀಂ ಇಂಡಿಯಾ ಕೊನೆಯ ಕ್ಷಣದಲ್ಲಿ ವಿಫಲವಾಯಿತು. ಬಾಲಂಗೋಚಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ಜತೆಗೂಡಿ ಜಡೇಜಾ ಹೋರಾಟ ವ್ಯರ್ಥವಾಯಿತು.

ಇನ್ನು ಈ ಪಂದ್ಯದ ಫಲಿತಾಂಶದ ಮೇಲೆ ಪ್ರಭಾವ ಬೀರಿದ ಅಂಶಗಳ ಬಗ್ಗೆ ದಿನೇಶ್ ಕಾರ್ತಿಕ್ ವಿಶ್ಲೇಷಣೆ ಮಾಡಿದ್ದಾರೆ. ಇಡೀ ಟೆಸ್ಟ್ ಅನ್ನು ಕೊನೆಯ ದಿನದಂದು ನಡೆದ ಘಟನೆಗಳ ಆಧಾರದ ಮೇಲೆ ನಿರ್ಣಯಿಸಬಾರದು ಎಂದು ಕಾರ್ತಿಕ್ ಹೇಳಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 376/6 ರಿಂದ 387 ರಲ್ಲಿ ಆಲೌಟ್ ಆದ ಭಾರತದ "ಮಿನಿ-ಕುಸಿತ"ದ ಬಗ್ಗೆ ಮಾತನಾಡಿದ್ದಾರೆ.

ಬ್ಯಾಟಿಂಗ್‌ನಲ್ಲಿನ ತಪ್ಪಿನ ಜೊತೆಗೆ, ಕೆಎಲ್ ರಾಹುಲ್ ಸ್ಲಿಪ್‌ಗಳಲ್ಲಿ ಕ್ಯಾಚ್ ಕೈಚೆಲ್ಲಿದರು. ಇದರ ಲಾಭವನ್ನು ಜೇಮೀ ಸ್ಮಿತ್‌ ಚೆನ್ನಾಗಿ ಬಳಸಿಕೊಂಡರು ಎಂದು ಡಿಕೆ ಹೇಳಿದ್ದಾರೆ.

"ನೀವು ಇಂದು ಏನಾಯಿತು ಎಂಬುದರ ಆಧಾರದ ಮೇಲೆ ಪಂದ್ಯವನ್ನು ನಿರ್ಣಯಿಸಲು ಹೋದರೆ, ನೀವು ತಪ್ಪು ಭಾಗವನ್ನು ನೋಡುತ್ತಿದ್ದೀರಿ ಎಂದು ನಾನು ಭಾವಿಸುತ್ತೇನೆ. ನೀವು ಮೊದಲ ಇನ್ನಿಂಗ್ಸ್‌ನಲ್ಲಿ 376-6 ರಿಂದ 387 ರವರೆಗೆ ನೋಡಬೇಕು ಎಂದು ಕಾರ್ತಿಕ್ ಸ್ಕೈ ಸ್ಪೋರ್ಟ್ಸ್‌ನಲ್ಲಿ ಹೇಳಿದರು.

ನಾಸಿರ್ ಹುಸೇನ್ ವಿಶ್ಲೇಷಣೆ:

ಹುಸೇನ್‌ಗೆ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರ ನಿಖರವಾದ ಥ್ರೋ ಮೂಲಕ ಭಾರತದ ಉಪನಾಯಕ ರಿಷಭ್ ಪಂತ್ ಅವರನ್ನು 74 ರನ್‌ಗಳಿಗೆ ರನ್ ಔಟ್ ಮಾಡಿದ್ದು, ಇಡೀ ಆಟದ ಸ್ವರೂಪವನ್ನೇ ಬದಲಾಯಿಸಿತು ಎಂದು ಅಭಿಪ್ರಾಯಪಟ್ಟಿದ್ದಾರೆ.

"ನೀವು ಹಿಂತಿರುಗಿ ನೋಡಿದಾಗ, ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ರನ್ ಔಟ್ ಈ ಪಂದ್ಯಕ್ಕೆ ಬಹಳ ಮುಖ್ಯವಾಗಿದೆ. ಬೌಲರ್‌ ಆಗಿ, ಫೀಲ್ಡರ್ ಆಗಿ ಹಾಗೂ ಬ್ಯಾಟರ್‌ ಆಗಿ ಬೆನ್ ಸ್ಟೋಕ್ಸ್ ಇಂಗ್ಲೆಂಡ್ ಪಾಲಿಗೆ ಆಪತ್ಬಾಂಧವನಾದರು ಎಂದು ಹುಸೇನ್ ಹೇಳಿದ್ದಾರೆ.

ಕೊನೆಯ ದಿನದ ಆರಂಭಿಕ ಗಂಟೆಯಲ್ಲಿ, ಸ್ಟೋಕ್ಸ್ ಮತ್ತು ವೇಗಿ ಜೋಫ್ರಾ ಆರ್ಚರ್ ಭಾರತವನ್ನು 82/7 ಕ್ಕೆ ಇಳಿಸಿದರು. ಜಡೇಜಾ ತಮ್ಮ ಅಜೇಯ 61 ರನ್‌ಗಳೊಂದಿಗೆ ಇಂಗ್ಲೆಂಡಿಗೆ ತಿರುಗೇಟು ನೀಡುವತ್ತ ದಿಟ್ಟ ಹೆಜ್ಜೆ ಹಾಕುತ್ತಿದ್ದರು. ಆದರೆ ಶೋಯೆಬ್ ಬಶೀರ್ ಅವರ ಚೆಂಡು ಸಿರಾಜ್ ಅವರ ಸ್ಟಂಪ್‌ಗೆ ಅಪ್ಪಳಿಸುವುದರೊಂದಿಗೆ ಭಾರತದ ಲಾರ್ಡ್ಸ್‌ ಹೋರಾಟಕ್ಕೆ ತೆರೆ ಬಿದ್ದಿತು.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಲಾರ್ಡ್ಸ್‌ ಟೆಸ್ಟ್‌ ಪಂದ್ಯವು ಕೊನೆಯ ದಿನದ ಕೊನೆಯ ಸೆಷನ್‌ವರೆಗೂ ಮುಂದುವರೆಯುವ ಮೂಲಕ ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಭಾರತದ ಅಗ್ರಕ್ರಮಾಂಕದ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಅಜೇಯ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಶೋಯೆಬ್ ಬಷೀರ್, ಭಾರತದ ಮೊಹಮ್ಮದ್ ಸಿರಾಜ್ ಅವರನ್ನು ಬೌಲ್ಡ್ ಮಾಡುವ ಮೂಲಕ ಭಾರತದ ಲಾರ್ಡ್ಸ್‌ ಟೆಸ್ಟ್ ಗೆಲ್ಲುವ ಕನಸನ್ನು ನುಚ್ಚುನೂರು ಮಾಡಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ