
ಬೆಂಗಳೂರು: ಗುಜರಾತ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯಗಳಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಬ್ಯಾಟರ್‌ಗಳಿಗೆ ನೆರವು ನೀಡಿಲ್ಲ ಎಂಬ ಆರ್‌ಸಿಬಿ ತಂಡದ ಮಾರ್ಗದರ್ಶಕ ದಿನೇಶ್ ಕಾರ್ತಿಕ್ ಹೇಳಿಕೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಅಸಮಾಧಾನ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೆಎಸ್‌ಸಿಎ ಅಧಿಕಾರಿಯೊಬ್ಬರು, ‘ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಕ್ಯುರೇಟರ್ ತಮ್ಮ ಸಾಧನೆಗೆ ಪ್ರಶಸ್ತಿ ಗೆದ್ದವರು. ದಶಕಗಳಿಂದಲೂ ಅವರು ಉತ್ತಮವಾಗಿ ಪಿಚ್ ಸಿದ್ಧಪಡಿಸುತ್ತಿದ್ದಾರೆ. 2 ಪಂದ್ಯಗಳಿಗೆ ಸಿದ್ಧಪಡಿಸಿದ ಪಿಚ್ ಕೂಡಾ ಬ್ಯಾಟರ್‌ಗಳಿಗೆ ನೆರವಾಗುತ್ತಿತ್ತು. ಇದೇ ಪಿಚ್‌ನಲ್ಲಿ ಕೆ.ಎಲ್.ರಾಹುಲ್ ಉತ್ತಮವಾಗಿ ಆಡಿದ್ದಾರೆ. ಆದರೆ ಬ್ಯಾಟರ್‌ಗಳು ಕೆಟ್ಟದಾಗಿ ಆಡಿ, ಕೊನೆಗೆ ಕ್ಯುರೇಟರ್ ವಿರುದ್ಧ ಹೇಳಿಕೆ ಕೊಡುತ್ತಾರೆ. ಇದು ಸರಿಯಲ್ಲ’ ಎಂದಿದ್ದಾರೆ.
‘ಬ್ಯಾಟಿಂಗ್ ಸ್ನೇಹಿ ಪಿಚ್‌ಗೆ ಮನವಿ ಮಾಡಿದ್ದರೂ ಕೊಡಲಿಲ್ಲ. ಪಿಚ್ ಬ್ಯಾಟರ್‌ಗಳಿಗೆ ನೆರವು ನೀಡುತ್ತಿರಲಿಲ್ಲ’ ಎಂದು ಕಾರ್ತಿಕ್ ಹೇಳಿದ್ದರು. ಆದರೆ ಇದೇ ಪಿಚ್‌ನಲ್ಲಿ ಡೆಲ್ಲಿ ತಂಡದ ರಾಹುಲ್ 93 ರನ್ ಸಿಡಿಸಿದ್ದರು.
ಆರ್‌ಸಿಬಿಗೆ ಇಂದು ರಾಯಲ್ಸ್ ಚಾಲೆಂಜ್; ಹಸಿರು ಜೆರ್ಸಿಯಲ್ಲಿಂದು ಬೆಂಗಳೂರು ಕಣಕ್ಕೆ
ಚಿನ್ನಸ್ವಾಮಿ ಪಿಚ್ ಬಗ್ಗೆ ದಿನೇಶ್ ಕಾರ್ತಿಕ್ ಹೇಳಿದ್ದೇನು?
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಿದ್ದಕ್ಕೆ ಆರ್‌ಸಿಬಿ ತಂಡದ ಮಾರ್ಗದರ್ಶಕ ದಿನೇಶ್ ಕಾರ್ತಿಕ್, ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಕ್ಯುರೇಟರ್ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಪಿಚ್ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿರಲಿಲ್ಲ ಎಂದಿದ್ದರು.
ಈ ಬಗ್ಗೆ ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ತಿಕ್, ‘ಮೊದಲ 2 ಪಂದ್ಯಗಳಿಗೆ ನಾವು ಬ್ಯಾಟಿಂಗ್ ಸ್ನೇಹಿ ಪಿಚ್‌ಗೆ ಮನವಿ ಮಾಡಿದ್ದೆವು. ಆದರೆ ಬ್ಯಾಟರ್‌ಗಳಿಗೆ ಸವಾಲಾಗುವ ಪಿಚ್ ತಯಾರಿಸಲಾಗಿದೆ. ಇದರ ಬಗ್ಗೆ ಖಂಡಿತವಾಗಿಯೂ ನಾವು ಕ್ಯುರೇಟರ್ ಜೊತೆ ಮಾತನಾಡಲಿದ್ದೇವೆ. ಅವರು ತಮ್ಮ ಕೆಲಸ ಸಮರ್ಥವಾಗಿ ಮಾಡುವ ನಂಬಿಕೆಯಿದೆ’ ಎಂದಿದ್ದಾರೆ. ‘ಪಿಚ್ ಬ್ಯಾಟರ್‌ಗಳಿಗೆ ನೆರವು ನೀಡುತ್ತಿರಲಿಲ್ಲ. ಎರಡೂ ಪಂದ್ಯಗಳಲ್ಲಿ ಪಿಚ್ ಸವಾಲಿನಿಂದ ಕೂಡಿತ್ತು’ ಎಂದಿದ್ದಾರೆ.
246 ರನ್ ಚೇಸ್ ಮಾಡಿ ಗೆದ್ದ ಸನ್‌ರೈಸರ್ಸ್; ಅಭಿಷೇಕ್ ಆರ್ಭಟಕ್ಕೆ ಪಂಜಾಬ್ ಧೂಳೀಪಟ
ಪಂದ್ಯದಲ್ಲಿ ಆರ್‌ಸಿಬಿ 7 ವಿಕೆಟ್‌ಗೆ 163 ರನ್ ಗಳಿಸಿತ್ತು. ಈ ಗುರಿಯನ್ನು ಡೆಲ್ಲಿ 17.5 ಓವರ್‌ಗಳಲ್ಲೇ ಬೆನ್ನತ್ತಿ ಜಯಗಳಿಸಿತ್ತು.
ನಾಯಕ ರಜತ್ ವಿರುದ್ಧ ಮೈದಾನದಲ್ಲೇ ವಿರಾಟ್ ಕೊಹ್ಲಿ ಅಸಮಾಧಾನ?
ಬೆಂಗಳೂರು: ಡೆಲ್ಲಿ ವಿರುದ್ಧ ಪಂದ್ಯದಲ್ಲಿ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ವಿರುದ್ಧ ತಾರಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.
ಡೆಲ್ಲಿ ಬ್ಯಾಟರ್ ಕೆ.ಎಲ್.ರಾಹುಲ್ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾಗ ವಿರಾಟ್ ಕೊಹ್ಲಿ, ಬೌಂಡರಿ ಲೈನ್ ಬಳಿ ತಂಡದ ಮೆಂಟರ್ ದಿನೇಶ್ ಕಾರ್ತಿಕ್ ಜೊತೆ ಕೋಪದಿಂದ ಮಾತನಾಡುತ್ತಿರುವುದು ಕಂಡುಬಂದಿದೆ. ಫೀಲ್ಡಿಂಗ್ ಹಾಗೂ ಬೌಲರ್‌ಗಳ ಆಯ್ಕೆ ವಿಚಾರದಲ್ಲಿ ರಜತ್ ಬಗ್ಗೆ ಕೊಹ್ಲಿ ಅಸಮಾಧಾನ ಹೊಂದಿದ್ದು, ಇದೇ ವಿಚಾರದಲ್ಲಿ ಕಾರ್ತಿಕ್ ಜೊತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯಗಳಲ್ಲಿ ಮಿಶ್ರ ಫಲಿತಾಂಶ ಅನುಭವಿಸಿದೆ. ತವರಿನಾಚೆ ನಡೆದ ಮೊದಲೆರಡು ಪಂದ್ಯ ಗೆದ್ದು ಬೀಗಿದ್ದ ಆರ್‌ಸಿಬಿ ತಂಡವು ತವರಿನಲ್ಲಿ ಗುಜರಾತ್ ಟೈಟಾನ್ಸ್ ಎದುರು ಮುಗ್ಗರಿಸಿತ್ತು. ಇನ್ನು ಮತ್ತೆ ತವರಿನಾಚೆ ಮುಂಬೈ ಇಂಡಿಯನ್ಸ್ ಎದುರು ಗೆದ್ದು ಬೀಗಿದ್ದ ಆರ್‌ಸಿಬಿ, ಮತ್ತೆ ತವರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಶರಣಾಗಿತ್ತು. ಇದೀಗ ಮತ್ತೆ ತವರಿನಾಚೆ ಇಂದು ರಾಜಸ್ಥಾನ ರಾಯಲ್ಸ್ ಎದುರು ಕಣಕ್ಕಿಳಿದಿದ್ದು, ಗೆಲುವಿನ ಲಯಕ್ಕೆ ಮರಳಲು ಎದುರು ನೋಡುತ್ತಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.