ಶ್ರೀಲಂಕಾ ಕ್ರಿಕೆಟಿಗ ಲಕ್ಷನ್ ಸಂಡಕನ್ ನಿಯಮ ಸರಿಯಾಗಿ ಅರ್ಥಮಾಡಿಕೊಳ್ಳದೆ ಎಡವಟ್ಟು ಮಾಡಿಕೊಂಡಿದ್ದಾರೆ. ರನೌಟ್ ನಿಯಮದಲ್ಲಿ ಸಣ್ಣ ತಪ್ಪು ಮಾಡಿದ ಕಾರಣ ಬ್ಯಾಟ್ಸ್‌ಮನ್ ಔಟಾಗದೇ ಉಳಿದುಕೊಂಡರು. ಸಂಡಕನ್ ಮಾಡಿದ ಎಡವಟ್ಟು ವಿವರ ಇಲ್ಲಿದೆ.
ಬ್ರಿಸ್ಬೇನ್(ಅ.31) : ಲಂಕಾ-ಆಸ್ಪ್ರೇಲಿಯಾ 2ನೇ ಟಿ20 ವೇಳೆ ತಮಾಷೆಯ ಪ್ರಸಂಗವೊಂದು ನಡೆಯಿತು. ಲಂಕಾ ಇನ್ನಿಂಗ್ಸ್ ವೇಳೆ ಲಕ್ಷನ್ ಸಂಡಕನ್ ಬಾರಿಸಿದ ಚೆಂಡು ನೇರವಾಗಿ ಸ್ಟಂಫ್ಸ್‌ಗೆ ಬಡಿದು ಬೇಲ್ಸ್ ನೆಲಕ್ಕುರುಳಿತು. ಈ ವೇಳೆ ಬ್ಯಾಟ್ಸ್‌ಮನ್‌ಗಳು ರನ್ ಕದಿಯಲು ಯತ್ನಿಸಿದರು. ಆದರೆ ಬೌಲರ್ ಪ್ಯಾಟ್ ಕಮಿನ್ಸ್, ಚೆಂಡನ್ನು ಸ್ಟಂಫ್ಸ್‌ಗೆ ತಾಕಿಸುತ್ತಾ ಸ್ಟಂಪ್‌ವೊಂದನ್ನು ಕಿತ್ತರು. ಸಂಡಕನ್ ರನೌಟ್ ಆಗಿ ಹೊರನಡೆದರು.
ಇದನ್ನೂ ಓದಿ: ಡೇವಿಡ್ ವಾರ್ನರ್ ಅಪರೂಪದ ದಾಖಲೆ!
ಆದರೆ ಆಸ್ಪ್ರೇಲಿಯಾ ಇನ್ನಿಂಗ್ಸ್ ವೇಳೆ ವಾರ್ನರ್ ಬಾರಿಸಿದ ಚೆಂಡು ಸ್ಟಂಫ್ಸ್‌ಗೆ ಬಡಿಯಿತು. ನಾನ್ ಸ್ಟ್ರೈಕರ್ ಬದಿಯಲ್ಲಿದ್ದ ಸ್ಮಿತ್ ಆಗಲೇ ಅರ್ಧ ದೂರ ಓಡಿದ್ದರು. ಆದರೆ ಸಂಡಕನ್ ಒಂದು ಕೈಯಲ್ಲಿ ಚೆಂಡನ್ನು ಹಿಡಿದು ಮತ್ತೊಂದು ಕೈಯಲ್ಲಿ ಸ್ಟಂಫ್ಸ್ ಕಿತ್ತರು. ಸ್ಮಿತ್ ಕ್ರೀಸ್ ತಲುಪಿ ಔಟಾಗದೆ ಉಳಿದರು. ನಿಯಮದ ಪ್ರಕಾರ ಬೇಲ್ಸ್ ಬಿದ್ದ ವೇಳೆ ಬ್ಯಾಟ್ಸ್‌ಮನ್‌ನನ್ನು ರನೌಟ್ ಮಾಡಬೇಕಿದ್ದರೆ ಕ್ಷೇತ್ರರಕ್ಷಕ ಚೆಂಡನ್ನು ಸ್ಟಂಫ್ಸ್‌ಗೆ ತಗಲಿಸುತ್ತಾ ಸ್ಟಂಫ್ಸ್ ಕೀಳಬೇಕು.
ಇದನ್ನೂ ಓದಿ: ಬಿಸಿಸಿಐ ಬಳಿಕ ಎಫ್‌ಟಿಪಿಗೆ ಆಸೀಸ್ ವಿರೋಧ
ಲಂಕಾ ವಿರುದ್ಧ ಆಸೀಸ್ ಜಯಭೇರಿ!
ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್‌ರ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಆಸ್ಪ್ರೇಲಿಯಾ 9 ವಿಕೆಟ್‌ಗಳ ಗೆಲುವು ಸಾಧಿಸಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ, ಸರಣಿ ವಶಪಡಿಸಿಕೊಂಡಿತು. ಬುಧವಾರ ಇಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 19 ಓವರ್ಗಳಲ್ಲಿ ಕೇವಲ 117 ರನ್‌ಗಳಿಗೆ ಆಲೌಟ್ ಆಯಿತು. ಕುಸಾಲ್ ಪೆರೇರಾ 27 ರನ್‌ಗಳೊಂದಿಗೆ ತಂಡದ ಪರ ಗರಿಷ್ಠ ರನ್ ಸರದಾರನೆನಿಸಿದರು.
ಸುಲಭ ಗುರಿ ಬೆನ್ನತ್ತಿದ ಆಸ್ಪ್ರೇಲಿಯಾ ಮೊದಲ ಓವರಲ್ಲೇ ನಾಯಕ ಆ್ಯರೋನ್ ಫಿಂಚ್ (00) ವಿಕೆಟ್ ಕಳೆದುಕೊಂಡಿತು. 2ನೇ ವಿಕೆಟ್‌ಗೆ ಕ್ರೀಸ್ ಹಂಚಿಕೊಂಡ ವಾರ್ನರ್ ಹಾಗೂ ಸ್ಮಿತ್ 12.3 ಓವರಲ್ಲಿ 117 ರನ್ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು. ವಾರ್ನರ್ 41 ಎಸೆತಗಳಲ್ಲಿ 60 ರನ್ ಸಿಡಿಸಿದರೆ, ಸ್ಮಿತ್ 36 ಎಸೆತಗಳಲ್ಲಿ 53 ರನ್ ಚಚ್ಚಿದರು.
ಸ್ಕೋರ್: ಶ್ರೀಲಂಕಾ 19 ಓವರಲ್ಲಿ 117/10, ಆಸ್ಪ್ರೇಲಿಯಾ 13 ಓವರಲ್ಲಿ 118/1
ಅಕ್ಟೋಬರ್ 31ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: