ಯಶಸ್ಸಿನ ಉತ್ತುಂಗಕ್ಕೆ ಏರಿದಾಗ ಧೋನಿಯಂತೆ ಬದುಕೋಣ!

By Suvarna News  |  First Published May 30, 2023, 11:38 AM IST

5ನೇ ಬಾರಿಯ ಐಪಿಎಲ್ ಟ್ರೋಫಿ ಜಯಿಸಿದ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌
ಧೋನಿ ಎಂಬ ಕ್ರೀಡಾ ಮಾಂತ್ರಿಕನಿಗೆ ಪದಗಳ ನಮನ
ಕ್ರಿಕೆಟ್‌ ಹಾಗೂ ಕ್ರೀಡಾ ಲೋಕ ನೋಡಿದ ಅಪ್ರತಿಮ ನಾಯಕ ಧೋನಿ


- ರಾಜೀವ್ ಹೆಗ್ಡೆ

ಬೆಂಗಳೂರು(ಮೇ.30) ಧೋನಿ ಎನ್ನುವ ವ್ಯಕ್ತಿ ಕೇವಲ ಕ್ರೀಡಾಪಟುವಲ್ಲ. ಯಶಸ್ಸಿನ ಬೆನ್ನು ಹತ್ತಿ ಹೋಗುವ ಪ್ರತಿಯೊಬ್ಬ ವ್ಯಕ್ತಿಗೂ ಮಹೇಂದ್ರ ಸಿಂಗ್‌ ಧೋನಿ ಒಂದು ದೊಡ್ಡ ವಿಶ್ವವಿದ್ಯಾಲಯ. ಧೋನಿಯಿಂದ ಕಲಿಯಲು ಆಗದಷ್ಟು ಗುಣಗಳನ್ನು ನಾವು ಪಟ್ಟಿ ಮಾಡಬಹುದು. ಯಾರು ಏನೇ ಹೇಳಲಿ ಕ್ರಿಕೆಟ್‌ ಹಾಗೂ ಕ್ರೀಡಾ ಲೋಕ ನೋಡಿದ ಅಪ್ರತಿಮ ನಾಯಕ ಧೋನಿ.

Latest Videos

undefined

ಧೋನಿಯ ಆಟಕ್ಕೆ ಪೂರ್ಣ ವಿರಾಮ ಬಿತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಕೊನೆಯುಸಿರಿನವರೆಗೆ ಧೋನಿಯನ್ನು ಮರೆಯಲು ಸಾಧ್ಯವಿಲ್ಲ. ಸಚಿನ್‌ ಆಟವನ್ನು ನೋಡಿಕೊಂಡು ಕ್ರಿಕೆಟ್‌ ಹುಚ್ಚು ಹಿಡಿಸಿಕೊಂಡವನು ನಾನು. ಆದರೆ ಧೋನಿಯ ರೀತಿ ನನ್ನಲ್ಲಿ ಕ್ರಿಕೆಟ್‌ನ ಭಾವನೆಯನ್ನು ಬಿತ್ತಿದ ಮತ್ತೋರ್ವ ಆಟಗಾರನಿಲ್ಲ. ಇತ್ತೀಚೆಗಂತೂ ಐಪಿಎಲ್‌ ಎಂದರೆ ಅದು ಕೇವಲ ಧೋನಿ ನೋಡಲು ಸೀಮಿತವಾಗಿತ್ತು. ಧೋನಿ ಮುಖವನ್ನು ನೋಡುತ್ತಿದ್ದರೆ ಅದೇನೋ ಮನಸ್ಸಿಗೆ ಖುಷಿ. ಇಂದು ಕೂಡ ಧೋನಿಯನ್ನು ಕಣ್ತುಂಬಿಕೊಳ್ಳುವ ಉದ್ದೇಶದಿಂದ ಬೆಳಗಿನ ಜಾವ ಮೂರೂವರೆಯಾದರೂ ಟಿವಿ ಆನ್‌ ಮಾಡಿ ಕೂತಿದ್ದೆ. ಧೋನಿಯ ಯಾವುದೇ ಕ್ಷಣವನ್ನು ನಾನು ಮಿಸ್‌ ಮಾಡಿಕೊಳ್ಳಬಾರದು ಎನ್ನುವುದೊಂದೇ ನನ್ನ ಉದ್ದೇಶವಾಗಿತ್ತು.

We are not crying, you are 🥹

The Legend continues to grow 🫡 | | | | pic.twitter.com/650x9lr2vH

— IndianPremierLeague (@IPL)

ಧೋನಿಯ ಅಭಿಮಾನಿಗೆ ಹೇಳಿ ಮಾಡಿಸಿದ ದಿನವಿದು. ಅದ್ಭುತ ಸ್ಟಂಪಿಂಗ್‌ ನೋಡಿ ಧೋನಿಯ ಅದೆಷ್ಟೋ ಮ್ಯಾಜಿಕಲ್‌ ಕ್ಷಣಗಳು ಕಣ್ಮುಂದೆ ಬಂದು ಹೋದವು. ಮುಗಿಲೆತ್ತರಕ್ಕೆ ಚಿಮ್ಮಿದ ಕ್ಯಾಚ್‌ ಪಡೆದಾಗ ಧೋನಿ ಮೇಲಿನ ವಿಶ್ವಾಸ ಇನ್ನಷ್ಟು ಗಟ್ಟಿಯಾಯಿತು. ಮಳೆ ಬಂದೂ ಎಲ್ಲರೂ ಸ್ಕೋರ್‌ ಬಗ್ಗೆ ತಲೆ ಕೆಡಿಸಿಕೊಂಡು ಮೈದಾನದಲ್ಲಿ ಕುಣಿಯುತ್ತಿದ್ದಾಗಲೂ ಧೋನಿ ಮಾತ್ರ ಆರಾಮಿಗಿರುವುದನ್ನು ನೋಡಿ ಈ ಶಾಂತಮೂರ್ತಿಗೆ ಮಳೆ ಸೋತಿತೇ ಎನಿಸಿತು. ಚೆನ್ನೈ ಗೆಲುವು ನಿಶ್ಚಿತ ಎನ್ನುವ ಸಂದರ್ಭದಲ್ಲಿ ಧೋನಿ ಮೈದಾನಕ್ಕೆ ಇಳಿಯುತ್ತಿದ್ದಂತೆ ರೋಮಾಂಚನವಾಯಿತು. ಅಕ್ಷರಶಃ ಮನವೆಲ್ಲ ಧೋನಿ ಸಿಕ್ಸರ್‌ಗೆ ಕಾಯುತ್ತಿತ್ತು. ಅದೆಷ್ಟೋ ಧೋನಿಯ ಸಿಕ್ಸರ್‌ಗಳು ಕಣ್ಮುಂದೆ ಬಂದು ಹೋದವು. ಆದರೆ ಶೂನ್ಯದಿಂದ ಆರಂಭವಾದ ಅಂತಾರಾಷ್ಟ್ರೀಯ ಜರ್ನಿಯು ಶೂನ್ಯದ ಐಪಿಎಲ್‌ನೊಂದಿಗೆ ಅಂತ್ಯವಾಗುತ್ತಿದೆಯೆಲ್ಲ ಎಂದು ಒಂದು ಹನಿ ಕಣ್ಣೀರು ಬಂತು. ಇಷ್ಟಾದರೂ ಧೋನಿಗಾಗಿ ಪ್ರಶಸ್ತಿ ಗೆಲ್ಲುವ ಹುಡುಗರಿದ್ದಾರೆ ಎನ್ನುವ ಸಣ್ಣ ನಂಬಿಕೆಯಿತ್ತು. ಏಕೆಂದರೆ ಆ ಹುಡುಗರನ್ನು ಬೆಳೆಸಿದ್ದು ಇದೇ ಧೋನಿ. ಅಂಕಲ್‌ಗಳ ತಂಡ ಎನ್ನುವ ಗೇಲಿ ಮಾಡಿಸಿಕೊಂಡು ತಂಡ ಕಟ್ಟಿದ್ದು ಇದೇ ಮಹೇಂದ್ರ. ಕೊನೆಯ ಎರಡು ಎಸೆತಕ್ಕೆ ಹತ್ತು ರನ್‌ ಬೇಕಿದ್ದಗ ಧೋನಿ ಕಣ್ಮುಚ್ಚಿ ತಲೆ ಕೆಳಗೆ ಹಾಕಿ ಕೂತಿದ್ದು ನೋಡಿ ಮೈ ನಡುಗಿ ಹೋಯಿತು.

ಕೊನೆವರೆಗೂ ರೋಚಕತೆ ಕಾಯ್ದುಕೊಂಡ 16ನೇ ಆವೃತ್ತಿ ಐಪಿ​ಎಲ್‌ಗೆ ತೆರೆ!

ವಿಶ್ವ ಕ್ರಿಕೆಟ್‌ ಕಂಡ ಮಹಾನ್‌ ನಾಯಕನಿಗೆ ಇಂತಹ ಸೋಲಿನ ವಿದಾಯವೇ ಎಂದು ಮನ ಕರಗಿತು. ಧೋನಿ ಮನಸ್ಸಿನೊಳಗೆ ಏನೆಲ್ಲ ಓಡುತ್ತಿರಬಹುದು ಎಂದು ನನ್ನ ಮನ ಚೂರಾಗುತ್ತಿದ್ದಂತೆ ಅನಿಸಿತು. ಆದರೆ ಜಡೇಜಾ ಸಿಡಿಸಿದ ಸಿಕ್ಸರ್‌ ಹಾಗೂ ಬೌಂಡರಿಯು ಮಧ್ಯರಾತ್ರಿಯಲ್ಲೂ ಜೋರಾಗಿ ಕೂಗುವಂತೆ ಮಾಡಿತು. ಮಲಗಿದ್ದ ಹೆಂಡತಿ ಎದ್ದು ಬಂದು, ʼನಿನ್ನ ಧೋನಿ ಗೆದ್ನಾʼ ಎಂದು ಕೇಳಿದಾಗ ಕಣ್ಣಂಚಿನಲ್ಲಿ ನೀರಿತ್ತು. ಅದೇ ಕ್ಷಣಕ್ಕೆ ಧೋನಿ ಎಂದಿನಂತೆ ಮನಸ್ಸಿನೊಳಗೆಯೇ ಆನಂದ ಭಾಷ್ಪ ಹಾಕಿ ಜಡ್ಡುವನ್ನು ಎತ್ತಿ ಅಪ್ಪಿಕೊಂಡಿದ್ದ. ಇದೇ ಮೊದಲ ಬಾರಿಗೆ ಧೋನಿಯಿಂದ ಅಂತಹದೊಂದು ಸಂಭ್ರಮ ಕಾಣಿಸಿತು. ಆ ಕ್ಷಣಕ್ಕೆ ನನಗೆ ಅನಿಸಿದ್ದು, ನಾನು ಜಡ್ಡು ಆಗಿರಬಾರದಾಗಿತ್ತೇ ಎಂದು. ಧೋನಿಯನ್ನು ಆರಾದಿಸುವ ಕೋಟ್ಯಂತರ ಅಭಿಮಾನಿಗಳು ಹೀಗೆಯೇ ಆಸೆ ಪಟ್ಟಿರಬಹುದು.

M.O.O.D! 🤗

Ravindra Jadeja 🤝 MS Dhoni | | | | pic.twitter.com/uggbDA4sFd

— IndianPremierLeague (@IPL)

ಇದೆಲ್ಲ ಮುಗಿಸಿ ಪ್ರಶಸ್ತಿ ಹಂಚಿಕೆ ಸಮಾರಂಭ ಆರಂಭವಾಯಿತು. ತನ್ನ ನಾಯಕತ್ವದ ತಂಡ ಸೋತಿರುವ ಬೇಸರಕ್ಕಿಂತ ಪಾಂಡ್ಯಗೆ ಧೋನಿ ನಾಯಕತ್ವದ ತಂಡ ಗೆದ್ದಿರುವುದೇ ದೊಡ್ಡ ಖುಷಿಯಂತೆ ಕಂಡಿತು. ಒಳ್ಳೆಯ ಮನುಷ್ಯನಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾನೆ. ಧೋನಿ ಗೆದ್ದಿರುವುದು ನನಗೆ ಖುಷಿ ಎಂದಾಗ ಗೊತ್ತಿಲ್ಲದೇ ಕಣ್ಣನ್ನು ಒರೆಸಿಕೊಳ್ಳುವಂತಾಯಿತು. ಇದಾದ ಬಳಿಕ ಮಾತನಾಡಲು ಬಂದ ಧೋನಿ, ಪ್ರಶಸ್ತಿ ಗೆದ್ದ ಖುಷಿಯನ್ನು ಮರೆಮಾಚಿಸುವ ಕೆಲಸಕ್ಕೆ ಹೋಗಲಿಲ್ಲ. ಐದನೇ ಬಾರಿಗೆ ಟ್ರೋಫಿ ದೊರೆತ ಖುಷಿಯಲ್ಲೇ ಎಲ್ಲರೂ ಮೈ ಮರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಕ್ರಿಕೆಟ್‌ ಬದುಕಿಗೆ ವಿದಾಯ ಹೇಳಲು ಇದಕ್ಕಿಂತ ಉತ್ತಮ ವೇದಿಕೆ ಇನ್ನೊಂದಿರಲಿಲ್ಲ. ಆದರೆ ಧೋನಿ ಆ ಕೆಲಸ ಮಾಡಲಿಲ್ಲ. ನನ್ನ ಬಗ್ಗೆ ನಿರ್ಧಾರ ಮಾಡಲು ಇನ್ನೂ ಏಳೆಂಟು ತಿಂಗಳ ಸಮಯವಿದೆ ಎಂದು ಹೇಳಿ ಟ್ರೋಫಿಯ ಹತ್ತಿರ ಬಂದು ನಿಂತರು. ಧೋನಿ ಆ ಟ್ರೋಫಿಯನ್ನು ಪಡೆದು ಯುವಕರಿಗೆ ಕೊಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ನನ್ನ ಕಣ್ಣುಗಳಿದ್ದವು. ಆದರೆ ಧೋನಿ ಏಕೆ ಶ್ರೇಷ್ಠ, ವಿಶೇಷ ಹಾಗೂ ಅಪರೂಪ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. ಕೊನೆಯ ಐಪಿಎಲ್‌ ಪಂದ್ಯವಾಡಿದ ಅಂಬಾಟಿ ರಾಯುಡುವನ್ನು ವೇದಿಕೆಗೆ ಕರೆದು ಟ್ರೋಫಿ ಕೊಡಿಸಿದರು. ಜತೆಗೆ ಟ್ರೋಫಿ ಗೆಲ್ಲಲು ಕಾರಣರಾದ ಜಡ್ಡುವನ್ನು ಪಕ್ಕಕ್ಕೆ ನಿಲ್ಲಿಸಿದರು. ಇಂತಹ ಆಲೋಚನೆಯು ಧೋನಿಗೆ ಮಾತ್ರ ಬರಲು ಸಾಧ್ಯ. ಅವರಿಬ್ಬರು ಧೋನಿಗೆ ಟ್ರೋಫಿ ಕೊಡಲು ಬಂದರಾದರೂ, ಅದನ್ನು ಇತರ ಆಟಗಾರರ ಕೈಗೆ ಕೊಟ್ಟು ಮೂಲೆಯಲ್ಲಿ ಹೋಗಿ ನಿಂತು ಮಕ್ಕಳಂತೆ ಧೋನಿ ಕುಣಿಯುತ್ತಿದ್ದರು. ಅಂದ್ಹಾಗೆ ಕ್ರಿಕೆಟ್ ಟ್ರೋಫಿಗೆ ಧೋನಿ ಅಪರಿಚಿತರಲ್ಲ. ಅದಕ್ಕಾಗಿ ಟ್ರೋಫಿ ಬಳಿ ಕ್ಷಣ ಮಾತ್ರವೂ ನಿಲ್ಲದೇ ತನ್ನ ಮೂಲ ಮರೆಯದೇ ಓಡಿದರು. ಗ್ರೌಂಡ್ಸ ಮೆನ್ ಬಳಿ ಹೋಗಿ ಫೋಟೋ ತೆಗೆಸಿಕೊಂಡರು. ಪ್ರೀತಿ ತೋರಿದ ಅಭಿಮಾನಿಗಳತ್ತ ಕೈ ಬೀಸಿದರು. ಇದು ಧೋನಿಯಿಂದ ಮಾತ್ರ ಸಾಧ್ಯ.

CSK Champion: ಗುಜರಾತ್ ಮಣಿಸಿದ ಧೋನಿ ಸೇನೆ ಐಪಿಎಲ್ ಚಾಂಪಿಯನ್‌

ಅದಕ್ಕೆ ಹೇಳಿದ್ದು ಧೋನಿ ಒಬ್ಬ ವ್ಯಕ್ತಿಯಲ್ಲ, ವಿಶ್ವವಿದ್ಯಾಲಯವೆಂದು. ಇನ್ನೆರಡು ದಿನಗಳಲ್ಲಿ ಧೋನಿ ಸಾರ್ವಜನಿಕರಿಂದ ಕಾಣೆ ಆಗಿಬಿಡುತ್ತಾರೆ. ಜಗತ್ತಿನ ಮಾಧ್ಯಮಗಳು, ಅಭಿಮಾನಿಗಳು ಧೋನಿ ಜಪ ಮಾಡುತ್ತಿದ್ದರೆ, ಈ ವ್ಯಕ್ತಿ ರಾಂಚಿಯ ತೋಟದ ಮನೆಯಲ್ಲಿ ಕಳೆದು ಹೋಗಿರುತ್ತಾರೆ. ಎರಡು ವಿಶ್ವಕಪ್‌, ಒಂದು ಚಾಂಪಿಯನ್ಸ್‌ ಟ್ರೋಫಿ, ಎರಡು ಚಾಂಪಿಯನ್ಸ್‌ ಲೀಗ್‌, ಐದು ಐಪಿಎಲ್‌ ಟ್ರೋಫಿಗಳ ಯಾವೊಂದು ಗರಿಯನ್ನು ತಲೆ ಮೇಲೆ ಏರಿಸಿಕೊಳ್ಳದೇ ಆರಾಮಾಗಿ ಮಗಳು, ಹೆಂಡತಿ, ನಾಯಿ, ತೋಟ, ಬೈಕ್‌ ಜತೆಗೆ ಕಾಲ ಕಳೆಯುತ್ತಾರೆ. ಯಾವ ಮಾಧ್ಯಮದ ಕೈಗೂ ಸಿಗುವುದಿಲ್ಲ. ಮೊಬೈಲ್‌ಗಳು ಹತ್ತಿರಕ್ಕೂ ಇರುವುದಿಲ್ಲ. ತನ್ನ ಸಾಧನೆಯ ಬಗ್ಗೆ ಕಥೆಗಳನ್ನು ಕಟ್ಟುತ್ತಾ ಕೂರುವುದಿಲ್ಲ. ತಾನಾಯಿತು, ತನ್ನ ಜಗತ್ತಾಯಿತು ಎಂದು ಬದುಕುತ್ತಾರೆ. 

ಧೋನಿಯಂತೆ ಯಶಸ್ಸು ಎಲ್ಲರಿಗೂ ಸಿಗಲಾರದು. ಆದರೆ ಸಿಕ್ಕ ಸಣ್ಣ ಪುಟ್ಟ ಯಶಸ್ಸಿನಲ್ಲೂ ನಾವು ಧೋನಿಯಂತೆ ಬದುಕಲು ಅಸಾಧ್ಯವೋ ಎನ್ನುವ ಮಟ್ಟಿಗೆ ಮಹೇಂದ್ರ ಕೂಲ್‌ ಆಗಿ ಬದುಕುತ್ತಾರೆ. ಮುಂದೊಂದು ದಿನ ಯಾವುದೇ ಅಬ್ಬರವಿಲ್ಲದೇ ಕ್ರಿಕೆಟ್‌ ಬದುಕಿನಿಂದಲೂ ತೆರೆಮರೆಗೆ ಸರಿಯುತ್ತಾರೆ. ಆದರೆ ಧೋನಿಯಂಥ ಇನ್ನೋರ್ವ ಕ್ರಿಕೆಟ್‌ ಆಡುವ ಮನುಷ್ಯ ಮತ್ತೆ ನಮಗೆ ಸಿಗುತ್ತಾನೆಯೇ? ಗೊತ್ತಿಲ್ಲ. ಆದರೆ ಕ್ರಿಕೆಟ್‌ ಲೋಕವನ್ನು ಗೆದ್ದ ಮಹೇಂದ್ರ, ಎಂದೂ ಇಂದ್ರನಂತೆ ಮೈಮರೆತು ನಡೆದುಕೊಂಡಿಲ್ಲ. ಅದಕ್ಕೇ ಧೋನಿ ನಮಗೆಲ್ಲರಿಗೂ ವಿಶೇಷ

click me!